ನಸುಕಿನ ಭಜನೆಗೆ ಮಂಗಲ ಹಾಡಿದ ಜಕ್ಕಲಿಯ ಬಸವೇಶ್ವರ ಭಜನಾ ತಂಡ
ನರೇಗಲ್ಲ:ಸತ್ಯಮಿಥ್ಯ(ಸೆ.೧೨).
ಸಮೀಪದ ಜಕ್ಕಲಿ ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಕಳೆದ ಒಂದು ತಿಂಗಳಿನಿಂದ ನಸುಕಿನಲ್ಲಿ ಭಜನೆ ಮಾಡಿದ್ದ ಶ್ರೀ ಬಸವೇಶ್ವರ ಭಜನಾ ತಂಡದವರು ನಸುಕಿನ ಭಜನೆಯನ್ನು ಮಂಗಳವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಮಾಡುವ ಮೂಲಕ ಮಂಗಲ ಮಾಡಿದರು.
ಚಿತ್ರ : ಸಮೀಪದ ಜಕ್ಕಲಿ ಗ್ರಾಮದ ಶ್ರೀ ಬಸವೇಶ್ವರ
ನಾಗರ ಅಮಾವಾಸ್ಯೆಯ ಪಾಡ್ಯದಿಂದ ಬೆನಕನ ಅಮಾವಾಸ್ಯೆವರೆಗೆ ನಡೆದ ಭಜನೆಗೆ ಸದ್ಭಕ್ತರು ಸೂರ್ಯೋದಯದ ಪೂರ್ವದಲ್ಲಿ ಎದ್ದು ಸ್ನಾನ ಮಾಡಿಕೊಂಡು ಶ್ವೇತ ವರ್ಣದ ಉಡುಗೆಯನ್ನು ಧರಿಸಿಕೊಂಡು, ಹಣೆಗೆ ವಿಭೂತಿ, ಕುಂಕುಮ ಲೇಪಿಸಿಕೊಂಡು, ಕೊರಳಿಗೊಂದು ಕೇಸರಿ ವಸ್ತ್ರ, ತಲೆಗೆ ಟೋಪಿಗೆ ಹಾಕಿಕೊಂಡು ಊರಲ್ಲಿನ ಎಲ್ಲ ಪ್ರಮುಖ ಬೀದಿಗಳಲ್ಲಿ ರಾಗ ಬದ್ಧವಾಗಿ ವಚನಗಳನ್ನು, ಭಕ್ತಿಗೀತೆಗಳನ್ನು, ಭಜನಾ ಪದಗಳನ್ನು ಹಾಡಿದರು. ಸುಮಂಗಲೆಯರು ಬೆಳಿಗ್ಗೆ ಬೇಗನೆ ಎದ್ದು ರಂಗೋಲಿ ಹಾಕಿ ಭಜನಾ ಸದ್ಭಕ್ತರನ್ನು ಸ್ವಾಗತಿಸಿ, ಭಜನಾ ತಂಡದ ಮಧ್ಯದಲ್ಲಿದ್ದ ಬಸವಣ್ಣನನ್ನು ಪೂಜಿಸುತ್ತಿದ್ದರು.
ಚಿತ್ರ : ದೇವಸ್ಥಾನದ ಭಜನಾ ಮಂಡಳದವರು ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ನಡೆದ ಭಜನೆಯನ್ನು ಮಂಗಳವಾರ ಮಂಗಲ ಮಾಡಿದರು.
ಈ ಭಜನಾ ಬಳಗದ ಸದ್ಭಕ್ತರು ಶ್ರಾವಣ ಮಾಸದಲ್ಲಿ ಬೆಳಿಗ್ಗೆ ೨ಗಂಟೆ ಸಮಯ ಮೀಸಲಿಟ್ಟು ಕೈಯಲ್ಲಿ ತಾಳ, ತಪ್ಪಡಿ, ಗಿಂಚಿ, ಜಾಂಜ್, ಕೊರಳಲ್ಲಿ ಡಗ್ಗಾ ಹಾಗೂ ಹಾರ್ಮೋನಿಯಂ ನುಡಿಸುತ್ತಾ ಒಂದು ಹಾಡು ಮುಗಿಯುತ್ತಿದ್ದಂತೆಯೇ ಮತ್ತೊಂದು ಹಾಡಿಗೆ ತಕ್ಕಂತೆ ಎಲ್ಲರೂ ಸೇರಿ ಧ್ವನಿಗೂಡಿಸಿ ಹಾಡುತ್ತಿದ್ದರು.
