
“ಮರೆತೆನೆಂದರು ಮರೆಯಲಿ ಹೆಂಗ?… ಈ ಕೋಟೆನಾಡು ಗಜೇಂದ್ರಗಡ ಊರ್ನಾ.” – ಮಹೇಂದ್ರ ಜಿ ಪತ್ರ.
ಗಜೇಂದ್ರಗಡ – ಸತ್ಯಮಿಥ್ಯ (ಆ-07).
ಮಹೇಂದ್ರ ಜಿ ಅಂದ್ರೆ ಗಜೇಂದ್ರಗಡದ ಬಹುತೇಕ ಕಾಲೇಜು ವಿದ್ಯಾರ್ಥಿ ಮಿತ್ರರಿಗೆ ಮತ್ತು ಪ್ರಾಧ್ಯಾಪಕರುಗಳಿಗೆ ಅತ್ಯಂತ ಚಿರಪರಿಚಿತ ವ್ಯಕ್ತಿ ಎಂದರೆ ತಪ್ಪಾಗಲಾರದು.ಗಜೇಂದ್ರಗಡದ ಸರ್ಕಾರಿ ಬಿ ಎಸ್ ಎಸ್ ಪದವಿ ಕಾಲೇಜನ್ನು ಉನ್ನತ ಮಟ್ಟಕ್ಕೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಸದಾ ಹಸನ್ಮುಖಿ ಅಷ್ಟೇ ಸ್ಟ್ರಿಕ್ಟ್ ವ್ಯಕ್ತಿ. ಜಾಣ ವಿದ್ಯಾರ್ಥಿಗಳಿಗೆ ನಗುಮೊಗದ ಭೋದನೆಯಾದರೆ ಉಡಾಳರಿಗೆ ಜೀವನ, ಬದುಕು, ಗುರಿಗಳ ಬಗ್ಗೆ ತಿಳಿ ಹೇಳುತ್ತಾ ಸರಿದಾರಿಗೆ ತರುವ ಅವರ ಸ್ಟೈಲ್ ಅದ್ಬುತ. ಅವರ ಬಾಯಲ್ಲಿ ಬರುವ ನಯವಿನಯದ ಕನ್ನಡ ಮತ್ತು ಇಂಗ್ಲಿಷ್ ಅದ್ಬುತ. ಅಂತಹ ವ್ಯಕ್ತಿ ಮಹೇಂದ್ರ ಜಿ ಗಜೇಂದ್ರಗಡ ಮತ್ತು ಇಲ್ಲಿನ ಪರಿಸರದೊಂದಿಗಿನ ತಮ್ಮ ಒಡನಾಟದ ಬಗ್ಗೆ ಅದ್ಭುತವಾಗಿ ಬರೆದಿದ್ದಾರೆ ಓದಿ ಮಿತ್ರರೇ.
ಮರೆತೆನೆಂದರು ಮರೆಯಲಿ ಹೆಂಗ?… ಈ ಕೋಟೆನಾಡು ಗಜೇಂದ್ರಗಡ ಊರ್ನಾ.
ಬಿಟ್ಟು ಹೋಗಲು ಬೆಜಾರು ಆದರೆ ಸರ್ಕಾರದ ಆದೇಶ ಪಾಲನೆ ಮಾಡುವುದು ಅನಿವಾರ್ಯ.
ಎಲ್ಲರಿಗೂ ಮಹೇಂದ್ರ ಜಿ ಎಂಬ ಗಜೇಂದ್ರಗಡದ ಅಭಿಮಾನಿಯೋರ್ವ ಮಾಡುವ ನಮಸ್ಕಾರಗಳು.
