ನೆಲ್ಲೂರ: ಮಳೆಗೆ ಕೆರೆಯಂತಾದ ಶಾಲಾ ಆವರಣ
ಗಜೇಂದ್ರಗಡ:ಸತ್ಯಮಿಥ್ಯ (ಆಗಸ್ಟ್ -17)
ಸಣ್ಣ ಮಳೆ ಬಂದರೂ ಸಮೀಪದ ನೆಲ್ಲೂರು ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಪ್ರೌಢಶಾಲೆ(ಆರ್.ಎಂ.ಎಸ್.ಎ) ಆವರಣ ಕರೆಯಂತಾಗುತ್ತದೆ.
ಶನಿವಾರ ಬೆಳಗಿನ ಜಾವ ಸುರಿದ ಮಳೆಗೆ ಶಾಲೆಯ ಆವರಣ ಸಂಪೂರ್ಣ ಕೆರೆಯ ವಾತಾವರಣ ಸೃಷ್ಟಿಯಾಗಿದೆ. ಪ್ರತಿ ಬಾರಿಯೂ ಮಳೆ ಬಂದರೆ ಶಾಲಾ ವಿದ್ಯಾರ್ಥಿಗಳು ತರಗತಿಗೆ ಹೋಗಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬೃಹತ್ ಶಾಲಾ ಆವರಣದಲ್ಲಿ ಮೂರ್ನಾಲ್ಕು ಅಡಿಯಷ್ಟು ನೀರು ನಿಲ್ಲುವದರಿಂದ ದೈಹಿಕವಾಗಿ ಕುಬ್ಝರಿರುವ ಮಕ್ಕಳಂತೂ ಹೋಗುವುದೇ ಸಾಹಸ ಕೆಲಸ.
ವಾರಗಟ್ಟಲೆ ಶಾಲಾ ಆವರಣದಲ್ಲಿ ನೀರು: ಒಮ್ಮೊಮ್ಮೆ ಜೋರು ಮಳೆ ಬಂದರೆ ವಾರಗಟ್ಟಲೆ ಶಾಲೆಯ ಆವರಣದಲ್ಲಿ ನೀರು ನಿಲ್ಲುತ್ತದೆ. ಆಟದ ಮೈದಾನ ಕೆಸರು ಗದ್ದೆಯಂತಾಗುತ್ತದೆ. ಆಗ ತಿಂಗಳುಗಟ್ಟಲೇ ಕ್ರೀಡಾ ಚಟುವಟಿಕೆಯಿಂದ ವಿದ್ಯಾರ್ಥಿಗಳು ದೂರು ಇರಬೇಕು.
ಈ ಸಮಸ್ಯೆಯನ್ನು ಪರಿಹರಿಸಬೇಕು, ಶಾಲಾ ಆವರಣ ಮತ್ತು ಮೈದಾನವನ್ನು ಅಭಿವೃದ್ಧಿಗೊಳಿಸಬೇಕೆಂದು ಎಷ್ಟೇ ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನ ಆಗಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುಸುತ್ತಾರೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಇಲ್ಲ ಎನ್ನುವ ಹೊತ್ತಿನಲ್ಲಿ, ಈ ಶಾಲೆಗಳಲ್ಲಿ 115 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ ಶಾಲೆಯಲ್ಲಿ ಮೂಲ ಸೌಕರ್ಯಗಳಿಲ್ಲ. ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಲ್ಲಿ ಶಾಲಾ ಆವರಣ ಮತ್ತು ಮೈದಾನವನ್ನು ಅಭಿವೃದ್ಧಿಗೊಳಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದರು.
ಭಾಷಣ ಸಾಕು; ಶಾಲೆಗಳ ಅಭಿವೃದ್ಧಿಗೊಳಿಸಿ: ಮಳೆಯಾದರೆ ನೆಲ್ಲೂರು ಗುಡ್ಡದಿಂದ ರಭಸವಾಗಿ ಬರುವ ಮಳೆನೀರು ಗ್ರಾ.ಪಂದಿಂದ ೨೦೧೬ ರಲ್ಲಿ ಶಾಲೆಯ ಕಾಂಪೌಂಡ್ ಕಾಮಗಾರಿ ಆರಂಭಿಸಿ ೮ ವರ್ಷ ಕಳೆದರೂ ಇಲ್ಲಿಯವರೆಗೂ ಮುಗಿದಿಲ್ಲ. ಆರಂಭಿಕ ಶೂರತ್ವ ತೋರಿಸಿದ ಗ್ರಾ.ಪಂ ಆಡಳಿತ ಮಂಡಳಿ ನಂತರದ ದಿನಗಳಲ್ಲಿ ಅರ್ಧಬರ್ದ ಕಾಂಪೌಂಡ್ ನಿರ್ಮಿಸಿದೆ.
