ಗಣೇಶ ಹಬ್ಬದ ನಂತರ ಜೋಕುಮಾರಸ್ವಾಮಿಯ ಮಹಿಮೆ ಸಾರುವ ಮಹಿಳೆಯರು.
ವಿಶೇಷ ವರದಿ: ಚೆನ್ನಯ್ಯ ಹಿರೇಮಠ್.
ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥನೆ; ಬೆನಕನ ಅಮಾವಾಸ್ಯೆಯ ಬಳಿಕ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತರ ಆರನೇ ದಿನಕ್ಕೆ ಜೋಕುಮಾರನ ಜನನ ಆಗುತ್ತದೆ ಎಂಬುದು ಭಕ್ತರ ನಂಬಿಕೆ. ಗ್ರಾಮೀಣ ಮತ್ತು ನಗರಗಳಲ್ಲಿ ಮಹಿಳೆಯರು ಜೋಕುಮಾರನನ್ನು ಬುಟ್ಟಿಯಲ್ಲಿ ಹೊತ್ತು ಸುತ್ತುತ್ತಾರೆ. ಹೀಗೆ ಜೋಕುಮಾರ ಹುಣ್ಣಿಮೆ ಬರುವವರೆಗೆ 7 ದಿನಗಳ ಕಾಲ ಸಂಚರಿಸುತ್ತಾರೆ.
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯಾಧ್ಯಂತ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ.ಇಲ್ಲಿ ಗಣೇಶ ಚತುರ್ಥಿಯ ನಂತರ ಕಾಣಿಸಿಕೊಳ್ಳುವ ಪ್ರಮುಖ ಆಚರಣೆಗಳಲ್ಲಿ ಜೋಕುಮಾರಸ್ವಾಮಿಯೂ ಒಂದು.ಗಣೇಶ ಚತುರ್ಥಿಯ ಐದನೇ ದಿನ ಅಂದರೆ, ಅಷ್ಟಮಿಯ ದಿನ ಮೂಲಾನಕ್ಷತ್ರದಲ್ಲಿ ಜೋಕುಮಾರಸ್ವಾಮಿಯ ಜನನವಾಗುತ್ತದೆ. ಬಾರ್ಕೇರ ಮನೆತನದವರು ಹೊಲದಿಂದ ಮಣ್ಣು ತಂದು ಬಡಿಗೇರ ಮನೆಯಲ್ಲಿ ಜೋಕುಮಾರಸ್ವಾಮಿಯ ಮೂರ್ತಿಯನ್ನು ಮಾಡಿಸುತ್ತಾರೆ. ನಂತರ ಏಳು ದಿನಗಳ ಕಾಲ ಆ ಮೂರ್ತಿಯನ್ನು ಬಾರ್ಕೇರ ಮನೆತನದವರು ಏಳು ಊರುಗಳಿಗೆ ತಗೆದುಕೊಂಡು ಹೋಗುತ್ತಾರೆ. ಅದರಲ್ಲೂ ಪ್ರಮುಖವಾಗಿ ರೈತರ ಮನೆಗೆ ಜೋಕುಮಾರಸ್ವಾಮಿಯನ್ನು ಹೊತ್ತುಕೊಂಡು ಹೋಗಲಾಗುತ್ತದೆ.
