ಜಿಲ್ಲಾ ಸುದ್ದಿ

ಗಣಿಗಾರಿಕೆ ಪ್ರಸ್ಥಾವ ಮುಂದೂಡಿಕೆ ನಿಟ್ಟುಸಿರು ಬಿಟ್ಟ ಪರಿಸರವಾದಿಗಳು.

Share News

ಗಣಿಗಾರಿಕೆ ಪ್ರಸ್ಥಾವ ಮುಂದೂಡಿಕೆ ನಿಟ್ಟುಸಿರು ಬಿಟ್ಟ ಪರಿಸರವಾದಿಗಳು

ಗದಗ:ಸತ್ಯಮಿಥ್ಯ (ಅ -09).

ಗದಗ ಜಿಲ್ಲೆಯ ಕಪ್ಪತಗುಡ್ಡದಲ್ಲಿ 28 ಗಣಿಗಾರಿಕೆಗಳಿಗೆ ಅನುಮತಿಗೆ ಕೋರಿ ಸಲ್ಲಿಕೆಯಾಗಿದ್ದ ಪ್ರಸ್ತಾವಗಳ ವಿಷಯವನ್ನು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸಭೆ ಚರ್ಚೆಗೆ ಕೈಗೆತ್ತಿಕೊಳ್ಳದೇ ಮುಂದೂಡಿದ್ದು, ಈ ಹಿನ್ನೆಲೆಯಲ್ಲಿ ಪರಿಸರವಾದಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ (ಅ.7) ನಡೆದ ಮಂಡಳಿ ಸಭೆ ನಡೆಯಿತು. ಸಭೆಯಲ್ಲಿ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯು ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯದ 10 ಕಿ.ಮೀ ವ್ಯಾಪ್ತಿಯಲ್ಲಿ 28 ಗಣಿಗಾರಿಕೆಗಳಿಗೆ ಅನುಮತಿಗೆ ಕೋರಿ ಸಲ್ಲಿಕೆಯಾಗಿದ್ದ ಪ್ರಸ್ತಾವಗಳ ವಿಷಯವನ್ನು ಮುಂದೂಡಿತು.

ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಕಪ್ಪತ್ತಗುಡ್ಡದ 1 ಕಿ.ಮೀ ವ್ಯಾಪ್ತಿಯಲ್ಲಿ ಅನಧಿಕೃತ ಗಣಿಗಾರಿಕೆ ನಡೆಸುತ್ತಿರುವವರಿಗೆ ನೋಟಿಸ್ ನೀಡಿ ಗಣಿಗಾರಿಕೆ ನಿಲ್ಲಿಸುವಂತೆ ಸೂಚಿಸಲಾಗಿದೆ. ಪ್ರಸ್ತಾವನೆಗಳ ಕುರಿತು ಚರ್ಚಿಸಲು ಮಂಡಳಿ ಸಭೆ ಕರೆದಿದ್ದಾಗ ಹಲವು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರು. ಸಾಕಷ್ಟು ಔಷಧೀಯ ಸಸ್ಯಗಳಿರುವ ಈ ಪ್ರದೇಶವು ಸಸ್ಯ ಸಂಪತ್ತಿನಿಂದ ಕೂಡಿರುವುದರಿಂದ ಕಪ್ಪತಗುಡ್ಡದಲ್ಲಿ ಆಯುರ್ವೇದ ವಿಶ್ವವಿದ್ಯಾನಿಲಯ ಸ್ಥಾಪಿಸುವಂತೆ ಹಲವು ಕಡೆಗಳಿಂದ ಬೇಡಿಕೆಯೂ ಇದೆ ಎಂದು ಹೇಳಿದರು.

ಕಪ್ಪತಗುಡ್ಡವು ಗದಗ, ಮುಂಡರಗಿ ಮತ್ತು ಶಿರಹಟ್ಟಿ ತಾಲೂಕುಗಳಲ್ಲಿ ಹರಡಿಕೊಂಡಿದ್ದು, ಗದಗ ಬಿಂಕದಕಟ್ಟಿ ಗ್ರಾಮದಿಂದ ಆರಂಭವಾಗಿ ಮುಂಡರಗಿಯ ಸಿಂಗಟಾಲೂರು ಗ್ರಾಮದವರೆಗೂ ಗುಡ್ಡ ವ್ಯಾಪಿಸಿದೆ. ಮಾಜಿ ಡಿಸಿಎಫ್ ಯಶಪಾಲ್ ಕ್ಷೀರಸಾಗರ್ ಅವರು ಬೆಟ್ಟದ ಮೇಲೆ ಲಭ್ಯವಿರುವ 500 ಪ್ರಮುಖ ಔಷಧೀಯ ಗಿಡಮೂಲಿಕೆಗಳ ಮಾಹಿತಿಯನ್ನು ಅವುಗಳ ವೈಜ್ಞಾನಿಕ ಹೆಸರುಗಳು, ವಿವರಗಳು ಮತ್ತು ಉಪಯೋಗಗಳೊಂದಿಗೆ ಸಂಗ್ರಹಿಸಿದ್ದಾರೆಂದು ತಿಳಿಸಿದರು.

ಪರಿಸರವಾದಿ ಚಂದ್ರಕಾಂತ ಚವ್ಹಾಣ ಮಾತನಾಡಿ, ಗದಗ, ಮುಂಡರಗಿ, ಶಿರಹಟ್ಟಿ ನಿವಾಸಿಗಳಿಗೆ ಶುದ್ಧ ಗಾಳಿ ನೀಡುವ ಗುಡ್ಡ ಇದಾಗಿದೆ. ಸರಕಾರ ಗಣಿಗಾರಿಕೆಗೆ ಅನುಮತಿ ನೀಡಿದರೆ ಅನಾಹುತವಾಗುತ್ತದೆ. ಬೆಟ್ಟದ ಬಳಿ ಕೆಲವರು ಕೈಗಾರಿಕೆಗಳನ್ನು ಸ್ಥಾಪಿಸಿದ ನಂತರ ನವಿಲುಗಳ ಸಂಖ್ಯೆ ಕಡಿಮೆಯಾಗಿದೆ. ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಗಣಿಗಾರಿಕೆಗೆ ಸರ್ಕಾರ ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ವರದಿ : ಮುತ್ತು ಗೋಸಲ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!