
ಪೊಲೀಸ್ ವ್ಯವಸ್ಥೆ ಜನಸ್ನೇಹಿ ಮಾಡಲು ಆದ್ಯತೆ: ರೋಹನ್
ಗದಗ : ಸತ್ಯಮಿಥ್ಯ (ಜು-17)
ಜನರಲ್ಲಿ ಪೊಲೀಸರ ಮೇಲೆ ಆತ್ಮವಿಶ್ವಾಸ ತರಿಸಬೇಕು ಮತ್ತು ನಾವು ಅವರಿಗೆ ನಿಮ್ಮ ಜೊತೆಯಲ್ಲಿದ್ದೇವೆ ಎಂಬ ನಂಬಿಕೆ ಹುಟ್ಟಿಸುವ ರೀತಿಯಲ್ಲಿ ಪೊಲೀಸ್ ಇಲಾಖೆ ಕೆಲಸ ನಿರ್ವಹಿಸಬೇಕು. ಅದೇ ರೀತಿ ಜಿಲ್ಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮ ವಹಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರೊಂದಿಗೆ ಪೊಲೀಸರ ಉತ್ತಮ ಬಾಂಧವ್ಯ, ಸಣ್ಣಪುಟ್ಟ ದೂರುಗಳಿಗೂ ಸ್ಪಂದಿಸುವುದು ಸೇರಿದಂತೆ ಜಿಲ್ಲೆಯ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರ ನೋವನ್ನು ಅರ್ಥಮಾಡಿಕೊಂಡು, ಅವರಿಗೆ ಸಕಾಲಿಕ ಸ್ಪಂದನೆ ನೀಡುವುದು ಮುಖ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಅಲ್ಲದೇ ಪೊಲೀಸ್ ಠಾಣೆಗೆ ಭೇಟಿ ನೀಡಿದ ನಂತರ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.
ರಾತ್ರಿ ವೇಳೆಯಲ್ಲಿ ಬೀಟ್ ವ್ಯವಸ್ಥೆ ಸರಿಯಾಗಿರಬೇಕು, ಕಳ್ಳತನ ಪ್ರಕರಣಗಳ ರಿಕವರಿ ಸರಿಯಾಗಿ ಆಗಬೇಕು, ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸುವುದು, ಯಾವುದೇ ಪ್ರಕರಣಗಳನ್ನು ಅದೇ ದಿನ ಇತ್ಯರ್ಥಪಡಿಸಿ, ಮುಂದೆ ಬೆಳೆಯದ ರೀತಿಯಲ್ಲಿ ಮುಂಜಾಗೃತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲಾಗಿದೆ ಎಂದರು.
ಪೊಲೀಸರ ದೈಹಿಕ ಸಾಮರ್ಥ್ಯವನ್ನು ಸುಧಾರಿಸಲು ವಿಶೇಷ ಯೋಜನೆಗಳನ್ನು ರೂಪಿಸಲಾಗುವುದು. ಮುಂದಿನ ೨ ತಿಂಗಳಲ್ಲಿ ಬಿಎಂಪಿ (ಬಾಡಿ ಮಾಸ್ ಇಂಡೆಕ್ಸ್) ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದರು. ಐತಿಹಾಸಿಕ ಗದಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಈ ಹಿಂದಿನ ಎಸ್ಪಿ ಬಿ.ಎಸ್. ನೇಮಗೌಡ ಅವರು ಜಿಲ್ಲೆಯಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿ ಜನರ ಪ್ರೀತಿ ಸಂಪಾದಿಸಿದ್ದಾರೆ. ಹಾದಿಯಲ್ಲಿಯೇ ಅವರ ಮುನ್ನಡೆಯುವುದಾಗಿ ತಿಳಿಸಿದರು
ಜಿಲ್ಲೆಯಲ್ಲಿ ಸಣ್ಣ ಜಗಳ, ಗಂಡ-ಹೆಂಡತಿ ವೈಮನಸ್ಸು, ಅಕ್ಕ-ಪಕ್ಕ ಮನೆಯವರ ಜಗಳ ಸೇರಿ ಇಆರ್‌ಎಸ್‌ಎಸ್ ೧೧೨ಗೆ ನಿತ್ಯ ೧೫ ಕರೆಗಳು ಬರುತ್ತಿದ್ದು, ಅಂತಹ ಪ್ರಕರಣಗಳನ್ನು ಸ್ಥಳದಲ್ಲೇ ಬಗೆಹರಿಸುವುದು, ಮತ್ತು ಬಗೆಹರಿಸಿದ ಸಮಸ್ಯೆಯನ್ನು ಮತ್ತೆ ಉದ್ಭವವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ವರದಿ : ಮುತ್ತು ಗೋಸಲ.