ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಸಿ.ಎನ್. ಪಾಟೀಲ್ ರಚಿತ ಭುವನೇಶ್ವರಿ ಭಾವಚಿತ್ರ ಅಧಿಕೃತವಾಗಬೇಕು – ಸಾಹಿತಿ ಚಂದ್ರಶೇಖರ ವಸ್ತ್ರದ ಅಭಿಮತ.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಸಿ.ಎನ್. ಪಾಟೀಲ್ ರಚಿತ ಭುವನೇಶ್ವರಿ ಭಾವಚಿತ್ರ ಅಧಿಕೃತವಾಗಬೇಕು – ಸಾಹಿತಿ ಚಂದ್ರಶೇಖರ ವಸ್ತ್ರದ ಅಭಿಮತ.
ಗಜೇಂದ್ರಗಡ : ಸತ್ಯಮಿಥ್ಯ (ಜ -21).
ಅಂದಾನಪ್ಪ ದೊಡ್ಡಮೇಟಿಯವರ ಆಶಯದಂತೆ. ಸಿ ಎನ್ ಪಾಟೀಲ್ ರಚನೆ ಮಾಡಿರುವ ಕನ್ನಡಮಾತೆ ಭುವನೇಶ್ವರಿಯ ಬಾವಚಿತ್ರವೆ ಅಧಿಕೃತವಾಗಬೇಕು. ಕನ್ನಡಾಂಬೆಯ ಮೆರವಣಿಗೆ ಜಕ್ಕಲಿ ಗ್ರಾಮದಿಂದ ಗಜೇಂದ್ರಗಡವರೆಗೆ ಮಾತ್ರ ನಡೆದರೆ ಸಾಲುವದಿಲ್ಲ. ಅದು ಬೀದರನಿಂದ ಬೆಂಗಳೂರಿನವರೆಗೆ ಆ ಮೆರವಣಿಗೆ ಸಾಗುವಂತಾಗಬೇಕು ಎಂದು ಹಿರಿಯ ಸಾಹಿತಿ ಚಂದ್ರಶೇಖರ ವಸ್ತ್ರದ ನುಡಿದರು.
ಅವರು ಗಜೇಂದ್ರಗಡ ನಗರದ ಜಗದ್ಗುರು ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಜರುಗಿದ. ಗದಗ ಜಿಲ್ಲಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ. ಗಜೇಂದ್ರಗಡ ನಗರ 18 ಬಾವಿ 18 ಮಸೀದಿ 18 ಮಂದಿರಗಳನ್ನು ಹೊಂದುವ ಮೂಲಕ ಸರ್ವ ಧರ್ಮದ ಸಮನ್ವಯತೆಯ ಭೂಮಿ ಎಂದೆನಿಸಿಕೊಂಡಿದೆ. ಶೌರ್ಯ ಸಾಗರ ಕಾದಂಬರಿಯನ್ನು ರಚಿಸಿದ ಕೊಟ್ರಪ್ಪ ಅರಳಿಯವರು ಈ ಪುಣ್ಯ ಭೂಮಿಯವರೇ ಎಂಬುವದು ಹೆಮ್ಮೆಯ ವಿಷಯ. ಕರ್ನಾಟಕ – ಮಹಾರಾಷ್ಟ್ರ ಗಡಿಯಲ್ಲಿ ಕನ್ನಡದ ಕೈಂಕರ್ಯಕ್ಕೆ ಪಣತೊಟ್ಟ ಚಿಂಚಣಿಯ ಅಲ್ಲಮಪ್ರಭು ಮಹಾಸ್ವಾಮಿಗಳು ಇಲ್ಲಿಯವರೇ. ಇಂತಹ ಸಮ್ಮೇಳನಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಜಾತಿ ಮತ ಪಂಥ ಭಾಷೆಗಳನ್ನು ಮೀರಿ ಜನತೆ ಸಹೋದರತ್ವದಿಂದ ಬಾಳ್ವೆ ನಡೆಸಲು ಸಹಕಾರಿಯಾಗುತ್ತದೆ. ಗದಗ ಜಿಲ್ಲೆಯಲ್ಲಿ ಅನೇಕ ಮಹಾಪುರುಷರು ಜನ್ಮತಾಳಿದ್ದಾರೆ ಅವರ ಸ್ಮರಣಾರ್ಥಕವಾಗಿ ಅವರ ಪುಣ್ಯಭೂಮಿಗಳು ಅಭಿವೃದ್ಧಿ ಹೊಂದಬೇಕಾಗಿದೆ ಇದು ಸರ್ಕಾರದ ಕೆಲಸ ಮಾತ್ರವಲ್ಲ ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕ ಮೂಲ ಸೌಕರ್ಯ, ಸಾಹಿತ್ಯ ಚಟುವಟಿಕೆಗಳು ಹೆಚ್ಚಾಗಲು ಅಕಾಡೆಮಿ ಸ್ಥಾಪನೆಯಾಗಬೇಕು. ನಮ್ಮ ಜಿಲ್ಲೆಯ ಹೆಮ್ಮೆ ಕಪ್ಪತ್ತಗುಡ್ಡವನ್ನು ರಕ್ಷಿಸಲು ಸಾರ್ವಜನಿಕರ ಹೋರಾಟ ಅಗತ್ಯ ಎಂದು ಹೇಳಿದರು.
