ರಾಜ್ಯ ಸುದ್ದಿ

ಆದರ್ಶ ಪುಸ್ತಕ ಪ್ರೇಮಿ, ಸಮತಾ ಶಿಕ್ಷಣ ಸ್ನೇಹಿ, ವಿಶ್ವಜ್ಞಾನಿ ಡಾ. ಬಿ. ಆರ್. ಅಂಬೇಡ್ಕರ್

ತ್ಯಾಗಮಯ ಅಧ್ಯಯನದಿಂದ ಪದವಿಗಳ ಪರ್ವತವೇರಿ ವಿಶ್ವ ಜ್ಞಾನಿಯಾದ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್

Share News

*ಆದರ್ಶ ಪುಸ್ತಕ ಪ್ರೇಮಿ, ಸಮತಾ ಶಿಕ್ಷಣ ಸ್ನೇಹಿ, ವಿಶ್ವಜ್ಞಾನಿ ಡಾ. ಬಿ. ಆರ್. ಅಂಬೇಡ್ಕರ್.

ತ್ಯಾಗಮಯ ಅಧ್ಯಯನದಿಂದ ಪದವಿಗಳ ಪರ್ವತವೇರಿ ವಿಶ್ವ ಜ್ಞಾನಿಯಾದ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್

(ದಿನದ 21 ತಾಸುಗಳ ಅಧ್ಯಯನ ಮಾಡಿದ ಏಕೈಕ ಮಹಾವ್ಯಕ್ತಿ, ಡಾಕ್ಟರ್ ಆಲ್ ಸೈನ್ಸ್” ಮಹಾಪದವಿ ಪಡೆದ ವಿಶ್ವದ ಏಕೈಕ ವ್ಯಕ್ತಿ, ಬ್ಯಾರಿಸ್ಟರ್ ಸಾಹೇಬ್ರು, ವಿಶ್ವಖ್ಯಾತಿಯ ವಕೀಲರು, ಪ್ರಬುದ್ಧ ಸಾಹಿತಿ, ಅದ್ವಿತೀಯ ಲೇಖಕ – ಬರಹಗಾರರು, ಭಾರತೀಯ ಸಂವಿಧಾನದ ಪ್ರಮುಖ ಶಿಲ್ಪಿ, ಬೋಧಿ ಸತ್ವ, ನವ ಭಾಷೆಗಳ ಸಾಧಕ – ಬಹುಭಾಷಾ ಪಂಡಿತ, ವಿಶ್ವದ ಮೊದಲ ಅಪ್ರತಿಮ ಪ್ರತಿಭಾಶಾಲಿಗಳು, 64 ಸ್ನಾತಕೋತ್ತರ ಪದವಿ ಪಡೆದ ಮೇಧಾವಿ, ಮನುಸ್ಮೃತಿ ಸುಟ್ಟ ಕ್ರಾಂತಿ ಸೂರ್ಯ, ಸಾಮಾಜಿಕ ಅಸಮಾನತೆಯ ವಿರುದ್ದ ಬಂಡಾಯದ ಬಾವುಟ ಹಾರಿಸಿದ ಸಾಮಾಜಿಕ ಸಾಮರಸ್ಯದ ನೇತಾರ, ವಿಶ್ವೋತ್ತಮ ಪ್ರಜಾಸ್ನೇಹಿ ಭಾರತ ಸಂವಿಧಾನ ಕೃತೃ, ವಿಶ್ವ ರತ್ನ, ಸಾಮಾಜಿಕ ಸುಧಾರಕ, ವಿದೇಶದಿಂದ ಪ್ರಥಮ ಅರ್ಥಶಾಸ್ತ್ರ ಪಿಹೆಚ್ಡಿ ಪದವಿ ಪಡೆದ ಅರ್ಥಶಾಸ್ತ್ರಜ್ಞ, ನ್ಯಾಯ ಮತ್ತು ಮಾನವ ಸಮಾನತೆಯ ಶಾಶ್ವತ ಸಂಕೇತವಾದ ಮಹಾನಾಯಕ ವಿಶ್ವರತ್ನ, ಕ್ರಾಂತಿ ಸೂರ್ಯ, ಜ್ಞಾನದ ಕಣಜ, ಸಮಾನತೆಯ ಹರಿಕಾರ, ಭಾರತ ಭಾಗ್ಯವಿಧಾತ, ಪುಸ್ತಕ ಪ್ರೇಮಿ,ಅಪ್ಪಟ ದೇಶಪ್ರೇಮಿ, ಆರ್ಥಿಕ ಸಮತೆಯ ತಜ್ಞ, ಕಾನೂನು ತಜ್ಞ, ಮಹಾನ ಸಮಾಜ ಸುಧಾರಕ, ಭಾರತ ದೇಶದ ಹಣೆಬರಹದಲ್ಲಿ ಸರ್ವ ಸಮಾನತೆ ಬರೆದಂತಹ ಡಾಕ್ಟರ್ || ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಯ ಜಯಂತಿಯ ನಿಮಿತ್ತ ಅವರ ಅಸಾಧಾರಣ ಅಧ್ಯಯನ, ಅಸಮಾನ ಜ್ಞಾನ ಪ್ರತಿಭೆ, ಸಾಹಿತ್ಯ ಕೃತಿಗಳ ಮೇಲೆ ಬೆಳಕು ಬೀರುವ ಕಿರು ಲೇಖನ.) 