ಭಜನೆ ಊರೆಲ್ಲಾ ಸಂಚರಿಸಿದ ಬಳಿಕೆ ಭಜನಾ ಮಂಡಳಿಯ ಸದಸ್ಯರಿಗೆ ಭಕ್ತರು ಪ್ರತಿ ದಿನಕ್ಕೆ ಒಬ್ಬೊಬ್ಬರಂತೆ ತಂಡದ ಎಲ್ಲರನ್ನು ಕರೆದು ಅವರಿಗೆ ಚಹಾ ಮತ್ತು ಉಪಹಾರದ ವ್ಯವಸ್ಥೆಯನ್ನು ಕೈಗೊಂಡಿದ್ದರು.
ಕಳೆದ ಐವತ್ತೊಂದು ವರ್ಷಗಳಿಂದ ಮೆಣಸಗಿಯವರ ಓಣಿಯ ಕಾಳಪ್ಪ ಕಮ್ಮಾರ ಇವರ ನೇತೃತ್ವದಲ್ಲಿ ಸಂಘಟಿತವಾಗಿದ್ದ ಈ ಭಜನಾ ಮಂಡಳಿಯು ಹಿರಿಯರು ಹಾಕಿಕೊಟ್ಟ ಸಂಪ್ರದಾಯವನ್ನು ಇಂದಿನವರೆಗೂ ಶ್ರಾವಣ ಮಾಸದಲ್ಲಿ ನಿರಂತರವಾಗಿ ನಡೆಸುತ್ತ ಬಂದಿರುವುದು ಭಜನಾ ಕಲೆ ಇಲ್ಲಿ ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ.
ಭಜನಾ ಮುಕ್ತಾಯದ ಅಂಗವಾಗಿ ಅನ್ನಸಂತರ್ಪಣೆ ನಡೆಯಿತು.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಡೆ ಹಳ್ಳಿಗಳಲ್ಲಿ ಬಹುತೇಕ ಜನ ಭಜನೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈಗ ಏನಿದ್ದರೂ ಮೊಬೈಲ್ ಯುಗ, ಒಂದು ಕ್ಷಣ ಮೊಬೈಲ್ ಬಿಟ್ಟಿರದ ಎಷ್ಟೋ ಯುವಕರು ಇರುವ ಈ ಸಮಯದಲ್ಲಿ ಜಕ್ಕಲಿಯಲ್ಲಿ ಮಾತ್ರ ೩೦ ರಿಂದ ೪೦ ಯುವಕರು ಕೆಲವು ಗಂಟೆಗಳ ಕಾಲ ಮೊಬೈಲದಿಂದ ದೂರವಿದ್ದು ದೇವರ ನಾಮಸ್ಮರಣೆಗೆ ಮುಂದಾಗಿರುವುದು ಹಾಡುಗಳನ್ನು ಕಲಿತಿರುವುದು ಅಚ್ಚರಿಯ ಸಂಗತಿಯಾಗಿದೆ- ಇದು ನಮ್ಮೂರಿನ ಹೆಮ್ಮೆಯಾಗಿದೆ- ಬಸವರಾಜ ಆದಿ, ಭಜನಾ ಮಂಡಳದ ಮುಖ್ಯಸ್ಥ.
ಭಜನೆ ಹಾಡುಗಳನ್ನು ಕೇಳುವುದರಿಂದ ಮನಸ್ಸಿಗೆ ಶಾಂತಿ ದೊರಕುವುದಲ್ಲದೆ ಭಜನೆಗಳಲ್ಲಿ ಅಡಗಿರುವ ಅರ್ಥ ಬದುಕಿಗೊಂದು ಪಾಠ ಕಲಿಸುತ್ತದೆ. ಪೂರ್ವಜರ ಜನಪದ ಶೈಲಿಯ ಭಜನೆ ಶ್ರೀಮಂತಿಕೆಯಿಂದ ಕೂಡಿದೆ, ಭಯ ಭಕ್ತಿಯಿಂದ ಭಜನೆ ಆಲಿಸುವುದು ಕೂಡ ಭಗವಂತನಿಗೆ ಇಷ್ಟವಾದದ್ದು ಎನ್ನುತ್ತಾರೆ ಭಜನಾ ತಂಡದ ಹಿರಿಯ ಮುಖ್ಯಸ್ಥ ಮುನಿಯಪ್ಪ ಪಲ್ಲೇದ.
ವರದಿ : ಸಂಗಮೇಶ ಮೆಣಸಗಿ