
ಸನಾತನ ಧರ್ಮ ಛಿದ್ರ ಮಾಡುವ ಪ್ರಯತ್ನ ನಡೆದಿದೆ: ಬಸವರಾಜ ಬೊಮ್ಮಾಯಿ

ಗದಗ : ಸತ್ಯಮಿಥ್ಯ (ನ -12).
ಸನಾತನ ಹಿಂದೂ ಧರ್ಮವನ್ನು ಜಗತ್ತಿನ ಕೆಲವು ಶಕ್ತಿಗಳು ಹಾಗೂ ನಮ್ಮೊಳಗಿನ ಕೆಲವು ಶಕ್ತಿಗಳು ಛಿದ್ರ ಮಾಡಬೇಕೆಂಬ ಪ್ರಯತ್ನ ನೂರಾರು ವರ್ಷದಿಂದ ನಡೆಸಿವೆ. ಆದರೆ, ಸಾಧ್ಯವಾಗಿಲ್ಲ, ಯಾವ ಶಕ್ತಿಗಳು ಈ ಧರ್ಮವನ್ನು ಮುಟ್ಟಲು ಬಂದಿವೆ ಆವೆಲ್ಲ ಶಕ್ತಿಗಳು ನಾಮಾವಶೇಷವಾಗಿ ಹೋಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ವಿ.ಡಿ.ಎಸ್.ಟಿ.ಸಿ ಶಾಲಾ ಮೈದಾನದಲ್ಲಿ ಅತಿರುದ್ರ ಮಹಾಯಾಗ ಸೇವಾ ಸಮಿತಿ ಏರ್ಪಡಿಸಿದ, ಕಿರಿಯ ಕುಂಭ ಮೇಳದ ಭವ್ಯ ಶೋಭಾ ಯಾತ್ರೆ ಹಾಗೂ ಮೆರವಣಿಗೆಯ ವೇದಿಕೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಎಲ್ಲಿ ದೈವ ಇದೆ ಅಲ್ಲಿ ದೇವರಿದ್ದಾನೆ. ಕುಂಭ ಹೊತ್ತುಕೊಂಡು ಬಂದ ಮಾತೆಯರನ್ನು ನೋಡಿದಾಗ ಆದಿಶಕ್ತಿಯನ್ನು ನೋಡಿದಂತಾಗುತ್ತದೆ.
ಹುಟ್ಟಿದ ಪ್ರತಿಯೊಬ್ಬ ಮಾನವನೂ ಶಕ್ತಿಯ ಕೇಂದ್ರ ಅದನ್ನು ಹೇಗೆ ಬಳಕೆ ಮಾಡುತ್ತೇವೆ. ಯಾರಿಗಾಗಿ ಬಳಕೆ ಮಾಡುತ್ತೇವೆ ಅದರ ಮೇಲೆ ನಮ್ಮ ಕೀರ್ತಿ, ಯಶಸ್ಸು ಅಪಯಶಸ್ಸು ಇದೆ. ಎಲ್ಲಕ್ಕಿಂತ ಮೊದಲು ಇದ್ದಿದ್ದು ಸತ್ಯಯುಗ, ಸತ್ಯಯುಗದಲ್ಲಿ ಇದ್ದಿದ್ದು ಏಕಾತ್ಮ, ಒಂದೆ ಆತ್ಮ ಇತ್ತು. ಆ ಮೇಲೆ ದ್ವಾಪರ ಯುಗ ಬಂತು ಅಲ್ಲಿ ಆತ್ಮದ ಜೊತೆಗೆ ಪರಮಾತ್ಮ ಬಂತು. ಆ ಮೇಲೆ ತ್ರೇತಾಯುಗದಲ್ಲಿ ಪರಮಾತ್ಮನನ್ನು ಕಾಣುವ ಮಾರ್ಗ ತೋರುವ ಗುರುಗಳ ಸೃಷ್ಟಿಯಾಯಿತು. ಯಜ್ಞ ಯಾಗ ಅಲ್ಲಿ ಪ್ರಾರಂಭವಾಯಿತು. ದೈವ ಶಕ್ತಿ ಜೊತೆಗೆ ಸುರ ಮತ್ತು ಅಸುರರ ಶಕ್ತಿ ಇತ್ತು.
