ಕಾಲೇಜು ಶಿಕ್ಷಣ ಇಲಾಖೆ ಧಾರವಾಡ ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕ ಪ್ರೊ.ಪ್ರಕಾಶ ಹೊಸಮನಿಯವರಿಗೆ ಸೇವಾನಿವೃತ್ತಿ.

ಕಾಲೇಜು ಶಿಕ್ಷಣ ಇಲಾಖೆ ಧಾರವಾಡ ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕ ಪ್ರೊ.ಪ್ರಕಾಶ ಹೊಸಮನಿಯವರಿಗೆ ಸೇವಾನಿವೃತ್ತಿ.
ನರೇಗಲ್:ಸತ್ಯಮಿಥ್ಯ ( ಜು 01)
ಇಲಾಖೆಯ ಅಡಿಯಲ್ಲಿ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರ, ಸಿಬ್ಬಂದಿಗಳ ಸಹಕಾರದಿಂದ ನಿರ್ವಹಿಸಿದ ಹುದ್ದೆ ಖುಷಿ ನೀಡಿದೆ. ಪ್ರಾಧ್ಯಾಪಕನಾಗಿದ್ದಾಗ ಮಕ್ಕಳ ಜೊತೆಗೆ ಪಡೆದ ವೃತ್ತಿ ಅನುಭವವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಆದಕಾರಣ ನಿವೃತ್ತಿ ಜೀವನವನ್ನು ಸಮಾಜಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವೆ ಎಂದು ಕಾಲೇಜು ಶಿಕ್ಷಣ ಇಲಾಖೆ ಧಾರವಾಡ ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕ ಪ್ರೊ.ಪ್ರಕಾಶ ಹೊಸಮನಿ ಹೇಳಿದರು.
ಧಾರವಾಡ ಜಂಟಿ ನಿರ್ದೇಶಕರಾಗಿ ನಿವೃತ್ತಿಗೊಳ್ಳುತ್ತಿರುವ ಕಾರಣ ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ನಿವೃತ್ತಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಕಾಲೇಜುಗಳಲ್ಲಿ ಹೆಚ್ಚಿನ ಕಾಲ ಬೋಧಕನಾಗಿ, ಪ್ರಾಂಶುಪಾಲನಾಗಿ ಪಡೆದ ಅನುಭವ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಧೃಡ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಹಾಗೂ ಪದವಿ ಹಂತದ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಅಂತಹ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ, ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕನಾಗಿ ನಿವೃತ್ತಿ ಪಡೆಯುತ್ತಿರುವುದು ನನ್ನ ಸೇವೆಯಲ್ಲಿ ಸ್ಮರಣೀಯ ದಿನಗಳಾಗಿವೆ ಎಂದರು. ನಿವೃತ್ತಿಯ ಕೊನೆಯ ದಿನದ ವೆರೆಗೂ ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಂಬಿ ಸೇವೆ ಮಾಡಿರುವೆ. ಸೇವಾ ದಿನಗಳಲ್ಲಿ ಮಾಡಿದ ಕೆಲಸ ಆತ್ಮತೃಪ್ತಿ ನೀಡಿದೆ ಎಂದು ಹೇಳಿ ತಮ್ಮ ಸೇವೆಯ ದಿನಗಳನ್ನು ಸ್ಮರಿಸಿಕೊಂಡರು.
ನರೇಗಲ್ ಪದವಿ ಕಾಲೇಜಿನ ಪ್ರಾಂಶುಪಾಲ ಎಸ್. ಎಲ್. ಗುಳೇದಗುಡ್ಡ ಮಾತನಾಡಿ, ಕಾಲೇಜಿಗೆ ಬರುವ ಪ್ರತಿ ವಿದ್ಯಾರ್ಥಿ, ಉಪನ್ಯಾಸಕರನ್ನು ಪ್ರೀತಿಯಿಂದ ಗೌರವಿಸಿ ಅವರೊಂದಿಗೆ ಬೆರೆತುಕೊಳ್ಳುತ್ತಿದ್ದರು. ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕು ಎನ್ನುವ ಉದ್ದೇಶದೊಂದಿಗೆ ನಿರಂತರ ಅಧ್ಯಾನ ಮಾಡುತ್ತಿದ್ದರು. ಪಾಠ ಮಾಡುವಾಗ ಬೋರ್ಡ್ ತುಂಬಾ ಬರೆಯುತ್ತಿದ್ದ ಅವರ ಗಣಿತ ವಿಜ್ಞಾನದ ಲೆಕ್ಕ ಮಾದರಿ ಈಗಿನ ಯುವ ಪೀಳಿಗೆ ಮಾದರಿಯಾಗಿದೆ. ಉನ್ನತ ಹುದ್ದೆಯನ್ನು ಅಲಂಕರಿಸಿದರು ಸಹ ಕಾಲೇಜಿನ ಮೇಲೆ ಅಷ್ಟೇ ಪ್ರೀತಿಯನ್ನು ಹೊಂದಿದ್ದರು, ವಿದ್ಯಾರ್ಥಿಗಳ ಪ್ರಗತಿ, ಕಾಲೇಜಿನ ಅಭಿವೃದ್ದಿ ಕುರಿತು ಚಿಂತಿಸುತ್ತಿದ್ದರು ಎಂದರು.
ನಿವೃತ್ತ ಪ್ರಾಂಶುಪಾಲ ಎಫ್. ಎಸ್. ಸಿದ್ನೇಕೊಪ್ಪ ಮಾತನಾಡಿ, ಕಾಲೇಜು ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಕಾಲೇಜಿಗೆ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಅರಿತು ಜೀವನ ಸಾಗಿಸಬೇಕು. ಹಾಗೆ ಕೊಡುಗೆಗಳನ್ನು ನೀಡುತ್ತಾ ಬಂದ ಹೊಸಮನಿಯವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದರು.
ಈ ಸಂದರ್ಭದಲ್ಲಿ ಈ. ಆರ್. ಲಗಳೂರ, ಎಸ್. ಜಿ. ಕೇಶಣ್ಣವರ, ಆರ್. ಎಂ. ಕಲ್ಲನಗೌಡರ, ಡಿ. ಬಿ. ಗವಾನಿ, ಉಮೇಶ ಹಿರೇಮಠ, ಉಮೇಶ ಅರಹುಣಸಿ, ಕಮತಗಿ, ಆನಂದ ಲಾಲಸಿಂಗ್, ಕೃಷ್ಣಾ, ಬಿ. ಎಚ್. ಕೊಳ್ಳಿ, ಗೀರಿರಾಜ, ಶೋಭಾ ಮೆರವಾಡೆ, ಜ್ಯೋತಿ ಬೋಳಣ್ಣವರ, ಲಕ್ಷ್ಮೀ ನಾಗರಾಳ, ಧಾರವಾಡ, ಗದಗ, ಹಾವೇರಿ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾ ನಿವೃತ್ತಿ ಹೊಂದಿದ ಕಾಲೇಜು ಶಿಕ್ಷಣ ಇಲಾಖೆ ಧಾರವಾಡ ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕ ಪ್ರೊ.ಪ್ರಕಾಶ ಹೊಸಮನಿ ದಂಪತಿಗಳನ್ನು ಸನ್ಮಾನಿಸಲಾಯಿತು.
ವರದಿ : ಸುರೇಶ ಬಂಡಾರಿ.