ಜಿಲ್ಲಾ ಸುದ್ದಿ

ಸೆ.9ರಂದು ಬಸವ ರಥಯಾತ್ರೆ ಜಿಲ್ಲೆಗೆ : ಮಾಜಿ ಶಾಸಕ ಡಿ.ಆರ್.ಪಾಟೀಲ.

Share News

ಸೆ.9ರಂದು ಬಸವ ರಥಯಾತ್ರೆ ಜಿಲ್ಲೆಗೆ : ಮಾಜಿ ಶಾಸಕ ಡಿ.ಆರ್.ಪಾಟೀಲ

ಗದಗ :ಸತ್ಯಮಿಥ್ಯ (ಸೆ-08).

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವಪರ ಸಂಘಟನೆಗಳ ಆಶ್ರಯದಲ್ಲಿ ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ನಡೆಯುತ್ತಿದ್ದು, ಅದರ ಭಾಗವಾಗಿ ಸೆ. 9ರಂದು ಬಸವ ರಥಯಾತ್ರೆ ಜಿಲ್ಲೆಗೆ ಆಗಮಿಸಲಿದೆ’ ಎಂದು ಸ್ವಾಗತ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಡಿ.ಆರ್.ಪಾಟೀಲ ಹೇಳಿದರು.

ಜಗಜ್ಯೋತಿ ಬಸವಣ್ಣನವರ ಸಮಾಜೋಧಾರ್ಮಿಕ ಆಶಯಗಳನ್ನು ಜನಮಾನಸದಲ್ಲಿ ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ಬಸವ ಸಂಸ್ಕೃತಿ ಅಭಿಯಾನ ನಡೆಯುತ್ತಿದೆ. ಕಾಯಕ, ದಾಸೋಹದ ಮಹತ್ವವನ್ನು ಸಾರುವುದು, ಮೌಢ್ಯ ಆಚರಣೆ ಮತ್ತು ಶೋಷಣೆಯಿಂದ ಜನರನ್ನು ಮುಕ್ತಗೊಳಿಸುವುದು, ವ್ಯಸನಮುಕ್ತ ಸಮಾಜ ನಿರ್ಮಾಣ, ಸಮಸಮಾಜದ ಪರಿಕಲ್ಪನೆ ಪಸರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ’ ಎಂದು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಸವನ ಬಾಗೇವಾಡಿಯಿಂದ ಸೆ. 1ರಿಂದ ಆರಂಭವಾಗಿರುವ ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆಯು ಸೆ. 9ರಂದು ಜಿಲ್ಲೆಗೆ ಆಗಮಿಸಲಿದೆ. ಅಂದು ಬೆಳಿಗ್ಗೆ 9ಕ್ಕೆ ಬಸವ ರಥದ ಸ್ವಾಗತ, 10ಕ್ಕೆ ತೋಂಟದಾರ್ಯ ಮಠದಲ್ಲಿ ಷಟ್‌ಸ್ಥಳ ಧ್ವಜಾರೋಹಣ, 11ಕ್ಕೆ ತೋಂಟದಾರ್ಯ ಮಠದ ಶಿವಾನುಭವ ಮಂಟಪದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಸಂಜೆ 4ಕ್ಕೆ ಸ್ತಬ್ದಚಿತ್ರ ಹಾಗೂ ವಿವಿಧ ಕಲಾತಂಡಗಳೊಂದಿಗೆ ಬಸವ ರಥದ ಮೆರವಣಿಗೆ, ಸಂಜೆ 6ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

ತೋಂಟದಾರ್ಯ ಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟರ ಮಾತನಾಡಿ, ‘ಸೆ.9ರಂದು ಸಂಜೆ 6ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ತೋಂಡದ ಸಿದ್ಧರಾಮ ಸ್ವಾಮೀಜಿ, ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ, ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ, ನಿಜಗುಣಪ್ರಭು ಸ್ವಾಮೀಜಿ, ಅಭಿನವ ಮೃತ್ಯುಂಜಯ ಸ್ವಾಮೀಜಿ, ಶಾಂತಲಿಂಗ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಪಾಲ್ಗೊಳ್ಳುವರು’ ಎಂದು ತಿಳಿಸಿದರು.

ಸಾಹಿತಿ ಪ್ರೊ.ಚಂದ್ರಶೇಖರ ವಸ್ತ್ರದ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಅತಿಥಿಗಳಾಗಿ ಭಾಗವಹಿಸುವರು. ‘ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು’ ವಿಷಯದ ಕುರಿತು ಆಳಂದ ತೋಂಟದಾರ್ಯ ಅನುಭವ ಮಂಟಪದ ಸಂಚಾಲಕ ಕೋರಣೇಶ್ವರ ಸ್ವಾಮೀಜಿ, ‘ಅಸ್ಪೃಶ್ಯತೆ ನಿವಾರಣೆಗೆ ಶರಣರ ಕೊಡುಗೆ’ ವಿಷಯದ ಕುರಿತು ಡಾ. ಸಿದ್ಧನಗೌಡ ಪಾಟೀಲ ಉಪನ್ಯಾಸ ನೀಡುವರು. ರಾತ್ರಿ 8ಕ್ಕೆ ‘ಜಂಗಮದೆಡೆಗೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಕೆ.ಎಸ್. ಚೆಟ್ಟಿ, ಶೇಖಣ್ಣ ಕವಳಿಕಾಯಿ, ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಗೌರಕ್ಕ ಬಡಿಗಣ್ಣವರ, ಗಿರಿಜಕ್ಕ ಹಸಬಿ, ಜಿ.ಬಿ. ಪಾಟೀಲ, ಶ್ರೀದೇವಿ ಶೆಟ್ಟರ, ಸುಧಾ ಹುಚ್ಚಣ್ಣವರ, ಅಮರೇಶ ಅಂಗಡಿ ಇದ್ದರು.

ವರದಿ : ಮುತ್ತು ಗೋಸಲ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!