ಸ್ಥಳೀಯ ಸುದ್ದಿಗಳು

ಆರಂಭವಾಗದ ಕಾಳಜಿ ಕೇಂದ್ರ: ಜಾನುವಾರಿಗಿಲ್ಲ ಮೇವಿನ ವ್ಯವಸ್ಥೆ – ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು.

Share News

ಆರಂಭವಾಗದ ಕಾಳಜಿ ಕೇಂದ್ರ: ಜಾನುವಾರಿಗಿಲ್ಲ ಮೇವಿನ ವ್ಯವಸ್ಥೆ – ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು 

ನಡುಗಡ್ಡೆಯಾಗಿದ ಮುತ್ತೂರು | ಮನೆಗಳಿಗೆ ನುಗ್ಗಿದ ನೀರು

ವರದಿ : ಸಚೀನ ಆರ್ ಜಾಧವ

ಸಾವಳಗಿ:ಸತ್ಯಮಿಥ್ಯ (ಆ-23).

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಜಮಖಂಡಿ ತಾಲ್ಲೂಕಿನ ಮುತ್ತೂರು ಗ್ರಾಮ ನಡುಗಡ್ಡೆಯಾಗಿದೆ. ಬಹುತೇಕ ರಸ್ತೆಗಳ ಮೇಲೆ ನೀರು ಬಂದಿದ್ದು ಸಂಚಾರಕ್ಕೆ ತೊಂದರೆಯಾಗಿದೆ.

ಮುತ್ತೂರ ಗ್ರಾಮದ ಸುತ್ತಲೂ ನೀರು ಆವರಿಸಿರುವುದರಿಂದ ಬೋಟ್ ಮೂಲಕ ನಡುಗಡ್ಡೆಗೆ ಹೋಗುವಂತಾಗಿದೆ. ಸಾರ್ವಜನಿಕರಾದ ಧರೆಪ್ಪ ನಾಟಿಕಾರ, ರವಿ ನಾಟಿಕಾರ, ಹಣಮಂತ ನಾಟಿಕಾರ, ಮುತ್ತಣ್ಣನಾಟಿಕಾರ, ಗುರಸಿದ್ದ ಹಿಪ್ಪರಗಿ, ರಾಮು ಅಮಾತಾ ಅವರ ಮನೆಗಳಿಗೆ ನೀರು ನುಗ್ಗಿದೆ. ಆ ಕುಟುಂಬದವರು ಇನ್ನೂ ಸ್ಥಳಾಂತರವಾಗಲು ಹಿಂದೇಟು ಹಾಕುತ್ತಿದ್ದಾರೆ.

‘ತಾಲ್ಲೂಕಾಡಳಿತ ಇನ್ನೂ ಕಾಳಜಿ ಕೇಂದ್ರ ತೆರೆದಿಲ್ಲ, ಜಾನುವಾರಿಗೆ ಮೇವಿನ ವ್ಯವಸ್ಥೆ ಇಲ್ಲ. ಅಧಿಕಾರಿಗಳು ಇಲ್ಲಿ ಬಂದು ಮನೆ ಖಾಲಿ ಮಾಡಿ ಬೇರೆ ಕಡೆ ಸ್ಥಳಾಂತರವಾಗಲು ಒತ್ತಾಯಿಸುತ್ತಿದ್ದಾರೆ, ಮನೆ ಖಾಲಿ ಮಾಡಿ ನಾವು ಎಲ್ಲಿಗೆ ಹೋಗುವುದು’ ಎಂದು ರೈತ ಧರೆಪ್ಪ ನಾಟಿಕಾರ ಪ್ರಶ್ನಿಸಿದರು.

ಮುತ್ತೂರಿನಲ್ಲಿ 40 ರಿಂದ 50 ಕುಟುಂಬಗಳು ವಾಸವಾಗಿವೆ. 150ಕ್ಕೂ ಹೆಚ್ಚು ಜಾನುವಾರು ಇವೆ. 30 ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಜನರು ವಾಸವಾಗಿದ್ದು, ಅಂದಾಜು 170 ಎಕರೆ ಜಮೀನಿದೆ. ಹಲವು ಜಮೀನುಗಳಲ್ಲಿ ಪ್ರತಿ ವರ್ಷ ಅಧಿಕಾರಿಗಳು ಬಂದು ಬೇರೆಡೆ ಹೋಗಲು ಹೇಳುತ್ತಾರೆ. ನಾವು ಜನ-ಜಾನುವಾರು, ಮನೆಯ ಸಾಮಗ್ರಿ ತೆಗೆದುಕೊಂಡು ಹೋಗಿ ಬರಲು ಕನಿಷ್ಠ 20 ಸಾವಿರ ಬೇಕಾಗುತ್ತದೆ. ಅದನ್ನು ಎಲ್ಲಿಂದ ತರುವುದು? ನಮಗೆ ಶಾಶ್ವತ ಪರಿಹಾರ ನೀಡಿ. ನಾವೇ ಇಲ್ಲಿಂದ ಬೇರೆ ಕಡೆ ಹೋಗುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಭೀಮಪ್ಪ ಹಿಪ್ಪರಗಿ ಹೇಳಿದರು.

ನೀರಿನ ಹರಿವು ಹೆಚ್ಚಳ: ಹಿಪ್ಪರಗಿ ಜಲಾಶಯದಲ್ಲಿ ಒಳ ಹರಿವು 1.81 ಲಕ್ಷ ಕ್ಯೂಸೆಕ್, ಹೊರಹರಿವು 1.80 ಕ್ಯೂಸೆಕ್ ಇದೆ. ನೀರಿನ ಮಟ್ಟ 523.93 ಮೀಟರ್ ಇದ್ದು, ಒಳಹರಿವು ಹೆಚ್ಚಾಗಿರುವುದರಿಂದ ಜಲಾಶಯದ 22 ಗೇಟ್‌ಗಳನ್ನು ತೆರೆದು ಬಂದಿರುವ ಎಲ್ಲ ನೀರನ್ನು ಹರಿಬಿಡಲಾಗುತ್ತಿದೆ.

“ಕುಟುಂಬಗಳ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಕಾಳಜಿ ಕೇಂದ್ರ ತೆರೆದಿಲ್ಲ. ನೀರಿನ ಮಟ್ಟ ಹೆಚ್ಚುತ್ತಿದೆ. ಜನರು ಸುರಕ್ಷಿತವಾಗಿ ಇರಲು ಸೂಚಿಸಲಾಗಿದೆ.”

ಅನೀಲ ಬಡಿಗೇರ.ತಹಶೀಲ್ದಾ‌ರ್, ಜಮಖಂಡಿ


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!