
ಸೂರ್ಯನಿಗೆ ಸಣ್ಣ ಬೆಳಕು ಹೋಲಿಕೆ ಸಾಧ್ಯವೇ? ಯತೀಂದ್ರ ಹೇಳಿಕೆಗೆ ಬೊಮ್ಮಾಯಿ ತಿರುಗೇಟು!
ಗದಗ:ಸತ್ಯಮಿಥ್ಯ (ಜು-27).
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೈಸೂರು ರಾಜ ವಂಶಸ್ಥ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಹೋಲಿಕೆ ಮಾಡಿರುವ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಯತೀಂದ್ರ ಅವರು, ತಮ್ಮ ತಂದೆಯ ಸಾಧನೆ ಹೇಳಲು ಒಡೆಯರ್ ಅವರಿಗೆ ಹೋಲಿಕೆ ಮಾಡಿದ್ದಾರೆ.
ಸೂರ್ಯನಿಗೆ ಯಾವುದಾದರೂ ಸಣ್ಣ ಬೆಳಕನ್ನು ಹೋಲಿಕೆ ಮಾಡಲು ಸಾಧ್ಯವೇ ಸೂರ್ಯ ಸೂರ್ಯನೇ ಎಂದು ತಿರುಗೇಟು ನೀಡಿದರು.
ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆಯನ್ನು ರಾಜ್ಯ ಸರ್ಕಾರ ತಪ್ಪಿಸಬಹುದಿತ್ತು. ಈ ವರ್ಷ ಮಳೆ ಮುಂಚಿತವಾಗಿಯೇ ಆಗಿದೆ. ಎಲ್ಲಿ ಗೊಬ್ಬರದ ಅಗತ್ಯವಿದೆ ಅಲ್ಲಿ ಪೂರೈಕೆ ಮಾಡಬೇಕಿತ್ತು. ಬಫರ್ ಸ್ಟಾಕ್ ಇಟ್ಟುಕೊಳ್ಳಬೇಕಿತ್ತು. ನಿರ್ವಹಣೆ ಸರಿಯಾಗಿ ಆಗಿಲ್ಲ. ಹೆಚ್ಚಿನ ರಸಗೊಬ್ಬರಕ್ಕೆ ರಾಜ್ಯ ಸರ್ಕಾರ ಬೇಡಿಕೆ ಇಟ್ಟಿದೆ. ನಾನೂ ಕೇಂದ್ರ ಕೃಷಿ ಮತ್ತು ರಸಗೊಬ್ಬರ ಸಚಿವರ ಜೊತೆ ಮಾತನಾಡಿ ಹೆಚ್ಚುವರಿ ಗೊಬ್ಬರ ಕೊಡಿಸುವ ಕೆಲಸ ಮಾಡುತ್ತೇನೆ. ಅದಕ್ಕಿಂತ ಮುಖ್ಯವಾಗಿ ಈಗಾಗಲೇ ಬರುತ್ತಿರುವ ಗೊಬ್ಬರವನ್ನು ಸಮರ್ಪಕವಾಗಿ ಹಂಚುವ ಕೆಲಸವನ್ನು ಕೃಷಿ ಇಲಾಖೆ ಮತ್ತು ಮಂತ್ರಿಗಳು ಮಾಡಬೇಕು ಎಂದು ಹೇಳಿದರು.
