ಕಾಲುವೆಗಳ ಸಿಲ್ಟ್ ಜಂಗಲ್ ತೆರವಿಗೆ ಕೂಡಲೇ ಕ್ಲೋಸರ್ ಕಾಮಗಾರಿ ಕೈಗೊಳ್ಳಲು ರೈತರ ಒತ್ತಾಯ.
ಕೆಬಿಜೆಎನ್‌ಎಲ್ ಮುಖ್ಯ ಇಂಜನೀಯರ ವಲಯ ಕಚೇರಿ ಮುಂದೆ ಧರಣಿ.
ಕಾಲುವೆಗಳ ಸಿಲ್ಟ್ ಜಂಗಲ್ ತೆರವಿಗೆ ಕೂಡಲೇ ಕ್ಲೋಸರ್ ಕಾಮಗಾರಿ ಕೈಗೊಳ್ಳಲು ರೈತರ ಒತ್ತಾಯ.
ಅಚ್ಚುಕಟ್ಟು ಭಾಗದ ಜಮೀನುಗಳಿಗೆ ಸಮರ್ಪಕ ನೀರೊದಗಿಸಲು ರೈತರ ಆಗ್ರಹ.
ನಾರಾಯಣಪುರ:ಸತ್ಯಮಿಥ್ಯ ( ಜೂ -26)
ಇಲ್ಲಿನ ಕೆಬಿಜೆಎನ್‌ಎಲ್ ಮುಖ್ಯ ಇಂಜನೀಯರ ವಲಯ ಕಚೇರಿ ಮುಂದೆ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಧರಣಿ ನಡೆಸಿ, ವಿವಿಧ ಬೇಡಿಕೆಗಳು ಈಡೇರಿಸುವಂತೆ ಸಿಇ ಆರ್.ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತ ಸಂಘದ ಸುರಪುರ ಘಟಕ ಅಧ್ಯಕ್ಷ ಹಣಮಂತರಾಯ ಚಂದ್ಲಾಪುರ ಮಾತನಾಡಿ, ಕಳೆದ ವರ್ಷ ಬರಗಾಲ ಹಿನ್ನೆಲೆ ರೈತರೂ ಸಂಕಷ್ಟ ಅನುಭವಿಸಿ ಬೆಳೆ ಬೆಳೆದಿಲ್ಲಾ, ಸದ್ಯ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಉಪ-ಕಾಲುವೆಗಳು, ವಿತರಣಾ ಕಾಲುವೆಗಳಲ್ಲಿ ಮಣ್ಣಿನ ಹೂಳು, ಕಸದ ತ್ಯಾಜ್ಯದ ರಾಶಿ ಇದ್ದು ಕೂಡಲೇ ಅವುಗಳನ್ನು ತೆರವುಗೊಳಿಸುವ ಕ್ಲೋಸರ್ ಕಾಮಗಾರಿಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಅಂದಾಗ ಮಾತ್ರ ಕಾಲುವೆಯ ಕೊನೆ ಭಾಗದ ರೈತರ ಜಮೀನಿಗೆ ನೀರು ತಲುಪಲಿದೆ ಎಂದು ಹೇಳಿದರು.
ಇನ್ನೋರ್ವ ರೈತ ಸಂಘದ ಹುಣಸಗಿ ಘಟಕ ಅಧ್ಯಕ್ಷ ಹನುಮಗೌಡ ಪೊಲಿಸ್‌ಪಾಟೀಲ್ ಮಾತನಾಡಿ ನೀರಾವರಿ ಯೋಜನೆಗೆ ಅಗತ್ಯವಿರುವಷ್ಟು ವರ್ಕಇನ್‌ಸ್ಪೆಕ್ಟರ ನೇಮಕ ಮಾಡಬೇಕು, ಜಂಗಿನಗಡ್ಡಿ, ಮೇಲಿನಗಡ್ಡಿ, ರೈತರ ಜಮೀನುಗಳಿಗೆ ಹೊಸ ಕಾಲುವೆಯ ನಿರ್ಮಿಸುವ ಮೂಲಕ ನೀರು ಹರಿಸಲು ಕ್ರಮವಹಿಸಬೇಕು, ಬೋನಾಳ ಏತ ನೀರಾವರಿ ಯೋಜನೆಯ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಿ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರೊದಿಗಿಸಬೇಕು, ಬೋನಾಳ ಏತ ನೀರಾವರಿ ಕಚೇರಿ ಸುರಪುರಕ್ಕೆ ವರ್ಗಾಯಿಸಬೇಕು, ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅನುಭವವಿರುವ ರೈತ ಪ್ರತಿನಿಧಿಯನ್ನು ಆಹ್ವಾನಿಸಬೇಕು ಎಂದು ಒತ್ತಾಯಿಸಿದ ಅವರು ರೈತರ ಬೇಡಿಕೆಗಳು ಈಡೇರದೆ ಇದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವದಾಗಿ ಹೇಳಿದರು.
ಮನವಿ ಸ್ವೀಕರಿಸಿದ ಸಿಇ ಆರ್.ಮಂಜುನಾಥ ಮನವಿಯಲ್ಲಿನ ಬೇಡಿಕೆಗಳ ಕುರಿತು ಮೇಲಾಧಿಕಾರಿಗಳಿಗೆ, ಸರ್ಕಾರದ ಗಮನಕ್ಕೆ ತರಲಾಗುವದು ಎಂದು ಭರವಸೆ ನೀಡಿದರು.
ಪ್ರತಿಭಟನೆಗೂ ಮುನ್ನ ಇಲ್ಲಿನ ಮಹರ್ಷಿ ವಾಲ್ಮೀಕಿ ವೃತ್ತದಿಂದ ರೈತ ಸಂಘದವರು ಸಿಇ ಕಚೇರಿವರೆಗೆ ಪ್ರತಿಭಟನಾ ಮೆರವಣಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಅಧೀಕ್ಷಕ ಅಭಿಯಂತರ ರಮೇಶ ಪವಾರ್, ರೈತ ಸಂಘದ ಮುಖಂಡರುಗಳಾದ ಸಾಹೇಬಗೌಡ ಮದಲಿಂಗನಾಳ, ಗದ್ದೆಪ್ಪ ನಾಗಬೇನಾಳ, ತಿಪ್ಪಣ್ಣ ಜಂಪಾ, ನಿಂಗನಗೌಡ ಗುಳಬಾಳ, ಅವಿನಾಶ ನಾಯಕ, ಮಲ್ಲಣ್ಣ, ನಾಗನಗೌಡ, ಮಹಬೂಬ ಅಂಗಡಿ, ಸಿದ್ದಪ್ಪ ಕ್ಯಾದಗಿ, ಬಾಗಪ್ಪ, ಅಮರೇಶ ಕಾಮನಕೇರಿ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು, ಕೆಬಿಜೆಎನ್‌ಎಲ್ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳೀಯ ಪೊಲೀಸ್ ಠಾಣೆ ಪಿಎಸೈ ಇಂದುಮತಿ ಪಾಟೀಲ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ವರದಿ : ಶಿವು ರಾಠೋಡ