ಸುರ ಅಸುರರ ನಡುವೆ ಯಾವಾಗಲೂ ಸಂಘರ್ಷ ಆಗುತ್ತದೆ. ಆದರೆ, ಯಾಗ ಯಜ್ಞದಿಂದ ಗುರುಗಳು ಸತ್ಯಕ್ಕೆ, ನ್ಯಾಯಕ್ಕೆ ಧರ್ಮಕ್ಕೆ ಜಯವನ್ನು ತಂದು ಕೊಟ್ಟಿದ್ದಾರೆ. ಅದು ಗುರುವಿನ ಶಕ್ತಿ. ಸುರ ಅಸುರರ ಶಕ್ತಿಯನ್ನು ನಿಗ್ರಹಿಸಿರುವುದು ಮಹಾಶಿವ, ಮಹಾದೇವ ವಿಷಕಂಠನಾಗಿ ಸುರ ಅಸುರರ ನಡುವೆ ನಡೆದ ಯುದ್ದದಲ್ಲಿ ಹಾಲಾಹಲವನ್ನು ನುಂಗಿ ಇಡೀ ಜಗತ್ತಿಗೆ ಕಲ್ಯಾಣ ಮಾಡಿದ ಮಹಾದೇವ, ಅಂತಹ ಮಹಾದೇವನ ಹೆಸರಿನಲ್ಲಿ ಇವತ್ತು ಯಜ್ಞ ಯಾಗಾದಿ ನಡೆಯುತ್ತಿದೆ. ಗುರುಗಳು ಗದಗಿಗೆ ಪಾದಾರ್ಪಣೆ ಮಾಡಿರುವುದು ಒಳ್ಳೆಯ ಸಮಯ ಈಗ ಬಂದಿದೆ. ಗುರುವಿನಲ್ಲಿ ಅಪಾರ ಶಕ್ತಿ ಇದೆ. ಗುರುವನ್ನು ಒಲಿಸಿಕೊಳ್ಳಲು ಭಕ್ತಿ ಮಾರ್ಗ ಬಹಳ ಮುಖ್ಯ.
ಭಕ್ತಿ ಎಂದರೆ ಉತ್ಕೃಷ್ಟವಾದ ಪ್ರೀತಿ, ಉತ್ಕೃಷ್ಟವಾದ ಪ್ರೀತಿ ಎಂದರೆ ಕರಾರು ರಹಿತವಾದ ಪ್ರೀತಿ, ಕರಾರು ರಹಿತವಾದ ಭಕ್ತಿ, ಪ್ರೀತಿಯನ್ನು ಗುರುವಿಗೆ ಸಮರ್ಪಣೆ ಮಾಡಿದಾಗ ಅದು ಗುರುವಿನಲ್ಲಿ ಕರಗಿ ಲೀನವಾಗಬೇಕು. ಆಗ ಗುರುವಿನ ತಪಸ್ಸಿನ ಆಶೀರ್ವಾದ ಸಿಗುತ್ತದೆ. ಗುರುವಿನಲ್ಲಿ ದೈವ ಶಕ್ತಿ ಇದೆ. ಅದು ನಮಗೆ ಸಿಗಬೇಕೆಂದರೆ ನಮ್ಮ ಶ್ರಮವೂ ಬಹಳ ಮುಖ್ಯ. ಕರ್ಮ ಆಧಾರಿತ ಕಾಯಕ ಆಧಾರಿತ ಸಮಾಜ ನಮ್ಮದು, ಕಾಯಕದಲ್ಲಿ ನಿಷ್ಟೆ ತೋರಬೇಕು. ದುಡಿಮೆಯಲ್ಲಿ ದೇವರಿದ್ದಾನೆ. ದುಡಿಮೆ ನಮಗೆ ಪ್ರಾಮಾಣಿಕತೆ, ಸತ್ಸಂಗ, ಸದ್ವಿಚಾರ ಕೊಡುತ್ತದೆ. ಈಗ ಯಾಗ ನಡೆಯುತ್ತಿರುವುದು ಸರಿಯಾದ ಸಮಯ ಎಂದು ಹೇಳಿದರು.
