ಕುಕನೂರ ಸಂಭ್ರಮದಿಂದ ಆಚರಿಸಿದ ನಾಗರ ಪಂಚಮಿ.
ಕುಕನೂರ: ಸತ್ಯಮಿಥ್ಯ (ಆಗಸ್ಟ್ -08)
ಪಟ್ಟಣದಾದ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಶ್ರಾವಣ ಮಾಸದ ಮೊದಲನೇ ಹಬ್ಬವಾದ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಉತ್ಸಾಹದಿಂದ ಮಕ್ಕಳು ಮತ್ತು ಮಹಿಳೆಯರು ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದರು.
ನಾಗರ ಪಂಚಮಿಯ ವಿಶೇಷ ಹಬ್ಬಕ್ಕೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ ಅದರಲ್ಲಿ ಅಳೀನ ಹುಂಡಿ, ಎಳ್ಳು ಉಂಡೆ, ಶೇಂಗಾ ಉಂಡೆ, ಬೇಸನ್ ಉಂಡೆ, ಹೆಸರು ಉಂಡೆ, ಮಂಡಾಳ ಉಂಡೆ, ದಾಣಿಯ ಉಂಡೆ, ಮತ್ತು ಕರಿದ ಅವಲಕ್ಕಿ, ಬಜಿ, ಗಾರಿಗೆ, ಇನ್ನು ಅನೇಕ ಖಾದ್ಯಗಳನ್ನು ತಯಾರಿಸಿರುತ್ತಾರೆ.
ಮೊದಲು ನಾಗ ಕಟ್ಟೆಗೆ ಮಹಿಳೆಯರು ಮತ್ತು ಮಕ್ಕಳು ಎಲ್ಲರೂ ತೆರಳಿ ಹಾಲನ್ನ ಎರೆಯುವುದರ ಮೂಲಕ ತಂದೆಯ ಪಾಲ್, ತಾಯಿಯ ಪಾಲು, ದೊಡ್ಡಪ್ಪನ ಪಾಲು, ಚಿಕ್ಕಮ್ಮನ ಪಾಲು , ಅಣ್ಣನ ಪಾಲು ,ಅಕ್ಕನ ಪಾಲು, ತಂಗಿಯ ಪಾಲು, ಅಮ್ಮನ ಪಾಲು, ಅಜ್ಜನ ಪಾಲು ಸರ್ವರ ಪಾಲು ಎಂದು ಹಾಲನ್ನು ಯರೆಯುತ್ತಾರೆ. ದೇವರಿಗೆ ನೈವೇದ್ಯವನ್ನು ಸಮರ್ಪಿಸುತ್ತಾರೆ. ದಾರದಿಂದ ಮಾಡಿದ ಅಂಗು ನುಲೂ ನಾಗಪ್ಪನಿಗೆ ಹಾಕುವುದರ ಮೂಲಕ ಮನೆಯ ಸರ್ವರೂ ಅಂಗೂ ನೂಲನ್ನು ಕೊರಳಲ್ಲಿ ಹಾಕಿಕೊಳ್ಳುತ್ತಾರೆ.ಹಾಲನ್ನು ಯರೆದ ತೆಂಗಿನಕಾಯಿ ಬಟ್ಲಕ್ಕೆ ದಾರವನ್ನು ಕಟ್ಟಿ ಬುಗರಿ ಆಡಿಸುತ್ತಾರೆ.
ನಂತರ ಮಕ್ಕಳು ಮತ್ತು ಮಹಿಳೆಯರು ವಿಶೇಷವಾಗಿ ತೂಗು ಉಯ್ಯಾಲೆ ಕಟ್ಟಿ ಆಟವಾಡಿ ನಗರ ಪಂಚಮಿ ಹಬ್ಬವನ್ನು ಸಂಭ್ರಮಿಸುತ್ತಾರೆ.ಕುಟುಂಬ ಸದಸ್ಯರೆಲ್ಲ ಭೋಜನವನ್ನು ಸವಿದು ಹಬ್ಬ ಆಚರಣೆಯನ್ನು ಮಾಡುತ್ತಾರೆ.
ವರದಿ : ಚನ್ನಯ್ಯ ಹಿರೇಮಠ.