
ನರಗುಂದ ಪೊಲೀಸರ ಕಾರ್ಯಚರಣೆ – ಹಿಟ್ & ರನ್ ಕೇಸ್ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿ.
ನರಗುಂದ:ಸತ್ಯಮಿಥ್ಯ (ಎ-12).
ಗದಗ ಜಿಲ್ಲೆ ನರಗುಂದ ಪಟ್ಟಣದ ವ್ಯಾಪ್ತಿಯಲ್ಲಿ ಏಪ್ರಿಲ್ 5 ರಂದು ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಮೇಲ್ನೋಟಕ್ಕೆ ಹಿಟ್ & ರನ್ ಎಂದು ಕಾಣಿಸಿದ್ದ ಅಪಘಾತ ಇದೀಗ, ರೋಚಕ ತಿರುವು ಪಡೆದುಕೊಂಡಿದೆ. ಅಪಘಾತಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶ ಮೂಲದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು, ಸೂಕ್ತ ತನಿಖೆ ನಡೆಸಿದಾಗ, ಪ್ರಕರಣದ ಜಾಡು ಹೊರಬಿದ್ದಿದೆ.
ಘಟನೆ ವಿವರ: ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದ ನಿವಾಸಿ, ಶಿವಾನಂದ ಚಲವಾದಿ ಹಾಗೂ ನವನಗರದ ಸದ್ದಾಂ ಕಡಿವಾಳ ಎಂಬುವವರು ಏ.5 ರಂದು ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಭೈರನಹಟ್ಟಿ ಬಳಿಯ ಢಾಬಾವೊಂದರಲ್ಲಿ ಊಟಕ್ಕೆ ತೆರಳಿದ್ದರು. ಈ ವೇಳೆ ಢಾಬಾದ ಮಾಲೀಕರೊಂದಿಗೆ ಲಾರಿ ಚಾಲಕನಿಗೆ ಜಗಳ ಸಂಭವಿಸಿ, “ನಾನು ಬಂದು ತುಂಬಾ ಹೊತ್ತಾಯ್ತು. ನನಗೇಕೆ ಊಟ ನೀಡಿಲ್ಲ?” ಎಂದು ತಕರಾರು ಮಾಡಿದ್ದ.ಮುಂದುವರೆದದು ಡಾಬಾ ಮಾಲೀಕರೊಂದಿಗೆ ಜಗಳಕ್ಕೂ ಇಳಿದಿದ್ದ. ಅವಾಚ್ಯ ಶಬ್ದಗಳೊಂದಿಗೆ ಜಗಳ ತಾರಕಕ್ಕೇರಿತ್ತು.
ಈ ವೇಳೆ ಶಿವಾನಂದ ಹಾಗೂ ಸದ್ದಾಂ ಅವರಿಬ್ಬರೂ ಮಧ್ಯ ಪ್ರವೇಶಿಸಿ, ಜಗಳ ತಡೆದು ಬುದ್ದಿವಾದ ಹೇಳಿದ್ದರು.ಆದರೆ ಲಾರಿ ಚಾಲಕ ಮಾತ್ರ ಯಾರ ಮಾತನ್ನೂ ಕೆಳದೇ, ಅವರಿಬ್ಬರ ಜೊತೆಗೂ ಜಗಳ ತೆಗೆದಿದ್ದ. ಇದರ ಬೆನ್ನಲ್ಲೇ, ಲಾರಿ ಚಾಲಕನಿಗೆ ಬೈಕ್ ಸವಾರರಿಬ್ಬರು ಚಾಲಕನಿಗೆ ಧರ್ಮದೇಟು ನೀಡಿದ್ದರು.
ಸೇಡು ತೀರಿಸಿಕೊಳ್ಳಲು ಹೊಂಚು..!
ಇದರಿಂದ ತೀವ್ರ ಆಕ್ರೋಶಗೊಂಡಿದ್ದ, ಲಾರಿ ಚಾಲಕ ಆ ಇಬ್ಬರೂ ಸವಾರರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ.ಊಟ ಮುಗಿಸಿ,ಯಾವಾಗ ಅವರಿಬ್ಬರೂ ಹೊರಗೆ ಬರುವದನ್ನೇ ಕಾಯುತ್ತಾ ಕುಳಿತಿದ್ದ. ಯಥಾರೀತಿ ಸವಾರರಿಬ್ಬರೂ ಊಟ ಮುಗಿಸಿ, ಬೈಕ್ ಏರಿ, ತಮ್ಮ ಊರು ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದ್ದರು. ಇತ್ತ ಹೊಂಚು ಹಾಕಿ ಕುಳಿತಿದ್ದ ಲಾರಿ ಚಾಲಕ, ಸವಾರರಿಬ್ಬರನ್ನೂ ಹಿಂಬಾಲಿಸಿಯೇಬಿಟ್ಟಿದ್ದ.
