ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಕೇಸ್ – ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ.
ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ದ್ಯಾಂಪುರ ಗ್ರಾಮದಲ್ಲಿ ನಡೆದ ಘಟನೆ.

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಕೇಸ್ – ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ.
ಕೊಪ್ಪಳ- ಸತ್ಯಮಿಥ್ಯ (ಜುಲೈ 01).
ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ರೂ. 30,000 ಗಳ ದಂಡವಿಧಿಸಿ ಕೊಪ್ಪಳ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೊ)ದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಆದೇಶಿಸಿದ್ದಾರೆ.
ಕುಕನೂರ ತಾಲೂಕಿನ ದ್ಯಾಂಪುರ ಗ್ರಾಮದಲ್ಲಿ ನಿರ್ಮಾಣವಾಗುತ್ತಿದ್ದ ಮನೆ ಕೂಲಿ ಕೆಲಸಕ್ಕೆಂದು ತನ್ನಕುಟುಂಬದೊಂದಿಗೆ ಬಂದ ಬಾಧಿತಳಿಗೆ ಆರೋಪಿತನು ಪರಿಚಯ ಮಾಡಿಕೊಂಡು ಸಲುಗೆಯಿಂದ ಮಾತನಾಡಿಸುತ್ತ ಪ್ರೀತಿಸುವುದಾಗಿ ಹೇಳಿದ್ದು. ಪ್ರೀತಿಸದಿದ್ದರೆ ನಿನಗೆ ಸಾಯಿಸಿ ನಾನು ಸಾಯುವುದಾಗಿ ಹೆದರಿಕೆ ಹಾಕಿರುತ್ತಾನೆ. ನಿರ್ಮಾಣ ಹಂತದಲ್ಲಿರುವ ಮನೆಯ ಹತ್ತಿರದಲ್ಲಿ ಕೂಲಿ ಕಾರ್ಮಿಕರಿಗೆ ವಾಸಿಸಲು ಹಾಕಿದ್ದ ಶೆಡ್ಡಿನಲ್ಲಿ ಆರೋಪಿತನು ವಾಸವಾಗಿದ್ದು ಬಾಧಿತಳು ಅಪ್ರಾಪ್ತಳು ಎಂದು ಗೊತ್ತಿದ್ದರೂ 2019ರ ಮೇ 04ರಂದು ಯಾರೂ ಇಲ್ಲದ ಸಮಯದಲ್ಲಿ ಬಾಧಿತಳಿಗೆ ಬಲವಂತವಾಗಿ ಶೆಡ್ಡಿನಲ್ಲಿ ಕರೆದುಕೊಂಡು ಹೋಗಿ ಹೆದರಿಸಿ ಮೊದಲ ಬಾರಿ ಅತ್ಯಾಚಾರ ಮಾಡಿರುತ್ತಾನೆ.