ಆತ್ಮೀಯರೇ, ಬೆಂಗಳೂರು ಎಂಬ ಮಹಾ ನಗರದಿಂದ ಗಜೇಂದ್ರಗಡ ಎಂಬ ಪಟ್ಟಣಕ್ಕೆ ಬಂದಾಗ ಎಲ್ಲರೂ ಅಪರಿಚಿತರು, ಎಲ್ಲಿ ನೋಡಿದರು ಕಲ್ಲಿನ ಬಂಡೆಗಳು ಕಾಣುತ್ತಿದ್ದವು, ಮಾತಾಡಿದರೆ ಸಾಕು ಅರ್ಥವಾಗದ ಜಗತ್ತು ಎಂದು ಅನಿಸುತಿತ್ತು. ಅದು ಹೇಗೆ ಬೋಧನೆ ಮಾಡುವುದು, ಇಲ್ಲಿನ ಮಕ್ಕಳಿಗೆ ಅದು ಹೇಗೆ ಕಲಿಸುವುದು ಹಾಗೂ ಇಲ್ಲಿನ ಜನರ ಜೊತೆಗೆ ಅದು ಹೇಗೆ ಬೆರೆತುಕೊಳ್ಳುವುದು ಎನ್ನುವ ಅನೇಕ ಪ್ರಶ್ನೆಗಳು ನನ್ನನ್ನು ಕಾಡ ತೊಡಗಿದ್ದವು.ಆದರೆ ಇಂದು ಅದೇ ಗಜೇಂದ್ರಗಡ ನಗರವನ್ನು ಬಿಟ್ಟು ಹೋಗಲು ಭಾವದ್ವೇಗಕ್ಕೆ ಒಳಗಾಗುತ್ತಿದ್ದೇನೆ. ಇಲ್ಲಿನ ಪ್ರತಿಯೊಂದು ಮನೆಯೂ ನನ್ನ ಕುಟುಂಬದಂತಾಗಿದೆ. ಪ್ರತಿಯೊಬ್ಬರು ನನ್ನವರೇ ಎನ್ನುವಂತಾಗಿದೆ. ಹಾಗಾಗಿ ಬಿಟ್ಟು ಹೋಗಲು ಬೇಜಾರು ಆಗುತ್ತಿದೆ. ಆದರೆ ಕಡ್ಡಾಯ ವರ್ಗಾವಣೆ ಎಂಬ ಸರ್ಕಾರದ ಆದೇಶವನ್ನು ಪಾಲನೆ ಮಾಡುವುದು ನಮ್ಮ ಅನಿವಾರ್ಯತೆ ಹಾಗೂ ಕರ್ತವ್ಯವಾಗಿದೆ.
ಸಾಮಾನ್ಯ ಒಬ್ಬ ಪ್ರಾಧ್ಯಾಪಕನಾಗಿ ಗಜೇಂದ್ರಗಡ ನಗರದ ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನನ್ನ ವೃತ್ತಿ ಜೀವನವನ್ನು ಆರಂಭಿಸಿದೆ. ನಂತರದ ದಿನಗಳಲ್ಲಿ ಇಲ್ಲಿನ ಸಹದ್ಯೋಗಿಗಳ ಸಹಕಾರ, ಪಾಲಕರ ಪ್ರೋತ್ಸಾಹ, ವಿದ್ಯಾರ್ಥಿಗಳು ನೀಡಿದ ಪ್ರೀತಿಯಿಂದ ಕಲಿಕೆಯ ಜೊತೆಜೊತೆಯಲ್ಲಿ ಕಲಿಸುತ್ತಾ ಬಂದೆ ಹಾಗೂ ಉತ್ತಮ ಬಾಂಧವ್ಯಗಳನ್ನು ಕಂಡುಕೊಂಡಿರುವೆ. ನಂತರ ಕಾಮರ್ಸ್ ವಿಭಾಗದ ಎಚ್‌ಒಡಿ ಯಾದೆ ಡಿಪಾರ್ಟ್‌ಮೆಂಟ್ ಬೆಳವಣಿಗೆಗೆ ಎಲ್ಲರೂ ಸಹಕಾರ ನೀಡಿದರು.
ತದನಂತರ ಕಾಲೇಜಿನ ಪ್ರಭಾರ ಪ್ರಾಂಶುಪಾಲನಾಗಿ ಅಧಿಕಾರ ವಹಿಸಿಕೊಂಡಾಗ ಹಲವು ಸವಾಲಗಳು ನನ್ನನ್ನು ಕಾಡುತ್ತಿದ್ದವು ಆದರೆ ಅವೆಲ್ಲವೂ ಸಮಸ್ಯೆಗಳಾಗದಂತೆ ಖುಷಿಖುಷಿಯಿಂದ ಪರಿಹರಿಸಲ್ಪಟ್ಟವು. ಈ ಅವಧಿಯಲ್ಲಿ ರೋಣ ಮತಕ್ಷೇತ್ರದ ಈಗಿನ ಶಾಸಕರಾದ ಸನ್ಮಾನ್ಯ ಶ್ರೀ ಜಿ. ಎಸ್. ಪಾಟೀಲರು, ಈ ಹಿಂದಿನ ಶಾಸಕರಾದ ಸನ್ಮಾನ್ಯ ಶ್ರೀ ಕಳಕಪ್ಪ ಜಿ. ಬಂಡಿಯವರು, ಎರಡು ಅವಧಿಯಲ್ಲಿನ ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರು, ಶಿವರಾಜ್ ಘೋರ್ಪಡೆ ಯವರು , ಭೂದಾನಿಗಳಾದ ಮಲ್ಲಪ್ಪ ಸಿಂಹಾಸನದ ಕುಟುಂಬದವರು,ಎಲ್ಲಾ ಅವಧಿಯ ಪ್ರಾಂಶುಪಾಲರು, ಎಚ್‌ಒಡಿಗಳು, ಪ್ರಾಧ್ಯಾಪಕರು, ಗೌರವಾನ್ವಿತ ಅತಿಥಿ ಉಪನ್ಯಾಸಕರು, ಬೊಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಗೌರವಾನ್ವಿತ ಮಾಧ್ಯಮ ಮಿತ್ರರು, ನೀಡಿದ ಸಹಕಾರ ಅವಿಸ್ಮರಣೀಯ. ಯಾರನ್ನು ಮರೆಯಲು ಸಾಧ್ಯವಿಲ್ಲ. ಅವರೆಲ್ಲರ ಮಾರ್ಗದರ್ಶನವೇ ಇಂದಿನ ಕಾಲೇಜಿನ ಬೆಳವಣಿಗೆಗೆ ಕಾರಣವಾಗಿದೆ.
