ಪರಿಸರ ಕಲುಷಿತ – ಸಂರಕ್ಷಣೆ ಮಾಡದಿದ್ದರೆ ಮನುಕುಲಕ್ಕೆ ಆಪತ್ತು.
ʼಮಾನವನ ಉಳಿವಿಗೆ ಪರಿಸರ ಅನಿವಾರ್ಯʼನಮ್ಮ ಪರಿಸರ-ನಮ್ಮ ಭವಿಷ್ಯ : ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ
ʼಮಾನವನ ಉಳಿವಿಗೆ ಪರಿಸರ ಅನಿವಾರ್ಯʼನಮ್ಮ ಪರಿಸರ-ನಮ್ಮ ಭವಿಷ್ಯ : ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ
ರೋಣ: ಸತ್ಯ ಮಿಥ್ಯ ( ಜು-08)
‘ಪ್ರಕೃತಿಯ ಮಡಿಲಿನಲ್ಲಿ ಬದುಕುತ್ತಿರುವ ನಾವು, ಪ್ರಕೃತಿಯ ಒಡಲಿಗೆ ಕೈ ಹಾಕುತ್ತಿದ್ದೇವೆ ಆದರೆ ಪ್ರತಿಯೊಬ್ಬರ ಉಳಿವಿಗೆ ಹಾಗೂ ಮುಂದಿನ ಪೀಳಿಗೆಗೆ ಪರಿಸರ ಅನಿವಾರ್ಯ, ಅದಕ್ಕಾಗಿ ಎಲ್ಲರೂ ಪರಿಸರ ಸಂರಕ್ಷಣೆ ಮಾಡಬೇಕಾಗಿದೆʼ ಎಂದು ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ. ವೈ. ಎನ್. ಪಾಪಣ್ಣವರ ಹೇಳಿದರು.
ಪರಿಸರ ದಿನಾಚರಣೆ ಅಂಗವಾಗಿ ರೋಣ ನಗರದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿಇಡಿ) ದಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
‘ಅರಣ್ಯ ಮನುಷ್ಯನಿಗೆ ಬೇಕಾದ ವಸ್ತುಗಳನ್ನು ನೀಡುತ್ತಿದೆ. ಪ್ರಾಣಿ ಪಕ್ಷಿಗಳು ಸೇರಿ ಅನೇಕ ಜೀವರಾಶಿಗಳು ಅರಣ್ಯದಲ್ಲಿ ಜೀವಿಸುವುದರಿಂದ ಪರಿಸರ ರಕ್ಷಣೆ ಮಾಡುವುದು ಬುದ್ದಿವಂತ ಎನಿಸಿಕೊಂಡ ಮಾನವನ ಕರ್ತವ್ಯವಾಗಿದೆ. ಅರಣ್ಯ ಮತ್ತು ಹಸಿರು ಹೊದಿಕೆಯನ್ನು ನಾವು ಉಳಿಸಿಕೊಳ್ಳುವುದರೊಂದಿಗೆ ರಕ್ಷಿಸಬೇಕು. ಅರಣ್ಯವನ್ನು ರಕ್ಷಿಸುವುದರಿಂದ ಕಾಲಕಾಲಕ್ಕೆ ಮಳೆಬೆಳೆ ಸಾಧ್ಯ. ಅರಣ್ಯ ನೀರನ್ನು ಭೂಮಿಯಲ್ಲಿ ಇಂಗಿಸುವುದರಿಂದ ಜಲ ಸಂರಕ್ಷಣೆಗೆ ನೆರವಾಗಲಿದೆʼ ಎಂದರು.
ಪ್ರಾಧ್ಯಾಪಕ ಶರಣು ಎಸ್. ಗೋಧಿ ಮಾತನಾಡಿ, ʼಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಗಿಡಗಳನ್ನು ಕಡಿಯುವ ಮೂಲಕ ಉತ್ತಮ ಪರಿಸರ ಹಾಳು ಮಾಡುತ್ತಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಈಗಾಗಲೇ ಅಲ್ಲಲಿ ಸಂಭವಿಸುತ್ತಿರವ ಪ್ರಕೃತಿಯ ವಿಕೋಪದ ಜತೆಗೆ ಮತ್ತಷ್ಟು ಘೋರ ವಿಕೋಪಗಳನ್ನು ಎದುರಿಸಬೇಕಾಗುತ್ತದೆʼ ಎಂದರು. ʼಈಗಾಗಲೇ ಅಂರ್ತಜಲ ಬತ್ತುತ್ತಿದ್ದರೆ, ಪ್ರವಾಹ ಭೀತಿಗಳು, ಮೊನ್ನೆಯಷ್ಟೇ ಬಿಸಿಗಾಳಿಗೆ ಪಶ್ಚಿಮ ಬಂಗಾಲ, ಉತ್ತರ ಭಾರತ ಸೇರಿದಂತೆ ಹಲವೆಡೆ ಜನ ಪ್ರಾಣ ತೆತ್ತಿದ್ದಾರೆ. ಇದು ಮುನ್ನೆಚ್ಚರಿಕೆಯಷ್ಟೆ, ಪಾಠ ಕಲಿಯದಿದ್ದರೆ ವಿಕೋಪ ಮತ್ತಷ್ಟು ಘೋರವಾಗುತ್ತದೆ. ಪ್ರಕೃತಿ ನಮ್ಮಿಂದ ಏನನ್ನೂ ಬಯಸುವುದಿಲ್ಲ, ನಾವು ಪ್ರಕೃತಿಗೆ ಮಾಡುವ ಸಹಾಯವೆಂದರೆ ಅದನ್ನು ಹಾಳು ಮಾಡದಂತೆ ನೋಡಿಕೊಳ್ಳುವುದು. ಇಂದು ಎಲ್ಲರೂ ಈ ಬಗ್ಗೆ ಯೋಚಿಸುತ್ತಲೇ ಇದ್ದಾರೆ. ಆದರೆ ಸ್ವಯಂ ಜಾಗೃತಿ ಹೆಚ್ಚಾಗಬೇಕಿದೆ. ಅದೇ ನಾವು ಪ್ರಕೃತಿಗೆ ನೀಡುವ ಗೌರವವಾಗಿದೆʼ ಎಂದರು.
