ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮ – ಅವ್ಯವಸ್ಥೆಗೆ ಆಕ್ರೋಶ, ಪರಿಹಾರ ಕಾಣದ ಸಮಸ್ಯೆಗಳು !
ಗಜೇಂದ್ರಗಡ ಪುರಸಭೆಯಲ್ಲಿ ಕಳೆದ ಸಲ ಸಲ್ಲಿಸಿದ ಮನವಿಗಳೇ ಪುನರಾವರ್ತನೆ - ನಾಮಕಾವಸ್ಥೆಯಾಗುತ್ತದೆಯೇ ಜಿಲ್ಲಾಧಿಕಾರಿ ಸ್ಪಂದನೆ ಕಾರ್ಯಕ್ರಮ.
ಗಜೇಂದ್ರಗಡ : ಸತ್ಯ ಮಿಥ್ಯ ( ಜೂ -22).
ಗಜೇಂದ್ರಗಡ ತಾಲೂಕಾಡಳಿತ ವತಿಯಿಂದ ಪಟ್ಟಣದ ತಿರುಪತಿ ತಿರುಮಲ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜೂನ್ 21ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾದ ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟು 142 ಅರ್ಜಿಗಳನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಆಡಳಿತದ ಬಗ್ಗೆ ಆಕ್ಷೇಪ : ಗಜೇಂದ್ರಗಡ ಪುರಸಭೆಯ ಜನಪ್ರತಿನಿಧಿಗಳು. ನಗರದಲ್ಲಿ ಪುರಸಭೆ ಆಡಳಿತ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗಠಾರಗಳು ಹೊಲಸು ತುಂಬಿ ಗಬ್ಬೆದ್ದು ನಾರುತ್ತಿವೆ, ಬೀದಿ ದೀಪ ಬಂದಾಗಿ ಮೂರು ನಾಲ್ಕು ತಿಂಗಳು ಗತಿಸಿದರು ಸರಿಯಾಗಿ ನಿರ್ವಹಣೆ ಇಲ್ಲಾ, ಅನವಶ್ಯಕ ಕೆಲಸಗಳಿಗೆ ಹಣ ಕೊಟ್ಟು ಪ್ರಮುಖ ಸಮಸ್ಯೆಗಳಿಗೆ ಅನುದಾನ ಕೊರತೆ ಎನ್ನುತ್ತಿದ್ದಾರೆ, ಕಂದಾಯ ಇಲಾಖೆಯಲ್ಲಿ ಪಾವತಿ ರಹಿತ ಖಾತಾ ಬದಲಾವಣೆಗಳನ್ನು ಮಾಡುತ್ತಿದ್ದು. ಮಧ್ಯವರ್ತಿಗಳ ಮಾತಿಗೆ ಒತ್ತು ಕೊಟ್ಟು ಕೆಲಸ ಮಾಡುವ ಸಿಬ್ಬಂದಿ ಜನಪ್ರತಿನಿದಿಗಳ ಮಾತೆ ಕೇಳುವುದಿಲ್ಲ. ಜಿಲ್ಲಾಧಿಕಾರಿಗಳ ಜನಸ್ಪಂದನೆ ಕಾರ್ಯಕ್ರಮಕ್ಕೂ ನಮಗೆ ಆಹ್ವಾನಿಸಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
- ಅನೇಕ ಫಲನುಭವಿಗಳಿಗೆ ಹಕ್ಕುಪತ್ರ ವಿತರಿಸಲು ರಾಜೀವ ಗಾಂಧಿ ವಸತಿ ನಿಗಮ ನಿಯಮಿತ ಬೆಂಗಳೂರು ಇವರು ಆದೇಶಿಸಿದರು ಆದೇಶ ಪಾಲನೆಯಾಗುತ್ತಿಲ್ಲ ಎಂದು ಮನವಿ ಸಲ್ಲಿಸಿದರು.
