ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮೌಲ್ಯಮಾಪನ ಬಹಿಷ್ಕಾರ : ಪ್ರೋ.ಎಂ ಎ ಬಿರಾದಾರ
ಚಿತ್ರ : ಅ.19 ರಂದು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿಗಳಿಗೆ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ರುಕ್ಟಾ ಅಧ್ಯಕ್ಷರು ಹಾಗೂ ಉಪನ್ಯಾಸಕರುಗಳು ಮನವಿ ಸಲ್ಲಿಸುತ್ತಿರುವುದು.
ಮುಗಳಖೋಡ:ಸತ್ಯಮಿಥ್ಯ (ಅಗಸ್ಟ್ -26)
ಹಲವಾರು ವರ್ಷಗಳಿಂದ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಹಿಂದೇಟು ಹಾಕುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಉಪನ್ಯಾಸಕರಿಂದ ಸರಿಯಾದ ಸಮಯಕ್ಕೆ ಕೆಲಸ ಮಾಡಿಸಿಕೊಂಡು ಅವರಿಗೆ ಸರಿಯಾದ ತುಟ್ಟಿ ಭತ್ಯೆ ನೀಡದೆ ಸತಾಯಿಸುತ್ತಿದ್ದಾರೆ. ಕೂಡಲೇ ಸ್ಪಂದಿಸಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ಅಧ್ಯಕ್ಷ ಪ್ರೊ ಎಂ ಎ ಬಿರಾದಾರ ಆಗ್ರಹಿಸಿದ್ದಾರೆ.
ಅವರು ಪಟ್ಟಣದ ಶ್ರೀ ಮಠದ ಆವರಣದಲ್ಲಿ ರವಿವಾರ ನಡೆದ ಉಪನ್ಯಾಸಕರ ಸಭೆಯಲ್ಲಿ ಮಾತನಾಡುತ್ತಾ, ಉಪನ್ಯಾಸಕರ ಬೇಡಿಕೆಗಳಾದ ಪ್ರಾಚಾರ್ಯರ ಆಂತರಿಕ ಭತ್ಯೆ , ಬಾಹ್ಯ ಉಪ ಅಡಿಕ್ಷಕರ ಭತ್ಯೆ , ಬಿ ಓ ಈ ಸದಸ್ಯರ ಟಿ ಎ ಮತ್ತು ಡಿ ಎ, ವಿಚಕ್ಷಕ ದಳ ಭತ್ಯೆ , ಕೊಠಡಿ ಮೇಲ್ವಿಚಾರಕರ ಭತ್ಯೆ, ಕಚೇರಿ ಸಿಬ್ಬಂದಿಗಳ ಭತ್ಯೆ , ಪ್ರಾಯೋಗಿಕ ಪರೀಕ್ಷೆ ಭತ್ಯೆ ಹೆಚ್ಚಳ. ಹೀಗೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಮನವಿ ಪತ್ರದ ಮೂಲಕ ಮನವಿ ಕೊಟ್ಟರು, ಸಬುಬು ಹೇಳಿ ಜಾರಿಕೊಳ್ಳುತ್ತಿದೆ.ಇದರಿಂದ ವಿಶ್ವವಿದ್ಯಾಲಯ ಅಧಿಕಾರಿಗಳ ವಿರುದ್ಧ ಎಲ್ಲಾ ಉಪನ್ಯಾಸಕ ವರ್ಗ ಕೆಂಡ ಕಾರುತ್ತಿದ್ದಾರೆ.
