
ಕೇಂದ್ರ ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಎಡಪಂತಿಯ ಸಂಘಟನೆಗಳ ಮುಷ್ಕರ.
ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳುತ್ತಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಲು ಒತ್ತಾಯಿಸಿ ಗಜೇಂದ್ರಗಡದಲ್ಲಿ ಸಾರ್ವತ್ರಿಕ ಮುಷ್ಕರ
ಗಜೇಂದ್ರಗಡ:ಸತ್ಯಮಿಥ್ಯ (ಜು – 09)
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ- ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುವುದರ ವಿರುದ್ಧ ಇಂದು ದೇಶವ್ಯಾಪ್ತಿ ಸಾರ್ವತ್ರಿಕ ಮುಷ್ಕರ ಹಮ್ಮಿಕೊಂಡಿದವು ಅದನ್ನು ಬೆಂಬಲಿಸಿ ಗಜೇಂದ್ರಗಡದಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ಕೆ ಕೆ ಸರ್ಕಲ್ ನಲ್ಲಿ ಮಾನವ ಸರಪಳಿ ರಚಿಸಿ ಮಾನ್ಯ ತಹಶಿಲ್ದಾರರ ಮೂಲಕ ಮಾನ್ಯ ರಾಷ್ಟ್ರಪತಿಗಳಿಗೆ ಮತ್ತು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ ಜುಲೈ 9 ದೇಶದ ಕಾರ್ಮಿಕ ವರ್ಗ ಜೆಸಿಟಿಯು ನೇತೃತ್ವದಲ್ಲಿ ಸಾರ್ವತ್ರಿಕ ಮಷ್ಕರ ನಡೆಸುತ್ತಿದೆ. ದೇಶದ ಪ್ರಧಾನ ಕೇಂದ್ರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಈ ಕರೆ ನೀಡಿವೆ. ಇದಕ್ಕೆ ರೈತ, ಕೂಲಿಕಾರರ ಸಂಘಟನೆಗಳು ಬೆಂಬಲ ನೀಡಿವೆ. ದೇಶವನ್ನು ಆಳುತ್ತಿರುವವರು ಕಾರ್ಮಿಕರನ್ನು ಹಕ್ಕುಗಳಿಲ್ಲದ ಕಾಲಕ್ಕೆ ಪುನಃ ತಳ್ಳುತ್ತಿರುವ ಈ ಸಂದರ್ಭದಲ್ಲಿ, ಆಧುನಿಕ ಜೀತದ ಸ್ಥಿತಿ ನಿರ್ಮಿಸುತ್ತಿರುವ, ಅದಾನಿ, ಅಂಬಾನಿ ಯಂತಹ ಕಾರ್ಪೊರೇಟ್ ಧಣಿಗಳ ಹಿತಾಸಕ್ತಿಗಳನ್ನಷ್ಟೆ ಪರಿಗಣಿಸುತ್ತಿರುವುದನ್ನು ವಿರೋಧಿಸಿ ಈ ಮಹಾ ಮುಷ್ಕರ ನಡೆಯುತ್ತಿದೆ. ದೇಶದ ಹಲವು ರೈತ ಸಂಘಟನೆಗಳು, ವಿದ್ಯಾರ್ಥಿ ಯುವಜನ ಮಹಿಳಾ ಸಂಘಟನೆಗಳೂ ಈ ಮುಷ್ಕರವನ್ನು ಬೆಂಬಲಿಸಿ ಬೀದಿಗೆ ಇಳಿದಿವೆ. ಹಲವು ವಿರೋಧ ಪಕ್ಷಗಳೂ ಬೆಂಬಲ ಸೂಚಿಸಿವೆ. ಬಿಹಾರದಲ್ಲಿ ಇಂಡಿಯಾ ಕೂಟ ಇದೇ ಸಂದರ್ಭದಲ್ಲಿ ಬಂದ್ ಗೆ ಕರೆ ನೀಡಿದೆ. ಸಿಪಿಐಎಂ ಸಹಿತ ಎಡಪಕ್ಷಗಳು ಈ ಮಹತ್ವದ ಸಾರ್ವತ್ರಿಕ ಮುಷ್ಕರವನ್ನು ಪೂರ್ತಿಯಾಗಿ ಬೆಂಬಲಿಸುತ್ತಿವೆ. ಇದು ಕಾರ್ಮಿಕ ವರ್ಗದ ಮಾತ್ರ ಅಲ್ಲ, ಕಾರ್ಪೊರೇಟ್ ಬಂಡವಾಳಗಾರರ ಹೊರತಾದ ಇಡೀ ಜನ ಸಮೂಹದ ಹಿತಾಸಕ್ತಿ, ಭವಿಷ್ಯದ ಪ್ರಶ್ನೆಗಳನ್ನು ಅವಲಂಬಿಸಿದೆ. ನಿಮ್ಮೆಲ್ಲರ ಬೆಂಬಲವೂ ಕಾರ್ಮಿಕ ವರ್ಗದ ಈ ಮಹಾ ಮುಷ್ಕರಕ್ಕೆ ಇರಲಿ ಎಂದು ಜನತೆಯಲ್ಲಿ ಮನವಿ ಮಾಡಿ ಪಕ್ಷದ ಬೆಂಬಲವನ್ನು ಘೋಷಿಸಿದರು.
ಸಿಐಟಿಯು ನ ಜಿಲ್ಲಾ ಮುಖಂಡರಾದ ಪೀರು ರಾಠೋಡ ಮಾತನಾಡಿ ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳುತ್ತಿರುವ ನಾಲ್ಕು ಕಾರ್ಮಿಕ ಸಹಿತಗಳನ್ನು ರದ್ದುಪಡಿಸಬೇಕು, ಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿ ಮಾಡಬೇಕು, ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಸಾರ್ವತ್ರಿಕ ಮುಷ್ಕರ ನಡೆಯುತ್ತಿದ್ದು, ಕಾರ್ಮಿಕರು ವಿವಿಧ ಸಮಸ್ಯೆಗಳನ್ನು ನಿರಂತರ ಅನುಭವಿಸುತ್ತಿದ್ದಾರೆ. ಅದರ ಕುರಿತು ಆಳುವ ಸರ್ಕಾರಗಳು ಗಮನಹರಿಸದೆ ಬಹು ರಾಷ್ಟ್ರೀಯ ಕಂಪನಿಗಳಿಗೆ ತಲೆಬಾಗಿ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಿರುವುದು ಖೇದಕರ ಹಾಗೆ ಕನಿಷ್ಠ ಕೂಲಿ ಜಾರಿ ಮಾಡದೆ ಗ್ರಾಮ ಪಂಚಾಯತಿ ನೌಕರರನ್ನು ಅವಮಾನಿಸುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಅವರ ವೇತನ ಬಿಡುಗಡೆಯಾಗಿಲ್ಲ, ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಕೊಡದೆ, ಕಲ್ಯಾಣ ಮಂಡಳಿಯನ್ನು ಸರಿಯಾಗಿ ನಿರ್ವಹಣೆ ಮಾಡದೆ ಭ್ರಷ್ಟಾಚಾರದ ಗೂಡಾಗಿ ನಿರ್ಮಿಸಲಾಗುತ್ತಿದೆ. ಸ್ಕೀಮ್ ನೌಕರರಾದ ಆಶಾ, ಅಂಗನವಾಡಿ, ಬಿಸಿ ಊಟ ತಾಯಂದಿರನ್ನು ಕಾರ್ಮಿಕರು ಎಂದು ಪರಿಗಣಿಸಬೇಕೆಂದರು.
