ದೇವನಹಳ್ಳಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ ರೈತಪರ ಸಂಘಟನೆಗಳಿಂದ ಸಿ ಎಂ ಸಿದ್ದರಾಮಯ್ಯಗೆ ಮನವಿ.
ಅನ್ನದಾತರ ಬದುಕಿಗೆ ಕೊಳ್ಳಿ ಇಟ್ಟು ಕಾರ್ಪೊರೇಟ್ ಬಂಡವಾಳಿಗರಿಗೆ ಮಣಿ ಹಾಕಿದ ರಾಜ್ಯ ಸರ್ಕಾರ ನಡೆ ಖಂಡನೀಯ: ರೈತ ಪರ ಹೋರಾಟಗಾರರು.

ದೇವನಹಳ್ಳಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ ರೈತಪರ ಸಂಘಟನೆಗಳಿಂದ ಸಿ ಎಂ ಸಿದ್ದರಾಮಯ್ಯಗೆ ಮನವಿ.
ಅನ್ನದಾತರ ಬದುಕಿಗೆ ಕೊಳ್ಳಿ ಇಟ್ಟು ಕಾರ್ಪೊರೇಟ್ ಬಂಡವಾಳಿಗರಿಗೆ ಮಣಿ ಹಾಕಿದ ರಾಜ್ಯ ಸರ್ಕಾರ ನಡೆ ಖಂಡನೀಯ: ರೈತ ಪರ ಹೋರಾಟಗಾರರು.
ಗಜೇಂದ್ರಗಡ:ಸತ್ಯಮಿಥ್ಯ (ಜೂ-26)
ದೇವನಹಳ್ಳಿ ರೈತರ ಹಕ್ಕೊತ್ತಾಯ ಈಡೇರಿಸಿ, ಭೂ ಹೋರಾಟಗಾರರನ್ನು ಬೇಷರತ್ ಬಿಡುಗಡೆ ಮಾಡಿ, ಅಮಾನವೀಯ ದೌರ್ಜನ್ಯ ಎಸಗಿ ಹೋರಾಟ ಹತ್ತಿಕ್ಕಿದ ಪೋಲಿಸರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಅಧ್ಯಕ್ಷ ಬಾಲು ರಾಠೋಡ ಮಾತನಾಡಿ.ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂ ಸ್ವಾಧೀನದ ವಿರುದ್ಧ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಿ ಹೋರಾಟಗಾರರನ್ನು ಬಂಧಿಸಿದ್ದಾರೆ.
ಸರ್ಕಾರದ ಈ ಕ್ರಮವನ್ನು ನಾವು ನಮ್ಮ ಸಂಘಟನೆಗಳಿಂದ ಖಂಡಿಸುತ್ತೇವೆ ಎಂದರು. ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ತಮ್ಮ 1177 ಎಕರೆ ಭೂಮಿ ಉಳಿಸಿಕೊಳ್ಳಲು 1181 ದಿನಗಳಿಂದ ಪ್ರಜಾತಾಂತ್ರಿಕ ಹೋರಾಟ ಮಾಡುತ್ತಿದ್ದರು. ಸರಕಾರ ಅವರ ಇಷ್ಟುದಿನಗಳ ಹೋರಾಟಕ್ಕೆ ಒತ್ತಾಯಕ್ಕೆ ಕಿವಿಕೊಡದೇ ಭೂ ಸ್ವಾಧೀನ ಪ್ರಕ್ರಿಯೆಯ ಅಂತಿಮ ಘಟ್ಟಕ್ಕೆ ಕೈ ಹಾಕಿದ ಹಿನ್ನೆಲೆಯಲ್ಲಿ ಈ ಹೋರಾಟ ಬೆಂಬಲಿಸಿ ರಾಜ್ಯದ ಮೂಲೆ ಮೂಲೆಗಳಿಂದ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹೋರಾಟಗಾರ ಮೇಲೆ ಹಲ್ಲೆ ಮಾಡಿ ಬಂಧಿಸಿರುವುದು ಖಂಡನೀಯ ಎಂದರು.
ಬೀದಿ ಬದಿ ವ್ಯಾಪಾರಸ್ಥರು ಸಂಘದ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ ಶಾಂತಿಯುತ ಪ್ರತಿಭಟನೆ ನಡೆದ ಸ್ಥಳದಲ್ಲಿ ಪೋಲಿಸರನ್ನು ಬಿಟ್ಟು ಸರ್ಕಾರ ಅನ್ನದಾತರ ಬದುಕಿಗೆ ಕೊಳ್ಳಿ ಇಟ್ಟು ಕಾರ್ಪೊರೇಟ್ ಬಂಡವಾಳಿಗರಿಗೆ ಮೃಷ್ಟಾನ್ನ ತಿನ್ನಿಸುವ ಯೋಜನೆಯ ಈ ಸಂಚು ಜನ ವಿರೋಧಿ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ಎಂದರು.
