ಮಹಾರಾಷ್ಟ್ರದ ನಾಗಪೂರ ದೀಕ್ಷಾಭೂಮಿ ರಾಜ್ಯದಿಂದ ಉಚಿತ ಪ್ರವಾಸಕ್ಕೆ ಅವಕಾಶ.
ಗದಗ : ಸತ್ಯಮಿಥ್ಯ (ಅಗಸ್ಟ 20).
ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರು ಬೌದ್ಧ ಧರ್ಮದ ದೀಕ್ಷೆ ಪಡೆದ ಮಹಾರಾಷ್ಟ್ರದ ನಾಗಪೂರ ದೀಕ್ಷಾಭೂಮಿಗೆ ಈ ಬಾರಿಯೂ ಅರ್ಜಿಯನ್ನು ಆಹ್ವಾನಿಸಲಾಗಿದೆ. ರಾಜ್ಯದಿಂದ ಬಾಬಾಸಾಹೇಬರ ಅನುಯಾಯಿಗಳನ್ನು ಕಳುಹಿಸಲು ರಾಜ್ಯ ಸರ್ಕಾರ ಆರಂಭಸಿರುವ ದೀಕ್ಷಾ ಭೂಮಿ ಯಾತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಹಿಂದಿನ ವರ್ಷ ಗದಗ ಜಿಲ್ಲೆಯಿಂದ 160 ಜನ ಯಾತ್ರೆ ಮಾಡಿದ್ದರು. ಮುಜರಾಯಿ ಇಲಾಖೆಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆಯನ್ನು ಕಳುಹಿಸುವ ಮಾದರಿಯಲ್ಲಿ ಪ್ರತಿ ವಿಜಯಧಶಮಿಯಂದು ನಾಗಪೂರದ ದೀಕ್ಷಾ ಭೂಮಿಯಲ್ಲಿ ನಡೆಯುವ ಧಮ್ಮ ಪರಿವರ್ತನ ದಿನ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಅಂಬೇಡ್ಕರ್ ಅನುಯಾಯಿಗಳನ್ನು ಕಳುಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಯೋಜನೆ ಆರಂಭಿಸಿತ್ತು. ಈ ಯಾತ್ರೆಗೆ ಸಮಾಜ ಕಲ್ಯಾಣ ಇಲಾಖೆ ಅನುದಾನ ಒದಗಿಸಿ ಪ್ರತಿ ವರ್ಷ ಸಾವಿರಾರು ಅಂಬೇಡ್ಕರ್ ಅನುಯಾಯಿಗಳನ್ನು ದೀಕ್ಷಾಭೂಮಿಗೆ ಕಳುಹಿಸಿ ಬಾಬಾಸಾಹೇಬರ ವಿಚಾರ ಧಾರೆಗಳ ಬಗ್ಗೆ ಅರಿವು ಮೂಡಿಸುತ್ತಿದೆ.
ಕಳೆದ ವರ್ಷ ಗದಗ ಜಿಲ್ಲೆಯಿಂದ 160 ಅನುಯಾಯಿಗಳು ನಾಗಪೂರಕ್ಕೆ ತೆರಳಿದ್ದರು. ಅದೇ ರೀತಿ ಈ ಬಾರಿಯು ಅಕ್ಟೋಬರ್ 12 ರಂದು ನಿಗದಿಯಾಗಿರುವ ಧಮ್ಮ ಪರಿವರ್ತನ ದಿನಕ್ಕೆ ರಾಜ್ಯದಿಂದ ಕಳುಹಿಸಲು ಡಾ. ಬಿ,ಆರ್ ಅಂಬೇಡ್ಕರ ಅನುಯಾಯಿಗಳನ್ನು ಆಯ್ಕೆ ಮಾಡಲು ಅಗಸ್ಟ್ 31 ರವರೆಗೆ ಆನ್ಲೈನ್ನಲ್ಲಿ https://swdservices.karnataka.gov.in ಅರ್ಜಿ ಸಲ್ಲಿಸಿ ಆನ್ಲೈನ್ ಅರ್ಜಿಯೊಂದಿಗೆ ಅರ್ಜಿದಾರರ ಆಧಾರ ಕಾರ್ಡ, ಪ್ರಸ್ತುತ ವಿಳಾಸ ಮತ್ತು ದೂರವಾಣಿ, ಪೋಟೋದೊಂದಿಗೆ ಸಂಬಂಧಿಸಿದ ಆಯಾ ತಾಲೂಕಾ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಲು ಕೋರಲಾಗಿದೆ. ಇಲಾಖೆಯು ಸದರಿ ಯಾತ್ರಿಗಳಿಗೆ ಬಸ್ ವ್ಯವಸ್ಥೆಯನ್ನು ಮಾತ್ರ ಮಾಡುವುದು. ಊಟ ಮತ್ತು ವಸತಿ ವ್ಯವಸ್ಥೆಯನ್ನು ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳಬೇಕು. ಈ ಯಾತ್ರೆಯು ಕೇವಲ ಎಸ್ಸಿ/ಎಸ್ಟಿ ಸಮುದಾಯದವರಿಗೆ ಮಾತ್ರ ಸೀಮಿತವಾಗಿಲ್ಲ, ಎಲ್ಲ ಜಾತಿ ಧರ್ಮದವರು ಈ ಯಾತ್ರೆಯಲ್ಲಿ ಭಾಗವಹಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಮುತ್ತು.