
ಸಿಗರೇಟ್ ಹೊತ್ತಿಸಿದ ಕಾವು; ಶಿರಹಟ್ಟಿಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ! ಆರು ಜನರಿಗೆ ಗಾಯ

ಗದಗ/ಸತ್ಯಮಿಥ್ಯ (ಅ-03)
ಸಿಗರೇಟ್ ಸೇದಿದ ಬಾಕಿ ಹಣ ನೀಡದ ವಿಚಾರವಾಗಿ ಇಬ್ಬರ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ.
ಶಿರಹಟ್ಟಿ ಪಟ್ಟಣದ ತಳಗೇರಿ ಬಡಾವಣೆಯಲ್ಲಿ ಅಬ್ದುಲ್ ಘನಿ ಮಕಾಂದಾರ್ ಎಂಬುವ ವ್ಯಕ್ತಿ ಚಹಾ ಅಂಗಡಿಯನ್ನು ಇಟ್ಟುಕೊಂಡಿದ್ದನು.ಆತನ ಅಂಗಡಿಗೆ ದಿನಾಲೂ ದೇವಪ್ಪ ಪೂಜಾರ್ ಎನ್ನುವ ಯುವಕ ಸಿಗರೇಟ್ ಸೇದಲು ಬರುತ್ತಿದ್ದನು. ನಿತ್ಯ ಬರೋದಿರಿಂದ ಅಬ್ದುಲ್ ಘನಿ ಆತನಿಗೆ ಚಹಾ ಹಾಗೂ ಸಿಗರೇಟ್ ಸಾಲ ನೀಡಿದ್ದನು. ಅದು 2,500 ರೂಪಾಯಿ ಆಗಿತ್ತು.ಆದ್ರೆ, ದೇವಪ್ಪ ಬಾಕಿ ಹಣ ನೀಡದೆ ಬೇರೆಯ ಅಂಗಡಿಯಲ್ಲಿ ಚಹಾ ಹಾಗೂ ಸಿಗರೇಟ್ ಸೇದಲು ಹೋಗುತ್ತಿದ್ದನು. ಹೀಗೆ ಬಂದಾಗ ಅಬ್ದುಲ್ ಘನಿ ಅಲ್ಲಿಗೆ ಹೋಗಿ ಬಾಕಿ ಹಣವನ್ನು ನೀಡುವಂತೆ ಹೇಳಿದ್ದಾನೆ. ಆದರೆ ನಾನು ಮಾತ್ರ ಕೇವಲ 800 ರೂಪಾಯಿ ಬಾಕಿ ಇದೆ ಅಷ್ಟೇ ಕೊಡುತ್ತೇನೆ ಅಂತಾ ದೇವಪ್ಪ ಹೇಳಿದ್ದಾನೆ.
ಇಲ್ಲಾ 2,500 ರೂಪಾಯಿ ಬಾಕಿ ಇದೆ ಅಂತಾ ಅಬ್ದುಲ್ ಘನಿ ಹೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಆಗ ದೇವಪ್ಪ ಹಾಗೂ ಅಬ್ದುಲ್ ತಮ್ಮ ಸಮುದಾಯದ ಯುವಕರನ್ನು ಕರೆಯಿಸಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಬ್ದುಲ್ ಘನಿಯ ಟೀ ಮಾರಾಟ ಮಾಡುವ ಗೂಡಂಗಡಿ ಜಖಂಗೊಂಡಿದೆ.
ಈ ವೇಳೆ 6 ಜನರಿಗೆ ಗಾಯಗಳಾಗಿದ್ದು, ಗಾಯಾಗೊಂಡವರನ್ನು ಅಬ್ದುಲ್ ಘನಿ ಮಕಾಂದಾರ್, ದೇವಪ್ಪ ಪೂಜಾರ್, ಪರಶುರಾಮ್ ಡೊಂಕಬಳ್ಳಿ. ಮೈಲಾರಪ್ಪ ಕಪ್ಪಣ್ಣವರ್, ರವಿ ಕಪ್ಪಣ್ಣವರ್, ವಿರುಪಾಕ್ಷ ಹಿರೇಮಠ ಎಂದು ಗುರುತಿಸಲಾಗಿದ್ದು, ಇವರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ : ಮುತ್ತು ಗೋಸಲ.