ಸ್ಥಳೀಯ ಸುದ್ದಿಗಳು

ಬದುಕು ಬೆಳಗಲು ಗುರು ಬೇಕು : ಶ್ರೀ ರಂಭಾಪುರಿ ಶ್ರೀಗಳು.

Share News

ಬದುಕು ಬೆಳಗಲು ಗುರು ಬೇಕು : ಶ್ರೀ ರಂಭಾಪುರಿ ಶ್ರೀಗಳು.

ನರೇಗಲ್ಲ:ಸತ್ಯಮಿಥ್ಯ (ಅ.೦೫).

ಮನುಷ್ಯ ಜೀವನದಲ್ಲಿ ಧರ್ಮ ದೇವರು ಮತ್ತು ಗುರುವನ್ನು ಎಂದೂ ಮರೆಯಬಾರದು. ರವಿ ಕಿರಣದಿಂದ ಹೂ ಅರಳಿದರೆ ಗುರು ಕರುಣದಿಂದ ಆತ್ಮ ಜ್ಞಾನ ದೊರಕುತ್ತದೆ. ಜಗತ್ತು ಬೆಳಗಲು ಸೂರ್ಯಬೇಕು. ಬದುಕನ್ನು ಬೆಳಗಲು ಗುರು ಬೋಧಾಮೃತ ಅವಶ್ಯಕ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಎರಡನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬಾಳಿಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಆ ಗುರಿ ಮುಟ್ಟಿಸಲು ಶ್ರೀ ಗುರುವಿನ ಮಾರ್ಗದರ್ಶನ ಬೇಕು. ಗುರುವಿಲ್ಲದೇ ಅರಿವು ವಿದ್ಯಾ ಬುದ್ಧಿ ಸಿದ್ಧಿಸದು. ಸನ್ನಡತೆ ವಿನಯ ವಿಧೇಯತೆಗಳು ದೊರಕದು. ತಂದೆ ಮೆಚ್ಚಿದರೆ ಮಗನ ಶ್ರೇಯಸ್ಸು. ಗುರು ಮೆಚ್ಚಿದರೆ ಶಿಷ್ಯನ ಉದ್ಧಾರ ಸಾಧ್ಯ. ಗುರು ಕಾರುಣ್ಯವಿಲ್ಲದೇ ಕರ್ಮ ಕಳಚುವುದಿಲ್ಲ. ಗುರು ದೇವನ ಕರುಣೆ ಕಿರಿದಲ್ಲ. ಆ ಹೃದಯ ಹರಕೆಗೆ ಸರಿ ಸಾಟಿಯಾದುದು ಇನ್ನೊಂದಿಲ್ಲ. ಶ್ರೀ ಗುರು ಪರಶಿವನ ಸಾಕಾರ ರೂಪವೆಂದು ಶಾಸ್ತ್ರಸಾರಿ ಹೇಳುತ್ತವೆ.

ಪ್ರಾಪಂಚಿಕ ಸಂಬಂಧಗಳು ಕಾಲಾಂತರದಲ್ಲಿ ಶಿಥಿಲಗೊಳ್ಳುತ್ತವೆ. ಆದರೆ ಗುರು ಶಿಷ್ಯರ ಸಂಬಂಧ ಹಾಗಲ್ಲ. ಚಿರಂತನ ನಿತ್ಯ ನೂತನ ಎಂಬುದನ್ನು ಯಾರೂ ಮರೆಯಬಾರದು. ಗುರು ಕಾರುಣ್ಯದ ಸಾಗರದಲ್ಲಿ ಮಿಂದು ಮಡಿವಂತನಾಗಲು ಬಾಳು ಬಂಗಾರವಾಗುತ್ತದೆ. ಹಿಂದೆ ಗುರು ಮುಂದೆ ಗುರಿಯಿದ್ದರೆ ಬಾಳಿನಲ್ಲಿಷಏನೆಲ್ಲವನ್ನು ಸಾಧಿಸಲು ಸಾಧ್ಯವಾಗುತ್ತದೆ. ನವರಾತ್ರಿಯ ಎರಡನೆಯ ದಿನದಲ್ಲಿ ಬ್ರಹ್ಮಚಾರಿಣಿ ಹೆಸರಿನಲ್ಲಿ ದೇವಿಯನ್ನು ಪೂಜಿಸುತ್ತಾರೆ. ಮನಸ್ಸು ದೇಹ ಮತ್ತು ಇಂದ್ರಿಯಗಳ ಮೇಲೆ ಪ್ರಭುತ್ವ ಸಾಧಿಸುವುದರಲ್ಲಿ ಶಕ್ತಿ ದೊರಕುತ್ತದೆ. ಕಷ್ಟ ಕಾಲದಲ್ಲಿ ಕೂಡಾ ಮಾನಸಿಕ ಸಮತೋಲನ ಮತ್ತು ಆತ್ಮ ವಿಶ್ವಾಸ ಉಳಿಸಿಕೊಳ್ಳಲು ನೆರವಾಗುತ್ತದೆ ಎಂದರು.

