
ಗದಗ ಜಂಕ್ಷನ್‌ಗೆ ಹೊಸರೂಪ: ಕೈಗಾರಿಕೆ, ವಾಣಿಜ್ಯೋದ್ಯಮ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲ ಗರಿಗೆದರಿದ ನಿರೀಕ್ಷೆಗಳು.
ಗದಗ:ಸತ್ಯಮಿಥ್ಯ (ಜೂ-18)
ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಗದಗ ಜಿಲ್ಲೆಯ ಮುಕುಟಕ್ಕೆ ಅಮೃತ ಭಾರತ ರೈಲ್ವೆ ನಿಲ್ದಾಣ ಯೋಜನೆಯಡಿ (ಎಬಿಎಸ್‌ಎಸ್) ಇಲ್ಲಿನ ರೈಲು ನಿಲ್ದಾಣ ಪುನರಾಭಿವೃದ್ಧಿ ಆಗಿದೆ. ಹೊಸ ಗರಿ ಮೂಡಿಸಿದೆ. ಅತ್ಯಾಧುನಿಕ ಸೌಲಭ್ಯಗಳ ಜೊತೆ ಕಾರ್ಯಾರಂಭಿಸಿರುವ ರೈಲು ನಿಲ್ದಾಣವು ಈ ಭಾಗದ ಕೈಗಾರಿಕೆ, ವಾಣಿಜ್ಯೋದ್ಯಮ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲ ತುಂಬಲಿದೆ ಎಂಬ ನಿರೀಕ್ಷೆಗಳು ಗರಿಗೆದರಿವೆ.
ಆಧುನಿಕ ಸೌಲಭ್ಯವುಳ್ಳ ರೈಲ್ವೆ ಸೇವೆ ಒದಗಿಸುವುದು ಅಮೃತ ಭಾರತ ಸ್ಟೇಷನ್ ಯೋಜನೆಯ ಮುಖ್ಯ ಉದ್ದೇಶ. ಇದರಿಂದ ಬಡವರು, ಮಧ್ಯಮವರ್ಗದವರಿಗೂ ವಿಶ್ವದರ್ಜೆಯ ಸೌಲಭ್ಯ ಕಲ್ಪಿಸುವ ಕನಸು ಸಾಕಾರಗೊಂಡಿದೆ. ನೈರುತ್ಯ ರೈಲ್ವೆ ವಲಯದಲ್ಲಿ ಗದಗ ರೈಲು ನಿಲ್ದಾಣ ಪ್ರಮುಖವಾಗಿದೆ. ನಿತ್ಯ ಸರಾಸರಿ 4 ಸಾವಿರ ಜನ ಸಂಚರಿಸುತ್ತಾರೆ. ನಿತ್ಯ ₹5 ಲಕ್ಷ ಆದಾಯ ಇದೆ. ಹೀಗಾಗಿ, ಕಾರ್ಮಿಕರ ಓಡಾಟ, ಉದ್ಯಮಿಗಳು, ವ್ಯಾಪಾರಸ್ಥರಿಗೆ ಸರಕು ಸಾಗಣೆ ಮಾಡಲು ಕಡಿಮೆ ವೆಚ್ಚದಲ್ಲಿ ರೈಲ್ವೆ ಸೌಲಭ್ಯ ದೊರಕಿದಂತಾಗಿದೆ.
ಹಳೆ ನಿಲ್ದಾಣಕ್ಕೆ ಹೊಸ ರೂಪ:ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಗದಗ ರೈಲು ನಿಲ್ದಾಣವನ್ನು ಈ ಹಿಂದೆ ಒಮ್ಮೆ ಅಭಿವೃದ್ಧಿ ಆಗಿತ್ತು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ ಭಾರತ ನಿಲ್ದಾಣ ಯೋಜನೆ ಘೋಷಿಸಿದ ಸಂದರ್ಭದಲ್ಲಿ ಗದಗ ರೈಲು ನಿಲ್ದಾಣವನ್ನು ಸಂಪೂರ್ಣ ಕೆಡವಿ, ಅತ್ಯಾಧುನಿಕ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು.
