ಸ್ನಾತಕೋತ್ತರ ಕೇಂದ್ರದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿದ ಸಚಿವ ಎಚ್.ಕೆ.ಪಾಟೀಲ್.
ವಿಶ್ವ ವಿದ್ಯಾಲಯಗಳ ಸುಧಾರಣೆಗಾಗಿ ಉನ್ನತ ಮಟ್ಟದ ಸಮಿತಿ ರಚನೆ ಅಗತ್ಯ
ಗದಗ-ಸತ್ಯಮಿಥ್ಯ (ಸೆ.19).
ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಸುಧಾರಣೆಗಾಗಿ ರಾಜ್ಯ ಸರ್ಕಾರವು ಉನ್ನತ ಮಟ್ಟದ ಸಮಿತಿ ರಚನೆ ಮಾಡುವುದು ಅಗತ್ಯವಾಗಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಅಭಿಪ್ರಾಯಪಟ್ಟರು.
ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗದಗ ಸ್ನಾತಕೋತ್ತರ ಕೇಂದ್ರದಿಂದ ಕಳಸಾಪುರದಲ್ಲಿ ನಿರ್ಮಿಸಲಾದ ಸ್ನಾತಕೋತ್ತರ ಕೇಂದ್ರದ ನೂತನ ಕಟ್ಟಡವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ವಿಶ್ವ ವಿದ್ಯಾಲಯಗಳ ವ್ಯವಸ್ಥೆ ಶಿಕ್ಷಣದ ಗುಣಮಟ್ಟ ಸುಧಾರಣೆಯಾಗಬೇಕು. ಅದಕ್ಕಾಗಿ ಸರ್ಕಾರ ಉನ್ನತ ಮಟ್ಟದ ಸಮಿತಿಯ ರಚನೆ ಮಾಡುವುದರ ಮೂಲಕ ಗುಣಮಟ್ಟ ಸುಧಾರಣೆಗೆ ಮುಂದಾಗಬೇಕಿದೆ ಎಂದರು.
ವಿಶ್ವ ವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರು ಸಭೆಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಒಯ್ಯಲು ಸಹಕಾರಿಯಾಗಿವೆ. ವಿಶ್ವ ವಿದ್ಯಾಲಯಗಳಲ್ಲಿ ಶೇ 70 ರಷ್ಟು ಬೋಧಕ ಹುದ್ದೆಗಳು ಖಾಲಿ ಇದ್ದು ಮುನ್ನಡೆಸುವುದು ಕಷ್ಟಸಾಧ್ಯವಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗುತ್ತಿದ್ದು ಶಿಕ್ಷಕರ ಸಂಖ್ಯೆ ಕ್ಷೀಣಿಸುತ್ತಿದೆ. ಜೊತೆಗೆ ವಿವಿಗಳಿಗೆ ನೀಡುವ ಅನುದಾನವು ಸಹ ಅಗಾಧ ಪ್ರಮಾಣದಲ್ಲಿ ಕುಂಠಿತವಾಗಿದೆ. ಕಳೆದ 5 ವರ್ಷದಲ್ಲಿ ವಿಶ್ವ ವಿದ್ಯಾಲಯಗಳ ಅಭಿವೃದ್ಧಿಗಾಗಿ ಅನುದಾನ ಬಂದಿಲ್ಲ. ಇದರಿಂದ ಮೂಲ ಸೌಕರ್ಯಗಳ ಅಭಿವೃದ್ಧಿ ಜೊತೆಗೆ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವುದು ಸವಾಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಉನ್ನತ ಶಿಕ್ಷಣ ನಿರ್ಲಕ್ಷö್ಯಕ್ಕೊಳಗಾಗಿದೆ. ಇದೇ ರೀತಿ ಮುಂದುವರೆದಲ್ಲಿ ವಿಶ್ವ ವಿದ್ಯಾಲಯಗಳು ಸ್ಥಿತ್ಯಂತರ ಆಗಲಿವೆ. ಶಿಕ್ಷಣದ ವ್ಯವಸ್ಥೆ ಬದಲಾವಣೆಯೊಂದಿಗೆ ಪರಿವರ್ತನೆಯಾಗಬೇಕು. ಸಮಾಜಕ್ಕೆ ಬೇಕಾದ ಮಕ್ಕಳನ್ನು ತಿದ್ದಿ ತಿಡಿ ಅಣಿಗೊಳಿಸದಿದ್ದರೆ ವಿಶ್ವ ವಿದ್ಯಾಲಯಗಲಿಗೆ ಗಂಡಾAತರವಿದೆ ಎಂದರು. ಮಕ್ಕಳಲ್ಲಿ ಕೌಶಲ್ಯ ತಾಂತ್ರಿಕತೆಯ ಗುಣಮಟ್ಟ ಹೆಚ್ಚಿಸಬೇಕು. ಈ ಮೂಲಕ ವಿಶ್ವ ವಿದ್ಯಾಲಯಗಳು ಎತ್ತರಕ್ಕೆ ಬೆಳೆಯಲಿ ಎಂದರು.