ನಂತರ ಸಮಯ ಸಿಕ್ಕಾಗಲೆಲ್ಲ ತನ್ನ ಶೆಡ್ ಹಾಗೂ ನಿರ್ಮಾಣ ಹಂತದಲ್ಲಿರುವ ಮನೆಯ ರೂಮಿನಲ್ಲಿ 4 ರಿಂದ 5 ಸಲ ಬಲಾತ್ಕಾರ ಮಾಡಿರುತ್ತಾನೆ. ನಿರ್ಮಾಣ ಹಂತದಲ್ಲಿರುವ ಮನೆಯ ಕೆಲಸ ಮುಗಿಯುತ್ತಿದ್ದಂತೆ ಬಾಧಿತಳು ತಮ್ಮ ಗ್ರಾಮಕ್ಕೆ ಹೋಗುತ್ತಾಳೆಂಬ ವಿಷಯ ಗೊತ್ತಾಗಿ ಆರೋಪಿತನು ಬಾಧಿತಳಿಗೆ ಅಪಹರಣ ಮಾಡಿಕೊಂಡು ಹೋಗುವ ಉದ್ದೇಶದಿಂದ 2019ರ ಜೂನ್ 02ರಂದು ಬೆಳಿಗ್ಗೆ ಬಾಧಿತಳು ತನ್ನ ಕುಟುಂಬ ಹಾಗೂ ಇನ್ನೊಂದು ಕುಟುಂಬದವರು ಸೇರಿ ಇಟಗಿ ದೇವಸ್ಥಾನ ನೋಡಿ ವಾಪಸು ಕುಕನೂರಿಗೆ ಬಂದಾಗ ಬಸ್ ನಿಲ್ದಾಣದಲ್ಲಿ ಬಾಧಿತಳ ತಾಯಿ ಬಸ್ ಕಂಡಕ್ಟರ ಹತ್ತಿರ ಚಿಲ್ಲರೆ ಇಸಿದುಕೊಳ್ಳುತ್ತಿದ್ದಾಗ ಆರೋಪಿತನು ಬಾಧಿತಳಿಗೆ ಅಪಹರಿಸಿಕೊಂಡು ಮಹಾರಾಷ್ಟ್ರದ ಸತಾರ ನಗರಕ್ಕೆ ಹೋಗಿ ಅಲ್ಲಿ ತನ್ನ ಗೆಳೆಯನು ಕೊಡಿಸಿದ ರೂಮಿನಲ್ಲಿ ಸುಮಾರು 20 ದಿನಗಳವರೆಗೆ ವಾಸವಾಗಿದ್ದು, ಆ ದಿನಗಳಲ್ಲಿ ಸಮಯ ಸಿಕ್ಕಾಗಲೆಲ್ಲ ಬಾಧಿತಳ ಮೇಲೆ ಬಲಾತ್ಕಾರ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕುಕನೂರು ಪೋಲಿಸರು ದೂರು ಸ್ವೀಕರಿಸಿದ್ದು, ಯಲಬುರ್ಗಾ ಗ್ರಾಮೀಣ ವೃತ್ತದ ಸಿಪಿಐ ರಮೇಶ ರೊಟ್ಟಿ ಅವರು ಈ ಪ್ರಕರಣದ ತನಿಖೆಯನ್ನು ನಿರ್ವಹಿಸಿ ಆರೋಪಿತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವು ಸ್ಪೇ.ಎಸ್‌ಸಿ(ಪೋಕ್ಸೊ) ಸಂ:31/2019ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಆರೋಪಿ ಶಫಿಕ ಭೀರಸಾಬ ಮೇಲ್ಗಡೆ ಸಾ: ಮಾಟಲದಿನ್ನಿ ಇತನ ಮೇಲಿನ ಆರೋಪಣೆಗಳು ಸಾಭೀತಾಗಿವೆ ಎಂದು 10 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 30,000 ಗಳ ದಂಡವನ್ನು ಭರಿಸುವಂತೆ ಮತ್ತು ದಂಡದ ಮೊತ್ತದಲ್ಲಿ ರೂ. 10,000 ಗಳನ್ನು ಬಾಧಿತಳಿಗೆ ಪರಿಹಾರ ರೂಪದಲ್ಲಿ ನೀಡವಂತೆ ಆದೇಶಿಸಿ, ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ (ಪೋಕ್ಸೊ) ಕುಮಾರ ಡಿ.ಕೆ ಅವರು 2024ರ ಜೂನ್ 24ರಂದು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಈ ಪ್ರಕರಣ ನಡೆಸಿ ವಾದ ಮಂಡಿಸಿದ್ದರು ಎಂದು ವಿಶೇಷ ಸರ್ಕಾರಿ ಅಭಿಯೋಜನಕರ ಕಚೇರಿ ಪ್ರಕಟಣೆ ತಿಳಿಸಿದೆ.
ವರದಿ : ಚನ್ನು. ಎಸ್.