ಅಷ್ಟೇ ಅಲ್ಲದೆ ರವಿವಾರ ಹಾಗೂ ಸರಕಾರಿ ರಜಾ ದಿನಗಳನ್ನು ಹೊರತುಪಡಿಸಿ ಪರೀಕ್ಷೆ ನಡೆಸಲು ಒಪ್ಪಿಕೊಂಡಿತ್ತು.ಆದರೆ ಈಗ ಅದನ್ನು ಕಡೆಗಣಿಸಿ ಪರೀಕ್ಷೆ ನಡೆಸುತ್ತಿದೆ. ಆರ್ ಸಿ ಯ ಹೊರತುಪಡಿಸಿ ಬೇರೆ ವಿಶ್ವವಿದ್ಯಾಲಯಗಳು ಎಕ ರೂಪ ಭತ್ಯೆಯನ್ನು ಜಾರಿಗೊಳಿಸಿದ್ದು, ಆದರೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮಾತ್ರ ಇನ್ನೂವರೆಗು ಮೂಗಿಗೆ ತುಪ್ಪ ಸವರುತ್ತಿದೆ.
ನಮ್ಮ ಬೇಡಿಕೆಗಳಿಗೆ ಸ್ಪಂದಿಸಲು ಆಗದಿದ್ದರೆ, ಇದೆ ರೀತಿ ಮುಂದುವರೆದರೆ, ನಾವು ಮುಂಬರುವ ಮೌಲ್ಯಮಾಪನವನ್ನು ಬಹಿಷ್ಕಾರ ಮಾಡಿ ಉಗ್ರವಾದ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರೊ ಎಸ್ ಬಿ ಬಿರಾದಾರ, ಸಿ ಎಸ್ ಬಿರಾದಾರ, ಸಿದ್ದೇಶ್ವರ ಕಮತೆ, ಎಸ್ ಆರ್ ಗೊಳಗೊಂಡ ಹಾಗೂ ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿಯ ಎಲ್ಲ ವಿಷಯಗಳ ಉಪನ್ಯಾಸಕರುಗಳು ಇದ್ದರು.
ಉಪನ್ಯಾಸಕರು ನೀಡಿರುವ ಮನವಿಯನ್ನ ಸ್ವೀಕರಿಸಿದ್ದೇವೆ, ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲು ಈ ಅಂಶವನ್ನು ಇಡಲಾಗಿತ್ತು ಆದರೆ ಚರ್ಚಿಸುವ ವಿಷಯಗಳು ಹೆಚ್ಚಾಗಿ ಇರುವುದರಿಂದ ಈ ಬಾರಿ ಸದರಿ ವಿಷಯವನ್ನು ಚರ್ಚಿಸಲು ಆಗಲಿಲ್ಲ, ಸರ್ಕಾರ ಬಿಡುಗಡೆ ಮಾಡಿದ ಕೈಪಿಡಿಯಲ್ಲಿ ಆಂತರಿಕ ಮೂಲಗಳಿಂದ ಭರಿಸಬೇಕು ಎಂಬ ಅಂಶ ಇದೆ ಅಂದರೆ ವಿದ್ಯಾರ್ಥಿಗಳಿಂದ ಫೀ ಸಂಗ್ರಹಿಸಿ ಭರಿಸಬೇಕಾಗುತ್ತದೆ ಇದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತದೆ ಎರಡನ್ನೂ ಸರಿದೂಗಿಸಿ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ, ನಿರ್ಧಾರವನ್ನು ಕೈಗೊಂಡು ಬೇಡಿಕೆಗಳನ್ನ ಈಡೇರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಆದರೆ ಉಪನ್ಯಾಸಕರು ಹೋರಾಟ ಅಥವಾ ಬಹಿಷ್ಕಾರ ಮಾಡುವುದು ಸರಿ ಅಲ್ಲ ಸಭೆ ಆಗುವವರೆಗೂ ಎಲ್ಲರೂ ಸಹಕರಿಸಬೇಕು ಇದು ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಆಗಿದೆ.
– ರವಿಂದ್ರನಾಥ ಕದಮ ಮೌಲ್ಯಮಾಪನ ಕುಲಸಚಿವರು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಬೆಳಗಾವಿ
ವರದಿ : ಸಂತೋಷ ಮುಗಳ.