ಕವಲೋಡೆದ ಪೀಳಿಗೆ ಒಂದಾಗಿಸುವ ಗುರಿಯೊಂದಿಗೆ ದಸರಾ ಮಹೋತ್ಸವ : ಶ್ರೀ ರಂಭಾಪುರಿ ಜಗದ್ಗುರುಗಳು.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶಾಸಕ ಜಿಎಸ್ ಪಾಟೀಲ್ ಹಾಗೂ ದಾಸೋಹ ಸಮಿತಿಯ ಅಧ್ಯಕ್ಷರಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ನೇತೃತ್ವದಲ್ಲಿ ಮಹೋತ್ಸವ.
ಕವಲೋಡೆದ ಪೀಳಿಗೆ ಒಂದಾಗಿಸುವ ಗುರಿಯೊಂದಿಗೆ ದಸರಾ ಮಹೋತ್ಸವ : ಶ್ರೀ ರಂಭಾಪುರಿ ಜಗದ್ಗುರುಗಳು.
ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶಾಸಕ ಜಿಎಸ್ ಪಾಟೀಲ್ ಹಾಗೂ ದಾಸೋಹ ಸಮಿತಿಯ ಅಧ್ಯಕ್ಷರಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ನೇತೃತ್ವದಲ್ಲಿ ಮಹೋತ್ಸವ.
ನರೇಗಲ್ : ಸತ್ಯಮಿಥ್ಯ (ಸ -09).
ಇಂದಿನ ಯುವ ಪೀಳಿಗೆ ಆಧುನಿಕ ಭರಾಟೆಗೆ ಸಿಕ್ಕು ಭಾರತೀಯ ಸಂಸ್ಕೃತಿಯಿಂದ ದೂರಸರಿಯುತ್ತಿದ್ದಾರೆ. ಹಿರಿಯ ಮತ್ತು ಕಿರಿಯರ ದಾರಿಗಳು ಕವಲೋಡೆದು ಭಿನ್ನ ದಾರಿಯಲ್ಲಿ ಸಾಗುತ್ತಿದ್ದಾರೆ. ಕವಲೋಡೆದವರನ್ನು ಒಗ್ಗೂಡಿಸುವದಕ್ಕಾಗಿಯೇ ಅಬ್ಬಿಗೇರಿಯಲ್ಲಿ ದಸರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ರೋಣ ತಾಲೂಕಿನ ಅಬ್ಬಿಗೇರಿ ಹಿರೇಮಠದ ಸಭಾಂಗಣದಲ್ಲಿ ಆಯೋಜಿಸಿದ ದಸರಾ ಮಹೋತ್ಸವದ ಪೂರ್ವಭಾವಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭಾರತೀಯ ಸಂಸ್ಕೃತಿ ಆಚಾರ್ಯರು, ಋಷಿಮುನಿಗಳು ಮತ್ತು ಸತ್ಪುರುಷರು ಅನೇಕ ಸಂದೇಶಗಳನ್ನು ಕೊಟ್ಟು ಹೋಗಿದ್ದಾರೆ.ಯುವ ಜನಾಂಗಕ್ಕೆ ದಾರಿ ದೀಪವಾಗಿವೆ ಅವುಗಳಿಂದ ಬದುಕನ್ನು ಸದೃಢವಾಗಿ ಕಟ್ಟಿಕೊಳ್ಳಬಹುದು. ಧರ್ಮ ಹಲವು,ಆಚರಣೆಗಳು ಬೇರೆ ಬೇರೆಯಾದರೂ ಎಲ್ಲ ಧರ್ಮಗಳ ಗುರಿ ಜನಕಲ್ಯಾಣವೇ ಆಗಿದೆ. ಧರ್ಮದ, ಜಾತಿಯ, ಭಾಷೆಯ, ಪ್ರಾಂತೀಯ ಹೆಸರಿನಲ್ಲಿ ಹಲವಾರು ಸಂಘರ್ಷಗಳು ಆಗಾಗ ನಡೆಯುತ್ತಲೇ ಇವೆ. ಸ್ವಾರ್ಥ ಮತ್ತು ಸಂಕುಚಿತ ಮನೋಭಾವನೆಗಳು ಇದಕ್ಕೆಲ್ಲ ಕಾರಣ. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ, ಶಾಂತಿ ಸಾಹಿತ್ಯ ಸಂಸ್ಕೃತಿ -ಸಂವರ್ಧಿಸಲಿ ಶಾಂತಿ-ಸಮೃದ್ಧಿ ಸರ್ವರಿಗಾಗಲಿ ಎನ್ನುವ ಸದಾಶಯದಂತೆ ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ಧರ್ಮಪೀಠ ಕಾರ್ಯ ಮಾಡುತ್ತಿದೆ.
