ಇಲಾಖಾಧಿಕಾರಿಗಳು ಗುರಿ ಸಾಧನೆಯಡೆಗೆ ಗಮನ ಹರಿಸಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ – ರಮಣದೀಪ್ ಚೌಧರಿ ಕಟ್ಟಪ್ಪಣೆ.
ಇಲಾಖಾಧಿಕಾರಿಗಳು ಗುರಿ ಸಾಧನೆಯಡೆಗೆ ಗಮನ ಹರಿಸಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ – ರಮಣದೀಪ್ ಚೌಧರಿ ಕಟ್ಟಪ್ಪಣೆ.
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ( ಕೆಡಿಪಿ) ಪ್ರಗತಿ ಪರಿಶೀಲನಾ ಸಭೆ
ಗದಗ -ಸತ್ಯಮಿಥ್ಯ (ಅಗಸ್ಟ 26).
ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಸಮರ್ಪಕ ಅನುಷ್ಟಾನದೆಡೆಗೆ ಗಮನ ಹರಿಸಬೇಕು. ನಿಗದಿಪಡಿಸಿದ ಗುರಿ ಸಾಧನೆಯಡೆಗೆ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಮಣದೀಪ್ ಚೌಧರಿ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಲಾಖಾಧಿಕಾರಿಗಳು ತಮಗೆ ವಹಿಸಿದ ಯೋಜನೆಗಳ ಅನುಷ್ಟಾನದಲ್ಲಿ ಅಥವಾ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಶಿಸ್ತು ಬದ್ಧವಾಗಿ ನಿರ್ವಹಿಸುವುದರೊಂದಿಗೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವುದೇ ರೀತಿಯ ಕರ್ತವ್ಯ ಲೋಪಕ್ಕೆ ಅವಕಾಶ ನೀಡದೇ ಅರ್ಹರಿಗೆ ಇಲಾಖೆಯ ಸೌಲಭ್ಯ ಸುಲಭವಾಗಿ ದೊರಕಿಸಲು ಪ್ರಾಮಾಣಿಕ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು.
ಸರ್ಕಾರಿ ಸಂಸ್ಥೆಗಳಲ್ಲಿ ಸಾರ್ವಜನಿಕ ದೂರುಗಳಿಗೆ ಆಸ್ಪದ ಇಲ್ಲದಂತೆ ನೋಡಿಕೊಳ್ಳಬೇಕು. ಕಾಮಗಾರಿಗಳು ಗುಣಮಟ್ಟ ಕಾಯ್ದುಕೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಯೋಜನೆಯ ಪ್ರಯೋಜನ ಲಭ್ಯವಾಗಬೇಕು.
ಜಿಲ್ಲೆಯ ಸಾರ್ವಜನಿಕರಿಗೆ ಆರೋಗ್ಯದ ಹಿತದೃಷ್ಟಿಯಿಂದ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಲಭ್ಯವಾಗಬೇಕು. ಆಸ್ಪತ್ರೆ ಸೇರಿದಂತೆ ಸರ್ಕಾರಿ ಸಂಸ್ಥೆಗಳಲ್ಲಿ ಮೂಲಭೂತ ಸೌಲಭ್ಯಗಳು ಇರುವಂತೆ ಅಧಿಕಾರಿ ವರ್ಗ ನಿಗಾವಹಿಸಬೇಕು. ಗದಗ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು ಕೃಷಿ ಚಟುವಟಿಕೆಗೆ ಅಗತ್ಯವಿರುವ ಸರ್ಕಾರದ ಸೌಕರ್ಯಗಳನ್ನು ಅರ್ಹರಿಗೆ ದೊರಕುವಂತೆ ಇಲಾಖಾಧಿಕಾರಿಗಳು ಗಮನ ಹರಿಸಬೇಕು. ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದರು.
ಜಿಲ್ಲೆಯ ವಸತಿ ನಿಲಯಗಳಲ್ಲಿ ಆಶ್ರಯ ಪಡೆದು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಸೌಕರ್ಯಗಳು ತಲುಪಬೇಕು.ಜೊತೆಗೆ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಡೆಗೆ ಸಂಬಂಧಿತ ಇಲಾಖೆಯ ಮುಖ್ಯಸ್ಥರು ಅಗತ್ಯವಿರುವ ಕ್ರಮಗಳನ್ನು ಕೈಗೊಂಡು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮುಂದಾಗಬೇಕೆಂದು ಸೂಚನೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕಾರ್ಯದರ್ಶಿ ರಮಣದೀಪ್ ಚೌಧರಿ ತಿಳಿಸಿದರು.