ಹಿರಿಯ ಪ್ರಾಧ್ಯಾಪಕ ಎಸ್. ಆರ್. ಐಹೊಳ್ಳಿ ಮಾತನಾಡಿ, ʼಮುಂದಿನ ಪಿಳೀಗೆಗೆ ಒಳ್ಳೆಯ ಬದುಕು ನೀಡುವ ನಿಟ್ಟಿನಲ್ಲಿ ಉತ್ತಮ ಪರಿಸರವನ್ನು ನೀಡುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ ಅವರು, ಈಗ್ಗೆ 30-40 ವರ್ಷಗಳ ಹಿಂದೆ ಬಾವಿ ತೋಡಿದರೆ ನೀರು ಬರುತ್ತಿತ್ತು, ಈಗ 1500 ಅಡಿ ಬೋರ್ ಕೊರೆದು ನೀರು ಬಂದರೆ ಇಡೀ ಊರಿಗೆ ಹೇಳಿಕೊಂಡು ಬರುವವಂಥ ಸ್ಥಿತಿ ಇದೆʼ ಎಂದರು. ʼಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅತಿ ಹೆಚ್ಚು ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳುತ್ತಿರುವು ದರಿಂದ ಪ್ರಕೃತಿ ಆಗಿಂದಾಗ್ಗೆ ಕೋಪಗೊಳ್ಳುತ್ತಿರುವುದನ್ನು ಇತ್ತೀಚಿನ ಕೆಲ ಘಟನೆಗಳಿಂದ ನಾವು ಅರ್ಥ ಮಾಡಿ ಕೊಳ್ಳಬೇಕಾಗುತ್ತದೆ. ಪರಿಸರಕ್ಕಿಂತ ಮನುಷ್ಯ ಜಾಣನಲ್ಲ ಎಂಬುದು ಈಗಾಗಲೇ ಹಲವಾರು ಬಾರಿ ರುಜುವಾತಾಗಿ ದ್ದರೂ ಮನುಷ್ಯ ಮಾತ್ರ ತಾನೇ ಬುದ್ದಿವಂತ, ಶಕ್ತಿವಂತ ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲಿ ಪರಿಸರವನ್ನು ಮತ್ತಷ್ಟು ಹಾಳು ಮಾಡುತ್ತಿದ್ದಾನೆʼ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪ್ರಶಿಕ್ಷಣಾರ್ಥಿಗಳು ಉಪನ್ಯಾಸಕರಿಗೆ ಸಸಿಗಳನ್ನು ಉಡುಗೊರೆಯಾಗಿ ನೀಡಿದರು. ಈ ವೇಳೆ ಎನ್ಎಸ್‌ಎಸ್ ಘಟಕದ ಮುಖ್ಯಸ್ಥ ಎಚ್. ಆರ್. ದೊಡ್ಡಮನಿ, ಜಿ. ಎನ್. ನಾಯಕ, ಜಿ. ಎ. ವೀರಾಪುರ, ಮೀನಾಕ್ಷಿ ಮಲ್ಲಯ್ಯ ಗುಂಡಗೋಪುರಮಠ, ಗ್ರಂಥಪಾಲಕ ಎಸ್. ಎಸ್. ಗೌಡರ, ಕಾಲೇಜಿನ ವಿದ್ಯಾರ್ಥಿ ಬಳಗದ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಪಾಲತಿ, ಶ್ವೇತಾ ಬಾಗೇವಾಡಿ ಇದ್ದರು. ಸವಿತಾ ಪೂಜಾರ ನಿರೂಪಿಸಿದರು.
ವರದಿ : ಸಿಎಂ.