ಗದಗ ಸ್ನಾತಕೋತ್ತರ ಕಟ್ಟಡದ ಮೊದಲ ಹಂತದ ಕಾಮಗಾರಿಯನ್ನು 9 ಕೋಟಿ ರೂಗಳಲ್ಲಿ ಕೈಗೊಳ್ಳಲಾಗಿದೆ. ಸ್ನಾತಕೋತ್ತರ ಕಟ್ಟಡದ ಸಂಪೂರ್ಣ ಕಾಮಗಾರಿಗೆ 25 ರಿಂದ 30 ಕೋಟಿ ರೂ.ಗಳ ಅನುದಾನ ಅಗತ್ಯವಿದೆ. ಜೊತೆಗೆ ಬೋಧಕ ಸಿಬ್ಬಂದಿಗಳ ಅಗತ್ಯವಿದು ಈ ಬಗ್ಗೆ ತಮ್ಮಿಂದ ಸಂಪೂರ್ಣ ಸಹಕಾರ ಒದಗಿಸಲಾಗುವುದು ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರ ಮಾತನಾಡಿ ಗದಗ ಜಿಲ್ಲೆಯಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭವಾಗಿ 24 ವರ್ಷಗಳು ಕಳೆದಿವೆ. ಈಗ ಸ್ವಂತ ಕಟ್ಟಡ ಆಗಿರುವುದು ಸಂತಸ ತಂದಿದೆ. ಈ ಕಟ್ಟಡ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ , ಬಸವರಾಜ ರಾಯರೆಡ್ಡಿ ಸಹಕಾರದಿಂದ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ ಎಂದು ಹೇಳಿದರು.
ಸ್ನಾತಕೋತ್ತರ ಕೇಂದ್ರಕ್ಕೆ ಆಗಮಿಸುವ ಮಕ್ಕಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಒದಗಿಸಬೇಕಿದೆ. ಜೊತೆಗೆ ಹತ್ತಿರದಲ್ಲಿಯೇ ಉತ್ತಮ ಗುಣಮಟ್ಟದ ವಸತಿ ನಿಲಯ ಅಗತ್ಯವಾಗಿದೆ. ಅಲ್ಲದೇ ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಇದಕ್ಕೆ ನನ್ನ ಶಾಸಕರ ಅಭಿವೃದ್ಧಿ ಅನುದಾನದಲ್ಲಿ ಅಗತ್ಯದ ಅನುದಾನ ಒದಗಿಸಲು ಬದ್ಧ ಎಂದು ತಿಳಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ.ಗುಡಸಿ ಮಾತನಾಡಿ ಸಚಿವ ಎಚ್.ಕೆ.ಪಾಟೀಲರ ಕನಸಿನ ಕೂಸು ಈ ಗದಗಿನ ಸ್ನಾತಕೋತ್ತರ ಕೇಂದ್ರ ಸದಸ್ಯ ಮೊದಲ ಹಂತದ ಕಾಮಗಾರಿ ಪೂರ್ಣವಾಗಿದ್ದು ಮುಂದಿನ ಉಳಿಕೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸ ಇದೆ ಎಂದರು. ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹಾಗೂ ಸಚಿವ ಎಚ್.ಕೆ.ಪಾಟೀಲರ ಸಹಕಾರದಿಂದ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ನಾತಕೊತ್ತರ ಕೇಂದ್ರದ ಸಿಂಡಿಕೇಟ್ ಸದಸ್ಯರಾದ ರಾಬರ್ಟ ಗಡ್ಡಾಪುರ, ಮಹೇಶ ಹುಲ್ಲಣ್ಣವರ, ರತ್ನಾ ಪಾಟೀಲ, ಶಾಮ್ ಮಲ್ಲನಗೌಡರ, ಮಂಜುಳಾ, ಪ್ರಕಾಶ ಹೊಸಮನಿ, ಕಳಸಾಪುರ ಗ್ರಾ.ಪಂ. ಅಧ್ಯಕ್ಷೆ ಅನುಸೂಯಾ ಬೆಟಗೇರಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ. ಎನ್.ವೈ. ಮಟ್ಟಿಹಾಳ,ಆಡಳಿತಾಧಿಕಾರಿ ಮಲ್ಲಿಕಾರ್ಜುನ ನಾಯಕ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ ಇದ್ದರು.
ಕರ್ನಾಟಕ ವಿಶ್ವ ವಿದ್ಯಾಲಯದ ಕುಲಸಚಿವ (ಆಡಳಿತ) ಡಾ.ಎ. ಚೆನ್ನಪ್ಪ ಅತಿಥಿಗಳನ್ನು ಸ್ವಾಗತಿಸಿದರು. ಜಾವೀದ್ ಹಾಗೂ ಸಂಗಡಿಗರು ನಾಡಗಿತೆ ಪ್ರಸ್ತುತಪಡಿಸಿದರು. ಲಕ್ಷ್ಮಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಬಸವರಾಜ ಕೊಳ್ಳಳ್ಳಿ ವಂದಿಸಿದರು.
ವರದಿ : ಮುತ್ತು ಗೋಸಲ್.