ಜಿಲ್ಲಾ ಸುದ್ದಿ

ಗಜೇಂದ್ರಗಡದಲ್ಲಿ ನೂತನ ನ್ಯಾಯಾಲಯ ಕಟ್ಟಡಕ್ಕೆ ನ್ಯಾಯಮೂರ್ತಿ ವಿ.ಶ್ರೀಶಾನಂದ ಶಂಕುಸ್ಥಾಪನೆ.

Share News

ಗಜೇಂದ್ರಗಡದಲ್ಲಿ ನೂತನ ನ್ಯಾಯಾಲಯ ಕಟ್ಟಡಕ್ಕೆ
ನ್ಯಾಯಮೂರ್ತಿ ವಿ.ಶ್ರೀಶಾನಂದ ಶಂಕುಸ್ಥಾಪನೆ.

ಗದಗ : ಸತ್ಯಮಿಥ್ಯ (ನ-16).

ಶ್ರೇಷ್ಠ ಹಾಗೂ ನೈಜ ನ್ಯಾಯವು ನೊಂದವರ ಕಣ್ಣೀರು ಒರೆಸುವ ಕಾರ್ಯ ಮಾಡುವಂತಾಗಲಿ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಗದಗ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ವಿ.ಶ್ರೀಶಾನಂದ ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘ ರೋಣ ಇವರ ಸಂಯುಕ್ತಾಶ್ರಯದಲ್ಲಿ ಗಜೇಂದ್ರಗಡದ ಶ್ರೀ ಜಗದ್ಗುರು ತೋಂಟದಾರ್ಯ ಶಾಲೆಯ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಕಟ್ಟಡದ ಶಂಕುಸ್ಥಾಪನಾ ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.

