ಬೀಜದ ಉಂಡೆಗಳ ತಯಾರಿಕೆ ಮತ್ತು ಬಿತ್ತನೆ ಕಾರ್ಯಕ್ರಮ – ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚಿಗೆ.

ಬೀಜದ ಉಂಡೆಗಳ ತಯಾರಿಕೆ ಮತ್ತು ಬಿತ್ತನೆ ಕಾರ್ಯಕ್ರಮ – ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚಿಗೆ.
ಗಜೇಂದ್ರಗಡ:ಸತ್ಯಮಿಥ್ಯ (ಜೂ-18).
ಪರಿಸರ ಸಂರಕ್ಷಣೆಯ ಪ್ರತಿಯೊಂದು ಹೆಜ್ಜೆ ನಮ್ಮ ಭವಿಷ್ಯಕ್ಕೆ ಹಸಿರು ಬೆಳಕನ್ನು ನೀಡುತ್ತದೆ. ಈ ನಿಟ್ಟಿನಲ್ಲಿ, ನಗರದ ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಗತ್ ಸಿಂಗ್ ರೋವರ್ಸ್ ಘಟಕ ಮತ್ತು ಮದರ್ ತೆರೇಸಾ ರೇಂಜರ್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಪರಿಸರ ಸ್ನೇಹಿ ಬೀಜದ ಉಂಡೆಗಳ ತಯಾರಿಕೆ ಮತ್ತು ಬಿತ್ತನೆ ಕಾರ್ಯ ಯಶಸ್ವಿಯಾಗಿ ಜರುಗಿತು.
ಪರಿಸರ ಸಂರಕ್ಷಣೆ ಎಂಬುದು ಇಂದಿನ ಅತ್ಯಗತ್ಯವಾದ ಜವಾಬ್ದಾರಿ. ವಾತಾವರಣದ ಸಮತೋಲನ, ನೈಸರ್ಗಿಕ ಸಂಪತ್ತಿನ ಉಳಿವು ಮತ್ತು ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಪರಿಸರ ಕಲ್ಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ, ನಮ್ಮ ಕಾಲೇಜು ನಿರಂತರವಾಗಿ ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಸಕ್ರಿಯ ಪಾತ್ರವಹಿಸುತ್ತಿದೆ ಎಂದು ಕಾಲೇಜಿನ ಪ್ರಾಚಾರ್ಯ ಮಹೇಂದ್ರ. ಜಿ. ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಬೀಜದ ಉಂಡೆಗಳ (Seed Balls) ತಯಾರಿಕೆ ವಿಧಾನ ಬಗ್ಗೆ ವಿವರವಾಗಿ ತರಬೇತಿ ನೀಡಲಾಯಿತು. ಮಣ್ಣು, ಜೈವಿಕ ಗೊಬ್ಬರ, ನೀರು ಮತ್ತು ವಿವಿಧ ಪ್ರಾಕೃತಿಕ ಮರಗಳ ಬೀಜಗಳನ್ನು ಬಳಸಿಕೊಂಡು, 3800ಕ್ಕೂ ಹೆಚ್ಚು ಬೀಜದ ಉಂಡೆಗಳು ತಯಾರಿಸಲ್ಪಟ್ಟವು.
ನಂತರ ಈ ಉಂಡೆಗಳನ್ನು ಗಜೇಂದ್ರಗಡದ ಸ್ಥಳೀಯ ಗುಡ್ಡ ಪ್ರದೇಶದಲ್ಲಿ ನೈಸರ್ಗಿಕ ವಾತಾವರಣಕ್ಕೆ ತಕ್ಕಂತೆ ಬಿತ್ತಲಾಯಿತು. ಉಷ್ಣ ಮತ್ತು ಬಿಸಿಲು ಪ್ರಭಾವಿತ ಪ್ರದೇಶಗಳಲ್ಲಿ ಮರಗಳ ಬೆಳವಣಿಗೆಗೆ ಅನುಕೂಲವಾಗುವಂತಹ ವಿವಿಧ ಪ್ರಜಾತಿಯ ಬೀಜಗಳನ್ನು ಆಯ್ಕೆಮಾಡಲಾಗಿತ್ತು.
ನಮ್ಮ ಕಾಲೇಜು ಪರಿಸರ ಕಾಳಜಿಯನ್ನು ಕೇವಲ ಮಾತಿನಲ್ಲಿ ಅಲ್ಲ, ಆಚರಣೆಯಲ್ಲಿಯೂ ಪ್ರದರ್ಶಿಸುತ್ತದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿಯು ಬೆಳೆದು, ಅವರು ಭವಿಷ್ಯದಲ್ಲಿ ಜವಾಬ್ದಾರಿಯುತ ನಾಗರಿಕರಾಗುವಂತೆ ಪ್ರೇರಣೆಯಾಗುತ್ತದೆ. ಇಂತಹ ಚಟುವಟಿಕೆಗಳು ಮುಂದೆಯೂ ನಿತ್ಯ ನಡೆಯುತ್ತಲೇ ಇರುತ್ತವೆ ಎಂಬ ನಂಬಿಕೆ ನಮ್ಮದು ಎಂಬುವದು ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಅಭಿಪ್ರಾಯವಾಗಿದೆ.
ಇತ್ತೀಚಿಗೆ ಪರಿಸರ ಸಂರಕ್ಷಣೆ ಕಾರ್ಯಕ್ರಮಗಳು ವೇದಿಕೆ ಮೇಲೆ ಜರುಗಿ ಕಾರ್ಯಕ್ರಮ ಮುಗಿದ ಮೇಲೆ ತೆಗೆದುಕೊಂಡು ಬಂದ ಗಿಡವನ್ನು ಎಲ್ಲೆಂದರಲ್ಲಿ ಇಟ್ಟು ಹೋಗುವ ಪ್ರಸಂಗಗಳ ಮಧ್ಯ ಬಿ ಎಸ್ ಎಸ್ ಕಾಲೇಜಿನ ವಿದ್ಯಾರ್ಥಿಗಳು ಸ್ವತ ಬೀಜದುಂಡೆ ತಯಾರಿಸಿ ಗುಡ್ಡಗಾಡುಗಳಲ್ಲಿ ಅವುಗಳನ್ನು ಮಳೆಗಾಲ ಪ್ರಾರಂಭದ ಸೂಕ್ತ ಸಮಯದಲ್ಲಿ ನೆಡುತ್ತಿರುವದು ಖುಷಿ ತಂದಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.
ವರದಿ:ಚನ್ನು. ಎಸ್.