
ಜಕ್ಕಲಿ ಪಂಚಾಯತ್ ಅಧ್ಯಕ್ಷರ ಅವಿಶ್ವಾಸ ಸಭೆಗೆ ಹೈಕೋರ್ಟ್ ತಡೆ.
ನರೇಗಲ್- ಸತ್ಯಮಿಥ್ಯ (ಜು-02)
ಜಕ್ಕಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯ ಸಭೆಗೆ ಕರ್ನಾಟಕ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ, ಇದರಿಂದ ಅವಿಶ್ವಾಸ ನಿರ್ಣಯ ಮಂಡಿಸಿದವರಿಗೆ ಭಾರಿ ಮುಖಭಂಗ ಉಂಟು ಮಾಡಿದೆ.
ಈ ಆದೇಶದಿಂದ ಜುಲೈ 2ರ ಮಧ್ಯಾಹ್ನ 12 ಗಂಟೆಗೆ ನಿಗದಿಪಡಿಸಲಾಗಿದ್ದ ನಿರ್ಣಯದ ಮೇಲಿನ ಚರ್ಚೆಯನ್ನು ಮಾನ್ಯ ನ್ಯಾಯಾಲಯದ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಗದಗ ಉಪವಿಭಾಗದ ಉಪವಿಭಾಗಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಅಧ್ಯಕ್ಷೆ ಗಂಗವ್ವ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠವು, ಜುಲೈ 1, 2025 ರಂದು ಮಧ್ಯಂತರ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರಿದ್ದ ಏಕಸದಸ್ಯ ಪೀಠವು, ಪ್ರಕರಣದ ಮುಂದಿನ ವಿಚಾರಣೆ ನಡೆಯುವವರೆಗೆ ಜೂನ್ 6, 2025 ರಂದು ಉಪವಿಭಾಗಾಧಿಕಾರಿಗಳು ಹೊರಡಿಸಿದ್ದ ನೋಟಿಸ್‌ನ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ವಿಧಿಸಿ ಆದೇಶ ನೀಡಿದೆ.
ಈ ತಡೆಯಾಜ್ಞೆಯಿಂದಾಗಿ, ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸುತ್ತಿದ್ದ ಪಂಚಾಯತ್ ಸದಸ್ಯರ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು, ಇದು ಅವಿಶ್ವಾಸ ಮಂಡನೆ ಮಾಡಿದವರಿಗೆ ತೀವ್ರ ಮುಖಭಂಗ ಉಂಟುಮಾಡಿದಂತಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಗಂಗವ್ವ ನ್ಯಾಯಕ್ಕೆ ಸಂದ ಜಯ ಎಂದರು.ಪರಸ್ಪರ ಸಿಹಿಹಂಚಿ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು. ರೋಣ ಮಂಡಲ ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷ ಮುತ್ತಣ್ಣ ಕಡಗದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಜಕ್ಕಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹೊರಡಿಸಿರುವ ಆದೇಶದಲ್ಲಿ, ಹೈಕೋರ್ಟ್‌ನ ತಾತ್ಕಾಲಿಕ ತಡೆಯಾಜ್ಞೆ ಆದೇಶದ ಪ್ರತಿಯನ್ನು ಕೂಡಲೇ ಪಂಚಾಯತ್‌ನ ಸೂಚನಾ ಫಲಕಕ್ಕೆ ಲಗತ್ತಿಸಿ, ಇಂದು ಸಂಜೆಯೊಳಗೆ ವರದಿಯನ್ನು ಕಚೇರಿಗೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.
ಒಟ್ಟಾರೆ, ಜಕ್ಕಲಿ ಪಂಚಾಯತ್‌ನ ಆಡಳಿತದಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದ್ದು, ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ಅವಿಶ್ವಾಸ ನಿರ್ಣಯದ ಭವಿಷ್ಯ ಅನಿಶ್ಚಿತವಾಗಿದೆ. ಹೈಕೋರ್ಟ್‌ನ ಮುಂದಿನ ಆದೇಶದವರೆಗೂ ಅಧ್ಯಕ್ಷೆ ಗಂಗವ್ವ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
ವರದಿ : ಚನ್ನು. ಎಸ್.