ಧರ್ಮ ಒಡೆಯುವ ಶಕ್ತಿಗಳು ಸನಾತನ ಹಿಂದೂ ಧರ್ಮವನ್ನು ಜಗತ್ತಿನ ಕೆಲವು ಶಕ್ತಿಗಳು ಹಾಗೂ ನಮ್ಮೊಳಗಿನ ಕೆಲವು ಶಕ್ತಿಗಳು ಧರ್ಮವನ್ನು ಛಿದ್ರ ಮಾಡಬೇಕೆಂಬ ಪ್ರಯತ್ನ ನೂರಾರು ವರ್ಷದಿಂದ ನಡೆದಿದೆ. ಆದರೆ, ಸಾಧ್ಯವಾಗಿಲ್ಲ, ಹಿಂದೂ ಧರ್ಮದ ವಿಚಾರ, ಹಿಂದೂ ಧರ್ಮದ ತತ್ವ, ಎಲ್ಲರನ್ನೂ ಅಪ್ಪಿಕೊಳ್ಳುವ ಒಪ್ಪಿಕೊಳ್ಳುವ ಉದಾತ್ತವಾದ ಜೀವನ ಪದ್ದತಿ. ಆದ್ದರಿಂದ ಯಾವ ಶಕ್ತಿಯೂ ಇದನ್ನು ಅಲುಗಾಡಿಸಲು ಸಾಧ್ಯವಿಲ್ಲ. ಯಾವ ಶಕ್ತಿಗಳು ಈ ಧರ್ಮವನ್ನು ಮುಟ್ಟಲು ಬಂದಿವೆ ಆವೆಲ್ಲ ಶಕ್ತಿಗಳು ನಾಮಾವಶೇಷವಾಗಿ ಹೋಗಿವೆ.
ನಾವು ಹಿಂದೂ ಧರ್ಮದಲ್ಲಿ ಒಕ್ಕಟ್ಟಾಗಿ ದೇವರ ಆರಾಧನೆಯನ್ನು ಮಾಡಿ ನಮ್ಮ ಬದುಕಿನಲ್ಲಿ ಒಳ್ಳೆಯ ಕೆಲಸವನ್ನು ಮಾಡಿ ಪರೋಪಕಾರಿ ಜೀವನ ನಡೆಸಿ ಗುರುವಿನ ಆಶೀರ್ವಾದ ಪಡೆದು ಯಜ್ಞದಿಂದ ನಮ್ಮಲ್ಲಿರುವ ಅಹಂಕಾರ ನಶಿಸಿ ಎಲ್ಲರೂ ಒಳ್ಳೆಯವರಾಗೋಣ, ಮುಂದಿನ ದಿನಗಳಲ್ಲಿ ಲೋಕಕಲ್ಯಾಣ ಗದಗನಿಂದ ಪ್ರಾರಂಭವಾಗಲಿದೆ. ಇಡೀ ಭಾರತ ಮತ್ತು ಜಗತ್ತಿನ ಮಾನವರಿಗೆ ಒಳ್ಳೆಯದಾಗಲಿ ಎಂದು ಹೇಳಿ ಭೂಮಾ ಮತ್ತು ಅವರ ತಂಡ ಬಹಳ ಶ್ರಮ ಪಟ್ಟು ಈ ಸಾಧನೆ ಮಾಡಿದ್ದಾರೆ ಎಂದರು.
ಗದಗಿನ ಪುಣ್ಯಭಾಗ್ಯ ಪರಮಪೂಜ್ಯ ಸಹದೇವಾನಂದ ಜೀ ಅವರ ತಪಸ್ಸು ಅವರು 12 ಲಕ್ಷ ಸಾಧುಗಳ ಅಖಾಡದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ತಪಸ್ಸನ್ನು ಸದಾ ಕಾಲ ಈ ಭೂಮಿಯ ಮೇಲೆ ಬಿಟ್ಟು ಹೋಗುತ್ತಿದ್ದಾರೆ. ಇದೆಲ್ಲ ನಮ್ಮ ಪುಣ್ಯ ಭಾಗ್ಯ, ಗದಗಿನ ಜನರು ಬಹಳ ಪುಣ್ಯ ಮಾಡಿದ್ದೀರಿ , ಬರುವ ದಿನಗಳಲ್ಲಿ ಉತ್ತಮವಾಗಿರುವ ಮಾನವೀಯ ಗುಣ ಇರುವ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಶ್ರೀ ಪಂಚದಶನಂ ಜುನಾ ಆಖಾಢ ಪೀಠಾಧೀಶ್ವರ, ಶ್ರೀ ಅಮರನಾಥ ಮಹಾದೇವ ಮಠ, ಕುಷ್ಟಗಿ ಶ್ರೀಗಳಾದ ಪೂಜ್ಯ ಶ್ರೀ ಸಹದೇವಾನಂದ ಗಿರಿ ಜಿ ಮಹಾರಾಜರು ನೇತೃತ್ವ ವಹಿಸಿದ್ದರು. ಶಾಸಕರಾದ ಸಿ.ಸಿ ಪಾಟೀಲ್ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಸಂಘಟಕರು ಜೊತೆಗಿದ್ದರು.
ವರದಿ : ಮುತ್ತು ಗೋಸಲ.