ನೀರಾವರಿ ವಿಚಾರದಲ್ಲಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ನಾವೆಲ್ಲಾ ಒಂದಾಗಿದ್ದೇವೆ. ನಾನು ಗೋವಾ ಮುಖ್ಯಮಂತ್ರಿ ಹೇಳಿಕೆಯನ್ನು ಖಂಡಿಸುತ್ತೇನೆ. ಒಂದು ರಾಜ್ಯದ ಹಿತಾಸಕ್ತಿಗೆ ಇಷ್ಟು ದೊಡ್ಡ ರಾಜಕೀಯ ಆಟ ಆಡುವ ಅವಶ್ಯಕತೆ ಇಲ್ಲ. ಅವರು ನ್ಯಾಯ ಸಮ್ಮತವಾಗಿ ನಡೆದುಕೊಳ್ಳಬೇಕು. ಆದ್ದರಿಂದ ಅವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು. ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮಹದಾಯಿ ಬಗ್ಗೆ ಮಾತನಾಡುವ ಹಕ್ಕಿಲ್ಲ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮಹದಾಯಿಯಿಂದ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ ನವರಿಗೆ ಯಾವ ನೈತಿಕ ಹಕ್ಕಿದೆ ಎಂದು ಖಾರವಾಗಿ ಪ್ರಶ್ನಿಸಿದರು
ಇನ್ನೂ ಮಹದಾಯಿ ವಿಚಾರದಲ್ಲಿ ಏನಾದರೂ ಪ್ರಗತಿ ಮಾಡಿದ್ದರೆ ಅದು ಬಿಜೆಪಿ ಸರ್ಕಾರ. ಕಾಂಗ್ರೆಸ್ ನವರು ನ್ಯಾಯಮಂಡಳಿ ಮಾಡಿ ಅದಕ್ಕೆ ನಾಲ್ಕು ವರ್ಷ ಕಚೇರಿ ಕೊಡಲಿಲ್ಲ. ನಮ್ಮ ಸರ್ಕಾರ ಬಂದು ಕಚೇರಿ ನೀಡಿತು. ನ್ಯಾಯ ಮಂಡಳಿ ಆದೇಶ ಬಂತು ಆದರೆ, ಅದನ್ನು ಆದೇಶ ಮಾಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಆದೇಶ ಹೊರಡಿಸಿತು.
ಮಹದಾಯಿ ಯೋಜನೆಗೆ ಡಿಪಿಆರ್ ಮಾಡಿ ಒಪ್ಪಿಗೆ ಪಡೆದಿದ್ದು ಕೇಂದ್ರದ ಎನ್ ಡಿಎ ಸರ್ಕಾರ. ಪರಿಸರ ಅನುಮತಿಯನ್ನೂ ಬಿಜೆಪಿ ಸರ್ಕಾರವೇ ಕೊಡಿಸಿದೆ. ಕಾಂಗ್ರೆಸ್ ಒಂದೇ ಒಂದು ಕೆಲಸ ಮಾಡಿದೆ. ಬಿಜೆಪಿ ಅವಧಿಯಲ್ಲಿ ಕಾಮಗಾರಿ ಮಾಡಿ ಇಂಟರ್ ಲಿಂಕಿಂಗ್ ಕೆನಾಲ್ ಮಾಡಿದ್ದನ್ನು ತಡೆದು ಮಹದಾಯಿ ನೀರು ಮಲಪ್ರಭಾ ನದಿಗೆ ಹರಿಯದಂತೆ ಅಡ್ಡಗೋಡೆಯನ್ನು ಕಟ್ಟಿರುವುದು ಕಾಂಗ್ರೆಸ್ ಕೊಡುಗೆ ಎಂದು ದೂರಿದರು.
ಮನ್ ಕಿ ಬಾತ್ ವೀಕ್ಷಿಸಿದ ಬೊಮ್ಮಾಯಿ:ಗದಗ ಜಿಲ್ಲೆಯ ಸೊರಟೂರು ಗ್ರಾಮದ ಕಾರ್ಯಕರ್ತ ಫಕ್ಕೀರೇಶ ಗುಗ್ಗರಿ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 124 ನೇ ಮನ್ ಕಿ ಬಾತ್ ಅನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವೀಕ್ಷಿಸಿದರು.
ಈ ವೇಳೆ ಶಿವಯೋಗೀಶ್ವರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ರವಿ ದಂಡಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮನ್ ಕೀ ಬಾತ್ ವೀಕ್ಷಣೆ ಮಾಡಿದರು.
ವರದಿ : ಮುತ್ತು ಗೋಸಲ.