ಜಿಲ್ಲಾ ಸುದ್ದಿ

ಎನ್‌ಐಎ ಹೆಸರಿನಲ್ಲಿ ವೈದ್ಯರಿಗೆ ವಿಡಿಯೋ ಕರೆ: ಹೆದರಿಸಿ ಹಣ ಲಾಪಠಾಯಿಸುವ ಪ್ರಯತ್ನ ವಿಫಲ.

Share News

ಎನ್‌ಐಎ ಹೆಸರಿನಲ್ಲಿ ವೈದ್ಯರಿಗೆ ವಿಡಿಯೋ ಕರೆ: ಹೆದರಿಸಿ ಹಣ ಲಾಪಠಾಯಿಸುವ ಪ್ರಯತ್ನ ವಿಫಲ.

ಮುಂಳಗುಂದ :ಸತ್ಯಮಿಥ್ಯ (ಜೂ-17)

ಹಣ ವಂಚಕರ ತಂಡವೊಂದು ಪಟ್ಟಣದ ಖಾಸಗಿ ವೈದ್ಯ ಡಾ. ಎಸ್.ಸಿ. ಚವಡಿ ಅವರಿಗೆ ವಿಡಿಯೋ ಕರೆ ಮಾಡಿ ನಿರಂತರ 22 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿ ಹಣ ಪಡೆಯಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನ್ಯಾಶನಲ್ ಇನವೆಸ್ಟಿಗೇಶನ್ ಆಥಾರಿಟಿ ಆಫ್ ಇಂಡಿಯಾ ಹೆಸರಲ್ಲಿ ಜೂ.11ರಂದು ಮಧ್ಯಾಹ್ನ 3ಕ್ಕೆ ವೈದ್ಯ ಚವಡಿ ಅವರಿಗೆ ಮೊದಲ ಕರೆ ಮಾಡಿ ನೀವು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಅಪಾರ ಪ್ರಮಾಣದ ಹಣ ದುರ್ಬಳಕೆ ಮಾಡಿದ್ದೀರಿ.

ನಿಮ್ಮ ಹೆಸರಿನಲ್ಲಿ ಮುಂಬೈಯ ಕೊಲೋಬಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ನಿಮ್ಮನ್ನು ವಿಡಿಯೋ ಕರೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಭಯ ಪಡಿಸಿದ್ದಾರೆ.

ಆದರೆ ಅಷ್ಟಕ್ಕೂ ಡಾ. ಚವಡಿಯವರ ಖಾತೆ ಕೆನರಾ ಬ್ಯಾಂಕನಲ್ಲಿಲ್ಲ. ಆದರೆ ಅವರ ಖಾತೆ ಹಾಗೂ ಎಟಿಎಂ ಕಾರ್ಡ್‌ ಅವರ ಅರೆಸ್ಟ ವಾರಂಟ್ ಹೆಸರಿನಲ್ಲಿ ತಯಾರಿಸಲಾಗಿದೆ. ಅಲ್ಲದೇ ನಿಮ್ಮ ಹೆಸರಿನಲ್ಲಿರಬಹುದಾದ ಎಲ್ಲ ಹಣದ ದಾಖಲೆ ಹಾಗೂ ಆಸ್ತಿ ದಾಖಲೆಗಳನ್ನು ತೆಗೆದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ. ಅಲ್ಲದೇ ಡಾಕ್ಟರ್ ಆಧಾರ ಕಾರ್ಡ್‌ ಫೋಟೋ ಮಾಡಿಕೊಳ್ಳಲಾಗಿದೆ. ಜೊತೆಗೆ ಮುಳಗುಂದದ ಒಬ್ಬ ಪೊಲೀಸ್‌ ಸಿಬ್ಬಂದಿ ಹೆಸರು ಹಾಗೂ ಫೋಟೋ ತೋರಿಸಿದ್ದಾರೆ. ನಂತರ ವಿಚಾರಣೆಗೆ ಮೊದಲು ವಿಜಯಕುಮಾರ ಎನ್ನುವ ವ್ಯಕ್ತಿಯೊಬ್ಬ ಇನಸ್ಪೆಕ್ಟರ್ ಎಂದು ಹೇಳಿಕೊಂಡು ಎಲ್ಲ ವಿಚಾರಣೆ ನಡೆಸಿ ನೀವು ವಯಸ್ಸಾದವರು ನಿಮ್ಮನ್ನು ಇಲ್ಲಿಗೆ ಕರೆಸಿ ವಿಚಾರಣೆ ಮಾಡುವದು ಅಷ್ಟು ಸರಿ ಇಲ್ಲ. ಹೀಗಾಗಿ ವಿಡಿಯೋ ಕಾಲ್‌ನಲ್ಲಿ ವಿಚಾರಣೆ ಮಾಡುತ್ತಿದ್ದೇವೆ. ಮುಂದೆ ಡಿಸಿಪಿ ನಿಮ್ಮ ಜೊತೆ ವಿಚಾರಣೆ ಮಾಡುವರು ಅವರೊಂದಿಗೆ ನಯ ವಿನಯದೊಂದಿಗೆ ನಡೆದುಕೊಳ್ಳಿ ಎಂದು ಹೇಳಲಾಯಿತು.

