ಜಿಲ್ಲಾ ಸುದ್ದಿ

ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗುತ್ತದೆ ನರೇಗಲ್ ಗಣಪತಿ ಉತ್ಸವ‌.

Share News

ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗುತ್ತದೆ ನರೇಗಲ್ ಗಣಪತಿ ಉತ್ಸವ‌.

ಹಿಂದೂ-ಮುಸ್ಲಿಂ ಒಗ್ಗೂಡಿ ಭಾವೈಕ್ಯತೆಯಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ

ಚಿಕ್ಕಪುಟ್ಟ ವ್ಯಾಪಾರ ಮಾಡುವ ಯುವಕರಿಗೆ ಆರ್ಥಿಕ ಸಹಾಯ ಮಾಡುವ ಸದುದ್ದೇಶ.

ನರೇಗಲ್:ಸತ್ಯಮಿಥ್ಯ (ಆ-25).

ಪಟ್ಟಣದ 3ನೇ ವಾರ್ಡಿನ ಜಕ್ಕಲಿ ರೋಡ್‌ ಆಶ್ರಯ ಕಾಲೋನಿಯಲ್ಲಿ ಪ್ರತಿ ವರ್ಷ ಎಲ್ಲಾ ಧರ್ಮದ ಜನರು ಸೇರಿಕೊಂಡು ಭಾವೈಕ್ಯತೆಯಿಂದ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿದ್ದಾರೆ. ಅದರಲ್ಲೂ ಮುಸ್ಲಿಂ ಯುವಕರು, ಹಿರಿಯರು ಮುಂದಾಳತ್ವವಹಿಸಿ ಐದು ದಿನವೂ ಪೂಜೆ, ಪ್ರಸಾದ, ನಿರ್ವಹಣೆಯ ಕೆಲಸಗಳನ್ನು ಮಾಡುವ ಮೂಲಕ ಬೆಳಗಿನಿಂದ ರಾತ್ರಿಯವರೆಗೆ ಗಣಪತಿ ಸೇವೆಗೆ ಮುಂದಾಗುತ್ತಾರೆ.


ಗಣಪತಿ ಕಮೀಟಿಯಿಂದ ಓಣಿಯ ಪ್ರತಿ ಮನೆಯಿಂದ ದೇಣಿಗೆ ಸಂಗ್ರಹಿಸುತ್ತಾರೆ. ಮೂರ್ತಿಯ ವಿಸರ್ಜನೆ ಬಳಿಕ ಲೆಕ್ಕಪತ್ರ ಒಪ್ಪಿಸಿ ಅದರಲ್ಲಿ ಉಳಿಯುವ ಹಣದಲ್ಲಿ ಇಂತಿಷ್ಟು ಹಣವನ್ನು ಓಣಿಯಲ್ಲಿ ನಡೆಯುವ ಸಾವು-ನೋವಿನ ತುರ್ತು ಘಟನೆಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ. ನಂತರ ಘಟನೆ ಸಂಭವಿಸಿದ ಮನೆಯವರಿಂದ ಮರಳಿ ಪಡೆಯುತ್ತಾರೆ. ಇನ್ನೂಳಿದ ಹಣದಲ್ಲಿ ಆರ್ಥಿಕವಾಗಿ ಹಿಂದುಳಿದ ಇಬ್ಬರು ಅಥವಾ ಮೂವರು ಯುವಕರಿಗೆ ನೀಡುತ್ತಾರೆ. ಅವರು ಮರು ವರ್ಷ ಗಣೇಶ ಉತ್ಸವದ ಒಂದು ತಿಂಗಳ ಮೊದಲು ಸ್ವಲ್ಪ ಹೆಚ್ಚಿನ ಹಣ ಸೇರಿಸಿ ಮರಳಿ ಕಮೀಟಿಗೆ ನೀಡುತ್ತಾರೆ. ಇದರಿಂದ ಎಷ್ಟೋ ಯುವಕರ ಕಿರು ವ್ಯಾಪರಕ್ಕೆ, ಕಷ್ಟಕ್ಕೆ ಸಹಾಯವಾಗಿದೆ ಎನ್ನುತ್ತಾರೆ ನಾರಾಯಣಪ್ಪ ಯಂಕಪ್ಪ ಮಾಳೋತ್ತರ.

ಫೋಟೋ:ನರೇಗಲ್‌ ಪಟ್ಟಣದ 3ನೇ ವಾರ್ಡಿನ ಆಶ್ರಯ ಕಾಲೋನಿಯಲ್ಲಿ ಹಿಂದೂ, ಮುಸ್ಲಿಂ ಯುವಕರು ಪ್ರತಿಷ್ಠಾಪಿಸಿರುವ ಸಾರ್ವಜನಿಕ ಗಣಪತಿ ಮೂರ್ತಿಯ ಪೂಜೆಯಲ್ಲಿ ಪಾಲ್ಗೊಂಡಿರುವುದು (ಸಂಗ್ರಹ ಚಿತ್ರ).