2023ರ ಆಗಸ್ಟ್ 6ರಂದು ವರ್ಚುವಲ್ ವೇದಿಕೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಗದಗ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಎಬಿಎಸ್‌ಎಸ್ ಯೋಜನೆಯಡಿ ₹23.24 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಒಂದು ವರ್ಷ ಹತ್ತು ತಿಂಗಳ ಅವಧಿಯಲ್ಲಿ ಅತ್ಯಾಧುನಿಕ ನಿಲ್ದಾಣ ನಿರ್ಮಾಣವಾಗಿದೆ.
ಸೌಕರ್ಯ, ವಿನ್ಯಾಸದಿಂದ ಗಮನ ಸೆಳೆಯುವ ನಿಲ್ದಾಣ:ಈ ರೈಲು ನಿಲ್ದಾಣ 3,692 ಚದರ ಮೀಟರ್‌ನಷ್ಟು ಒಟ್ಟು ವಿಸ್ತೀರ್ಣ ಹೊಂದಿದೆ. 2,098 ಚದರ ಮೀಟರ್‌ನ ಜಿ ಪ್ಲಸ್ 1 ಕಟ್ಟಡವಿದೆ. ಮೊದಲು ಇದ್ದಂತಹ ಎರಡು ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ ಕೆಡವಿ, ಅಲ್ಲಿ 12 ಮೀಟರ್ ಅಗಲದ ಮೇಲ್ಸೇತುವೆ ಕಟ್ಟಲಾಗಿದೆ. ಇದು ಪ್ಲ್ಯಾಟ್‌ಫಾರ್ಮ್ ಒಂದರಿಂದ ಎರಡು ಮತ್ತು ಮೂರಕ್ಕೆ ಸಂಪರ್ಕ ಕಲ್ಪಿಸಲಿದೆ.
‘ನಿಲ್ದಾಣದಲ್ಲಿ ಎರಡು ಲಿಫ್ಟ್ ಮತ್ತು ಎರಡು ಎಸ್ಕಲೇಟರ್ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿನ ಮೂರು ಪ್ಲ್ಯಾಟ್‌ಫಾರ್ಮ್‌ಗಳಿಗೂ ಚಾವಣಿ ಇದೆ. ಅಂದವಾದ ನೆಲಹಾಸು ಇದೆ. ಗಣ್ಯವ್ಯಕ್ತಿಗಳಿಗೆಂದೇ ಐಷಾರಾಮಿ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ. ಜೊತೆಗೆ ಅತ್ಯಾಧುನಿಕ ಮಾದರಿಯ ಮೂತ್ರಾಲಯ ಮತ್ತು ಶೌಚಾಲಯ ವ್ಯವಸ್ಥೆ ಒದಗಿಸಲಾಗಿದೆ’ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಎರಡನೇ ಹಂತದ ಅಭಿವೃದ್ಧಿಯಲ್ಲಿ ಕಲೆ ಮತ್ತು ಸಂಸ್ಕೃತಿ ಕೇಂದ್ರ, ಎರಡನೇ ಪ್ರವೇಶ ದ್ವಾರ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಪ್ರಸ್ತುತ ಒಂದನೇ ಪ್ಲ್ಯಾಟ್‌ಫಾರ್ಮ್‌ನಲ್ಲಿರುವ ಚಾವಣಿಗೆ ಸೋಲಾರ್ ಅಳವಡಿಸಲಾಗಿದೆ. ಮಳೆ ನೀರು ಸಂಗ್ರಹಕ್ಕೂ ಒತ್ತು ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
ಒಂದು ವರ್ಷ ಹತ್ತು ತಿಂಗಳಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣ ಮೇ 22ರಿಂದ ಪ್ರಯಾಣಿಕರ ಬಳಕೆಗೆ ಮುಕ್ತಗೊಂಡ ಗದಗ ಜಂಕ್ಷನ್ ಪ್ರತಿನಿತ್ಯ ನಾಲ್ಕು ಸಾವಿರ ಮಂದಿ ಪ್ರಯಾಣಿಕರು ಸಂಚಾರಕ್ಕೆ ಸಹಕರಿಯಾಗಿದೆ – ಬಸವರಾಜ ಬೊಮ್ಮಾಯಿ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಸಂಸದ.
