ದಸರಾ ಮಹೋತ್ಸವದ ಸಿದ್ಧತೆಗಳೆಲ್ಲವೂ ಅಂತಿಮ ಹಂತಕ್ಕೆ ಬಂದಿವೆ-ವೀರಭದ್ರ ಶಿವಾಚಾರ್ಯರು.
ನರೇಗಲ್ಲ:ಸತ್ಯಮಿಥ್ಯ (ಅ -01).
ಸಮೀಪದ ಅಬ್ಬಿಗೇರಿಯಲ್ಲಿ ಅಕ್ಟೋಬರ್ ೩ರಿಂದ ೧೨ರವರೆಗೆ ನಡೆಯಲಿರುವ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಮಹೋತ್ಸವದ ಸಿದ್ಧತೆಗಳೆಲ್ಲವೂ ಅಂತಿಮ ಹಂತಕ್ಕೆ ಬಂದಿವೆ ಎಂದು ಅಬ್ಬಿಗೇರಿ-ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯರು ಹೇಳಿದರು.
ಅಬ್ಬಿಗೇರಿಯ ಹಿರೇಮಠದಲ್ಲಿ ದಸರಾ ಮಹೋತ್ಸವದ ಸಿದ್ಧತೆಗಳ ಕುರಿತು ವಿವರ ನೀಡಲು ಇಂದು ಸಂಜೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಹೋತ್ಸವದ ನಿಮಿತ್ಯ ಕೃಷಿ ಮೇಳ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಸೇವಾಕರ್ತರಿಗೆ ಗುರುರಕ್ಷೆ ಮುಂತಾದ ಕಾರ್ಯಕ್ರಮಗಳು ಜರುಗಲಿದ್ದು, ಅಕ್ಟೋಬರ್ ೨ರಂದು ಸಂಜೆ ೫ಕ್ಕೆ ಅಬ್ಬಿಗೇರಿ ಪುರ ಪ್ರವೇಶ ಮಾಡುವ ಜಗದ್ಗುರುಗಳನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಹೊಸ ಹಿರೇಮಠಕ್ಕೆ ಕರೆ ತರಲಾಗುವುದು ಎಂದು ಶ್ರೀಗಳು ಹೇಳಿದರು.
ಕೃಷಿ ಮೇಳದಲ್ಲಿ ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಬೆಂಗಳೂರಿನ ಕೃಷಿ ತಜ್ಞ ಆನಂದ ಆಶೀಷರ್ ಸಾವಯವ ಕೃಷಿಯ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಜಗದ್ಗುರುಗಳ ದಿವ್ಯ ಸನ್ನಿಧಿಯಲ್ಲಿ ನಡೆಯುತ್ತಿರುವ ಗುರುಮನೆ ದಸರಾ ಇದಾಗಿದ್ದು, ಸಮಾರಂಭದಲ್ಲಿ ನಿತ್ಯವೂ ನಜರ್ ಸಮರ್ಪಣೆ ಜರುಗುತ್ತದೆ. ಇದರಲ್ಲಿ ಪಾಲ್ಗೊಳ್ಳಲು ಬಯಸುವ ಸಂಘ-ಸಂಸ್ಥೆಗಳವರು ತಮ್ಮ ಹೆಸರುಗಳನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕೆಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ ಮಹೋತ್ಸದಲ್ಲಿ ಮಳೆಯ ತೊಂದರೆಯನ್ನು ತಪ್ಪಿಸಲು ವಾಟರ್ ಪ್ರೂಫ್ ಟೆಂಟ್‌ನ್ನು ಹಾಕಲಾಗಿದೆ. ಅತ್ಯಂತ ವಿಶಾಲವಾದ ಪೆಂಡಾಲ್‌ನ್ನು ಹಾಕಲಾಗಿದ್ದು, ಸುಮಾರು ೧೦೦೦೦ ಭಕ್ತರು ಕುಳಿತುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಸಮಾರಂಭದ ನಂತರ ಪರಸ್ಥಳಕ್ಕೆ ತೆರಳುವ ಭಕ್ತರಿಗಾಗಿ ಬಸ್‌ನ ವ್ಯವಸ್ಥೆಯನ್ನೂ ಮಾಡಲಾಗಿದ್ದು, ರೋಣ, ಜಕ್ಕಲಿ, ಗಜೇಂದ್ರಗಡ, ಗದಗ ಕಡೆಗೆ ಹೋಗುವ ಭಕ್ತರಿಗೆ ಅನುಕೂಲ ಮಾಡಲಾಗಿದೆ. ಬರುವ ಭಕ್ತರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದ್ದು, ಗ್ರಾಮೀಣ ಮಟ್ಟದಲ್ಲಿ ಸಮಾರಂಭ ನಡೆಯುತ್ತಿದ್ದರೂ, ಪಟ್ಟಣದಲ್ಲಿ ನಡೆಯುವ ಯಾವುದೇ ಸಮಾರಂಭಕ್ಕೆ ಕಡಿಮೆ ಇಲ್ಲದಂತೆ ಸಮಾರಂಭ ಜರುಗಿ ಯಶಸ್ವಿಯಾಗಲಿದೆ ಎಂದರು.
ನರೇಗಲ್ಲ-ಸೌಂದತ್ತಿ ಹಿರೇಮಠದ ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ ಮಹೋತ್ಸವ ನಡೆಯುವ ಹತ್ತು ದಿನಗಳೂ ಬೆಳಿಗ್ಗೆ ಇಷ್ಟಲಿಂಗ ಪೂಜೆ ನಡೆಯುತ್ತದೆ. ಇದರಲ್ಲಿ ಭಕ್ತರು ಪಾಲ್ಗೊಳ್ಳಬಹುದಾಗಿದೆ ಎಂದರು.
ಸಾಕಾರದಿಂದ ನಿರಾಕಾರದ ಕಡೆಗೆ ಹೋಗಲು ಈ ಧರ್ಮ ಸಮ್ಮೇಳನ ಸಹಾಯ ಮಾಡಲಿದೆ. ಧರ್ಮದ ಮೌಲ್ಯಗಳನ್ನು ತಿಳಿಸಿ, ಅವುಗಳನ್ನು ಜೀವನದಲ್ಲಿ ಆಚರಣೆಗೆ ತರಲು ಈ ಧರ್ಮ ಸಮ್ಮೇಳನವನ್ನು ನಡೆಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯರು, ಸಗರದ ಸೋಮೇಶ್ವರ ಶಿವಾಚಾರ್ಯರು, ನಾಗವಂದದ ಶಿವಯೋಗಿ ಶಿವಾನಂದ ಶಿವಾಚಾರ್ಯರು, ಪ್ರವಚನಕಾರ ಅನ್ನದಾನ ಶಾಸ್ತ್ರೀ ಗಳು, ಸವಡಿಯ ಶ್ರೀಗಳು, ನರಸಾಪೂರ ಹಿರೇಮಠದ ಚಂದ್ರಶೇಖರ ಸ್ವಾಮಿಗಳು, ಅಂದಪ್ಪ ವೀರಾಪೂರ, ವೀರಯ್ಯ ಸೋಮನಕಟ್ಟಿಮಠ, ಮಂಜುನಾಥ ಅಂಗಡಿ, ಬಸವರಾಜ ಪಲ್ಲೇದ, ಡಾ. ಆರ್.ಕೆ. ಗಚ್ಚಿನಮಠ, ಹನುಮಂತಪ್ಪ ದ್ವಾಸಲ, ಬಾಬಾಗೌಡ ಪಾಟೀಲ ಇನ್ನೂ ಮುಂತಾದವರಿದ್ದರು.
ವರದಿ:ಸಂಗಮೇಶ ಮೆಣಸಗಿ.