ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ದೊಡ್ಡದು – ಪ್ರೊ. ಗಾರಗಿ.
ಗಜೇಂದ್ರಗಡ:ಸತ್ಯಮಿಥ್ಯ (ಡಿ -08).
ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಹಾಗೂ ಕಲಿಕೆಯಲ್ಲಿ ಉತ್ತಮ ಅಂಕ ಗಳಿಸುವಲ್ಲಿ ಪಾಲಕರ ಪಾತ್ರ ದೊಡ್ಡದಾಗಿರುತ್ತದೆ ಎಂದು ಅನ್ನದಾನೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ವಸಂತರಾವ್ ಗಾರಗಿ ಹೇಳಿದರು.
ಗಜೇಂದ್ರಗಡ ಪಟ್ಟಣದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಪಾಲಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳು ಕಾಲೇಜಿಗಿಂತ ಹೆಚ್ಚಿನ ಸಮಯ ಮನೆಯಲ್ಲಿ ಹಾಗೂ ಪಾಲಕರ ಜೊತೆಯಲ್ಲಿ ಕಳೆಯುತ್ತಾರೆ. ಆದ್ದರಿಂದ ಮಕ್ಕಳು ಕಾಲೇಜಿನಿಂದ ಮನೆಗೆ ಬಂದಾಗ ಅವರ ಪುಸ್ತಕ, ಮನೆಗೆಲಸ ಹಾಗೂ ಚಟುವಟಿಕೆಗಳನ್ನು ಗಮನಿಸಬೇಕು. ಕಲಿಕೆಗೆ ಅಗತ್ಯವಾಗುವ ಉತ್ತಮ ವಾತಾವರಣವನ್ನು ಒದಗಿಸಬೇಕು ಎಂದರು. ಪ್ರತಿ ಮಗುವಿನ ಶೈಕ್ಷಣಿಕ ಸಾಧನೆಯನ್ನು ಸಂಸ್ಕಾರಯುತ ಮಾರ್ಗದಲ್ಲಿ ಹಾಗೂ ವೈಜ್ಞಾನಿಕವಾಗಿ ಸುಧಾರಿಸಲು ಮುಂದಾಗಲು ನಮ್ಮ ಉಪನ್ಯಾಸಕರು ಮುಂದಾಗಿದ್ದಾರೆ ಅದಕ್ಕೆ ಪಾಲಕರು ಸಹಕಾರ ನೀಡಬೇಕು ಎಂದರು. ವಿದ್ಯಾರ್ಥಿಗಳ ಮನಸ್ಸಿನ ಮೇಲೆ ದುಷ್ಪರೀಣಾಮ ಬೀರದಂತೆ ಜವಾಬ್ದಾರಿಯನ್ನು ಪ್ರತಿಯೊಬ್ಬರು ನಿಭಾಯಿಸಬೇಕು ಮನೆಯಲ್ಲಿ ಮಕ್ಕಳ ಆಗುಹೋಗುಗಳ ಬಗ್ಗೆ ಪಾಲಕರ ಜೊತೆ ಸೂಕ್ಷ್ಮವಾಗಿ ಮಾತನಾಡಬೇಕು ಎಂದರು.
ವಸತಿ ನಿಲಯ ಮೇಲ್ವಿಚಾರಕ ಎಂ. ಎಸ್. ಗೋಡಿ, ಇಂದಿನ ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಇದು ನಮ್ಮ ಮಕ್ಕಳ ಜ್ಞಾನವನ್ನು ಹಾಳು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆದ್ದರಿಂದ ಪಾಲಕರು ಮಕ್ಕಳ ಕೈಗೆ ಮೊಬೈಲ್ ನೀಡದಂತೆ ನೋಡಿಕೊಳ್ಳಬೇಕು. ಪರೀಕ್ಷೆಯ ವೇಳೆ ಮನೆಯಲ್ಲಿ ಟಿವಿ, ಮದುವೆ, ಜಾತ್ರೆಗಳಿಂದ ಮಕ್ಕಳನ್ನು ದೂರ ಇಡಬೇಕು ಎಂದು ಸಲಹೆ ನೀಡಿದರು. ಇಲ್ಲಿನ ಉಪನ್ಯಾಸಕು ಭಾನುವಾರ ಹಾಗೂ ರಜೆ ದಿನಗಳು ಸೇರಿದಂತೆ ನಿತ್ಯ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸುವ ಮೂಲಕ ಪ್ರಗತಿಗೆ ಮುಂದಾಗುತ್ತಿರುವುದು ಶ್ಲಾಗನೀಯ ಎಂದರು.
ಕಾರ್ಯಕ್ರಮದ ನಂತರ ಮಕ್ಕಳ ಪ್ರಗತಿ ಪರಿಶೀಲಾ ಸಭೆ ನಡೆಯಿತು. ಪಾಲಕರ ಪ್ರತಿನಿಧಿ ದೀಪಾ ವಸ್ತ್ರದ, ಆಪ್ಟ್ರಾ ತರಬೇತುದಾರ ಸೂರಜ್ ರಾಯಕರ, ಡಿ. ಎಂ. ಯಲಬುರ್ಗಿ, ಉಪನ್ಯಾಸಕರಾದ ಬಸಯ್ಯ ಹಿರೇಮಠ, ಗೋಪಾಲ ರಾಯಬಾಗಿ, ರವಿ ಹಲಗಿ, ಸಂಗಮೇಶ ವಸ್ತ್ರದ, ಗಿರೀಶ ವೀರಘಂಟಿ, ಮಂಜುನಾಥ ಕುಂಬಾರ, ಪ್ರೀತಿ ಹೊಂಬಳ, ಎ. ಡಿ. ಜಾತಗೇರ, ಪ್ರತಿಭಾ ಲಕ್ಷಕೊಪ್ಪದ, ಪ್ರಶಾಂತ ಗಾಳಪೂಜಿಮಠ, ವಿಜಯಲಕ್ಷ್ಮಿ ಅರಳಿಕಟ್ಟಿ ಇದ್ದರು.
ವರದಿ : ಚನ್ನು. ಎಸ್.