ನೇತೃತ್ವ ವಹಿಸಿದ ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಮಾತನಾಡಿ ಸುಖದ ಬದುಕಿಗೆ ಪಯತ್ನ ಬೇಕು. ಸಾಧನೆ ಪ್ರಯತ್ನವಿಲ್ಲದೇ ಉನ್ನತಿ ಸಾಧ್ಯವಿಲ್ಲ. ಬದುಕು ವಿಕಾಸಗೊಳ್ಳಲು ಶ್ರೀ ಗುರುವಿನ ಮಾರ್ಗದರ್ಶನ ಅವಶ್ಯಕವೆಂದರು. ಚಿಕ್ಕಮಗಳೂರು ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಸಿಂಧನೂರು-ಕನ್ನೂರು ಸೋಮನಾಥ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು.

“*ರಂಭಾಪುರಿ ಬೆಳಗು*” ಮಾಸ ಪತ್ರಿಕೆ ಬಿಡುಗಡೆ ಮಾಡಿದ ಶಾಸಕ ಮಾಜಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ ಲಿಂ.ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದರೆ ಪ್ರಸ್ತುತ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು “ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ಸಾರ್ವತ್ರಿಕ ಘೋಷಣೆ ಮಾಡಿದ್ದಾರೆ. ಈ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕೆಂಬುದು ಶ್ರೀ ರಂಭಾಪುರಿ ಜಗದ್ಗುರುಗಳ ಆಶಯವಾಗಿದೆ.

ಸಾಮರಸ್ಯ ಸದ್ಭಾವನೆಗಳನ್ನು ಬೆಳೆಸುವಲ್ಲಿ ಧರ್ಮ ಸಂವರ್ಧನೆ ಮಾಡುವಲ್ಲಿ ದಸರಾ ಧರ್ಮ ಸಮ್ಮೇಳನದ ಪಾತ್ರ ಮಹತ್ವದ್ದಾಗಿದೆ. ಪ್ರಸ್ತುತ ಜಗದ್ಗುರುಗಳು ದಸರಾ ಧರ್ಮ ಸಮ್ಮೇಳನಕ್ಕೆ ಹೊಸ ಸ್ವರೂಪ ನೀಡುತ್ತ ಬಂದಿದ್ದಾರೆ ಎಂದು ಹೇಳಿ ತಮ್ಮ ಜೀವನದಲ್ಲಿ ನಡೆದ ನೈಜ ಘಟನೆ ವಿವರಿಸಿ ತಾವು ಅನಾರೋಗ್ಯಕ್ಕೆ ಈಡಾದಾಗ ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದದ ಬಲದಿಂದ ಗುಣಮುಖರಾಗಿದ್ದನ್ನು ವಿವರಿಸಿದರು.