- ಕಳೆದ ಬಾರಿಯು ಮನವಿ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ಅನಿಲ ಕರ್ಣೀ ಈ ಬಾರಿಯೂ. ತಾಲೂಕಾಡಳಿತ ಕೇಂದ್ರ ನಿರ್ಮಾಣ, ನ್ಯಾಯಾಲಯ, ಹೋಬಳಿ ರಚನೆ, ತಾಲೂಕಾ ಕ್ರೀಡಾಂಗಣ ಅನೇಕ ವಿಚಾರಧಾರೆಯನ್ನು ಮನವಿಯಲ್ಲಿ ಉಲ್ಲೆಖಿಸಿ ಜಿಲ್ಲಾಧಿಕಾರಿ ಗಮನಕ್ಕೆ ತಂದರು.
- 135 ವರ್ಷ ಹಳೆಯದಾದ ಬಾಲಕಿಯರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 565 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು. ಈ ಶಾಲೆಗೆ ಶೌಚಾಲಯ, ಡೆಸ್ಕ್, ಕಂಪ್ಯೂಟರ್ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ್ ಮನವಿ ಸಲ್ಲಿಸಿದರು.
- ಪುರ್ತಗೇರಿ ಸೈನಿಕ ನಗರದಿಂದ ನೇರವಾಗಿ ಮುಖ್ಯ ರಸ್ತೆ ಗಜೇಂದ್ರಗಡ – ರೋಣ ಹೆದ್ದಾರಿಗೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಬೇಕು. ಈ ನಡುವೆ ಮಳೆಗಾಲದಲ್ಲಿ ದೊಡ್ಡ ಪ್ರಮಾಣದ ನೀರು ಬರುವುದರಿಂದ ಕಚ್ಚಾ ರಸ್ತೆಯಲ್ಲಿ ಸಂಚಾರ ಮಾಡುವುದು ತೊಂದರೆದಾಯಕವಾಗಿದೆ ಮತ್ತು ನಮ್ಮ ನಗರ ಮೂಲಭೂತ ಸಮಸ್ಯೆಗಳಿಂದ ವಂಚಿತವಾಗಿದೆ ಕೂಡಲೇ ಗಮನಹರಿಸಿ ಸಮಸ್ಯೆಗೆ ಪರಿಹಾರ ವದಗಿಸಲು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದಮನವಿ ಸಲ್ಲಿಸಲಾಯಿತು.
- ಬಾಬು ಜಗಜೀವನರಾಂ ಸಮುದಾಯ ಭವನ ಹತ್ತಿರವಿರುವ ಕೊರದಾನ್ಯಮಠ ಮತ್ತು ಕಲ್ಮಟರವರ ಪ್ಲಾಟಗಳಿಗೆ ಸರಿಯಾದ ರಸ್ತೆ, ಚರಂಡಿ ಮೂಲಭೂತ ಸೌಕರ್ಯಗಳಿಲ್ಲದೆ ತೊಂದರೆಯಾಗಿದೆ ಸಮಸ್ಯೆ ಪರಿಹರಿಸಲು ಕೋರಲಾಯಿತು.
- ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ಸೂಕ್ತ ಮಾರುಕಟ್ಟೆ ಒದಗಿಸಲು ಬೇಡಿಕೆ ಇಡಲಾಯಿತು.
- ಕಾಲಕಾಲೇಶ್ವರ ಹತ್ತಿರವಿರುವ ರಾಣಿ ಚನ್ನಮ್ಮ ಶಾಲೆಗೆ ಈಗಾಗಲೇ ಇರುವ ಕಚ್ಚಾ ರಸ್ತೆಯನ್ನು ಸರ್ಕಾರಿ ರಸ್ತೆಯಾಗಿ ಪರಿವರ್ತಿಸಬೇಕು ಮತ್ತು ಶಾಲೆಗೆ 24×7 ಕುಡಿಯುವ ನೀರಿನ ವ್ಯವಸ್ಥೆ ಮಾಡಲು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಎಚ್. ಎಸ್. ಸೋಂಪುರ ಮನವಿ ಸಲ್ಲಿಸಿದರು.
