
ಬಿಡಾಡಿ ದನಗಳ ಹಾವಳಿ: ಸಾರ್ವಜನಿಕರಿಗೆ ತೊಂದರೆ – ಕ್ರಮ ಕೈಗೊಳ್ಳದ ಪುರಸಭೆ ಅಧಿಕಾರಿಗಳು.

ಗಜೇಂದ್ರಗಡ – ಸತ್ಯಮಿಥ್ಯ ( ಜುಲೈ -30)
ನಗರದಲ್ಲಿ ದಿನನಿತ್ಯ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಿದ್ದು ಅವುಗಳಿಗೆ ಕಡಿವಾಣ ಹಾಕುವ ಕೆಲಸ ಮಾತ್ರ ಪುರಸಭೆ ಅಧಿಕಾರಿಗಳಿಂದ ಆಗುತ್ತಿಲ್ಲವೆಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪುರಸಭೆ ಆಡಳಿತಾಧಿಕಾರಿಗಳು ಕೆಲವು ದಿನಗಳ ಹಿಂದೆ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಮೂಲಕ ಸುದ್ದಿಯಾಗಿದ್ದರು. ಈಗ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಇಂದು ಕುಷ್ಟಗಿ ರಸ್ತೆಯ ರಾಯಬಾಗಿ ಪೆಟ್ರೋಲ್ ಬಂಕ್ ಹತ್ತಿರ ಇಪ್ಪತ್ತಕ್ಕೂ ಹೆಚ್ಚು ದನಗಳು ರಸ್ತೆ ಸಂಚಾರಕ್ಕೆ ಅಡಚಣೆ ಮಾಡಿದ್ದಲ್ಲದೆ. ಎರಡು ಗೂಳಿಗಳ ಗುದ್ದಾಟದಲ್ಲಿ ತೊಡಗಿಕೊಂಡಿದ್ದವು. ಪೆಟ್ರೋಲ್ ಬಂಕಿನ ಮೀಟರ್ ಪೆಟ್ಟಿಗೆಗೆ ತಾಗಿಕೊಂಡೆ ಹಾಡಾಡಿಕೊಂಡು ಹೋದವು ಆಗುವ ಅನಾಹುತ ಸ್ವಲ್ಪದರಲ್ಲಿಯೇ ತಪ್ಪಿತು ಎನ್ನಬಹುದು.
ಕಳೆದ ಫೆಬ್ರುವರಿ 19 ರಂದು ನಡೆದ ಶಿವಾಜಿ ಜಯಂತಿಯ ಮೆರವಣಿಗೆ ಸಂದರ್ಭದಲ್ಲಿ ಇಂತಹ ಬಿಡಾಡಿ ದನಗಳ ಹಾವಳಿಯಿಂದ ಕೆಲವರಿಗೆ ಗಾಯಗಳಾಗಿದ್ದವು. ಅದಾದ ನಂತರ ದಿನ ನಿತ್ಯ ಸಂತೆ ಬಜಾರ್, ಡಬಲ್ ರೋಡ, ಕೊಳ್ಳಿಯವರ ಕತ್ರಿ ಹೀಗೆ ಜನನಿಬಿಡ ಪ್ರದೇಶಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ.ಮದವೇರಿದ ದನಗಳ ಗುದ್ದಾಟಕ್ಕೆ ಅನೇಕರಿಗೆ ಗಾಯ,ಆಟೋ ರಿಕ್ಷಾ, ಬೈಕ್, ಕಾರುಗಳು ಜಖಂಗಳಾಗಿವೆ.
ಈ ಕುರಿತು ಕ್ರಮ ಕೈಗೊಳ್ಳಬೇಕಾದ ಪುರಸಭೆ ಮುಖ್ಯಾಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದು ಯಾರ ಉದ್ದಾರಕ್ಕೊ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಬಿಡಾಡಿ ದನಗಳ ಹಾವಳಿ ಹೆಚ್ಚಾಗಿರುವುದರಿಂದ ಅವುಗಳನ್ನು ಹಿಡಿದು ಗೋಶಾಲೆಗಳಿಗೆ ಕೊಡುವ ಮೂಲಕ ಪ್ರಾಣಿಗಳ ಹಿತ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಲು ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಅನಿಲ ಕರ್ಣೀ ಸಾಮಾಜಿಕ ಕಾರ್ಯಕರ್ತ-ಗಜೇಂದ್ರಗಡ.
ಶೀಘ್ರದಲ್ಲಿ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡಿ. ಅವುಗಳು ಹತೋಟಿಗೆ ತೆಗೆದುಕೊಳ್ಳದೆ ಇದ್ದರೆ ಕ್ರಮಕೈಗೊಳ್ಳಲಾಗುವದು.
ಬಸವರಾಜ ಬಳಗಾನೂರ.ಮುಖ್ಯಾಧಿಕಾರಿ- ಗಜೇಂದ್ರಗಡ.
ವರದಿ : ಸುರೇಶ ಬಂಡಾರಿ.