ರಾಜ್ಯ ಕಾನೂನು ಸಚಿವ ಎಚ್ ಕೆ ಪಾಟೀಲ್ ಮಾತನಾಡಿ ಕನ್ನಡ ಭಾಷೆಯ ಅಭಿವೃದ್ಧಿ, ಸಂಶೋಧನೆ, ಪ್ರಾಚ್ಯವಸ್ತುಗಳ ಸಂಗ್ರಹ ಸೇರಿದಂತೆ ಸಮಗ್ರ ಮಾಹಿತಿಯನ್ನು ಅಂತರ್ಜಾಲದಲ್ಲಿ ನಮೂದಿಸಲು ತಂಡವನ್ನು ರಚನೆ ಮಾಡಲಾಗಿದೆ. 1961ರಲ್ಲಿ ಗದಗ ಜಿಲ್ಲೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯಸಮ್ಮೇಳನದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡುವ ಮೊದಲ ಬಾರಿ ಹಕ್ಕೊತ್ತಾಯ ಮಾಡಲಾಯಿತು ಎಂದು ಸ್ಮರಿಸಿದರು.ಹಿಂದಿನ ಇತಿಹಾಸವನ್ನು ಪದೇ ಪದೇ ಯುವ ಪೀಳಿಗೆಗೆ ತಿಳಿಸಲು ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗಲಿವೆ. ಕನ್ನಡ ಭಾಷೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಲೂ ಗದಗ ಜಿಲ್ಲೆಯ ಕೊಡುಗೆ ಅಪರಿಮಿತ. ಗದಗ ಜಿಲ್ಲೆಯ ರೋಣ ಹಾಗೂ ಗಜೇಂದ್ರಗಡ ಪಟ್ಟಣಗಳು, ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿವೆ..ಕುಮಾರವ್ಯಾಸ,ನಯಸೇನಾ,ದುರ್ಗಸಿಂಹ, ಭೀಮಶೇನ ಜೋಷಿ ಸೇರಿದಂತೆ ಅನೇಕ ಮಹನೀಯರಿಂದ ಈ ನಾಡು ಮತ್ತಷ್ಟು ಶ್ರೀಮಂತಗೊಂಡಿದೆ ಎಂದರು.
ಸಮ್ಮೇಳನದ ಅದ್ಯಕ್ಷಿಯ ಭಾಷಣ ಮಾಡಿದ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್.ಪಾಟೀಲ ರೋಣ ಮತ್ತು ಗಜೇಂದ್ರಗಡ ತಾಲೂಕುಗಳಿಗೆ ಮಲಪ್ರಭಾ ನದಿ ನೀರು ಸಂಪರ್ಕಿಸಬಹುದು. ಈ ನಿರ್ಣಯಕ್ಕೆ ನಾನು ಕಟ್ಟಿಬದ್ಧನಾಗಿದ್ದೇನೆ. ಗದಗ್ ವಾಡಿ ರೈಲು ಮಾರ್ಗ ಕಾರಣಾಂತರಗಳಿಂದ ಬದಲಾಗಿದೆ ಮೂಲ ಯೋಜನೆ ಬಗ್ಗೆ ಸಮ್ಮೇಳನದಲ್ಲಿ ನಿರ್ಣಯ ಕೈಗೊಂಡು ಸಚಿವರಿಗೆ ಸರಕಾರಕ್ಕೆ ಮನವಿ ಸಲ್ಲಿಸುವುದು ಅಗತ್ಯವಿದೆ ಎಂದರು.