- ಪಟ್ಟಣದ 23ನೇ ವಾರ್ಡಿನ ಉಣಚಗೇರಿಯಲ್ಲಿರುವ ಕೋಳಿ ಫಾರಂ ತೆರವಿಗೆ, ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಜೈ ಭೀಮ್ ಸಂಘದವರು ಕೋರಿಕೊಂಡರು.
- ಇಷ್ಟೇ ಅಲ್ಲದೆ ಜಮೀನು ಒತ್ತುವರಿ, 2ಎ ಮೀಸಲಾತಿ,ಆಕ್ರಮ ಸಾಗುವಳಿ ಶಾಲೆಗಳಿಗೆ ಮೂಲಭೂತ ಸೌಕರ್ಯ, ಶೌಚಾಲಯ ಇರಿಸುವುದು ಹೀಗೆ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮನವಿ ಕೊಡಲಾಯಿತು.
- ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಭೀಮಣ್ಣ ಇಂಗಳೇ ನೇತೃತ್ವದಲ್ಲಿ ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು.
ತಾಲೂಕಾ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮೈಕ್ ವ್ಯವಸ್ಥೆ ಸರಿಯಾಗಿರದ ಕಾರಣ ಸಂಪೂರ್ಣ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು.ಅರ್ಜಿದಾರ ಎನ್ ಹೇಳಿದರು ಸಮಸ್ಯೆಗೆ ಎನ್ ಪರಿಹಾರ ಸೂಚಿಸಿದರು ಎಂಬುದೇ ತಿಳಿಯದ ಸ್ಥಿತಿ ನಿರ್ಮಾಣವಾಯಿತು. ಸರಿಯಾಗಿ ಮೈಕ್ ವ್ಯವಸ್ಥೆ ಇಲ್ಲದ್ದರಿಂದ ಭ್ರಷ್ಟ ಅಧಿಕಾರಿಗಳ ಮಾನವನ್ನು ಕಾಪಾಡಿದ ಕೀರ್ತಿ ಆಯೋಜಕರದ್ದಾಗಿತ್ತು ಎಂದು ಮಾತುಗಳು ಕೇಳಿಬಂದವು.
“ಕಳೆದ ಕೆಲವು ದಿನಗಳ ಹಿಂದೆ ಈಗಿರುವ ವೈಶಾಲಿ. ಎಂ. ಎಲ್ ಅವರೇ ಸಮಸ್ಯೆ ಆಲಿಸಲು ಗಜೇಂದ್ರಗಡ ಪುರಸಭೆಯಲ್ಲಿ ಜನ ಸ್ಪಂದನೆ ಕಾರ್ಯಕ್ರಮ ಮಾಡಿದ್ದರು. ಅಲ್ಲಿ ಸಲ್ಲಿಸಲಾದ ಅನೇಕ ಮನವಿ ಪತ್ರಗಳು ಇಲ್ಲಿಯೂ ಶುಕ್ರವಾರದಂದು ಸಲ್ಲಿಸಲಾಯಿತು. ಅದರಿಂದ ನಾಮಕಾವಸ್ಥೆ ಜಿಲ್ಲಾಧಿಕಾರಿಗಳು ಮನವಿ ತೆಗೆದುಕೊಳ್ಳುತ್ತಾರೆ ಪರಿಹಾರ ಮಾತ್ರ ಶೂನ್ಯ ಎನ್ನುವಂತಾಗಿದೆ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸುವದು ಸಾಮಾನ್ಯವಾಗಿತ್ತು”
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಭರತ್. ಎಸ್.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡರ,ತಹಶಿಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ, ಸಿಪಿಐ ಎಸ್.ಎಸ್. ಬೀಳಗಿ ಬಿಇಒ ರುದ್ರಪ್ಪ ಉರುಳಿ ಕೃಷಿ ಅಧಿಕಾರಿ ರವೀಂದ್ರ ಗೌಡ ಪಾಟೀಲ್ ತಾಲೂಕ ಮಠದ ಅಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ.ಚನ್ನು.ಎಸ್.