ಸರ್ಕಾರದಿಂದ 1990ರಲ್ಲಿ ಉಚಿತವಾಗಿ ನೀಡಿದ ಇಲ್ಲಿನ ಮನೆಗಳಲ್ಲಿ ವಾಸ ಮಾಡುವ ಎಲ್ಲರೂ ಬಡವರು, ಕೃಷಿಕರು ಹಾಗೂ ಕೂಲಿ ಕಾರ್ಮಿಕರಾಗಿದ್ದಾರೆ. ಹಾಗಾಗಿ ಸಣ್ಣಪುಟ್ಟ ಕಾರ್ಯಕ್ರಗಳಿಗೆ ಉಪಯುಕ್ತವಾಗುವ ವಸ್ತುಗಳನ್ನು ಪ್ರತಿ ವರ್ಷ ಗಣಪತಿ ಕಮೀಟಿಯಿಂದ ಖರೀದಿ ಮಾಡುತ್ತಾ ಬಂದಿದ್ದಾರೆ. ಈ ಮೊದಲಿನ ವರ್ಷಗಳಲ್ಲಿ ಗೋಡೆಗೆ ಹಾಕುವ ಸ್ಕ್ರೀನ್‌, ಸ್ಟೇಜ್‌ ಸ್ರೀನ್‌ ಖರೀದಿ ಮಾಡಲಾಗಿತ್ತು ಅದನ್ನು ಓಣಿಯ ಯಾರದೇ ಮನೆಯಲ್ಲಿ ಕಾರ್ಯಕ್ರಮ ನಡೆದರು ಬಳಕೆ ಮಾಡಿಕೊಳ್ಳುತ್ತಿದ್ದರೆ. ಕಳೆದ ವರ್ಷ ಉಳಿದ ಹಣದಲ್ಲಿ ನಾಲ್ಕೈದು ದಿನಗಳ ಹಿಂದೆ ಲೈಟಿನ ಸರ, ಲೈಟ್‌, ವೈರಲೆಸ್‌ ಮೈಕ್‌, ಸೌಂಡ್‌ ಸಿಸ್ಟಂ ಖರೀದಿ ಮಾಡಿದ್ದಾರೆ. ಇವು ಜನರಿಗೆ ಉಪಯೋಗವಾಗಲಿವೆ ಎನ್ನುತ್ತಾರೆ ರೈಮಾನ್ ನದಾಫ್.

ಗಣಪತಿ ಉತ್ಸವದ 15 ದಿನಗಳ ಮೊದಲು ಮಕ್ಕಳು ಕೋಲಾಟ, ನಾಟಕ, ಹಾಡು, ನೃತ್ಯ ಕಲಿಕೆಗೆ ಮುಂದಾಗುತ್ತಾರೆ. ಮೂರ್ತಿ ಪ್ರತಿಷ್ಠಾಪನೆಯ 4ನೇ ದಿನ ಸ್ಟೇಜ್‌ ಹಾಕಿ ಅಲ್ಲಿ ಮಕ್ಕಳಿಂದ ಪ್ರದರ್ಶನ ನಡೆಯುತ್ತದೆ. ಅಲಂಕೃತ ವೇಶಭೂಷಣದಲ್ಲಿ ರಾಮಾಯಣ, ಮಹಾಭಾರತದ ಸನ್ನಿವೇಶಗಳನ್ನು ಹಿಂದೂ-ಮುಸ್ಲಿಂ ಸಮುದಾಯದ ಮಕ್ಕಳು ಪ್ರದರ್ಶನ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು.


ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಮಕ್ಕಳಿಗಾಗಿ ಸ್ಪರ್ಧೆ ಪ್ರತಿ ವರ್ಷ ಏರ್ಪಡಿಸಲಾಗುತ್ತದೆ. ಪ್ರತಿ ವರ್ಷ ಯುವಕರು ಒಂದೇ ತರಹದ ಬಟ್ಟೆ ತೆಗೆದುಕೊಳ್ಳುತ್ತಿದ್ದರು ಆದರೆ ಈ ಬಾರಿ ಓಣಿಯ ಮಹಿಳೆಯರ ಒಂದೇ ತರಹದ ಸೀರೆ ಖರೀದಿಸಿ ಒಗ್ಗಟ್ಟಿನಿಂದ ಆಚರಣೆಗೆ ಮುಂದಾಗಿದ್ದಾರೆ. ದಿನವೂ ಬೆಳಿಗ್ಗೆ ಸಂಜೆ ಎರಡೂ ಹೊತ್ತು ಅಭಷೇಕ ಪೂಜೆ ನಡೆಯುತ್ತದೆ. ಗಣಪತಿ ಉತ್ಸದ ನಾಲ್ಕನೇ ದಿನ ಸಾರ್ವಜನಿಕರಿಗೆ ವಿಶೇಷ ಅನ್ನಸಂತರ್ಪಣೆ ಮಾಡುತ್ತಾರೆ.

