ಸ್ಥಳೀಯ ಸುದ್ದಿಗಳು

ರಾಜ್ಯದಲ್ಲಿ ಜೆಜೆಎಂ ಅಡಿಯಲ್ಲಿ 78.90 ಲಕ್ಷ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ – ಕಡಾಡಿ.

Share News

ಮೂಡಲಗಿ:ಸತ್ಯಮಿಥ್ಯ ( ಜುಲೈ -25).

ಕರ್ನಾಟಕದಲ್ಲಿ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ೭೮.೯೦ ಲಕ್ಷ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ವಿ. ಸೋಮಣ್ಣ ಅವರು ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಮಳೆಗಾಲ ಅಧಿವೇಶದಲ್ಲಿ ದೇಶದ ಎಲ್ಲಾ ಜನರಿಗೆ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು ತೆಗೆದುಕೊಂಡ ಕ್ರಮಗಳು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ೨೦೧೯ರಲ್ಲಿ ಜೆಜೆಎಂ ಅಭಿಯಾನವನ್ನು ಆರಂಭಿಸಿದಾಗ, ದೇಶದ ಗ್ರಾಮೀಣ ಭಾಗದ ೧೯.೨೦ ಗ್ರಾಮೀಣ ಕುಟುಂಬಗಳ ಪೈಕಿ ೩.೨೩ ಕೋಟಿ (ಶೇ.೧೭) ವಸತಿಗಳಿಗೆ ಮಾತ್ರವೇ ನಲ್ಲಿ ಮೂಲಕ ನೀರು ಪೂರೈಕೆಯಾಗುತ್ತಿತ್ತು. ಪ್ರಸ್ತುತ ದೇಶಾದ್ಯಂತ ೧೯.೩೨ ಕೋಟಿ ಗ್ರಾಮೀಣ ಕುಟುಂಬಗಳಲ್ಲಿ ಸುಮಾರು ೧೪.೯೯ ಕೋಟಿ (೭೭.೫೮%) ನಲ್ಲಿ ಮೂಲಕ ನೀರು ಪೂರೈಕೆಯಾಗುತ್ತಿದೆ ಹಾಗೂ ರಾಜ್ಯದಲ್ಲಿ ಮೊದಲು ೨೪.೫೧ ಲಕ್ಷ ಮನೆಗಳು ನಲ್ಲಿ ಸಂಪರ್ಕ ಹೊಂದಿದ್ದವು ಜೆಜೆಎಂ ಯೋಜನೆಯ ಪರಿಣಾಮವಾಗಿ ೫೪.೩೯ ಲಕ್ಷ ಮನೆಗಳು ನಲ್ಲಿ ಸಂಪರ್ಕ ಪಡೆದುಕೊಂಡಿವೆ.

ಇದಲ್ಲದೆ, ಕ್ಯಾಚ್ ದಿ ರೈನ್ ಅಭಿಯಾನವನ್ನು ಜನರ ಸಹಭಾಗಿತ್ವದೊಂದಿಗೆ ತಳಮಟ್ಟದಲ್ಲಿ ನೀರಿನ ಸಂರಕ್ಷಣೆಯನ್ನು ಉತ್ತೇಜಿಸುವ ಗುರಿಯನ್ನು ೨೦೧೯ ರಲ್ಲಿ ದೇಶದ ೨೫೬ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಯಿತು. ವಿಶೇಷವಾಗಿ ಕುಡಿಯುವ ನೀರಿನ ಲಭ್ಯತೆಗಾಗಿ ಸುಸ್ಥಿರ ನೀರಿನ ನಿರ್ವಹಣೆಯ ಪ್ರಾಮುಖ್ಯತೆಯನ್ನು ಗುರುತಿಸಿ, ೨೦೨೩ ರಲ್ಲಿ “ಕುಡಿಯುವ ನೀರಿಗೆ ಮೂಲ ಸುಸ್ಥಿರತೆ” ಎಂಬ ವಿಷಯದೊಂದಿಗೆ ಜಾರಿಗೆ ತರಲಾಯಿತು. ಹಾಗೆಯೇ, ೨೦೨೪ ರಲ್ಲಿ, “ನಾರಿ ಶಕ್ತಿ ಸೆ ಜಲ್” ಎಂಬ ವಿಷಯದೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ.

ಕರ್ನಾಟಕದಲ್ಲಿ ಗ್ರಾಮೀಣ/ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿ ಆಲಮಟ್ಟಿ ಆಣೆಕಟ್ಟು, ನಾರಾಯಣಪುರ ಆಣೆಕಟ್ಟು, ತುಂಗಾ ಭದ್ರಾ ಆಣೆಕಟ್ಟು, ಕೃಷ್ಣ ರಾಜ ಸಾಗರ ಆಣೆಕಟ್ಟು, ಲಿಂಗನಮಕ್ಕಿ ಆಣೆಕಟ್ಟುಗಳಿಂದ ಸಂಸ್ಕರಿಸಿದ ನೀರನ್ನು ಒದಗಿಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ತಿಳಿಸಿದ್ದಾರೆ.

ವರದಿ : ಶಿವಾನಂದ ಮುಧೋಳ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!