1884ರಲ್ಲಿ ಆರಂಭವಾದ ಗದಗ ರೈಲು ನಿಲ್ದಾಣಕ್ಕೆ ಭವ್ಯ ಇತಿಹಾಸವಿದೆ. ನಿಲ್ದಾಣದ ಪುನರಾಭಿವೃದ್ಧಿಯು ಈ ಭಾಗದ ಕೈಗಾರಿಕೆ ವಾಣಿಜ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಶಕ್ತಿ ನೀಡಲಿದೆ –ಗಣೇಶ್ ಸಿಂಗ್ ಬ್ಯಾಳಿ ಅಧ್ಯಕ್ಷ ಬೆಟಗೇರಿ ರೈಲ್ವೆ ಹೋರಾಟ ಸಮಿತಿ
ಎಬಿಎಸ್‌ಎಸ್ ಅಡಿ ರೈಲು ನಿಲ್ದಾಣ ಮೇಲ್ದರ್ಜೆಗೇರಿದೆ. ಪ್ರಯಾಣಿಕರು ಇಲ್ಲಿನ ಸೌಲಭ್ಯಗಳನ್ನು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು. ನಿಲ್ದಾಣದಲ್ಲಿನ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು – ವಿಶ್ವನಾಥ ಖಾನಾಪುರ ಸಾಮಾಜಿಕ ಕಾರ್ಯಕರ್ತ
ರೈಲ್ವೆ ವೇಳಾಪಟ್ಟಿ ಅನುಸಾರ ಗದಗ ಬಸ್ ನಿಲ್ದಾಣಗಳಿಂದ ರೈಲು ನಿಲ್ದಾಣಕ್ಕೆ ನಗರ ಸಾರಿಗೆ ಸಂಪರ್ಕ ಕಲ್ಪಿಸಬೇಕು. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಆಗಲಿದೆ.ನಿಲ್ದಾಣದ ಮಾಹಿತಿ ಗದಗ ರೈಲು ನಿಲ್ದಾಣವು ನೈರುತ್ಯ ರೈಲ್ವೆ ವಿಭಾಗದ ಪ್ರಮುಖ ನಿಲ್ದಾಣವಾಗಿದೆ. ಇಲ್ಲಿನ ನಿಲ್ದಾಣದಿಂದ ಮೈಸೂರು ಮಂಗಳೂರು ವಿಜಯಪುರ ದೆಹಲಿ ಮುಂಬೈ ತಿರುಪತಿ ಸೇರಿ ರಾಜ್ಯ ಹಾಗೂ ಹೊರ ರಾಜ್ಯದ ಪ್ರಮುಖ ನಗರಗಳಿಗೆ ತೆರಳಲು ಸೌಲಭ್ಯ ಇದೆ. ವಿಶ್ರಾಂತಿ ಗೃಹ ಸೌಲಭ್ಯ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಿಶ್ರಾಂತಿ ಗೃಹಗಳ ಸೌಲಭ್ಯ ಒದಗಿಸಲಾಗಿದೆ. ದೂರದ ಊರಿನಿಂದ ರಾತ್ರಿ ವೇಳೆ ಬಂದಿಳಿಯುವ ಪ್ರಯಾಣಿಕರು ಈ ಸೌಲಭ್ಯವನ್ನು ನಿಗದಿತ ಶುಲ್ಕ ಪಾವತಿಸಿ ಪಡೆಯಬಹುದು.
ವರದಿ: ಮುತ್ತು ಗೋಸಲ