ಸರ್ಕಾರಿ ಶಾಲೆಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಜನಪ್ರತಿನಿಧಿಗಳು ಅವುಗಳಿಗೆ ಕನಿಷ್ಠ ಮೂಲ ಸೌಲಭ್ಯ ಒದಗಿಸಲು ಕ್ರಮವಹಿಸದೆ ಇರುವುದು ಅವರ ತೋರಿಕೆ ಪ್ರೀತಿಗೆ ಹಿಡಿದ ಕನ್ನಡಿ. ಸ್ಥಳೀಯ ಜನಪ್ರತಿನಿಧಿ ರಾಜಕೀಯ ಅನುಕೂಲವಿದ್ದರೆ ಮಾತ್ರ ಶಾಲಾ ಕಾಲೇಜುಗಳತ್ತ ಗಮನ ಹರಿಸುತ್ತಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಯಿಂದ ಕೆಸರುಮಯ ಆಗಿರುವ ಶಾಲಾ ಆವರಣ: ಸಣ್ಣ ಮಳೆಗೂ ಶಾಲಾ ಆವರಣದ ಕೆಸರುಗದ್ದೆಯಾಗುತ್ತದೆ. ಈ ಬಗ್ಗೆ ಹಲವು ಬಾರಿ ನಾವು ಮುಖ್ಯ ಶಿಕ್ಷಕರ ಹಾಗೂ ಸಹ ಶಿಕ್ಷಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ಶಾಲಾಗಳೆಂದರೆ ಏಕಿಷ್ಟು ತಾತ್ಸಾರ?.ಹೆಸರು ಹೇಳು ಇಚ್ಚಿಸದ ವಿದ್ಯಾರ್ಥಿ.
ಸಮಸ್ಯೆ ಪರಿಹಾರ; ನಮ್ಮ ವ್ಯಾಪ್ತಿ ಮೀರಿದ್ದು ನಾನು ಶಾಲೆಗೆ ಬಂದಾಗಿನಿಂದ ಈ ಸಮಸ್ಯೆ ಪರಿಹರಿಸುವ ಸಲುವಾಗಿ ಗ್ರಾ.ಪಂ ಹಾಗೂ ಎರಡು ಬಾರಿ ತಹಶಿಲ್ದಾರರನ್ನೂ ಸಹ ಕರೆಯಿಸಿ ಸಮಸ್ಯೆ ಗಮನಕ್ಕೆ ತಂದಿರುವೆ. ಶಾಸಕರ ಅಧಿಕಾರಿಗಳ ಗಮನಕ್ಕೆ ತರುತ್ತಲೇ ಇದ್ದೇನೆ. ಆದರೆ ಈವರೆಗೂ ಯಾರಿಂದಲೂ ಸ್ಪಂದನೆ ದೊರೆತಿಲ್ಲ. ಗ್ರಾ.ಪಂ ನವರು ಕೆಲಸ ಪ್ರಾರಂಭಿಸಿದರೆ ಅರಣ್ಯ ಇಲಾಖೆಯವರು ತಕರಾರು ನೀಡುತ್ತಾರೆ ಎಂದು ಗ್ರಾ.ಪಂ ಆಡಳಿತ ಸಬೂಬು ನೀಡುತ್ತದೆ. ಈ ಸಮಸ್ಯೆಯಿಂದ ನಮ್ಮ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಮುಖ್ಯೋಪಾಧ್ಯಾಯ, ಸಹ ಶಿಕ್ಷಕರು ಮತ್ತು ಸಿಬ್ಬಂದಿಗೂ ತೊಂದರೆಯಾಗುತ್ತಿದೆ. ಈ ಸಮಸ್ಯೆ ಪರಿಹರಿಸುವುದು ನಮ್ಮ ವ್ಯಾಪ್ತಿ ಮೀರಿದ್ದು ಎನ್ನುತ್ತಾರೆ ಮುಖ್ಯೋಪಾಧ್ಯಯ ಹೆಚ್.ಎಂ.ಕವಡಿಮಟ್ಟಿ.
ಶನಿವಾರ ಸುರಿದ ರಭಸದ ಮಳೆಗೆ ನೆಲ್ಲೂರಿನ ಪ್ರೌಢಶಾಲೆಯ ಆವರಣ ೩ರಿಂದ ೫ ಅಡಿಯವರೆಗೆ ಮಳೆ ನಿಂತು ಸ್ವೀಮಿಂಗ್ ಫೂಲ್ ರೀತಿಯ ವಾತಾವರಣ ನಿರ್ಮಾಣವಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಶಾಲೆಯ ಆವರಣದಲ್ಲಿ ಅವ್ಯವಸ್ಥೆ ಸೃಷ್ಟಿಯಾಗುತ್ತದೆ. ಮೈದಾನದಲ್ಲಿ ನಿಂತ ನೀರು ಒಂದು ವಾರ ಇರುತ್ತದೆ. ಇದರಿಂದ ಕೆಟ್ಟ ವಾಸನೆಯಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ. ಶಾಲಾ ಕೊಠಡಿಗಳಲ್ಲೂ ಮತ್ತು ಶಿಕ್ಷಕರ ಕೊಠಡಿಗಳಲ್ಲೂ ಮಳೆ ನೀರು ನಿಂತು ಪಾಠ ಪ್ರವಚನಗಳು ಮತ್ತು ಪಠ್ಯೇತರ ಚಟುವಟಿಕೆಗಳು ಕುಂಠಿತಗೊಂಡಿವೆ ಎಂದು ಸ್ಥಳೀಯ ಯುವ ಮುಖಂಡ ಬಸನಗೌಡ ಪಾಟೀಲ ದೂರಿದರು.
ವರದಿ:ಮುತ್ತು ಗೋಸಲ