ಜೋಕುಮಾರಸ್ವಾಮಿಗೆ ಕಾಲುಗಳಿಲ್ಲದ ಕಾರಣ ಮಹಿಳೆಯರು ಬುಟ್ಟಿಯಲ್ಲಿ ಹೊತ್ತು ತಿರುಗುತ್ತಾರೆ. ಜೋಕುಮಾರ ಸ್ವಾಮಿಯನ್ನು ಹೊತ್ತು ತಂದ ಮಹಿಳೆಯರು ಮನೆ ಮನೆಗೆ ಭೇಟಿ ನೀಡುತ್ತಾರೆ. ಮನೆಯ ಮುಂದೆ ಬಾಗಿಲಲ್ಲಿ ಜೋಕುಮಾರಸ್ವಾಮಿ ಮೂರ್ತಿ ಇಟ್ಟು ಅವನ ಕುರಿತು ಜಾನಪದ ಹಾಡು ಹೇಳುತ್ತಾರೆ. ಈ ವೇಳೆ ಮನೆಯವರು ಜೋಕುಮಾರಸ್ವಾಮಿಗೆ ಜೋಳ, ಅಕ್ಕಿ, ರೊಟ್ಟಿ, ಮೆಣಸಿನಕಾಯಿ, ಹುಣಸಿಹಣ್ಣು, ತರಕಾರಿ ಸೇರಿದಂತೆ ವಿವಿಧ ಧಾನ್ಯಗಳನ್ನು ನೀಡುತ್ತಾರೆ. ಈ ರೀತಿ ಧಾನ್ಯ ನೀಡಿದ ಮಹಿಳೆಯರಿಗೆ ಜೋಕುಮಾರಸ್ವಾಮಿ ಹೊತ್ತ ಮಹಿಳೆಯರು ಕಾಡಿಗೆ ಮತ್ತು ಅಂಬಲಿಯನ್ನು ನೀಡುತ್ತಾರೆ. ಈ ಕಾಡಿಗೆಯನ್ನು ಮನೆಯ ಬಾಗಿಲಿಗೆ ಹಚ್ಚುವುದು ಸಂಪ್ರದಾಯ. ಅಂಬಲಿಯನ್ನು ರೈತರು ಜಮೀನುಗಳಿಗೆ ಚರಗ ಚೆಲ್ಲುತ್ತಾರೆ. ಅಂಬಲಿಯನ್ನು ಜಮೀನಿಗೆ ಚರಗ ಚೆಲ್ಲುವುದರಿಂದ ಉತ್ತಮ ಬೆಳೆ ಬರುತ್ತದೆ ಎಂಬುದು ಜನರ ನಂಬಿಕೆ.
ಜೋಕುಮಾರಸ್ವಾಮಿ ಬಾಯಿಗೆ ಬೆಣ್ಣೆ ಸವರಲಾಗುತ್ತದೆ. ಈ ರೀತಿ ಬೆಣ್ಣೆ ಸವರಿದರೆ ಮನೆಯಲ್ಲಿ ಹಸುಗಳು ಹಾಲು ಹೆಚ್ಚು ನೀಡುತ್ತವೆ ಎಂಬುದು ಜನರ ನಂಬಿಕೆಯಾಗಿದೆ.
ಕೈಯಲಿ ಖಡ್ಗ, ಹಣೆಯ ಮೇಲೆ ಕುಂಕುಮ, ವೀರತನ ಈತನ ಸಂಕೇತ. ಜೋಕುಮುನಿ ಪರಮೇಶ್ವರನ ಮಗನಾಗಿದ್ದ ಎಂಬ ಕತೆಯೂ ಇದೆ. ಜೀವಿತ ಏಳು ದಿನಗಳಲ್ಲಿ ಏಳು ಅವತಾರ ಪಡೆದು ಸ್ತ್ರೀಯರನ್ನುಮೋಹಿಸುತ್ತಾನೆ. ಒಮ್ಮೆ ಮಡಿವಾಳರ ಯುವತಿ ಅವನನ್ನು ಇಷ್ಟಪಡುತ್ತಾಳೆ. ಜೋಕುಮಾರನನ್ನು ಸಹಿಸದ ಆ ಯುವತಿ ತಂದೆ ಜೋಕುಮಾರನ ತಲೆ ಕತ್ತರಿಸಿ ನದಿಗೆ ಬಿಸಾಡುತ್ತಾನೆ. ಆ ತಲೆಯು ಒಬ್ಬಬೆಸ್ತರಿಗೆ ಸಿಗುತ್ತದೆ. ತಮ್ಮ ಬೆಳೆಗಳನ್ನು ರಕ್ಷಿಸಿ ನಮ್ಮ ಬದುಕಿಗೆ ಆಧಾರವಾದ ಜೋಕುಮಾರನ ತಲೆಯನ್ನು ಊರಿಗೆ ತಂದು ಊರವರೆಲ್ಲ ಸೇರಿ ಜೋಕುಮಾರನಿಗೆ ಪೂಜೆ ಸಲ್ಲಿಸಿದರು ಎಂದು ಕಥೆಯಲ್ಲಿ ಇವನನ್ನು ವರ್ಣಿಸಲಾಗುತ್ತದೆ.