
ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜು ಭರ್ತಿ.
ಮುಂಡರಗಿ:ಸತ್ಯಮಿಥ್ಯ(ಜು-02)
ಮಲೆನಾಡು ಹಾಗೂ ತುಂಗಭದ್ರಾ ಅಚ್ಚಕಟ್ಟು ಪ್ರದೇಶದಲ್ಲಿ ಹಲವು ದಿನಗಳು ಸುರಿದ ಭಾರಿ ಮಳೆಯ ಕಾರಣದಿಂದ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ನಿರ್ಮಿಸಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜು ಭರ್ತಿಯಾಗಿದ್ದು, ಹಲವು ದಿನಗಳಿಂದ ಹೆಚ್ಚುವರಿ ನೀರನ್ನು ನದಿಪಾತ್ರಕ್ಕೆ ಹರಿಸಲಾಗುತ್ತಿದೆ.
ಜೂನ್ 25ರಂದು 27,227 ಕ್ಯುಸೆಕ್, ಜೂನ್ 26ರಂದು 42,448, ಜೂನ್ 27ರಂದು 55,267, ಜೂನ್ 28ರಂದು 63,954, ಜೂನ್ 29ರಂದು 53,007, ಜೂನ್ 30ರಂದು 32,983 ಹಾಗೂ ಜುಲೈ 1ರಂದು 34,149 ಕ್ಯುಸೆಕ್ ಹೊಸನೀರು ಬ್ಯಾರೇಜಿಗೆ ಹರಿದು ಬಂದಿದೆ. ಬ್ಯಾರೇಜಿನ ಐದು ಗೇಟ್‌ಗಳ ಮೂಲಕ ಅಷ್ಟೇ ಪ್ರಮಾಣದ ನೀರನ್ನು ನಿತ್ಯ ನದಿಗೆ ಹರಿಸಲಾಗುತ್ತಿದೆ.
ಸಾಮಾನ್ಯವಾಗಿ ಜುಲೈ ಹಾಗೂ ಆಗಸ್ಟ್‌ನಲ್ಲಿ ಶಿಂಗಟಾಲೂರ ಏತ ನೀರಾವರಿ ಬ್ಯಾರೇಜ್ ಹಾಗೂ ತುಂಗಭದ್ರಾ ನದಿಗೆ ಸಾಕಷ್ಟು ಪ್ರಮಾಣದ ನೀರು ಹರಿದು ಬರುತ್ತದೆ. ಆದರೆ ಪ್ರಸ್ತುತ ವರ್ಷ ಮೇ ತಿಂಗಳಿನಲ್ಲಿ ರಾಜ್ಯದಾದ್ಯಂತ ಉತ್ತಮವಾಗಿ ಮಳೆ ಸುರಿಯಿತು. ಜೊತೆಗೆ ಮುಂಗಾರು ಮಳೆಯು ಈ ವರ್ಷ ಅವಧಿಗೂ ಪೂರ್ವದಲ್ಲಿಯೇ ರಾಜ್ಯವನ್ನು ಪ್ರವೇಶಿಸಿತು. ಈ ಕಾರಣದಿಂದ ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆ ಸುರಿದು ತುಂಗಭದ್ರಾ ನದಿಗೆ ಅವಧಿಗೂ ಪೂರ್ವದಲ್ಲಿಯೇ ಸಾಕಷ್ಟು ನೀರು ಹರಿದು ಬಂದಿತು.
ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಡಿಯಲ್ಲಿ ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ಹಲವಾರು ಪಟ್ಟಣ ಹಾಗೂ ಗ್ರಾಮಗಳಿಗೆ ಹಮ್ಮಿಗಿ ಗ್ರಾಮದ ಬಳಿಯ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್‌ನಿಂದ ನಿತ್ಯ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ಸದ್ಯ ಮುಂಗಾರು ಹಂಗಾಮಿನ ಆರಂಭದಲ್ಲಿಯೇ ಬ್ಯಾರೇಜ್‌ನಲ್ಲಿ ಗರಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದ್ದು, ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ವರದಿ : ಮುತ್ತು ಗೋಸಲ.