ಇದಕ್ಕೂ ಮುನ್ನ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ್ ಆಶಯ ನುಡಿಯ ಮೂಲಕ ಗದಗ ಜಿಲ್ಲಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ವಿಶಿಷ್ಟತೆ ಮತ್ತು ತೆಗೆದುಕೊಳ್ಳಬೇಕಾದ ಮಹತ್ವದ ನಿರ್ಣಯಗಳ ಬಗ್ಗೆ ಬೆಳಕು ಚೆಲ್ಲಿದರು.
ಸಮ್ಮೇಳನದ ವೇದಿಕೆ ಮೇಲೆ ಅಂತರಗಂಗೆ ಸ್ಮರಣ ಸಂಚಿಕೆಯನ್ನು ಶಾಸಕ ಜಿ..ಎಸ್.. ಪಾಟೀಲ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದಗ ತೋಂಟದಾರ್ಯ ಮಠದ ಸಿದ್ಧರಾಮ ಶ್ರೀಗಳು, ಮೈಸೂರು ಮಠದ ವಿಜಯ ಮಹಾಂತ ಶ್ರೀಗಳು ವಹಿಸಿದ್ದರು.
ವೇದಿಕೆ ಮೇಲೆ ಮಾಜಿ ಸಚಿವ ಎಸ್. ಎಸ್. ಪಾಟೀಲ್, ಡಿ. ಆರ್.ಪಾಟೀಲ್, ಟಿ ಈಶ್ವರ್, ರಾಮಕೃಷ್ಣ ದೊಡ್ಡಮನಿ, ಜಿಲ್ಲಾಧಿಕಾರಿ ಸಿ. ಎನ್.ಶ್ರೀಧರ, ಸಿಇಒ ಭರತ್.ಎಸ್, ಸಾಹಿತಿ ರವೀಂದ್ರನಾಥ ದೊಡ್ಡ ಮೇಟಿ, ವೀರಣ್ಣ ಶೆಟ್ಟರ, ಪರಶುರಾಮ ಅಳಗವಾಡಿ,ಸಿದ್ದಪ್ಪ ಬಂಡಿ, ಅಮರೇಶ ಗಾಣಿಗೇರ,ವಿ .ಆರ್. ಗುಡಿಸಾಗರ, ಅಪ್ಪು ಮತ್ತಿಕಟ್ಟಿ, ಪ್ರಶಾಂತ ರಾಠೋಡ್, ಎಚ್.ಎಸ್. ಸೋಂಪುರ, ಅಶೋಕ ಭಾಗಮಾರ, ಮುಕ್ತುಮಸಾಬ ಮುಧೋಳ, ಪುರಸಭೆ ಅಧ್ಯಕ್ಷ ಸುಭಾಷ್ ಮ್ಯಾಗೇರಿ,ಉಪಾಧ್ಯಕ್ಷೆ ಸವಿತಾ ಬಿದರಳ್ಳಿ, ಮಿಥುನ ಪಾಟೀಲ, ಸೋಮನಕಟ್ಟಿ ಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷಗಳು :
* ನಗರದ ಮೈಸೂರು ಮಠದಿಂದ ಹೊರಾಟ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಅನೇಕ ಮಜಲುಗಳು ಪ್ರದರ್ಶನಗೊಂಡವು.
* ಕನ್ನಡ ಮನಸುಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೆರಗು ಮುಡಿತ್ತು.
* ವಿಶೇಷವಾಗಿ ಬಾಗಮರ ಬಿಎಎಂಎಸ್ ಕಾಲೇಜಿನ ವಿದ್ಯಾರ್ಥಿಗಳು ಕನ್ನಡ ಭಾವುಟ ಹಿಡಿದು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
* ವಿಶೇಷವಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು.
* ವಿಚಾರಗೋಷ್ಠಿಗಳು ನಡೆದವು
* ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ವರದಿ : ಸುರೇಶ ಬಂಡಾರಿ