ನ್ಯಾಕ್ ಕಾರ್ಯದಲ್ಲಿ ಎಲ್ಲರ ಸಹಕಾರದಿಂದ ಕಾಲೇಜಿಗೆ ಉತ್ತಮ ಗ್ರೇಡ್ ಸಿಕ್ಕಿದ್ದು ನನ್ನ ಭಾಗ್ಯ, ಹಲವು ವಿದ್ಯಾರ್ಥಿಗಳು ಉನ್ನತ ಮಟ್ಟದ ಪರೀಕ್ಷೆಗಳನ್ನು ಪಾಸ್ ಮಾಡಿದ್ದು, ಅನೇಕರು ನೌಕರಿ ಪಡೆದಿದ್ದು, ಬಿಸಿನೆಸ್ ಆರಂಭಿಸಿ ನಮ್ಮನ್ನು ಆಹ್ವಾನಿಸಿದ್ದು ನನ್ನ ಸೌಭಾಗ್ಯವಾಗಿದೆ. ಹೀಗೆ ಪ್ರತಿ ವಿದ್ಯಾರ್ಥಿಯ ಸಾಧನೆ, ನನ್ನದೆ ಸಾಧನೆಯಂತೆ ಸಂಭ್ರಮಿಸಿರುವೆ.
ಪ್ರತಿವರ್ಷ ಆಡ್ಮಿಷನ್‌ಗೂ ಕೊರತೆಯಾಗದಂತೆ ಎಲ್ಲರೂ ಮುತುವರ್ಜಿ ವಹಿಸಿದ್ದರ ಪರಿಣಾಮ ಅನೇಕ ಕಾಲೇಜುಗಳಲ್ಲಿ ಪ್ರವೇಶಾತಿ ಕೊರತೆ ಇದ್ದರು ಸಹ, ನಮ್ಮಲ್ಲಿ ಎಲ್ಲಾ ಕಾಂಬಿನೇಷನ್ ಗಳು ತುಂಬಿವೆ. 2025-26ನೇ ಸಾಲಿಗೆ ಪ್ರಥಮ ಸೆಮಿಸ್ಟರ್‌ಗೆ 337ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು ನಮ್ಮ ಸರ್ಕಾರಿ ಸಂಸ್ಥೆಯ ಹೆಮ್ಮೆಯಾಗಿದೆ.
ಹೀಗೆ ಪ್ರತಿಯೊಬ್ಬರ ಸಹಕಾರದಿಂದ ಯಶಸ್ವಿ ಜೀವನ, ಯಶಸ್ವಿ ಶೈಕ್ಷಣಿಕ ಅನುಭವ ಪಡೆಯಲು ಸಾಧ್ಯವಾಯಿತು. ಈಗ ಗಜೇಂದ್ರಗಡ ಬಿಟ್ಟು ಬೇರೆ ನಗರದ ಸರ್ಕಾರಿ ಕಾಲೇಜಿಗೆ ವರ್ಗಾವಣೆಯಾಗಿರುವೆ. ಆದರೆ ಬಿಟ್ಟು ಹೋಗಲು ಮನಸ್ಸಿಲ್ಲ ಬೇಜಾರು ಆಗುತ್ತಿದೆ. ಕಣ್ಣುಗಳು ಸ್ವಲ್ಪ ಒದ್ದೆಯಾಗಿವೆ. ಗಜೇಂದ್ರಗಡದ ಗುಡ್ಡದ ಪ್ರತಿ ಕಲ್ಲು ನನ್ನನ್ನು ಮಾತನಾಡಿಸುತ್ತಿದೆ. ಕಾಲೇಜಿನಲ್ಲಿರುವ ಗೋಡೆಗಳು, ಗಿಡಗಳು, ಕ್ಲಾಸ್‌ರೂಮ್‌ಗಳನ್ನು ಹಾಗೂ ಇಲ್ಲಿನ ಪೂರ್ಣ ಬಳಗ ನನ್ನನ್ನು ಪ್ರೀತಿಸುತ್ತಿದೆ. ಆದ್ದರಿಂದ ಈ ಕೋಟೆ ನಾಡಿನ ಋಣ ತಿರಿಸಲು ಸಾಧ್ಯವಿಲ್ಲ.. ನನ್ನ ಜೀವನದ ಕೊನೆ ವರೆಗೂ ನೆನಪಿನಲ್ಲಿ ಇರುತ್ತದೆ ಹಾಗೂ ವಿಶೇಷ ಸ್ಥಾನ ಪಡೆದಿರುತ್ತದೆ.
