
ಪೌರ ಕಾರ್ಮಿಕರು, ಸ್ವಚ್ಛ ಭಾರತದ ರಾಯಭಾರಿಗಳು :ಸಿದ್ದರಬೆಟ್ಟ ಶ್ರೀಗಳು.
ಜಕ್ಕಲಿ : ಸತ್ಯಮಿಥ್ಯ (ಸೆ.೨೪).
ಪೌರ ಕಾರ್ಮಿಕರು ಸ್ವಚ್ಛ ಭಾರತದ ರಾಯಭಾರಿಗಳಾಗಿದ್ದಾರೆ. ಪ್ರಕೃತಿ ವೈಪರಿತ್ಯಗಳೂಂದಿಗೆ ಸ್ಪರ್ಧಿಸಿ ದಿನನಿತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ಸ್ವಚ್ಛ ನಾಗರಿಕ ಸಂಸ್ಕೃತಿಯ ನಾಯಕರುಗಳಾಗಿದ್ದಾರೆ ಎಂದು ಸಿದ್ದರಬೆಟ್ಟ-ಅಬ್ಬಿಗೇರಿ ಶ್ರೀ ವೀರಭದ್ರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಅವರು ಸಮೀಪದ ಅಬ್ಬಿಗೇರಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮದ ಹಿರೇಮಠ ಮತ್ತು ಪಂಚಾಯತಿ ವತಿಯಿಂದ ಸೋಮವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೌರಕಾರ್ಮಿಕರು ಸ್ವಚ್ಛತಾ ರೂವಾರಿಗಳು. ಕರೊನಾದಂತ ಸಂದಿಗ್ಧ ಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ನೈರ್ಮಲೀಕರಣ ಕಾರ್ಯ ಮಾಡಿದ್ದರು, ಕೆಸರು, ಕೊಳೆ, ಕಸ, ಸೊಳ್ಳೆ, ವೈರಾಣುಗಳ ವಿರುದ್ಧ ಹೋರಾಡುವ ಇವರದು ಕಾಯಕ ತತ್ವ ಎಂದು ಆಶೀರ್ವದಿಸಿದರು.
ಪ್ರಾಸ್ತಾವಿಕವಾಗಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಂ.ಲೋಹಿತ್ ಮಾತನಾಡಿ,
ಪರಿಸರವನ್ನು ಸ್ವಚ್ಛವಾಗಿರಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರ. ಸ್ವಚ್ಛತಾ ಕಾರ್ಯದ ಮೂಲಕ ಜನರ ಆರೋಗ್ಯವನ್ನು ಪರಿಸರವನ್ನು ಗ್ರಾಮವನ್ನು ಸಂರಕ್ಷಿಸುವ ಎಲ್ಲಾ ಪೌರಕಾರ್ಮಿಕ ಸೇವೆ ಕೃತಜ್ಞತಾ ರಹಿತ ಸೇವೆ. ನಾಗರಿಕ ಸಮಾಜ ಇವರ ಸೇವೆಯನ್ನು ಗುರುತಿಸಿ ಯಾವಾಗ ಪೌರಕಾರ್ಮಿಕರನ್ನು ಗೌರವಿಸಲಾಗುತ್ತದೋ ಅಂದೇ ಸ್ವಚ್ಛ ಭಾರತದ ಪರಿಕಲ್ಪನೆ ಸಾಕಾರವಾದಂತೆ ಎಂದು ಅಭಿಪ್ರಾಯಪಟ್ಟರು.
ಪೌರಕಾರ್ಮಿಕರು, ಪೌರಕಾರ್ಮಿಕರ ದಿನದಂದೆ ಕಾಯಕ ತತ್ವದಂತೆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡದ್ದು ಇವರ ಬಗ್ಗೆ ಗೌರವವನ್ನು ಮತ್ತಷ್ಟು ಹೆಚ್ಚಿಸಿತು.
ಈ ಸಂದರ್ಭದಲ್ಲಿ ಗ್ರಾಪಂ ಸಿಬ್ಬಂದಿ ಮತ್ತು ಪೌರ ಕಾರ್ಮಿಕರಾದ ಮೌನೇಶ್ ತೊಂಡಿಹಾಳ, ಈರಪ್ಪ ಹೊಸಮನಿ, ಚಂದಪ್ಪ ದ್ವಾಸಲ, ಅಂದಪ್ಪ ಐಹೊಳಿ, ತಾಯಪ್ಪ ಕೆಂಗಾರ, ಈರಪ್ಪ ತಳವಾರ, ಹನುಮಂತ ದ್ವಾಸಲ, ದುರ್ಗಪ್ಪ ದ್ವಾಸಲ, ಕೃಷ್ಣ ಹಿರೇಮನಿ, ಮುದಿಯಪ್ಪ ಗೌಡನಬಾವಿ, ರುದ್ರಪ್ಪ ಅಸುಂಡಿ, ರಮೇಶ್ ದ್ವಾಸಲ, ಮುತ್ತಪ್ಪ ತಗ್ಗಿನಕೇರಿ, ಬಸವರಾಜ ಜಂತ್ಲಿ, ಬಸವರಾಜ ಮುಧೋಳ, ಪರಸಪ್ಪ ತೊಂಡಿಹಾಳ, ಶರಣಪ್ಪ ತಗ್ಗಿನಕೇರಿ, ಹನುಮಂತ ಐಹೋಳಿ, ಅಶೋಕ ತಳವಾರ, ಪ್ರವೀಣ್ ದ್ವಾಸಲ, ಮೈಲಾರಪ್ಪ ಹೊಸಮನಿ, ಮಲ್ಲಪ್ಪ ಕೆಂಗಾರ್, ಕಾಳಿಂಗಪ್ಪ ಅಸುಂಡಿ ಇವರನ್ನು ಸನ್ಮಾನಿಸಲಾಯಿತು.
ವರದಿ: ಸಂಗಮೇಶ ಮೆಣಸಗಿ.