ನರೇಗಲ್ : ಸತ್ಯಮಿಥ್ಯ (ಸ -02)
ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿರುವ ಸ್ಥಳೀಯ ಪಟ್ಟಣ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ಇಂದು ಮುಹೂರ್ತ ಫಿಕ್ಸ್ ಆಗಿದೆ.
ಕೆಲವು ದಿನಗಳ ಹಿಂದೆ ಬಿಜೆಪಿ ಪಕ್ಷದ ಆಂತರಿಕ ಜಗಳ ತಾರಕಕ್ಕೆರಿದ ಹಿನ್ನೆಲೆಯಲ್ಲಿ 6 ಜನ ಬಿಜೆಪಿ ಸದಸ್ಯರು ಆಪರೇಷನ್ ಹಸ್ತಕ್ಕೆ ಕೈ ಚಾಚಿದ್ದಾರೆ ಎಂಬ ರೂಮರ್ ಹರಡಿತ್ತು.
ಅದಕ್ಕೆ ಪುಷ್ಟಿಕರಣವೆಂಬಂತೆ ಇಂದು ಬೆಳಿಗ್ಗೆ 10:45 ನಿಮಿಷಕ್ಕೆ ನರೇಗಲ್ ಪಟ್ಟಣ ಪಂಚಾಯತಗೆ ಕಾಂಗ್ರೇಸ್ ಮುಖಂಡರ ವಾಹನದಲ್ಲಿ ಆಗಮಿಸಿದ ನಾಪತ್ತೆಯಾಗಿದ್ದ ಬಿಜೆಪಿ ಸದಸ್ಯರಾದ ಫಕೀರಪ್ಪ ಮಳ್ಳಿ ಮತ್ತು ಕುಮಾರಸ್ವಾಮಿ ಕೊರಧಾನ್ಯಮಠ ಕ್ರಮವಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಅಧಿಕಾರಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿಯವರಿಗೆ ನಾಮಪತ್ರ ಸಲ್ಲಿಸಿ ಮರಳಿ ಅದೇ ವಾಹನದಲ್ಲಿ ತೆರಳಿದ್ದಾರೆ.
ಈ ಮೂಲಕ ಎಲ್ಲ ಉಹಾಪೋಹಗಳಿಗೂ ತೆರೆ ಬಿದ್ದಂತಾಗಿದ್ದು 6 ಜನ ಬಂಡಾಯ ಬಿಜೆಪಿ,ಒಂದು ಪಕ್ಷೇತರ, 3 ಜನ ಕಾಂಗ್ರೇಸ್ ಸದಸ್ಯರು ಸೇರಿದಂತೆ ಶಾಸಕ ಜಿ. ಎಸ್. ಪಾಟೀಲ್ ಮತ ಸೇರಿದರೆ ಒಟ್ಟು ಒಟ್ಟು 11 ಜನ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬೆಂಬಲ ನೀಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಈ ನಡುವೆ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನಗೌಡ ಬುಮನಗೌಡ್ರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ವಿಶಾಲಾಕ್ಷಿ ಹೊಸಮನಿ ನಾಮಪತ್ರ ಸಲ್ಲಿಸಿದ್ದು ಬಿಜೆಪಿ ಬಂಡಾಯ ಸದಸ್ಯರಲ್ಲಿ 3 ಜನ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲಸೂಚಿಸಲಿದ್ದಾರೆ ಎಂದು ಕಮಲ ಪಡೆ ನಾಯಕರು ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡು ಸ್ಥಾನಗಳನ್ನು ಬಂಡಾಯ ಬಿಜೆಪಿ ಸದಸ್ಯರಿಗೆ ನೀಡಿದ್ದು ಕಾಂಗ್ರೇಸ್ ಕಿಂಗ್ ಮೇಕರ ರಾಜಕೀಯಕ್ಕೆ ನಾಂದಿಹಾಡಿದೆ. ಬಿಜೆಪಿ ಸದಸ್ಯರಿಗೆ ವಿಪ್ ಜಾರಿಯಿಂದ ಇಂದಿನ ಚುನಾವಣೆ ಫಲಿತಾಂಶದ ಮೇಲೆ ತತ್ ಕ್ಷಣ ಯಾವುದೇ ಪ್ರಭಾವ ಸಾಧ್ಯವಿಲ್ಲ ಎಂದು ರಾಜಕೀಯ ಚಿಂತಕರಿಂದ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸ್ಥಳದಲ್ಲಿ ಕ್ಷಣಕ್ಷಣಕ್ಕು ಸುತ್ತಮುತ್ತಲಿನ ಹಳ್ಳಿಯ ಜನ ಸೇರಿದಂತೆ ಎರಡು ಪಕ್ಷದ ಕಾರ್ಯಕರ್ತರು ಜಮಾವಣೆಯಾಗುವ ಮೂಲಕ ವಾತಾವರಣ ಸೂಕ್ಷ್ಮವಾಗುತ್ತಿದೆ.ಭದ್ರತಾ ದೃಷ್ಟಿಯಿಂದ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ವರದಿ : ಚನ್ನು. ಎಸ್.