ಅಲ್ಲದೇ ನರೇಶ ಗೋಯಲ್ ಹಾಗೂ ಅವರ ಗ್ಯಾಂಗನವರು ನಿಮ್ಮನ್ನು ಹಿಂಬಾಲಿಸುತ್ತಿದ್ದಾರೆ. ನೀವು ಈ ವಿಷಯವನ್ನು ಯಾರಿಗೂ ತಿಳಿಸಬೇಡಿ ಮನೆಯಲ್ಲಿ ನಿಮ್ಮ ಮನೆಯವರೊಂದಿಗೆ ಸಂಶಯ ಬರದಂತೆ ನಡೆದುಕೊಳ್ಳಿ, ಅವರು ನಿಮ್ಮನ್ನು ಕೊಲೆ ಮಾಡಲು ಹಿಂಬಾಲಿಸುತ್ತಿದ್ದಾರೆ. ನಿಮ್ಮ ಮನೆಯ ಸುತ್ತಮುತ್ತಲು ಇರಬಹುದು. ಹೀಗಾಗಿ ಗೌಪ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ನಂತರ ಮರುದಿನ ಮದ್ಯಾಹ್ನ 12ಕ್ಕೆ ಡಿಸಿಪಿ ದಯಾನಾಯಕ ವಿಚಾರಣೆ ಮಾಡಲು ಪ್ರಾರಂಭಿಸಿದರು. ಅವರು ಮಾತನಾಡಿ, ನಾವು ವಿಚಾರಣೆ ಮಾತ್ರ ಮಾಡುತ್ತೇವೆ ನಂತರ ಸುಪ್ರೀಂ ಕೋರ್ಟಿಗೆ ಪ್ರಕರಣ ದಾಖಲಿಸುತ್ತೇವೆ ಅಲ್ಲಿ ನಿಮ್ಮ ಮಾಹಿತಿ ಒದಗಿಸಲಾಗುತ್ತದೆ. ಆಗ ನೀವು ವಕೀಲರನ್ನು ನೇಮಕ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಡಾ. ಚವಡಿ ಅವರು ಮನೆಯ ರೂಮಿನಲ್ಲಿ ಬಂಧಿಯಾಗಿದ್ದಾರೆ (ಡಿಜಿಟಲ್‌ ಅರೆಸ್ಟ್‌) ಎಂಬ ಸುದ್ದಿ ತಿಳಿದು ಊರಿನ ಹಿರಿಯರು ಮನೆಗೆ ಪೊಲೀಸರೊಂದಿಗೆ ಧಾವಿಸಿ ಬಂದು ಬಾಗಿಲು ಮುರಿಯುವ ಪ್ರಯತ್ನ ಮಾಡಿದಾಗ, ಡಾ.ಚವಡಿ ಅವರೇ ಬಾಗಿಲು ತೆಗೆದರು. ಆಗ ಮುಳಗುಂದ ಸಿಪಿಐ ಸಂಗಮೇಶ ಶಿವಯೋಗಿ ವಿಡಿಯೋ ಕಾಲ್‌ನಲ್ಲಿ ಮಾತನಾಡಲು ಪ್ರಾರಂಭಿಸಿದಾಗ ವಂಚಕರು ವಿಡಿಯೋ ಕಾಲ್ ಕಟ್ ಮಾಡಿದರು. ಈ ಕುರಿತು ಗದಗ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮುಂದಿನ ತನಿಖೆ ನಡೆದಿದೆ.

ವರದಿ :ಮುತ್ತು ಗೋಸಲ್ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!