ವಿಧಿಯಾಟ ಅನ್ನುವಂತೆ, ಮಾರ್ಗ ಮಧ್ಯೆ ಸವಾರರಿಬ್ಬರನ್ನೂ ಮಳೆರಾಯ ತಡೆದು ನಿಲ್ಲಿಸಿದ್ದ. ಮಳೆಯಲ್ಲಿ ಸಂಚರಿಸುವದು ಬೇಡ ಎಂದು, ರಡ್ಡೇರನಾಗನೂರ ಗ್ರಾಮದ ಬಳಿ ಸವಾರರಿಬ್ಬರೂ,ಮರದ ಆಶ್ರಯ ಪಡೆದು ನಿಂತಿದ್ದರು. ಸೇಡಿನ ದ್ವೇಷ ಕಾರುತ್ತಾ, ಇವರನ್ನೇ ಹಿಂಬಾಲಿಸುತ್ತಿದ್ದ, ಲಾರಿ ಚಾಲಕನಿಗೆ, ಇವರನ್ನ ನೋಡಿ, ತನ್ನ ಆಕ್ರೋಶದ ಕಟ್ಟೆ ಮತ್ತಷ್ಟು ಒಡೆದುಹೋಗಿತ್ತು. ಇವರಿಬ್ಬರು ನನ್ನ ಮೇಲೆ ಕೈ ಮಾಡಿದ್ದಕ್ಕೆ ಪ್ರತಿಕಾರ ತೀರಿಸಿಕೊಳ್ಳೋಕೆ ಇದೇ ಸರಿಯಾದ ಸಮಯ ಎಂದು, ವೇಗವಾಗಿ ಲಾರಿಯನ್ನು ನೇರವಾಗಿ ಅವರ ಮೇಲೆ ಚಲಾಯಿಸಿ ಚಾಲಕ ತನ್ನ ಲಾರಿ ಸಮೇತ ಪರಾರಿಯಾಗಿದ್ದ. ಈ ವೇಳೆ, ಶಿವಾನಂದ ಚಲವಾದಿ ಅನ್ನುವಾತ,ಸ್ಥಳದಲ್ಲೇ ಮೃತಪಟ್ಟರೆ, ಸದ್ದಾಂ ಅನ್ನುವಾತ ಗಂಭೀರ ಗಾಯಗೊಂಡಿದ್ದ.
ಸುದ್ದಿ ಬಹಿರಂಗವಾಗಿದ್ದು ಹೇಗೆ?:
ಪ್ರಾರಂಭದಲ್ಲಿ ಪೊಲೀಸರು ಈ ಪ್ರಕರಣವನ್ನು ಅಪರಿಚಿತ ವಾಹನ ಡಿಕ್ಕಿ ಹೊಡೆದ ಅಪಘಾತವೆಂದು ದಾಖಲಿಸಿದ್ದರು. ಆದರೆ ಗಾಯಗೊಂಡ ಸದ್ದಾಂ ನೀಡಿದ ಮಹತ್ವದ ಸುಳಿವು ಘಟನೆಗೆ ಮರುಜೀವ ನೀಡಿತ್ತು.ಇದರಿಂದ ತಕ್ಷಣ ಅಲರ್ಟ ಆಗಿದ್ದ ಖಾಕಿ, ಢಾಬಾದಲ್ಲಿ ನಡೆದ ಹೊಡೆದಾಟದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯ ಬಳಿಕ, ಘಟನೆ ಪೂರ್ವನಿಯೋಜಿತವಿತೆಂದು ಖಚಿತಪಡಿಸಿದ್ದರು. ಪರಿಣಾಮ ಲಾರಿ ಚಾಲಕನನ್ನ ಪತ್ತೆ ಹಚ್ಚಿ, ಹೆಡೆಮುರಿ ಕಟ್ಟುವಲ್ಲಿ, ನರಗುಂದ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸರ ಕಾರ್ಯಚಟುವಟಿಕೆ:ಆರೋಪಿಯನ್ನು ಪತ್ತೆಹಚ್ಚಲು ಡಿವೈಎಸ್ಪಿ ಪ್ರಭುಗೌಡ ಅವರ ನೇತೃತ್ವದಲ್ಲಿ ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐ ಎಫ್.ಎಸ್. ಮಣ್ಣೂರ ಮತ್ತು ತಂಡದ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಸಿಸಿಟಿವಿ ದೃಶ್ಯಗಳು ಪ್ರಮುಖ ಸಾಕ್ಷಿಯಾಗಿ ಕಾರ್ಯನಿರ್ವಹಿಸಿವೆ.ಸದ್ಯ ಲಾರಿ ಚಾಲಕನನ್ನ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, ಕೋಪದ ಕೈಗೆ ಬುದ್ದಿ ಕೊಟ್ಟ ಲಾರಿ ಚಾಲಕ, ಇದೀಗ ಕಂಬಿ ಹಿಂದೆ, ಪಶ್ಚಾತಾಪದ ಪಾಠ ಕಲಿಯುತ್ತಿದ್ದಾನೆ.
ವರದಿ:ಮುತ್ತು ಗೋಸಲ