ಡಿವಾಯ್ಎಫ್ಐ ಜಿಲ್ಲಾ ಮುಖಂಡ ದಾವಲಸಾಬ ತಾಳಿಕೋಟಿ ಮಾತನಾಡಿ ಸರ್ಕಾರ ತನ್ನ ಭೂ ಸ್ವಾಧೀನ ನೀತಿ ಕೈ ಬಿಡುಬೇಕು ಇಡೀ ರಾಜ್ಯಾದ್ಯಂತ ಈ ಪ್ರತಿಭಟನೆ ತೀವ್ರವಾಗಿ ನಡೆಯಲಿದೆ. ಪ್ರಜಾಸತ್ತಾತ್ಮಕ ಹೋರಾಟವನ್ನು ಪ್ರತಿಬಂಧಿಸಿ ಹೋರಾಟಗಾರರನ್ನು ಅಮಾನವೀಯವಾಗಿ ಹಿಂಸಿಸಿ ಬಂಧಿಸಿದ ನಡೆಯನ್ನು ನಾವು ಖಂಡಿಸುತ್ತೇವೆ.ಪೋಲಿಸ್ ದೌರ್ಜನ್ಯ ಖಂಡಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾ ಮುಖಂಡ ಮೆಹಬೂಬ್ ಹವಾಲ್ದಾರ್, ರೂಪ್ಲೇಶ ಮಾಳೊತ್ತರ, ನೀಲಮ್ಮ ಹಿರೇಮಠ, ಸೇರಿದಂತೆ ಕಟ್ಟಡ ಕಾರ್ಮಿಕ ಸಂಘಟನೆ, ಬೀದಿ ಬದಿ ವ್ಯಾಪಾರಸ್ಥರ ಸಂಘ, ಅಂಗನವಾಡಿ ನೌಕರರ ಸಂಘ, ಕೃಷಿಕೂಲಿಕಾರರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಹಕ್ಕೊತ್ತಾಯಗಳು-
೧) ಫಲವತ್ತಾದ ಭೂಮಿಯಲ್ಲಿ ತಮ್ಮ ಬದುಕು ಕಂಡುಕೊಂಡ ಯಾವುದೇ ರೈತರ ತಂಟೆಗೆ ಬರಬೇಡಿ. ರೈತರ ಭೂಮಿ ರೈತರದ್ದೇ ಆಗಿ ಉಳಿಸಬೇಕು, ಬೇಷರತ್ತಾಗಿ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ರೈತರ ಭೂಮಿಯನ್ನು ಸರ್ಕಾರದ ಯಾವುದೇ ಯೋಜನೆಗೆ ನೀಡಬಾರದು, ಕೂಡಲೇ ಕ್ಯಾಬಿನೆಟ್ ನಿರ್ಣಯ ಮಾಡಬೇಕು.
೨) ಬಂಧಿತ ಹೋರಾಟಗಾರರನ್ನು ಯಾವುದೇ ಪ್ರಕರಣಗಳನ್ನು ಹಾಕದೇ ಬೇಷರತ್ ಬಿಡುಗಡೆ ಮಾಡಬೇಕು. ವೈಯಕ್ತಿಕವಾಗಿ ಸಂಘಟನಾತ್ಮಕವಾಗಿ ಆಗಿರುವ ಅನಾಹುತ ಸರಕಾರವೇ ತುಂಬಿಕೊಡಬೇಕು.
೩) ಅಮಾನವೀಯ ದೌರ್ಜನ್ಯ ಎಸಗಿದ ಪೋಲಿಸರ ಮೇಲೆ ಕ್ರಮಕೈಗೊಳ್ಳಬೇಕು, ತನಿಖೆ ನಡೆಸಬೇಕು. ಇನ್ನೆಂದೂ ಹೋರಾಟವನ್ನು ಮುರಿಯುವ ಅಸಾಂವಿಧಾನಿಕ ಕೆಲಸ ಮಾಡಬಾರದು ಎಂದು ಆಗ್ರಹಿಸುತ್ತೇವೆ.
ವರದಿ : ಸುರೇಶ ಬಂಡಾರಿ.