ನಾವು ಅಲ್ಲಾಹನೊಂದಿಗೆ ಗಣೇಶನನ್ನು ಆರಾಧನೆ ಮಾಡುತ್ತೇವೆ. ಇದರಿಂದ ನಮ್ಮ ಮನಸ್ಸಿಗೆ ಸಂತಸ ಸಿಕ್ಕಿದೆ. ಸಹೋದರತ್ವ ಭಾವನೆಯಿಂದ ಎಲ್ಲರೂ ಅನೋನ್ಯವಾಗಿದ್ದೇವೆ. ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಹಸನಸಾಬ್‌ ಕೊಪ್ಪಳ, ದಾದುಸಾಬ್‌ ನದಾಫ್‌, ರಾಜಾ ಮುದಗಲ್‌, ಶರಣಪ್ಪ ಕೊಂಡಿ, ಹನಮಂತಪ್ಪ ಜೋಡಗಂಬಳಿ, ಪರಸಪ್ಪ ರಾಠೋಡ ಅಭಿಪ್ರಾಯ ವ್ಯಕ್ತಪಡಿಸಿದರು.

ಸವಾಲಿಗಾಗಿ ನೂರಾರು ಸಂಖ್ಯೆಯಲ್ಲಿ ಸೇರುತ್ತಾರೆ ಜನರು ಪ್ರತಿವರ್ಷ ಇಲ್ಲಿ ನಡೆಯುವ ಗಣಪತಿ ಉತ್ಸವದ ಕೊನೆಯ ದಿನ ಅಂದರೆ 5ನೇ ದಿನದ ಸಂಜೆ ಪೂಜೆಯ ಬಳಿಕ ನಡೆಯುವ ಪೂಜಾ ಸಾಮಗ್ರಿಗಳ ಖರೀದಿಗೆ ನೂರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಚಿಕ್ಕ ವಸ್ತುವಿನಿಂದ ದೊಡ್ಡ ವಸ್ತುವಿನ ವರೆಗೂ ಸವಾಲಿನ ಭರಾಟೆ ನಡೆಯುತ್ತದೆ. ಮಕ್ಕಳ ಪಾಟಿ, ಪಾಟಿ ಚೀಲ (ಬ್ಯಾಗ್) ಎರಡ್ಮೂರು ಸಾವಿರದ ವರೆಗೆ ಹೋಗುತ್ತದೆ. ಅದರಲ್ಲೂ ಬೆಳ್ಳಿ ಸಾಮಗ್ರಿ, ಗಣಪತಿ ಮೂರ್ತಿಯ ಮೇಲಿನ ಆಭರಣಗಳಿಗೆ ಹಾಗೂ ಅಂತರಗಾಯಿಗಳಿಗೆ ಬಹು ಬೇಡಿಕೆ ಇರುತ್ತದೆ. ಗಣಪತಿ ಸವಾಲಿನಲ್ಲಿ ಭಾಗವಹಿಸಿ ಪಡೆದರೆ ಮುಂದಿನ ವರ್ಷದ ವರೆಗೂ ಧನಪ್ರಾಪ್ತಿ ಹಾಗೂ ಅಭಿವೃದ್ದಿ ಹೊಂದುತ್ತೇವೆ ಎನ್ನುವ ನಂಬಿಕೆ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ ಎನ್ನುತ್ತಾರೆ ನಾಗರಾಜ ಇಟಗಿ.

ಗಣೇಶೋತ್ಸವ ಎನ್ನುವುದು ನಮ್ಮೆಲ್ಲರನ್ನು ಒಗ್ಗೂಡಿಸುವ ಹಬ್ಬವಾಗಿದೆ ಸಹೋದರತ್ವ ಹಾಗೂ ಸಹಬಾಳ್ವೆ ಭಾವನೆಯಿಂದ ಪ್ರತಿವರ್ಷ ಆಚರಣೆ ಮಾಡುತ್ತೇವೆ
– ಸದ್ದಾಂ ನಶೇಖಾನ್‌, ಮುಸ್ಲಿಂ ಯುವಕ.

ವರದಿ : ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!