 ಪ್ರತಿಯೊಬ್ಬರಲ್ಲಿರುವ ಆತ್ಮಸಾಕ್ಷಿಯು ನ್ಯಾಯಾಧೀಶರಾಗಿ ನಿರಂತರವಾಗಿ ಕಾರ್ಯನಿರ್ವಹಿಸಬೇಕು. ಆತ್ಮ ಸಾಕ್ಷಿಗೆ ಸರಿ ಎನಿಸಿದ್ದನ್ನು ಮಾತ್ರವೇ ಮಾಡಬೇಕು. ಆಸೆಯು ದುರಾಸೆಯಾದಾಗ ಮನುಷ್ಯರು ಕೆಟ್ಟ ದಾರಿ ಹಿಡಿಯುವಂತೆ ಆಗುತ್ತದೆ ಎಂದರು.
ಸ್ವಾತಂತ್ರ್ಯ ಬಂದ ನಂತರ ದೇಶಕ್ಕೆ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ನಮ್ಮೆಲ್ಲರಿಗೂ ಸಂವಿಧಾನವೇ ಶ್ರೇಷ್ಠ ಗ್ರಂಥ. ಸಂವಿಧಾನಕ್ಕೆ ತನ್ನದೇ ಆದ ಘನತೆ, ಗೌರವ ಇದ್ದು ಸರ್ವರೂ ಸಂವಿಧಾನ ಹಾಗೂ ದೇಶದ ಕಾನೂನುಗಳನ್ನು ಗೌರವಿಸಬೇಕು ಎಂದರು.
ಜನಸಾಮಾನ್ಯರಿಗೆ ಅದರಲ್ಲಿಯೂ ಆರ್ಥಿಕವಾಗಿ ಹಿಂದುಳಿದವರಿಗೆ ನ್ಯಾಯಾಲಯಕ್ಕೆ ಹೋಗಲು ಕಷ್ಟಸಾಧ್ಯವಾದಾಗ ನ್ಯಾಯಾಲಯವೇ ಜನರ ಹತ್ತಿರ ಬರುವಂತೆ ಮಾಡಿ ಹತ್ತಿರದಲ್ಲಿಯೇ ನ್ಯಾಯಾಲಯ ನಿರ್ಮಿಸಿ ನ್ಯಾಯ ಒದಗಿಸುವ ವ್ಯವಸ್ಥೆ ಜಾರಿಗೊಳಿಸಲಾಯಿತು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯಿಂದ ಪ್ರತಿಯೊಬ್ಬರೂ ಜೀವನವನ್ನು ಗೌರವಯುತವಾಗಿ ನಡೆಸಬೇಕು. ಇದಕ್ಕೆ ದೇಶದ ಸಂವಿಧಾನ ಹಾಗೂ ಕಾನೂನುಗಳು ಪ್ರತಿಯೊಬ್ಬರೂ ಗೌರವಿಸುವುದರ ಮೂಲಕ ಪಾಲಿಸಬೇಕು ಎಂದು ಹೇಳಿದರು.
ನಾವು ಜೀವಿಸುವ ಪ್ರದೇಶದಲ್ಲಿ ಆಸ್ಪತ್ರೆ ಹಾಗೂ ನ್ಯಾಯಾಲಯ ಕಟ್ಟಡಗಳು ಇರಬೇಕು. ಅವುಗಳು ಅನಿವಾರ್ಯ ಸಂದರ್ಭದಲ್ಲಿ ಮಾತ್ರವೇ ಬಳಕೆಯಾಗಬೇಕು. ಅಂದರೆ ಆರೋಗ್ಯ ಹದಗೆಟ್ಟಾಗ ಮಾತ್ರ ಆಸ್ಪತ್ರೆಗಳಿಗೆ ತೆರಳುತ್ತೇವೆ ಅದರಂತೆ ಅನ್ಯಾಯವಾದಾಗ ಮಾತ್ರವೇ ನ್ಯಾಯದ ಮೊರೆ ಹೋಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು , ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ವ್ಯಾಜ್ಯಮುಕ್ತ ಗ್ರಾಮ ಪ್ರತಿಯೊಬ್ಬರ ಆಶಯವಾಗಬೇಕು. ಗದಗ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ತರಹದ ಪೊಲೀಸ್ ಪ್ರಕರಣ ದಾಖಲಾತಿಗಳಾಗದ 58 ಗ್ರಾಮಗಳಿದ್ದು ವ್ಯಾಜ್ಯಮುಕ್ತ ಗ್ರಾಮದ ಪರಿಕಲ್ಪನೆಗೆ ಮಾದರಿಗಳಾಗಿವೆ. 100 ಗ್ರಾಮಗಳನ್ನಾದರೂ ವ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿ ಘೋಷಿಸುವ ಯೋಜನೆ ಸಾಕಾರವಾಗಲು ಸಾರ್ವಜನಿಕರು ಸಹಕಾರ ನೀಡಬೇಕೆಂದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ನ್ಯಾಯಾಧೀಶರು ವ್ಯಾಜ್ಯಮುಕ್ತ ಗ್ರಾಮಗಳನ್ನಾಗಿಸುವಲ್ಲಿ ನಿರಂತರ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆಯ 100 ಗ್ರಾಮಗಳನ್ನು ವ್ಯಾಜ್ಯ ಮುಕ್ತವನ್ನಾಗಿಸುವ ಗುರುತರ ಜವಾಬ್ದಾರಿ ತಮ್ಮ ಮೇಲಿದೆ ಎಂದರು.
ಬಡವರ ಪ್ರಕರಣಗಳಿಗೆ ಆರು ತಿಂಗಳೊಳಗಾಗಿ ನ್ಯಾಯಾಲಯಗಳಲ್ಲಿ ಬಗೆಹರಿದರೆ ಅದೊಂದು ದೊಡ್ಡ ಸಾಧನೆಯಾಗಲಿದೆ. ಸರ್ಕಾರ ಜನಪರ ಕಾರ್ಯಕ್ಕೆ ಹಾಗೂ ಜನಪರ ಕಾನೂನು ಜಾರಿಗೊಳಿಸಲು ಸದಾಸಿದ್ಧ ಎಂದು ಸಚಿವ ಎಚ್.ಕೆ.ಪಾಟೀಲ ಅವರು ಹೇಳಿದರು.
ವೇದಿಕೆಯಲ್ಲಿ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಜಿ.ಎಸ್.ಪಾಟೀಲ, ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್.ಮಿಟ್ಟಲಕೋಡ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲಾ ್ಲಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ, ರೋಣ ವಕೀಲರ ಸಂಘದ ಅಧ್ಯಕ್ಷರಾದ ವಿ.ಎಸ್. ಬಂಗಾರಿ, ರೋಣ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಐ.ಎ. ಫಾರೂಕಿ, ಗದಗ ವಿಭಾಗದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ವಿ.ಎನ್.ಪಾಟೀಲ ಉಪಸ್ಥಿತರಿದ್ದರು.
ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಸವರಾಜ ಅವರು ಅತಿಥಿಗಳನ್ನು ಸ್ವಾಗತಿಸಿದರು. ಎಂ.ವೈ. ಗೋಣೇಕರ್ ಪ್ರಾರ್ಥಿಸಿದರು. ರಾಘವೇಂದ್ರ ಅಂಬೋಡೇಕರ್ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ವಕೀಲರಾದ ಬಿ.ಎ. ಸಜ್ಜನರ ಪ್ರಾಸ್ತಾವಿಕ ಮಾತನಾಡಿದರು.
ಸಮಾರಂಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು, ಸಾರ್ವಜನಿಕರು ಹಾಜರಿದ್ದರು.
ವರದಿ : ಚನ್ನು. ಎಸ್.

Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!