
ನಗರದಲ್ಲಿ ಇಂದಿನಿಂದ ಒಂದುವಾರ ಬೃಹತ್ ಶೋಭಾಯಾತ್ರೆ, ಕುಂಭಮೇಳ

ಗದಗ : ಸತ್ಯಮಿಥ್ಯ (ನ-11)
ನಗರದ ವಿಡಿಎಸ್‌ಟಿ ಮೈದಾನದಲ್ಲಿ ನ.11ರಿಂದ 18ರ ವರೆಗೆ ನಡೆಯಲಿರುವ ಅತಿರುದ್ರ ಮಹಾಯಜ್ಞ ಹಾಗೂ ಕಿರಿಯ ಕುಂಭಮೇಳಕ್ಕೆ ಇಂದು ಭರದ ಸಿದ್ಧತೆಗಳು ನಡೆದವು.
ಅಮರನಾಥೇಶ್ವರ ಮಹಾದೇವ ಮಠದ ಮಹಾಂತ ಸಹದೇವಾನಂದ ಗಿರೀಜೀ ಮಹಾರಾಜರ ನೇತೃತ್ವದಲ್ಲಿ 9 ಅಗ್ನಿಕುಂಡದಲ್ಲಿ ಅತಿರುದ್ರ ಮಹಾಯಜ್ಞ ಹಾಗೂ ಕಿರಿಯ ಕುಂಭಮೇಳ ನಡೆಯಲಿದ್ದು, ಯಜ್ಞ ಯಾಗಾದಿಗಳಿಗೆ ಸಿದ್ಧತೆಗಳು ನಡೆದವು.
ಹಿಮಾಲಯದಲ್ಲಿ ತಪಸ್ಸು ಮಾಡಿದ ನಾಗಾಸಾಧುಗಳು, ಸನ್ಯಾಸಿಗಳು, ಅರ್ಚಕರು ಈ ಯಾಗವನ್ನು ನಡೆಸಿಕೊಡಲಿದ್ದಾರೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 9 ಗಂಟೆಗೆ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದಿಂದ ಬೃಹತ್ ಶೋಭಾಯಾತ್ರೆ ಹಾಗೂ ಏಳು ಸಾವಿರ ಕುಂಭಮೇಳ 12 ಕಲಾ ತಂಡ ವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅತಿರುದ್ರ ಮಹಾಯಜ್ಞ ನಡೆಯುವ ಸ್ಥಳ ತಲುಪಲಿದೆ. ಅತಿರುದ್ರ ಮಹಾಯಜ್ಞದಲ್ಲಿ 150 ಮಂದಿ ದಂಪತಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಬರುವ ಭಕ್ತರಿಗೆಲ್ಲಾ ಅಷ್ಟೂ ದಿನಗಳ ಕಾಲ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
‘ಯಜ್ಞದ ಸಲುವಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಾಗಾಸಾಧುಗಳು ಹಾಗೂ ಅರ್ಚಕ ವೃಂದಕ್ಕೆ ವಸತಿ ವ್ಯವಸ್ಥೆ ಮಾಡಲಾಗಿದೆ’ ಎಂದು ಅತಿರುದ್ರ ಮಹಾಯಜ್ಞ ಸೇವಾ ಸಮಿತಿಯ ಅಧ್ಯಕ್ಷ ಕಿರಣ ಭೂಮಾ ತಿಳಿಸಿದ್ದಾರೆ.
ವರದಿ : ಮುತ್ತು ಗೋಸಲ.




