ಸರಕಾರ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ವೇತನ ನೀಡಲಿ : ನಾಗಲಕ್ಷ್ಮಿ
ಯಲಬುರ್ಗಾ : ಸತ್ಯಮಿಥ್ಯ ( ಜುಲೈ -21)
ರಾಜ್ಯಾದ್ಯಂತ ನಮ್ಮ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯೊಂದಿಗೆ ಸತತ 15 ವರ್ಷಗಳಿಂದ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸುತ್ತಾ ಬಂದಿದ್ದು ಸರಕಾರ ನಮಗೆ ಸೂಕ್ತ ವೇತನ ನೀಡಲು ಮುಂದಾಗಬೇಕು ಎಂದು ಕಾಮ್ರೆಡ್ ನ ರಾಜ್ಯ ಸಮಿತಿಯ ಆಶಾ ಕಾರ್ಯಕರ್ತೆಯರ ಕಾರ್ಯದರ್ಶಿ ನಾಗಲಕ್ಷ್ಮಿ ಹೇಳಿದರು.
ಯಲಬುರ್ಗಾ ಪಟ್ಟಣದ ಸಮುದಾಯ ಭವನದಲ್ಲಿ ಹಮ್ಮಿಕೊಂಡ ತಾಲೂಕಾ ಮಟ್ಟದ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನದಲ್ಲಿ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಇಂದಿನ ದುಬಾರಿ ಕಾಲದಲ್ಲಿ ಸರಕಾರ ನಮಗೆ ನೀಡುತ್ತಿರುವ ವೇತನ ಮಕ್ಕಳ ವ್ಯಾಸಾಂಗಕ್ಕೂ ಸಾಲುತ್ತಿಲ್ಲಾ, ಕುಟುಂಬ ನಿರ್ವಹಣೆಗೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಈ ಕುರಿತು ಹಲವಾರು ಬಾರಿ ಸರಕಾರದ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದರು.
ಇತ್ತೀಚಿಗೆ ಆಶಾ ಕಾರ್ಯಕರ್ತರ ಮೇಲೆ ಹಲ್ಲೆಯಂತಹ ಪ್ರಕರಣಗಳು ನಡೆಯುತ್ತಿದ್ದು ನಮಗೆ ಸೂಕ್ತ ಭದ್ರತೆ ಒದಗಿಸಬೇಕು, ನಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು, ನಮಗೆ ಶಾಸನ ಬದ್ದ ಹಕ್ಕನ್ನು ನೀಡುವುದರ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಬಜೇಟ್ ನೀಡಬೇಕು ಎಂದು ಆಗ್ರಹಿಸಿದರು.
ನಂತರದಲ್ಲಿ ಕೊಪ್ಪಳ ಜಿಲ್ಲಾ ಕಾಮ್ರೆಡ್ ಜಿಲ್ಲಾಧ್ಯಕ್ಷ ಶರಣು ಗಡ್ಡಿ ಮಾತನಾಡಿ ಆಶಾ ಕಾರ್ಯಕರ್ತೆಯರ ಆರೋಗ್ಯ ಇಲಾಖೆಯ ಒಂದು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಕರೋನ ಸಂದರ್ಭದಲ್ಲಿ ಕಡಿಮೆ ಸಂಬಳದೊಂದಿಗೆ ತಮ್ಮ ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಿಸಿದ್ಧಾರೆ, ಸರಕಾರ ಮಹಿಳೆಯರು ಪರ ಎಂದು ಕೇವಲ ಹೇಳಿಕೆ ನೀಡುತ್ತಿದೆ ವಿನಃ ಮಹಿಳೆಯರ ದುಡಿಮೆಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಆಶಾ ಕಾರ್ಯಕರ್ತೆಯರ ಬದುಕು ಕಟ್ಟಿಕೊಳ್ಳಲು ಸರಕಾರ ಅವರಿಗೆ ಸೂಕ್ತ ವೇತನ ನೀಡಬೇಕು ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ನಂತರದಲ್ಲಿ ಈ ಹಿಂದೆ 15 ವರ್ಷಗಳ ಸೇವಾವಧಿಯಲ್ಲಿ ಮೃತರಾದ ಆಶಾ ಕಾರ್ಯಕರ್ತೆಯರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ಕೌಸಲ್ಯ, ಕೊಪ್ಪಳ ತಾಲೂಕ ಗೌರವಾಧ್ಯಕ್ಷೆ ಗಿರಿಜಾ, ಕೊಪ್ಪಳ ತಾಲೂಕು ಅಧ್ಯಕ್ಷೆ ಸುನಿತಾ, ಆಶಾ ಸುಗಮಕಾರರಾದ ಶೋಭಾ ಹೂಗಾರ, ದೀಪಾ, ಶಿವಮ್ಮ, ಅನ್ನಪೂರ್ಣ, ಶಾರದಾ, ಶಬನಾ ಇನ್ನೀತರ ಕಾರ್ಯಕರ್ತೆಯರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