ಇಲ್ಲಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಪಾಲಕರು, ಸ್ಥಳೀಯರು ಈ ಸಂಸ್ಥೆಯನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಬೆಳೆಸಿಕೊಂಡು ಹೋಗಬೇಕು ನನ್ನದೊಂದು ಮನವಿಯಾಗಿದೆ. ನಾನು ಎಲ್ಲೆ ಇದ್ದರು ನಮ್ಮ ಗಜೇಂದ್ರಗಡ ಕಾಲೇಜಿನ ಅಭಿವೃದ್ದಿ, ಸಾಧನೆ ನೋಡಿ ಖುಷಿ ಪಡುವೆ ಹಾಗೂ ನಾನು ಹೆಮ್ಮೆಯಿಂದ ಹೇಳುವೆ ಇದು ನನ್ನ ಕಾಲೇಜು ಎಂದು. ಕಾಲೇಜಿನ ಮಕ್ಕಳ ಪ್ರಗತಿಗೆ ಸದಾ ನಾನು ಸಹಾಯ ಮಾಡುವೆ, ಅವರಿಗೆ ಸಹಕಾರ ನೀಡುವೆ.
ಅದಕ್ಕೆ ಆರಂಭದಲ್ಲಿ ಹೇಳಿದೆ… ಮರೆತೆನೆಂದರು ಮರೆಯಲಿ ಹೆಂಗ? ಈ ಕೋಟೆನಾಡು ಗಜೇಂದ್ರಗಡ ಊರ್ನಾ… ಎಂದು.. ಈಗಾಗಲೇ ನಾನು ಗಜೇಂದ್ರಗಡದ ಮಣ್ಣನ್ನು ನಾನು ತಿಲಕವಾಗಿ ಹಚ್ಚಿಕೊಂಡಿರುವೆ. ಅದನ್ನು ನನ್ನ ಜೊತೆಯಲ್ಲಿಯೇ ತೆಗೆದುಕೊಂಡು ಹೋಗುವೆ.. ಹಾಗೆ ಇಲ್ಲಿನ ಜನರ ಪ್ರೀತಿ ನನ್ನೊಂದಿಗೆ ಹಚ್ಚು ಹಸಿರಾಗಿ ಇರುತ್ತದೆ ಎಂದು ಭರವಸೆ ನೀಡುವೆ.
ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿರುವೆ. ಕಾಲೇಜ್‌ನ್ನು ಮಿಸ್ ಮಾಡಿಕೊಳ್ಳುತ್ತಿರುವೆ. ವಿಶೇಷವಾಗಿ ವಿದ್ಯಾರ್ಥಿಗಳನ್ನು ಮಿಸ್ ಮಾಡಿಕೊಳ್ಳುತ್ತಿರುವೆ. ಇಲ್ಲಿನನ ಪ್ರತಿಯೊಬ್ಬರ ಪ್ರೀತಿಯನ್ನು ಮಿಸ್ ಮಾಡಿಕೊಳ್ಳುತ್ತಿರುವೆ.
ಕಾಲಕಾಲೇಶ್ವರ ದೇವರ ಆಶೀರ್ವಾದ ಇರಲಿ ಅದರ ಜೊತೆಗೆ.. ನಿಮ್ಮೆಲ್ಲರ ಪ್ರೀತಿ, ಶುಭ ಹಾರೈಕೆ ನನ್ನ ಹಾಗೂ ನನ್ನ ಕುಟುಂಬದ ಮೇಲಿರಲಿ ಎಂದು ನಾ ನಂಬಿರುವ ದೇರವಲ್ಲಿ ಪ್ರಾರ್ಥಿಸುವೆ…
ಎಲ್ಲರಿಗೂ ಧನ್ಯವಾದಗಳು.
ಇಂತಿ ನಿಮ್ಮವ-ಮಹೇಂದ್ರ ಜಿ.