ಧರ್ಮ ಧರ್ಮಗಳಲ್ಲಿ ಜಾತಿ ಜಾತಿಗಳಲ್ಲಿ ಉಂಟಾಗುತ್ತಿರುವ ಸಂಘರ್ಷ ದೂರಾಗಲು ಸಮಾಜದಲ್ಲಿ ಶಾಂತಿ ನೆಮ್ಮದಿ ಪ್ರಾಪ್ತವಾಗಲು ಇಂಥ ಧಾರ್ಮಿಕ ಸಮಾರಂಭಗಳ ಅವಶ್ಯಕತೆ ಇದೆ. ಆದ್ದರಿಂದ ಅಕ್ಟೋಬರ್ 3 ರಿಂದ 12ರವರೆಗೆ ಅಬ್ಬಿಗೇರಿ ಗ್ರಾಮದ ಶ್ರೀ ಅನ್ನದಾನೀಶ್ವರ ಪ್ರೌಢಶಾಲಾ ಆವರಣದಲ್ಲಿ ಹಾಕಿರುವ ಮಾನವ ಧರ್ಮ ಮಂಟಪದಲ್ಲಿ ದಸರಾ ಧರ್ಮ ಸಮ್ಮೇಳನ ಜರುಗಲಿದೆ. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶಾಸಕ ಜಿಎಸ್ ಪಾಟೀಲ್ ಹಾಗೂ ದಾಸೋಹ ಸಮಿತಿಯ ಅಧ್ಯಕ್ಷರಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ಮತ್ತು ಸಕಲ ಭಕ್ತರು ಶ್ರಮಿಸುತ್ತಿದ್ದಾರೆ. ಈ ಹಿಂದಿನ ಎಲ್ಲ ದಸರಾ ಮಹೋತ್ಸವ ದಾಖಲೆಗಳನ್ನು ಮೀರಿ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ರಂಭಾಪುರಿ ಜಗದ್ಗುರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭ ಉದ್ಘಾಟಿಸಿದ ಶಾಸಕ ಜಿ.ಎಸ್.ಪಾಟೀಲ್ ಮಾತನಾಡಿ ಸುಖ ಶಾಂತಿ ಬದುಕಿಗೆ ಧರ್ಮದ ಅವಶ್ಯಕತೆ ಬಹಳಷ್ಟು ಇದೆ. ಧರ್ಮ ಮಾರ್ಗದಲ್ಲಿ ಪ್ರತಿಯೊಬ್ಬರೂ ನಡೆಯುವ ಸತ್ಯ ಸಂಕಲ್ಪ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಅಬ್ಬಿಗೇರೆಯಲ್ಲಿ ಜರುಗಲಿರುವ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಮಹೋತ್ಸವ ಈ ಭಾಗದ ಭಕ್ತರಿಗೆ ಬೆಳಕು ತೋರುವುದೆಂಬ ಆತ್ಮವಿಶ್ವಾಸ ನಮ್ಮೆಲ್ಲರಿಗೂ ಇದೆ. ನಾವು ನೀವೆಲ್ಲರೂ ಸೇರಿ ಈ ದಸರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಜರುಗಿಸೋಣ. ಯಾರಿಗೂ ಯಾವುದೇ ರೀತಿ ಆತಂಕ ಮೂಡುವ ಅವಶ್ಯಕತೆ ಇಲ್ಲ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಇದ್ದರೆ ಎಲ್ಲವನ್ನು