ವಿದ್ಯಾರ್ಥಿ ಜೀವನ ಸುವರ್ಣಯುಗ ಇದ್ದಂತೆ ಎಳ್ಳಷ್ಟು ವ್ಯರ್ಥ ಮಾಡದಿರಿ – ಬಿ.ಎಸ್.ಚೇಗರಡ್ಡಿ.
ಅಂಕ ಗಳಿಕೆಯೊಂದಿಗೆ ಕೌಶಲ್ಯ ಹೊಂದುವದು ಮುಖ್ಯ - ವಿ ವಿ ವಸ್ತ್ರದ.

ವಿದ್ಯಾರ್ಥಿ ಜೀವನ ಸುವರ್ಣಯುಗ ಇದ್ದಂತೆ ಎಳ್ಳಷ್ಟು ವ್ಯರ್ಥ ಮಾಡದಿರಿ – ಬಿ.ಎಸ್.ಚೇಗರಡ್ಡಿ.
ಅಂಕ ಗಳಿಕೆಯೊಂದಿಗೆ ಕೌಶಲ್ಯಮುಖ್ಯ – ವಿ ವಿ ವಸ್ತ್ರದ.
ಗಜೇಂದ್ರಗಡ:ಸತ್ಯಮಿಥ್ಯ (ಜೂ-27)
ಪ್ರತಿಯೊಬ್ಬರ ಜೀವನದಲ್ಲಿ ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು. ಗುರುವಿನ ಮಾರ್ಗದರ್ಶನದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಅಣಿಗೊಳ್ಳಬೇಕು ಎಂದು ನರೇಗಲ್‌ನ ನಿವೃತ್ತ ಪ್ರಾಚಾರ್ಯ ಬಿ. ಎಸ್. ಚೇಗರಡ್ಡಿ ನುಡಿದರು.
ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಂಗವಾಗಿ ಶುಕ್ರವಾರ ನಡೆದ ʼಸಿಂಧೂರ-2025ʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿ ಮೌಲ್ಯಯುತ ಬದುಕನ್ನು ನಡೆಸುವಂತಾಗಲು ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಂತಹ ಶಿಕ್ಷಣ ಪಡೆಯುವ ವಿದ್ಯಾರ್ಥಿ ಜೀವನ ಸುವರ್ಣಯುಗ ಇದ್ದಂತೆ. ಆದ್ದರಿಂದ ಈ ಸಮಯವನ್ನು ಎಳ್ಳಷ್ಟು ವ್ಯರ್ಥ ಮಾಡದೆ ಶಿಕ್ಷಣದೊಂದಿಗೆ ಸಂಸ್ಕಾರ ಹೊಂದಿ ತಂದೆ ತಾಯಿಗೆ, ಗುರುಹಿರಿಯರಿಗೆ ಗೌರವ ನೀಡುವ ಮನೋಭಾವ ಬೆಳೆಸಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಜೀವನದಲ್ಲಿ ಯಶಸ್ಸುಗಳಿಸಲು ವಿದ್ಯೆಯ ಜೊತೆಗೆ ಆತ್ಮವಿಶ್ವಾಸವು ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲದೆ ನಮ್ಮ ಅಂತರಾತ್ಮದ ಅರಿವಿನ ಮೂಲಕ ನಾವು ಶಿಕ್ಷಣದ ಮೂಲಕ ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಯು ಕಾಲೇಜಿನ ಚೇರಮನ್ನರಾದ ವೀರಯ್ಯ ವ್ಹಿ. ವಸ್ತ್ರದ, ಅಂಕಗಳಿಕೆ ಜೊತೆಗೆ ಮಕ್ಕಳಿಗೆ ಕೌಶಲ್ಯ, ಸಂವಹನ ಕಲೆ, ಕ್ರೀಡೆ ಹಾಗೂ ಸಾಂಘಿಕ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ವೃದ್ಧಿಸಲು ಒತ್ತುಕೊಡಬೇಕು. ಕಾಲೇಜಿಗೆ ಬರುವ ಪ್ರತಿ ವಿದ್ಯಾರ್ಥಿಯು ಸಿಇಟಿ, ನೀಟ್, ಜೆಇಇ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಬೇಕು. ದಿನ ನಿತ್ಯದ ಅಭ್ಯಾಸದ ಜೊತೆಗೆ ಸ್ಪರ್ಧಾತ್ಮ ವಿಷಯಗಳ ಬಗ್ಗೆ ಓದಿದರೆ ಗೆಲುವು ನಿಶ್ಚಿತ ಎಂದು ಸಲಹೆ ನೀಡಿದರು.
ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಶೈಕ್ಷಣಿಕ ಸಲಹೆಗಾರ ಬಿ. ಎಸ್. ಗೌಡರ ಮಾತನಾಡಿ, ವಿದ್ಯಾರ್ಥಿಗಳು ಯಾವುದೆ ದುಶ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುಬಾರದು. ಉತ್ತಮ ಸ್ನೇಹಿತರನ್ನು ಸಂಪಾದಿಸಿ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಈ ಕುರಿತು ಉಪನ್ಯಾಸಕರು ಅವರಲ್ಲಿ ಅರಿವು ಮೂಡಿಸುವ ಮೂಲಕ ಅವರಲ್ಲಿ ಮಾನವೀಯ ಮೌಲ್ಯ ಬೆಳೆಸಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿ ಜೀವನ ಬದುಕಿನಲ್ಲಿ ಒಂದು ಸಾರಿ ಮಾತ್ರ ಬರುತ್ತದೆ. ಅಲ್ಲಿ ಶಿಸ್ತು, ಸಮಯಪಾಲನೆ, ರಾಷ್ಟ್ರಾಭಿಮಾನ, ಗುರುಹಿರಿಯರಿಗೆ ಗೌರವ ಸೇರಿದಂತೆ ಸಾಮಾಜಿಕ ಗುಣಗಳನನು ಬೆಳೆಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿ ಜೀವನದಲ್ಲಿ ಪುಸ್ತಕಗಳೆ ನಿಮ್ಮ ಸಹಪಾಠಿಗಳಾಗಿ ಇರಬೇಕು ಎಂದರು.
ಈ ವೇಳೆ ಪಿಯು ಪ್ರಾಚಾರ್ಯ ವಸಂತರಾವ್ ಗಾರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿ, ಕಲಿತ ಶಾಲೆ, ಕಲಿಸಿದ ಗುರು ಮತ್ತು ಹೊತ್ತು ಭೂಮಿಯ ಋಣ ತೀರಿಸಬೇಕಾದರೆ ಸಮಾಜ ಮೆಚ್ಚುವ ರೀತಿಯಲ್ಲಿ ಉತ್ತಮ ಪ್ರಜೆಗಳಾಗಬೇಕು. ಹಾಗೆ ಸಾಧಕರಾಗಬೇಕಾದರೆ ಅಧ್ಯಯನಶೀಲ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಳೆದ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಆಡಳಿತ ಮಂಡಳಿಯವರನ್ನು ಸನ್ಮಾನಿಸಲಾಯಿತು. ಈ ವೇಳೆ ಆಡಳಿತ ಮಂಡಳಿ ಸದಸ್ಯರಾದ ಸದಾಶಿವ ಕರಡಿ, ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಶಾಲೆ ಚೇರನ್ನರಾದ ಶರಣಪ್ಪ ಕೆ. ರೇವಡಿ, ಅನ್ನದಾನೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಚೇರನ್ನರಾದ ಪ್ರಭು ಎನ್. ಚವಡಿ, ಐಟಿಐ ಪ್ರಾಚಾರ್ಯ ಎ. ಪಿ. ಗಾಣಗೇರ, ಪದವಿ ಪ್ರಾಚಾರ್ಯ ಬಸಯ್ಯ ಎಸ್. ಹಿರೇಮಠ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷ ಮಂಜುನಾಥ ಕಾಡದ ಹಾಗೂ ಸಿಬ್ಬಂದಿಗಳು, ಪಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ಸುರೇಶ ಬಂಡಾರಿ.