ಜಿಲ್ಲಾ ಸುದ್ದಿ

ಅದ್ದೂರಿಯಾಗಿ ಜರುಗಿದ ಬಸವಪುರಾಣ ಮಹಾಮಂಗಲೋತ್ಸವ.

Share News

ಅದ್ದೂರಿಯಾಗಿ ಜರುಗಿದ ಬಸವಪುರಾಣ ಮಹಾಮಂಗಲೋತ್ಸವ.

ಗಜೇಂದ್ರಗಡ – ಸತ್ಯಮಿಥ್ಯ (ಡಿ-27).

ಬಸವಣ್ಣನವರ ತತ್ವಾದರ್ಶಗಳನ್ನು ಶತಶತಾಮನಗಳಿಂದ ಸಂತರು, ಸ್ವಾಮೀಜಿಗಳು,ದಾರ್ಶನಿಕರು ಹೇಳುತ್ತಾ ಬಂದಿದ್ದಾರೆ. ಇಂದು ಅವುಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ ನುಡಿದರು.

ಅವರು ನಗರದ ಎ.ಪಿ.ಎಂ.ಸಿ ಎದುರಿಗೆ ಇರುವ ಬಯಲು ಜಾಗೆಯಲ್ಲಿ ನಡೆದ ಬಸವಪುರಾಣ ಕಾರ್ಯಕ್ರಮದ ಮಹಾಮಂಗಲೋತ್ಸವ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತ.ಇಂದಿನ ಯುವ ಪೀಳಿಗೆ ಪಬ್- ಕ್ಲಬ್ ಸಂಸ್ಕೃತಿಗೆ ದಾಸರಾಗುತ್ತಿರು ವಾತಾವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಅವರಲ್ಲಿ ಬಸವಣ್ಣನವರ ತತ್ವಾದರ್ಶಗಳನ್ನು ತುಂಬುವ ಕಾರ್ಯಕ್ರಮ ನೋಡಿ ಸಂತೋಷವಾಯಿತು. ತಂದೆ-ತಾಯಿಗಳಿಗೆ ಗೌರವ, ಹೆಂಡತಿ – ಮಕ್ಕಳೊಂದಿಗೆ ಜವಾಬ್ದಾರಿಯ ನಡೆ, ಗಂಡನನ್ನು ಪ್ರೀತಿಯಿಂದ ನೋಡಿಕೊಳ್ಳುವ ಹೆಂಡತಿ, ಅತ್ತೆ -ಸೊಸೆಯಂದಿರ ಅವಿನಾಭಾವ ಸಂಬಂಧ ಹೀಗೆ ಹತ್ತು ಹಲವು ವಿಚಾರಗಳನ್ನು ಸಮೃದ್ಧವಾಗಿ ಬೆಳೆಸುವದನ್ನು ಬಸವ ಪುರಾಣ ಕಲಿಸುತ್ತದೆ. ಬಸವಣ್ಣನವರ ವಚನಗಳನ್ನು ಕೇಳುವದು, ಹಾಡುವುದಕ್ಕಿಂತ ಅವುಗಳ ಅನುಕರಣೆ ಆದಾಗ ಮನುಷ್ಯನ ಬದುಕು ಸಾರ್ಥಕ ಎಂದರು.

ಮದ್ಯಾಹ್ನ ನಗರದ ಮೈಸೂರುಮಠದಿಂದ ಪ್ರಾರಂಭವಾದ ಬಸವಪುರಾಣ ಮಹಾಮಂಗಲೋತ್ಸವ ಕಾರ್ಯಕ್ರಮದ ಮೆರವಣಿಗೆಯಲ್ಲಿ ಆನೆ ಮೇಲೆ ಅಂಬಾರಿ, ಅಂಬಾರಿಯೊಳಗೆ ಬಸವಪುರಾಣ ಮಹಾಕಾವ್ಯವನ್ನು ಪ್ರತಿಷ್ಠಾಪನೆ ಮಾಡಿ. ಸಾವಿರಾರು ತಾಯಂದಿರು ತಮ್ಮ ಮಸ್ತಕದ ಮೇಲೆ ವಚನಗ್ರಂಥವನ್ನು ಹೊತ್ತುಕೊಂಡು ಹೋಗುವದು ಮನೋಹರವಾಗಿತ್ತು. ನಾಡಿನ ನಾನಾಭಾಗಗಳಿಂದ ಅನೇಕ ವಾಧ್ಯತಂಡಗಳು ಮೆರವಣಿಗೆಗೆ ತಮ್ಮ ಸುನಾದ ಬರಿತವಾಗಿ ಹೆಜ್ಜೆ ಹಾಕುವ ಮೂಲಕ ಮೆರಗು ನೀಡಿದರು.