ಜಿಲ್ಲಾದಿಕಾರಿ ಗೋವಿಂದರೆಡ್ಡಿ ಅವರು ಗದಗ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಕುರಿತಂತೆ ಅಂಕಿ ಅಂಶಗಳ ಸಮೇತ ವಸ್ತು ಸ್ಥಿತಿಯನ್ನು ಹಾಗೂ ಪ್ರವಾಹ ನಿರ್ವಹಣೆಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ವಿವರಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಭರತ್ ಎಸ್ ಮಾತನಾಡಿ ಈಗಾಗಲೇ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿವಿಧ ಇಲಾಖೆಗಳ ವಿವಿಧ ಯೋಜನೆಗಳ ಸಮರ್ಪಕ ಅನುಷ್ಟಾನಕ್ಕೆ ಸೂಚಿಸಲಾಗಿದೆ. ನಿಗದಿತ ಅವಧಿಯೊಳಗೆ ಸರ್ಕಾರ ನಿಗದಿಪಡಿಸಿದ ಆರ್ಥಿಕ ಭೌತಿಕ ಗುರಿ ಸಾಧನೆಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್. ಮಾತನಾಡಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಗೋವಿನಜೋಳ, ಹೆಸರು, ಶೇಂಗಾ,ಸೂರ್ಯಕಾಂತಿ,ಹತ್ತಿ, ಈರುಳ್ಳಿ, ಮೆಣಸಿನಕಾಯಿ ಪ್ರಮುಖವಾಗಿ ಬೆಳೆಗಳಾಗಿವೆ. ಹಿಂಗಾರು ಹಂಗಾಮಿಗೆ ಕಡಲೆ, ಹಿಂಗಾರು ಜೋಳ, ಗೋಧಿ, ಸೂರ್ಯಕಾಂತಿ, ಹತ್ತಿ ಪ್ರಮುಖ ಬೆಳೆಗಳಾಗಿವೆ. ಅಗಸ್ಟ 13 ರವರೆಗೆ ಜಿಲ್ಲೆಯಲ್ಲಿ ಒಟ್ಟಾರೆ ಏಳು ತಾಲೂಕುಗಳು ಒಳಗೊಂಡAತೆ 3,08,336 ಕ್ಷೇತ್ರ ಹೆಕ್ಟೇರ್ದಷ್ಟು ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಪ್ರಗತಿಯಲ್ಲಿದೆ. ರೈತರಿಗೆ ವಿತರಿಸಲು 12654 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದ್ದು ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಇರುವುದಿಲ್ಲ ಎಂದು ಸಭೆಗೆ ತಿಳಿಸಿದರು.
ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಮಾತನಾಡಿ ಇದುವರೆಗೆ 9890 ಟನ್ ಹಣ್ಣಿನ ಉತ್ಪಾದನೆಯಾಗಿದೆ. 383 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣಿನ ಸಸಿನಡೆಸಲಾಗಿದ್ದು 51300 ಹಣ್ಣಿನ ಸಸಿ ವಿತರಣೆಯಾಗಿದ್ದು 34976 ಟನ್ ತರಕಾರಿ ಉತ್ಪಾದನೆಯಾಗಿದೆ ಹಾಗೂ 14590 ತೆಂಗಿನ ಸಸಿಗಳನ್ನು ವಿತರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಮಾತನಾಡಿ 135 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು ಆ ಪೈಕಿ 67 ಮಕ್ಕಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 345 ಕಾಮಗಾರಿಗಳು ಕೆಆರ್ಐಡಿಎಲ್ನಿಂದ ಪ್ರಾರಂಭವಾಗಿದ್ದು ವಿವಿಧ ಹಂತಗಳಲ್ಲಿವೆ. ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೇ 42 ವಸತಿ ನಿಲಯಗಳಿದ್ದು ಇನ್ನೂ 6 ಹಾಸ್ಟೆಲ್ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಲ್. ಬಾರಾಟಕ್ಕೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ್, ಲೋಕೋಪಯೋಗಿ ಇಲಾಖೆಯ ಇಇ ರಮೇಶ ಪಾಟೀಲ, ಡಿ.ಎಚ್.ಓ ಡಾ.ಎಸ್.ಎಸ್.ನೀಲಗುಂದ ಸೇರಿದಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು, ಆಯಾ ತಾಲೂಕುಗಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಜರಿದ್ದರು.
ವರದಿ : ಸಂ.