
ವಿಡಿಎಸ್ ಕ್ಲಾಸಿಕ್ ಸಿಬಿಎಸ್ಇ ಶಾಲೆಯಲ್ಲಿ ಗುರು ಪೂರ್ಣಿಮೆ ಆಚರಣೆ.
ಗದಗ:ಸತ್ಯಮಿಥ್ಯ (ಜು-12).
ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿಯ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿಬಿಎಸ್ಇ ಶಾಲೆಯಲ್ಲಿ ಶ್ರದ್ಧಾ ಭಕ್ತಿಯಿಂದ ಮಕ್ಕಳು ಸಮಸ್ತ ಗುರು ವೃಂದಕ್ಕೆ ಗುರು ಕಾಣಿಕೆ ಸಮರ್ಪಿಸಿ ಗುರು ಪೂರ್ಣಿಮೆ ಆಚರಿಸಲಾಯಿತು.
ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಗುರುವಿನ ಮಾತು ಅರಿವಿನ ಗುರುತು ಸ್ವಲ್ಪ ಕೇಳು ನೀ ಕೂತು. ಗುರು ಪೂರ್ಣಿಮಾ ಹಬ್ಬವು ಸಾಮಾನ್ಯವಾಗಿ ಹಿಂದೂ ಮತ್ತು ಬೌದ್ಧರಿಂದ ಆಚರಿಸಲ್ಪಡುವ ಹಬ್ಬವಾಗಿದೆ. ಹಿಂದೂ ಧಾರ್ಮಿಕತೆಯಲ್ಲಿ ಗುರುವಿನ ಮೌಲ್ಯ ಮತ್ತು ತ್ಯಾಗವನ್ನು ಬಿಂಬಿಸಲು ಸಾಮಾನ್ಯವಾಗಿ ಆಚರಿಸಲ್ಪಡುವ ಹಬ್ಬವಾಗಿದೆ. ಈ ಹಬ್ಬವನ್ನು ಹಿಂದೂ ಸಾಧು ಸಂತರು ತಮ್ಮ ದೈವ ಗುರು ವ್ಯಾಸರ ಸ್ಮರಣೆಗೋಸ್ಕರ ಆಶಾಢ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯೆಂದು ಆಚರಿಸಿದ್ದರು, ಹಾಗೆಯೇ ಬೌದ್ಧರು ತಮ್ಮ ಧರ್ಮಗುರು ಬುದ್ಧನ ಗೌರವಾರ್ಥವಾಗಿ ಆಚರಿಸುತ್ತಾರೆ. ರವೀಂದ್ರನಾಥ ಟ್ಯಾಗೋರ್ ಎಂಬ ಗುರು ಶಾಂತಿನಿಕೇತನ ಎಂಬ ಶಾಲೆಯಿಂದ ಅಪಾರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದರು, ರಾಮಕೃಷ್ಣ ಪರಮಹಂಸ ಎಂಬ ಗುರು ವಿವೇಕಾನಂದ ಎಂಬ ಶಿಷ್ಯರನ್ನು ಜಗತ್ತಿಗೆ ಬೆಳಕಾಗುವಂತೆ ಬೆಳೆಸಿದರು, ಅಪಾರ ಜ್ಞಾನವನ್ನು ಹೊಂದಿದ್ದರೂ ಸರಳತೆಯ ಸಾಕಾರ ಮೂರ್ತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಸಮಾಜಕ್ಕೆ ಮಾದರಿ ಗುರುವಾಗಿದ್ದರು. ಅಂದರೆ ವಿದ್ಯೆಯನ್ನು ಯಾವ ಕಳ್ಳಕಾಕರಿಂದಲೂ ಮೋಸ ಮಾಡಿ ಕದ್ದೋಯ್ಯಲು ಸಾಧ್ಯವಿಲ್ಲ, ಯಾವ ರಾಜನು ಕೂಡ ತನ್ನ ಸಾಮರ್ಥ್ಯ ಮತ್ತು ದರ್ಪದಿಂದ ವಸಪಡಿಸಿಕೊಳ್ಳಲು ಸಾಧ್ಯವಿಲ್ಲ, ಹೊತ್ತು ತಿರುಗಾಡಲು ಇದು ಭಾರವೂ ಅಲ್ಲ, ಹೇಗೆ ಖರ್ಚು ಮಾಡುತ್ತೇವೋ ಹಾಗೆ ವರ್ಧಿಸುವಂತಹದು, ವಿದ್ಯೆ ಎಲ್ಲಾ ಸಂಪತ್ತಿಗಿಂತಲೂ ಶ್ರೇಷ್ಠವಾದದ್ದು, ಇಂತಹ ಅತ್ಯಮೂಲ್ಯ ಸಂಪತ್ತನ್ನು ಧಾರೆ ಎರೆದ ಸಮಸ್ತ ಗುರು ವೃಂದಕ್ಕೆ ಕೋಟಿ ನಮನಗಳನ್ನು ಸಲ್ಲಿಸೋಣ. ಗುರು ಇಲ್ಲದ ಗುರಿ ಮುಟ್ಟಿದವರ ಚರಿತ್ರೆ ಇತಿಹಾಸದಲ್ಲೇ ಇಲ್ಲ. ನನ್ನ ಗುರುವೇ ನನ್ನ ಆತ್ಮಬಲ, ಜೈ ಗುರುದೇವ ಎಂದು ಗುರುಗಳ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲೆಯ ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ. ರವರು ನಮ್ಮ ಪರಂಪರೆಯಲ್ಲಿ ಗುರುವಿಗೆ ತುಂಬಾ ಮಹತ್ವದ ಸ್ಥಾನವಿದೆ. ಗುರು ನಮಗೆ ವಿದ್ಯಾದಾನ ಮಾಡುವುದರ ಜೊತೆಗೆ ನಮ್ಮನ್ನು ಭವ ಬಂಧನದಿಂದ ಪಾರು ಮಾಡುತ್ತಾನೆ, ಆದ್ದರಿಂದ ನಮ್ಮ ಪೂರ್ವಜರು ಹರ ಮುನಿದರೂ ಗುರು ಕಾಯುತ್ತಾನೆ ಎಂದು ನಂಬಿದ್ದರು. ತಂದೆ, ತಾಯಿ ಹಾಗೂ ಗುರುಗಳನ್ನು ನಾವು ಎಂದಿಗೂ ಮರೆಯಬಾರದು ಎಂದರು. ಒಂದಕ್ಷರ ಕಲಿಸಿದಾತಂ ಗುರು ಎಂಬಂತೆ, ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು ಎಂಬುದನ್ನು ಮಕ್ಕಳು ಅರಿತುಕೊಳ್ಳಬೇಕು. ಜೊತೆಗೆ ಸನಾತನ ಕಾಲದ ಗುರು-ಶಿಷ್ಯರ ಪರಂಪರೆಯ ಬಗ್ಗೆ, ಹಿಂದಿನ ಗುರುಕುಲದ ಪದ್ಧತಿ ಹಾಗೂ ಪ್ರಸ್ತುತ ಗುರು ಶಿಷ್ಯರ ಸಂಬಂಧದ ಕುರಿತು ಮಾತನಾಡಿದರು
ಗುರು ಪೂರ್ಣಿಮೆಯ ಕುರಿತು ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಸೈನಾಜ್ ನದಾಫ್, ಶ್ರೀಮತಿ ಅನಿತಾ ಅಂಗಡಿ, ವಿದ್ಯಾರ್ಥಿಗಳಾದ ತನುಶ್ರೀ ಹಾದಿ, ತೇಜಸ್ವಿನಿ ಬಾಗಡೆ, ದಾನೇಶ್ವರಿ ಹೊರಟ್ಟಿ, ಪ್ರಾಚಿ ಗುಳಸ್ಕರ, ಭಾನುಶ್ರೀ. ಕೆ. ಅಮೃತಾ ತಡಸದ ರವರು ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳೆಲ್ಲರೂ ಸಮಸ್ತ ಗುರು ಬಳಗಕ್ಕೆ ತಮ್ಮ ಗುರುಕಾಣಿಕೆ ನೀಡಿ ಭಕ್ತಿ ಪೂರ್ವಕವಾಗಿ ನಮಿಸಿ, ಗುರುವಂದನೆ ಸಲ್ಲಿಸಿದರು. ಪೂನಂ ಕಬಾಡಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಅರ್ಪಿತಾ ನಿಕ್ಕಂ ನಿರೂಪಿಸಿದರು, ಸಾನ್ವಿ ಸೋಮಣ್ಣವರ ಸ್ವಾಗತಿಸಿದರು, ಧೀರಜ್ ಪಾಟೀಲ್ ವಂದಿಸಿದರು. ಕಾರ್ಯಕ್ರಮವನ್ನು ಸ್ವತಃ ವಿದ್ಯಾರ್ಥಿಗಳೇ ಆಯೋಜನೆ ಮಾಡಿದ್ದರು. ಈ ಸಂದರ್ಭದಲ್ಲಿ ಶಾಲೆಯ ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ : ಮುತ್ತು ಗೋಸಲ.