ಕೆ ಪಿ ಆರ್ ಎಸ್ ಮುಖಂಡರಾದ ಎಂ ಎಸ್ ಹಡಪದ ಅವರು ಮಾತನಾಡಿ ರೈತರ ಹಕ್ಕುಗಳ ರಕ್ಷಣೆ ಮಾಡದೇ ರೈತ ವಿರೋಧಿ ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡಿ ರಾಜ್ಯದಲ್ಲಿ ಜಾರಿ ಮಾಡಿರುವುದನ್ನು ಸಿದ್ದರಾಮಯ್ಯ ಸರ್ಕಾರ ಹಿಂಪಡೆಯಬೇಕು. ನಾವು ರೈತರ ಪರ ಎಂದು ಹೇಳಿಕೊಳ್ಳುತ್ತಾ ಇಲ್ಲಿವರೆಗೂ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯದೆ ಇರುವುದು ಖೇದಕರ ಹಾಗೇ ಸ್ಥಳೀಯ ಎಂಎಲ್ಎ ಜನಪ್ರತಿನಿಧಿಗಳು ಜನರಿಂದ ದೂರವಾಗಿದ್ದಾರೆ. ಕನಿಷ್ಠ ಜನರ ಹವಾಲುಗಳನ್ನು ಕೇಳುವ ಅವಧಾನ ಅವರಿಗೆ ಇಲ್ಲ ಇಂಥ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಸಂಘಟನೆಗಳನ್ನು ಕಟ್ಟಿ ಹೋರಾಟ ಮಾಡಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗಿ ಜನತೆಯೂ ಕೂಡ ಮುಂಬರುವ ಚುನಾವಣೆಗಳಲ್ಲಿ ಪರ್ಯಾಯ ರಾಜಕೀಯವನ್ನು ಗುರುತಿಸಬೇಕು ಹೋರಾಟಗಾರರನ್ನು ಚುನಾವಣೆಗಳಲ್ಲಿ ಗೆಲ್ಲಿಸುವ ಕೆಲಸ ಮಾಡಬೇಕು. ಬಗರ್ ಹುಕಂ ಸಾಗುವಳಿದಾರರ ಪಟ್ಟಾ ಬುಕ್ ವಿತರಣೆ ಮಾಡಬೇಕು, ಕೆರೆಗಳನ್ನು ತುಂಬಿಸುವ ಯೋಜನೆಗಳು ಹಾಗೆ ಬಿದ್ದಿವೆ ಅವುಗಳನ್ನು ಜಾರಿ ಮಾಡಲು ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.
ನಂತರದಲ್ಲಿ ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷರಾದ ಗಣೇಶ್ ರಾಠೋಡ ಮಾತನಾಡಿ ಜನತೆಯ ಅಶೋತ್ತರಗಳನ್ನು ಈಡೇರಿಸುತ್ತೇವೆಂದು ಅಧಿಕಾರಕ್ಕೆ ಬಂದಿರುವ ಸರ್ಕಾರಗಳು ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ ಜನದ್ರೋಹಿಯಾದ ಕೆಲಸಕ್ಕೆ ಕೈ ಹಾಕಿವೆ. ಜೊತೆಗೆ ಬಂಡವಾಳೀಗರ ಹಿತಾಶಕ್ತಿ ಕಾಯುವ ಕೆಲಸವನ್ನು ಈ ಸರ್ಕಾರಗಳು ಮಾಡುತ್ತಿವೆ ಹಾಗಾಗಿ ಇಂದು ಬೆಲೆ ಏರಿಕೆ, ಭ್ರಷ್ಟಾಚಾರ, ಬಡತನ, ಹಾಗೂ ಆರ್ಥಿಕ ಹಿಂಜರಿತ ತೀವ್ರಗೊಳ್ಳುತ್ತಿದೆ, ಇವುಗಳನ್ನು ಮುಚ್ಚು ಹಾಕಲು ಕೋಮು ಗಲಭೆಗಳನ್ನು ಸೃಷ್ಟಿಸಲಾಗುತ್ತಿದೆ. ಇದನ್ನು ಜನತೆ ಅರ್ಥ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲಿ ಸರಿಯಾದ ಪಾಠವನ್ನು ಕಲಿಸುತ್ತೇವೆ ಎಂದು ಜನಪ್ರತಿನಿಧಿಗಳಿಗೆ ಎಚ್ಚರಿಸುವುದು ಅಗತ್ಯವಾಗಿದೆ ಸ್ವಾತಂತ್ರ್ಯ ಭಾರತವನ್ನು ರಕ್ಷಿಸಿಕೊಳ್ಳುವ, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಈ ದೇಶದ ದುಡಿಯೋ ಜನರ ಮೇಲಿದೆ ಹಾಗಾಗಿಯೇ ಇಂತಹ ಸಾರ್ವತ್ರಿಕ ಮುಷ್ಕರಗಳ ಮೂಲಕ ಸರ್ಕಾರಗಳಿಗೆ ಎಚ್ಚರಿಸಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಕೆಲಸವನ್ನು ಮಾಡಬೇಕಿದೆ ಎಲ್ಲ ಕಾರಣಕ್ಕಾಗಿ ಈ ಸಾರ್ವತ್ರಿಕ ಮುಷ್ಕರವೋ ಮಹತ್ವದ್ದು ಆಗಿದ್ದು ತಾವುಗಳು ಭಾಗವಹಿಸಿದ್ದಕ್ಕೆ ಎಲ್ಲಾ ಕಾರ್ಮಿಕರಿಗೂ, ರೈತರಿಗೂ, ಜನತೆಗೂ, ವಿದ್ಯಾರ್ಥಿ ಯುವಜನತೆಗೂ ಅಭಿನಂದಿಸುತ್ತೇನೆ ಎಂದರು.
ಬಿದಿ ಬದಿ ವ್ಯಾಪಾರಸ್ಥರ ಸಂಘಟನೆ ತಾಲ್ಲೂಕು ಅಧ್ಯಕ್ಷರಾದ ಶ್ಯಾಮೀದ್ ಅಲಿ ಡಿಂಡವಾಡ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ, ಕಟ್ಟಡ ಕಾರ್ಮಿಕರ ಸಂಘಟನೆಯ ತಾಲೂಕು ಅಧ್ಯಕ್ಷರಾದ ಅಂದಪ್ಪ ಕುರಿ, ಎಸ್ ಎಫ್ ಐ ತಾಲೂಕು ಅಧ್ಯಕ್ಷರಾದ ಅನಿಲ್, ಮುಖಂಡರಾದ ರವಿ, ಅಭಿ, ಗ್ರಾಮ ಪಂಚಾಯತಿ ತಾಲ್ಲೂಕು ಅಧ್ಯಕ್ಷರಾದ ಮರಿಲಿಂಗಪ್ಪ ಮುತಾರಿ, ಮುಖಂಡರಾದ ಮುದುಕಪ್ಪ ದೊಣ್ಣೆಗುಡ್ಡ, ನಬಿಸಾಬ್, ಕುಮಾರ್, ಸಕ್ರಿ. ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರಾದ ರೇವಣಪ್ಪ, ಆನಂದ್, ಈರಪ್ಪ, ಪೀರಪ್ಪ, ತುಕಾರಾಂ. ಬೀದಿ ಬದಿ ವ್ಯಾಪಾರಸ್ಥರ ಸಂಘಟನೆಯ ಮುಖಂಡರಾದ ಅಂಬರೀಶ್ ಚವ್ಹಾಣ, ಚೌಡಮ್ಮ. ರೈತ ಸಂಘದ ಮುಖಂಡರಾದ ಚನ್ನಪ್ಪ ಗುಗಲೋತ್ತರ್, ಹಾಗೂ ಇತರರು ನೂರಾರು ಕಾರ್ಮಿಕರು ಹಾಜರಿದ್ದರು.
ವರದಿ : ಸುರೇಶ ಬಂಡಾರಿ.