ಭಂಡಿವಾಡದ ಖ್ಯಾತ ಸಾಹಿತ್ಯ ಸಂಶೋಧಕ ಡಾ. ಅಡಿವೆಪ್ಪ ಸಿ.ವಾಲಿ “ಗುರು ಮಹಿಮೆಯ ಮಹತ್ವ” ಕುರಿತು ಉಪನ್ಯಾಸ ನೀಡುತ್ತ ಮನುಷ್ಯನಲ್ಲಿ ಅಡಗಿರುವ ಅಜ್ಞಾನ ಕಳೆಯಲು ಜಗದಲ್ಲಿ ಗುರುವಿನಿಂದ ಮಾತ್ರ ಸಾಧ್ಯ. ಎಷ್ಟು ಜನ ಮಹಾತ್ಮರು ಆಗಿ ಹೋಗಿದ್ದಾರೆಯೋ ಅವರೆಲ್ಲರ ಜೀವನವನ್ನು ಒಳಹೊಕ್ಕು ನೋಡಿದಾಗ ಅವರೆಲ್ಲರ ಬಾಳಿನ ಬೆಳಕು ಶ್ರೀಗುರು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ವೀರಶೈವ ಧರ್ಮ ಪರಂಪರೆಯಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ರಂಭಾಪುರಿ ಪೀಠ ಪರಂಪರೆಯಲ್ಲಿ ಆಗಿ ಹೋದ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ಧಾರ್ಮಿಕ ಬೋಧ ಸಾಧನೆಯೊಂದಿಗೆ ಸಾಮಾಜಿಕ ಸತ್ಕ್ರಾಂಗೈದ ಪರಮಾಚಾರ್ಯರು. ನೊಂದವರ ಬೆಂದವರ ಬಾಳಿಗೆ ಬೆಳಕು ತೋರಿ ಉನ್ನತಿಯ ಮಾರ್ಗ ತೋರಿದವರು. ನಂಬಿದ ಭಕ್ತರ ಬಾಳಿನಲ್ಲಿ ಶಾಂತಿ ಸಂತೃಪ್ತಿ ನೆಲೆಗೊಳ್ಳಲು ಸದಾ ಶ್ರಮಿಸಿದವರು. ಶ್ರೀ ರಂಭಾಪುರಿ ಜಗದ್ಗುರುಗಳವರ ದಸರಾ ಧರ್ಮಸಮ್ಮೇಳನ ಜನ ಸಮುದಾಯದ ಶ್ರೇಯಸ್ಸಿಗೆ ಪ್ರೇರಕ ಶಕ್ತಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಎಸ್. ಪಾಟೀಲ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಟಿ. ಈಶ್ವರ್ ಭಾಗವಹಿಸಿದ್ದರು. ಎಡೆಯೂರು, ನರೇಗಲ್ಲ, ಮಳಲಿ, ಕೆಂಭಾವಿ, ಲಕ್ಷ್ಮೇಶ್ವರ ದೊಡ್ಡಸಗರ, ವಡ್ಡಟ್ಟಿ, ಸಂಗೊಳ್ಳಿ, ಸವಡಿ ಶ್ರೀಗಳು ವೇದಿಕೆಯಲ್ಲಿದ್ದರು.

ಗುರುರಕ್ಷೆ: ಬದಾಮಿ ನವಗ್ರಹ ಹಿರೇಮಠದ ಶಿವಪೂಜಿ ಶಿವಾಚಾರ್ಯ ಸ್ವಾಮಿಗಳು, ಮಸ್ಕಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು, ಹಾಸನ ಜಿವೇನಳ್ಳಿಮಠದ ಸಂಗಮೇಶ್ವರ ಸ್ವಾಮಿಗಳು, ನಾಗವಂದದ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಕುಷ್ಟಗಿಯ ಬಸಟ್ಟೆಪ್ಪ ಕುಂಬಳಾವತಿ, ಅಬ್ಬಿಗೇರಿಯ ಪ್ರೊ.ಬಿ.ಎಸ್.ಶಿರೋಳ, ದಾವಣಗೆರೆಯ ಎನ್.ಎ. ಮುರಗೇಶ ಬೆಂಗಳೂರಿನ ಕೆ.ಬಿ.ಉದಯ, ಶಿವಮೊಗ್ಗದ ಬಿ.ಮಹಾರುದ್ರಪ್ಪ, ಗದಗ ನಗರದ ಪಾರ್ವತಿದೇವಿ ಶಾಬಾದಿಮಠ, ಅಕ್ಕಮ್ಮ ಗುರುಸ್ವಾಮಿಮಠ, ಪ್ರಶಾಂತ ಶಾಬಾದಿಮಠ ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಅಬ್ಬಿಗೇರಿಯ ಎ.ಪಿ.ಎಮ್.ಸಿ. ಮಾಜಿ ಸದಸ್ಯ ಅಂದಪ್ಪ ವೀರಾಪುರ ಸ್ವಾಗತಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗದುಗಿನ ಗಾನಭೂಷಣ ವೀರೇಶ ಕಿತ್ತೂರ ಮತ್ತು ಮಹಿಳಾ ರುದ್ರ ಬಳಗ ಗದಗ ಇವರಿಂದ ಸಂಗೀತ ಮತ್ತು ಶಿವಮೊಗ್ಗದ ಶಾಂತಾ ಆನಂದ ಇವರಿಂದ ನಿರೂಪಣೆ ನಡೆಯಿತು. ಗಜೇಂದ್ರಗಡದ ಚಂಬಣ್ಣ ನಿಂಗಪ್ಪ ಚವಡಿ ಇವರಿಂದ ಅನ್ನದಾಸೋಹದ ಸೇವೆ ಜರುಗಿತು.

ವರದಿ : ಸಂಗಮೇಶ ಮೆಣಸಗಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!