ರೈತರಿಗೆ ಅನ್ಯಾಯ ಮಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ – ಕಟ್ಟೇಗೌಡ.
ಪ್ರತಿ ಹೆಕ್ಟೇರಿಗೆ ಕೇಂದ್ರ ಸರ್ಕಾರ ನೀಡುವ 8500 ರೂಪಾಯಿಗಳಲ್ಲಿ ರಾಜ್ಯ ಸರ್ಕಾರ 2000 ಕಟಾವಣೆ ಮಾಡುತ್ತಿರುವುದು ಅನ್ಯಾಯ.
ಹಾವೇರಿ – ಸತ್ಯ ಮಿಥ್ಯ – (ಜು -12)
ಕಳೆದ ವರ್ಷ ಬರಗಾಲದಿಂದಾಗಿ ಸಂಕಷ್ಟದಲ್ಲಿರುವ ಹಾವೇರಿ ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ ಪ್ರತಿ ಹೆಕ್ಟೇರಿಗೆ ನೀಡಿದ 8500 ರೂ.ಹಣದಲ್ಲಿ ತಾನು ಈ ಮೊದಲು ನೀಡಿದ್ದ 2000 ರೂ.ಕಟಾವಣೆ ಮಾಡಿಕೊಂಡು ಉಳಿದ ಹಣ ಜಮೆ ಮಾಡಿ ಕೈ ತೊಳೆದುಕೊಂಡಿದೆ ಹೊರತು ರಾಜ್ಯ ಸರ್ಕಾರ ರೈತರಿಗೆ ತನ್ನ ಪಾಲಿನ ಎಸ್ ಡಿ ಆರ್ ಎಫ್ ಹಣ ನೀಡಿಲ್ಲ.ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೇಗೌಡರ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಇನ್ನು ಬೆಳೆ ವಿಮೆ ಪರಿಹಾರ ವಿಷಯದಲ್ಲೂ ಹಾವೇರಿ ಜಿಲ್ಲೆಯ 3.28 ಲಕ್ಷ ರೈತರು ವಿಮಾ ಮೊತ್ತವನ್ನು ತುಂಬಿದ್ದು ಅದರಲ್ಲಿ ಕೇವಲ 244101 ರೈತರಿಗೆ ಮಾತ್ರ ಈವರೆಗೆ ಕೇವಲ ಶೇಕಡಾ 25ರಷ್ಟು ಮಧ್ಯಂತರ ಬೆಳೆ ವಿಮಾ ಪರಿಹಾರ ಜಮಾ ಆಗಿದೆ. ಆದರೆ ಇದುವರೆಗೂ ಉಳಿದ ಪರಿಹಾರ ಹಣ ಜಮೆ ಆಗದೆ ವಿಮಾ ಸಂಸ್ಥೆ ಜಿಲ್ಲೆಯ ರೈತರಿಗೆ ಪಂಗನಾಮ ಹಾಕುತ್ತಿದೆ.
ಈ ವಿಷಯದಲ್ಲಿ ಸರ್ಕಾರ ಕೈಕಟ್ಟಿಕೊಂಡು, ಬಾಯಿ ಮುಚ್ಚಿಕೊಂಡು ಕುಳಿತಿದೆ.ರೈತರ ನೋವಿಗೆ ಸ್ಪಂದಿಸದೆ ದಿನ ಕಾಲ ಹರಣ ಮಾಡುತ್ತಿದೆ. ರಾಜ್ಯ ಸರ್ಕಾರ ಎಸ್ ಡಿ ಆರ್ ಎಫ್ ನಿಧಿಯಿಂದ ರಾಜ್ಯದ ರೈತರಿಗೆ ಬರ ಪರಿಹಾರವಾಗಿ ಹಣ ಸಂದಾಯ ಮಾಡಬೇಕು. ಹಾಗೂ ಕೃಷಿ ಸಚಿವರು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವರದಿ : ಗಣೇಶ.