![](https://satyamityanews.com/wp-content/uploads/2025/02/IMG-20250213-WA0020-720x470.jpg)
ಅಂಬೇಡ್ಕರ್ ಭವನ ಗೋಪುರ ಕುಸಿತ; ಕಳಪೆ ಕಾಮಗಾರಿ ಅನುಮಾನ
ಗದಗ:ಸತ್ಯಮಿಥ್ಯ (ಫೆ -13)
ನಗರದ ಟಿಪ್ಪುಸುಲ್ತಾನ್ ವೃತ್ತದ ಸಮೀಪ ಇರುವ ಬಿ.ಆರ್. ಅಂಬೇಡ್ಕರ್ ಭವನ ಕಟ್ಟಡದ ಗೋಪುರ ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಭವನವನ್ನು ಸಮಾಜ ಕಲ್ಯಾಣ ಇಲಾಖೆ ನಿರ್ವಹಣೆ ಮಾಡುತ್ತಿದ್ದು, ಇಲ್ಲಿ ಮದುವೆ ಸೇರಿದಂತೆ ರಾಜಕೀಯ, ಸಾಹಿತ್ಯಿಕ ಸಭೆ ಸಮಾರಂಭಗಳು ನಡೆಯುತ್ತವೆ.
ಒಂಬತ್ತು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕಟ್ಟಡದ ಗೋಪುರ ಕುಸಿದು ಬಿದ್ದಿರುವ ಕಾರಣ ಕಟ್ಟಡದ ಗುಣಮಟ್ಟದ ಬಗ್ಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
‘ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದವರು 2016ರಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದರು. ಅಂಬೇಡ್ಕರ್ ಭವನದ ಗೋಪುರ ಸೋಮವಾರ ಬೆಳಗಿನ ಜಾವ ಕುಸಿದು ಬಿದ್ದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕಳಪೆ ಕಾಮಗಾರಿ ನಡೆದಿರುವುದು ಮೇಲ್ನೋಟಕ್ಕೆ ಗೋಚರಿಸಿದೆ. ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಿಗೆ ಪತ್ರ ಬರೆದಿದ್ದು, ಅವರಿಂದ ಕಾಮಗಾರಿ ಗುಣಮಟ್ಟದ ಪರಿಶೀಲನೆ ನಡೆಯಲಿದೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ್ ಪೋತದಾರ ತಿಳಿಸಿದ್ದಾರೆ.
‘ಕಳಪೆ ಕಾಮಗಾರಿಯಿಂದಾಗಿ ಗೋಪುರ ಕುಸಿದಿದೆ. ಗೋಪುರ ಮರು ನಿರ್ಮಾಣಕ್ಕೆ ಕ್ರಮವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.
ವರದಿ:ಮುತ್ತು ಗೋಸಲ