ತಮ್ಮ 92 ನೇ ವಯಸ್ಸಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಂಸದ ಆರ್. ಎಸ್. ಪಾಟೀಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತ. ಸತತ ಒಂದು ತಿಂಗಳ ಕಾಲ ಅತ್ಯಂತ ವೈಭವದಿಂದ ಜರುಗಿದ ಬಸವಪುರಾಣ ಕಾರ್ಯಕ್ರಮ ನೋಡಲು ಅತ್ಯಂತ ಸಂತೋಷವೆನಿಸುತ್ತದೆ. ಈ ಕಾರ್ಯಕ್ರಮ ಗಜೇಂದ್ರಗಡ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುತ್ತದೆ ಎಂದರು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಕುದರಿಮೋತಿ ಮೈಸೂರುಮಠದ ಪೂಜ್ಯ ಶ್ರೀ ಮನ್ ನಿರಂಜನ ಜಗದ್ಗುರು ವಿಜಯಮಹಾಂತ ಮಹಾಸ್ವಾಮಿಗಳು. ಬಸವಣ್ಣನವರು ಜಾತಿ-ಮತ-ಪಂತಗಳನ್ನು ಮೀರಿದ ವಿಶ್ವಮಾನವ ಪರಂಪರೆಯ ಸಾಕಾರ ಮೂರ್ತಿ. ಅವರ ವಚನಗಳು ಮಾನವಕುಲ ಉದ್ದಾರಕ್ಕೆ, ಗಜೇಂದ್ರಗಡ ನಗರದಲ್ಲಿ ಒಂದು ತಿಂಗಳುಕಾಲ ಬಸವಪುರಾಣ ಕಾರ್ಯಕ್ರಮ ನಡೆಸಿ ಗಜೇಂದ್ರಗಡ ಮತ್ತು ಸುತ್ತಮುತ್ತಲಿನ ಗ್ರಾಮದ ಜನತೆಯಲ್ಲಿ ಬಸವ ಪ್ರಜ್ಞೆ ಜಾಗೃತಿಗೊಳಿಸುವ ಪ್ರಯತ್ನ ಮಾಡಿದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳ ಶ್ರಮ ಅನನ್ಯ. ಹಾಲಕೇರಿ ಅನ್ನದಾನೇಶ್ವರ ಮಠಕ್ಕೂ ಮತ್ತು ಮೈಸೂರು ಮಠಕ್ಕೂ ಇರುವ ಸಂಬಂಧ ಶತಮಾನಗಳಷ್ಟು ಹಳೆಯದು. ಆ ಪರಂಪರೆಯನ್ನು ಮುನ್ನೇಡೆಸಿಕೊಂಡು ಹೋಗುತ್ತಿರುವ ಮುಪ್ಪಿನ ಬಸವ ಮಹಾಸ್ವಾಮಿಗಳಿಗೆ ನಮ್ಮ ಸಹಕಾರ ನಿರಂತರವೆಂದರು.

ಕಾರ್ಯಕ್ರಮದ ರೂವಾರಿಗಳಾದ ಪೂಜ್ಯಶ್ರೀ ಮನ್ ನಿರಂಜನ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ. ಬಸವಪುರಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತಾದಿಗಳ ಬದುಕಿನಲ್ಲಿ ಒಳ್ಳೆಯ ಬದಲಾವಣೆ ಬರಲಿ, ಗಜೇಂದ್ರಗಡ ಜನತೆಯ ಜೊತೆಗೆ ನಿರಂತರ ಒಂದು ತಿಂಗಳುಕಾಲದ ಸಂಪರ್ಕ ನಮ್ಮ ಬದುಕಿನಲ್ಲಿಯೂ ಅನೇಕ ಹೊಸವಿಚಾರಗಳು ಮೂಡಲು ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀಮನ್ ಮಹಾರಾಜನಿರಂಜನ ಜಗದ್ಗುರು ಡಾ. ಗುರುಸಿದ್ದ ರಾಜಯೋಗಿಂದ್ರ ಮಹಾಸ್ವಾಮಿಗಳು, ತ್ರಿಕಾಲ ಲಿಂಗ ಪೂಜಾನಿಷ್ಠರಾದ ಪೂಜ್ಯಶ್ರೀ ಮ. ನಿ. ಪ್ರ ಸಿದ್ದಲಿಂಗ ಮಹಾಸ್ವಾಮಿಗಳು, ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ ನಾಯ್ಕ, ಸುಭಾಸ ಮ್ಯಾಗೇರಿ, ಸಿದ್ದಣ್ಣ ಬಂಡಿ, ಮುದಿಯಪ್ಪ ಮುಧೋಳ, ಎ. ಪಿ. ಗಾಣಿಗೇರ, ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಮಹಾಸ್ವಾಮಿಗಳು ಸೇರಿದಂತೆ ಪ್ರವಚನಕಾರ ಅನ್ನದಾನ ಶಾಸ್ತ್ರಿಗಳು, ಸಂಗಮೇಶ ನೀಲಾ, ಷಣ್ಮುಖಯ್ಯ ಕಂಚಿನೆಗಳೂರು, ಸಿದ್ದೇಶಕುಮಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!