ಯಶಸ್ವಿಯಾಗಿ ಮಾಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀ ಅನ್ನದಾನೇಶ್ವರ ಪ್ರೌಢಶಾಲಾ ಆವರಣದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಹರ ಗುರು ಚರಮೂರ್ತಿಗಳ ಸಮ್ಮುಖದಲ್ಲಿ ಶಾಸಕ ಜಿ.ಎಸ್.ಪಾಟೀಲರು ಭವ್ಯ ಮಂಟಪಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಅಬ್ಬಿಗೇರಿ ಹಿರೇಮಠದ ಮತ್ತು ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಹಾಗೂ ಸೂಡಿ ಜುಕ್ತಿ ಹಿರೇಮಠದ ಡಾ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮದ ಯಶಸ್ವಿಗಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕೆಂದು ತಿಳಿಸಿದರು. ಈ ಸಮಾರಂಭದಲ್ಲಿ ನರೇಗಲ್, ಚಳಗೇರಿ, ಹಂಪಸಾಗರ, ಸಂಗೊಳ್ಳಿ, ಬದಾಮಿ, ದೋಟಿಹಾಳ, ಅಬ್ಬಿಗೇರಿ, ಎಲ್ಲಾರಲಿಂಗ ಶ್ರೀಗಳು ಉಪಸ್ಥಿತರಿದ್ದರು.
ಐ.ಎಸ್.ಪಾಟೀಲ್, ಡಾ ಗಚ್ಚಿನ ಮಠ, ಚಂದ್ರು ಬಾಳೆಹಳ್ಳಿಮಠ, ವೀರೇಶ ಕೂಗು, ಕುರುಡಗಿ ಅಯ್ಯನಗೌಡ್ರು, ಡಾ ಬಸವರೆಡ್ಡಿ, ವೇ.ಪಾಲಾಕ್ಷಯ್ಯ ಅರಳೇರಿಮಠ, ಸಂಗಯ್ಯ ರಾಟಿಮನಿ, ಬೆನ್ನೂರು ಮಾಸ್ಟರ್ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಅಬ್ಬಿಗೇರಿ, ಕುರುಡಗಿ, ನರೇಗಲ್, ಹಾಳಕೇರಿ, ಕೋಡಿಕೊಪ್ಪ, ಕೊಚಲಾಪುರ, ಗದಗ, ರೋಣ, ನಿಡಗುಂದಿ, ಬೇಲೇರಿ, ಗುಜಮಾಗಡಿ, ಸವಡಿ, ಕೋಟಮಚಗಿ, ಕೊಪ್ಪಳ, ಗುಡೂರು, ಹುನಗುಂದ, ಕೃಷ್ಣಾಪುರ, ತಾಳಿಕೋಟಿಯಿಂದ ಆಗಮಿಸಿದ ಮಠದ ಶಿಷ್ಯರು-ಸದ್ಭಕ್ತರು ಇದ್ದರು.
ಶ್ರೀ ಮಲ್ಲಿಕಾರ್ಜುನ್ ಗುಗ್ಗರಿ ಸ್ವಾಗತ ಬಯಸಿದರು. ಅಂದಪ್ಪ ವೀರಾಪುರ ನಿರೂಪಣೆ ಮಾಡಿದರು ಸಮಾರಂಭದ ನಂತರ ಬಂದ ಎಲ್ಲಾ ಭಕ್ತರಿಗೆ ಅನ್ನದಾಸೋಹ ಜರುಗಿತು.
ವರದಿ : ಚನ್ನು. ಎಸ್.