“ಮೈ ಮೇಲೆ ಹರಕು ಬಟ್ಟೆ ಇದ್ದರೂ ಪರವಾಗಿಲ್ಲ – ಕೈಯಲ್ಲೊಂದು ಪುಸ್ತಕ ಇರಲಿ” ಎಂಬ ನಾಣನುಡಿ ಪ್ರಕಾರ *ಜಗತ್ತನ್ನು ಬೆಳಗಲು ಸೂರ್ಯ ಬೇಕು, ಬದುಕನ್ನು ಬೆಳಗಲು ಪುಸ್ತಕ ಸಾಕು*’ ಎಂಬುದು ರವೀಂದ್ರನಾಥ ಟಾಗೋರ್ ಅವರ ಅಭಿಪ್ರಾಯ. ಸಾಧ್ಯವಾದಷ್ಟು ಎಲ್ಲರೂ ಪುಸ್ತಕಗಳನ್ನು ಓದಿ ತಮ್ಮ ಜೀವನ ದರ್ಶನವನ್ನು ಕಟ್ಟಿಕೊಳ್ಳಬೇಕು ಎಂಬುದು ರಾಷ್ಟ್ರಕವಿ ಕುವೆಂಪು ರವರ ನುಡಿ. ‘ಅತ್ಯುತ್ತಮ ಪುಸ್ತಕಗಳು ಉತ್ತಮ ಸಂಗಾತಿಗಳು’ ಎಂಬುದು ತಾರ್ಕರ್ ಅವರ ಮಾತು. ‘ಉತ್ತಮ ಪುಸ್ತಕಗಳು ನಾಡಿನ ಸಂಸ್ಕೃತಿಯ ಪ್ರತೀಕ’ ಎಂದು ಜವಾಹರಲಾಲ್ ನೆಹರು ಆ ಅವರ ಉಕ್ತಿಯಾಗಿದೆ. ಇವರೆಲ್ಲರ ಜೊತೆಜೊತೆಗೆ ಅಂಬೇಡ್ಕರ್ ಅವರ ಪುಸ್ತಕಪ್ರೀತಿ ಅಗಾಧವಾವು ಅಮೂಲ್ಯವೂ ಆಗಿದೆ. ನಿಮ್ಮ ಬಳಿ ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿಯನ್ನು ಆಹಾರಕ್ಕಾಗಿ ಬಳಸಿ. ಉಳಿದ ಇನ್ನೊಂದು ರೂಪಾಯಿಯನ್ನು ಪುಸ್ತಕಕ್ಕಾಗಿ ಬಳಸಿ, ಆಹಾರವು ನಿಮ್ಮನ್ನು ಜೀವಂತವಾಗಿರುವಂತೆ ಮಾಡುತ್ತದೆ. ಪುಸ್ತಕವು ಹೇಗೆ ಜೀವಿಸಬಹುದೆಂದು ಕಲಿಸುತ್ತದೆ’ ಎಂದು ಅಂಬೇಡ್ಕರ್ ಅವರು ಹೇಳಿದ್ದು ಎಷ್ಟು ಅರ್ಥಗರ್ಭಿತವಲ್ಲವೆ! ಪುಸ್ತಕಗಳು ಕೇವಲ ನಿರ್ಜೀವ ವಸ್ತುಗಳಲ್ಲ. ಬದಲಾಗಿ ಪುಸ್ತಕ ಓದಿದ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಶ್ರೇಷ್ಠಮಟ್ಟಕ್ಕೇರಿಸುತ್ತದೆ ಎನ್ನಲಿಕ್ಕೆ ಅವರೇ ಒಂದು ಬಹುದೊಡ್ಡ ನಿದರ್ಶನವಾಗಿದ್ದಾರೆ. .

