
ಚಿಂಚಲಿ ಗ್ರಾಪಂ ಪ್ರಭಾರ ಪಿಡಿಒ ಉಮೇಶ ಬಾರಕೇರ ಅಮಾನತ್ತು.
ಗದಗ / ಸತ್ಯಮಿಥ್ಯ (ಅ -06).
ಕರ್ತವ್ಯಕ್ಕೆ ಪದೇ ಪದೇ ಅನಧಿಕೃತ ಗೈರು, ಸರಿಯಾಗಿ ಕೆಲಸ ನಿರ್ವಹಣೆ ಮಾಡದಿರುವುದು ಸೇರಿ ಸರಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಕುಂಠಿತ ಪರಿಣಾಮ ಚಿಂಚಲಿ ಗ್ರಾ.ಪಂ ಪ್ರಭಾರ ಪಿಡಿಒ ಹಾಗೂ ಹರ್ಲಾಪೂರ ಗ್ರಾಪಂ ಗ್ರೇಡ್-1 ಕಾರ್ಯದರ್ಶಿ ಉಮೇಶ ಬಾರಕೇರ್ ಅವರನ್ನು ಅಮಾನತ್ತುಗೊಳಿಸಿ ಜಿಪಂ ಸಿಇಒ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಆದೇಶಿಸಿದ್ದಾರೆ.
ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮೇಲಾಧಿಕಾರಿಗಳ ಅನುಮತಿಯಿಲ್ಲದೆ ಅನಧಿಕೃತವಾಗಿ ಗೈರಾಗಿದ್ದು, ಸಾರ್ವಜನಿಕರು ಪಿಡಿಒ ವಿರುದ್ಧ ದೂರು ಸಲ್ಲಿಸಿದ್ದರಿಂದ ಜೊತೆಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಒ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಪ್ರಭಾರ ಪಿಡಿಒ ಉಮೇಶ ಬಾರಕೇರ ಅವರ ಕರ್ತವ್ಯ ಲೋಪವನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲು ಅವಶ್ಯವಿರುವುದರಿಂದ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿದ ಅಮಾನತ್ತುಗೊಳಿಸಲಾಗಿದೆ.
ಈ ಹಿಂದೆ ಚಿಂಚಲಿ ಗ್ರಾಪಂ ಪಿಡಿಒ, ಕಾರ್ಯದರ್ಶಿಯನ್ನು ಹುಡುಕಿ ಕೊಡಿ, ಹುಡುಕಿ ಕೊಟ್ಟವರಿಗೆ ಆಕರ್ಷಕ ಬಹುಮಾನ ಕೊಡಲಾಗುವುದು ಎಂದು ಚಿಂಚಲಿ, ಕಲ್ಲೂರ, ನೀಲಗುಂದ ಗ್ರಾಮಸ್ಥರು ಗೋಡೆಗಳ ಮೇಲೆ ಪೋಸ್ಟರ್ ಗಳನ್ನು ಅಂಟಿಸಿದ್ದರು. ಈ ಕುರಿತು ದಿನಪತ್ರಿಕೆಯಲ್ಲಿ ಕಳೆದ ಸೆ. 19ರಂದು ಪಿಡಿಒ, ಎಸ್ಡಿಎ, ಕಾರ್ಯದರ್ಶಿ ಕಾಣೆ! ಹುಡುಕಿಕೊಟ್ಟವರಿಗೆ ಆಕರ್ಷಕ ಬಹುಮಾನ ಘೋಷಣೆ ಎಂಬ ತಿಂಗಳಿಂದ ಕರ್ತವ್ಯಕ್ಕೆ ಹಾಜರಾಗದ ಪಿಡಿಒ ಎಂಬ ಶಿರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದು ಪ್ರಕಟವಾದ ಬೆನ್ನಲ್ಲೇ ಪಿಡಿಒ ಉಮೇಶ ಬಾರಕೇರ ಕರ್ತವ್ಯಕ್ಕೂ ಹಾಜರಾಗಿದ್ದರು. ಆದರೆ, ಕರ್ತವ್ಯ ಲೋಪದಡಿ ಜಿಪಂ ಸಿಇಒ ಅವರು ಪಿಡಿಒ ಉಮೇಶ ಬಾರಕೇರ ಅವರನ್ನು ಅಮಾನತ್ತುಗೊಳಿಸಿದ್ದಾರೆ.
ವರದಿ : ಮುತ್ತು ಗೋಸಲ.