ಸರ್ಕಾರಿ ಕಾಲೇಜಿನಲ್ಲಿ ʼಕೃತಕ ಬುದ್ಧಿಮತ್ತೆ (ಎ.ಐ.) ಮತ್ತು ವೃತ್ತಿ ಮಾರ್ಗದರ್ಶನʼ ಕಾರ್ಯಾಗಾರ.
ಎಐ ಜನರಿಗಿಂತ ವೇಗವಾಗಿ ಮತ್ತು ಹೆಚ್ಚು ನಿಖರವಾಗಿ ಕಾರ್ಯನಿರ್ವಹಿಸುತ್ತದೆ.

ಸರ್ಕಾರಿ ಕಾಲೇಜಿನಲ್ಲಿ ʼಕೃತಕ ಬುದ್ಧಿಮತ್ತೆ (ಎ.ಐ.) ಮತ್ತು ವೃತ್ತಿ ಮಾರ್ಗದರ್ಶನʼ ಕಾರ್ಯಾಗಾರ.
ನರೇಗಲ್:ಸತ್ಯಮಿಥ್ಯ (ಸೆ-13)
ಆಯಾ ಕಾಲಘಟ್ಟದ ತಂತ್ರಜ್ಞಾನ ಸಂಶೋಧನೆಗಳು ಮಾನವ ಸಮಾಜವನ್ನು ಬಹುವಾಗಿ ಬದಲಿಸಿವೆ ಮತ್ತು ಈಗಲೂ ಬದಲಿಸುತ್ತಿವೆ. ಕೃತಕ ಬುದ್ಧಿಮತ್ತೆ (ಎ.ಐ) ಆಧುನಿಕ ಮಾನವನ ಅಂತದ್ದೊಂದು ಅಪರೂಪದ ಮತ್ತು ಕ್ರಾಂತಿಕಾರಿ ಸಂಶೋಧನೆಯಾಗಿದೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಉಪಯೋಗಿಸಿಕೊಳ್ಳಬೇಕು ಎಂದು ಮಾನ್ವಿಯ ಸಂಪನ್ಮೂಲ ವ್ಯಕ್ತಿ ರಮೇಶ ವೈ ಹೇಳಿದರು.
ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ‘ಕೃತಕ ಬುದ್ಧಿಮತ್ತೆ (ಎ.ಐ.) ಮತ್ತು ವೃತ್ತಿ ಮಾರ್ಗದರ್ಶನʼ ಮೇಲೆ ಶನಿವಾರ ಆಯೋಜನೆ ಮಾಡಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಗಾಳಿ, ನೀರು, ಬೆಳಕು, ಆಹಾರವಿಲ್ಲದೇ ಮನುಷ್ಯ ಹೇಗೆ ಬದುಕಲಾರನೋ, ಹಾಗೆಯೇ ಇನ್ನು ಮುಂದೆ ಮಾನವ ಎಐ ಇಲ್ಲದೇ ಬದುಕಲಾರದ ಪರಿಸ್ಥಿತಿ ಬರಬಹುದು. ಜಾಗತಿಕ ಸಮಾಜದಲ್ಲಿ ಕಂಪ್ಯೂಟರ್ ಮಾಡಿದ ಕ್ರಾಂತಿಯನ್ನು, ಎಐ ಮತ್ತಷ್ಟು ಪರಿಣಾಮಕಾರಿಯಾಗಿ ಮುಂದಕ್ಕೆ ಕೊಂಡೊಯ್ಯತ್ತಿದೆ. ಸದ್ಯ ಪ್ರಚಲಿತದಲ್ಲಿರುವ ಹಾಗೂ ಭವಿಷ್ಯದ ತಂತ್ರಜ್ಞಾನ ಎಂದೇ ಭಾವಿಸಿರುವ ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ತಂತ್ರಗಳ ಬಗ್ಗೆ ಧನಾತ್ಮಕ ಮತ್ತು ಋಣಾತ್ಮಕ ಸಂಗತಿಗಳು ಒಳಗೊಂಡಿವೆ. ಅದರಲ್ಲಿ ಒಳ್ಳೆಯದನ್ನು ಆಯ್ಕೆಮಾಡಿಕೊಂಡರೆ ಉಪಯೋಗವಾಗುತ್ತದೆ ಎಂದರು.
ಮಾನವರು ತಮ್ಮ ಬುದ್ಧಿಶಕ್ತಿಯನ್ನು ಬಳಸಿ ಮಾಡುವ ಕಾರ್ಯಗಳಾದ ಕಲಿಕೆ, ಸಮಸ್ಯೆ ಪರಿಹಾರ, ನಿರ್ಧಾರ ಕೈಗೊಳ್ಳುವಿಕೆ, ಭಾಷೆ ಅರ್ಥೈಸುವಿಕೆ ಮತ್ತು ದೃಶ್ಯ ಗ್ರಹಿಕೆಯಂತಹ ಸಾಮರ್ಥ್ಯಗಳನ್ನು, ಯಂತ್ರಗಳು ಅಥವಾ ಕಂಪ್ಯೂಟರ್ ಪ್ರೋಗ್ರಾಂಗಳ ಮೂಲಕ ಪೂರೈಸುವುದೇ ಕೃತಕ ಬುದ್ಧಿಮತ್ತೆಯಾಗಿದೆ.ಎಐ ಅನೇಕ ಸಂದರ್ಭಗಳಲ್ಲಿ ಜನರಿಗಿಂತ ವೇಗವಾಗಿ ಮತ್ತು ಹೆಚ್ಚು ನಿಖರವಾಗಿ ಕಾರ್ಯನಿರ್ವಹಿಸುತ್ತದೆ, ಸಮಯ ಮತ್ತು ಶ್ರಮವನ್ನು ಉಳಿಸುತ್ತದೆ ಹಾಗಾಗಿ ಎಐ ಈಗ ದೈನಂದಿನ ಜೀವನದ ಒಂದು ಭಾಗವಾಗಿದೆ. ನಿರ್ದೇಶನಗಳಿಗಾಗಿ ಸಿರಿ ನಕ್ಷೆಗಳು ಮತ್ತು ಆನ್ಲೈನ್ ಶಾಪಿಂಗ್ ಸಲಹೆಗಳಂತಹ ಧ್ವನಿ ಸಹಾಯಕರು ಎಐ ಅನ್ನು ಬಳಸುತ್ತಾರೆ. ನೋಟ್ಸ್ ಸಿದ್ದತೆ, ಪಿಪಿಟಿ ತಯಾರಿ, ಇಮೇಜ್ ಸೃಷ್ಟೀಕರಣ, ವ್ಯಕ್ತಿಗತ ಸಹಾಯ ಸೇರಿದಂತೆ ಆಸ್ಪತ್ರೆಯಲ್ಲಿ ವೈದ್ಯರ ಜೊಗೆತೆ ಸಮಯ ನಿಗದಿಯನ್ನು ಐಎ ಅಪ್ಲಿಕೇಷನ್ಗಳು ತಾವಾಗಿಯೇ ಮಾಡುತ್ತಿವೆ. ಹೀಗಾಗಿ ಕೃತಕ ಬುದ್ಧಿ ಮತ್ತೆ ಮತ್ತು ಮಷಿನ್ ಲರ್ನಿಂಗ್ ಬಹುತೇಕ ಎಲ್ಲಾ ಕ್ಷೇತ್ರಗಳನ್ನೂ ಆವರಿಸಿವೆ ಎಂದು ಮಾಹಿತಿ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಐಕ್ಯೂಎಸಿ ಸಂಚಾಲಕಿ ಜಯಶ್ರೀ ಮುತಗಾರ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಯಂತೆ, ಕೃತಕ ಬುದ್ಧಿಮತ್ತೆ ತಲುಪದ ಕ್ಷೇತ್ರವಿಲ್ಲ ಎಂದು ಹೇಳಬಹುದು. ಆಧುನಿಕ ಮಾನವನ ಜೀವನದ ಪ್ರತಿಯೊಂದೂ ಕ್ಷೇತ್ರವನ್ನೂ ಹಂತ ಹಂವಾಗಿ ಆವರಿಸಿಕೊಳ್ಳುತ್ತಿರುವ ಎಐ, ಹಲವು ಭರವಸೆಗಳನ್ನು ಮತ್ತು ಅಷ್ಟೇ ಆತಂಕಗಳನ್ನು ಹೊತ್ತು ನಮ್ಮ ಮುಂದೆ ಬಂದು ನಿಂತಿದೆ. ಇದರ ನಿರ್ವಹಣೆ ನಮ್ಮ ಹೊಣೆಗಾರಿಕೆಯಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಲಿತುಕೊಳ್ಳುವುದು ಮುಖ್ಯವಾಗಿದೆ. ಅದಕ್ಕಾಗಿಯೇ ಆಯೋಜನೆ ಮಾಡಲಾದ ಕಾರ್ಯಾಗಾರದ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಾಗಾರದ ಸಂದರ್ಭದಲ್ಲಿ ಅನೇಕ ಟ್ರೆಡಿಂಗ್ ಇಮೇಜ್ಗಳ ಕುರಿತು ಎಐ ಅಪ್ಲಿಕೇಷನ್ ಬಳಕೆ ಮಾಡಿಕೊಂಡು ಪ್ರಾಯೋಗಿಕವಾಗಿ ರಮೇಶ ಅವರು ಪ್ರಸ್ತುತ ಪಡಿಸಿದರು. ನಂತರ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಎಸ್. ಎಸ್. ಸೂಡಿ, ಶಿವಮೂರ್ತಿ ಕುರೇರ, ಸುನಂದಾ ಮುಂಜಿ, ಅನೀಲಕುಮಾರ, ನಸರೀನಾಬಾನು ಜಮಾದಾರ, ಶಿವಕುಮಾರ ಇದ್ದರು.
ವರದಿ : ಸುರೇಶ ಬಂಡಾರಿ