*ಶಿಕ್ಷಣ ಪ್ರೇಮಿ ಅಂಬೇಡ್ಕರ್ ರವರ ಪೂರ್ವಾಶ್ರಮ ಹಿನ್ನೆಲೆ ಮತ್ತು ಬಾಲ್ಯ ಜೀವನ*

ಅಂಗೈಯಲ್ಲಿ ಹಿಡಿದು ರೊಟ್ಟಿ ತಿಂದರೂ ಚಿಂತೆ ಬೇಡ ಆದರೆ ಪುಸ್ತಕ ಖರೀದಿಸಿ ಓದುವುದನ್ನು ಮರೆಯಬೇಡಿರಿ ಎಂದು ಸಾರಿದ ಡಾ ಬಿ. ಆರ್. ಅಂಬೇಡ್ಕರ್ ರವರು 14ನೇ ಏಪ್ರಿಲ್, 1891ರಲ್ಲಿ ೧೪ನೇ ಮಗನಾಗಿ ಮಧ್ಯ ಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದ್ದು ಶೋಷಿತರಿಗೆ ಆಶಾಕಿರಣ. ಶತ ಶತಮಾನಗಳಿಂದ ಗುಲಾಮಗಿರಿಗೆ ತಳ್ಳಲ್ಪಟ್ಟಿದ್ದ ಬಹುಜನಾಂಗಕ್ಕೆ ವರದಾನವಾಗಿದೆ. ಇವರ ತಂದೆತಾಯಿಗಳಾದ ರಾಮಜಿ ಮಾಲೊಜಿ ಸಕ್ಪಾಲ್ ಮತ್ತು ಭೀಮಬಾಯಿ ರವರು ಇಬ್ಬರು ಕಷ್ಟ ಸಹಿಷ್ಣುಗಳಾದ ಸತಿಪತಿಗಳಾಗಿದ್ದರು. ಅಂಬೇಡ್ಕರ್ ರವರು ಮೂಲತಃ ಬಡ ಕುಟುಂಬದ ಮಹರಜಾತಿಯ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರ ಅಜ್ಜ ಮಾಲೋಜಿ ಸಕ್ಪಾಲ್ ಅವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬಾಂಬೆ ಸೇನೆಯಲ್ಲಿ ಸೇರಿ, ಹವಾಲ್ದಾರರಾಗಿ ನಿವೃತ್ತಿ ಹೊಂದಿದ್ದರು. ಇವರು ಆ ಕಾಲಕ್ಕೆ 19 ಮೆಡಲ್ ಗಳನ್ನು ಗಳಿಸಿದ್ದರು. ಇವರ ತಂದೆ ರಾಮಜಿ ಮಿಲಿಟರಿಯಲ್ಲಿ ಸುಭೆದಾರರಾಗಿ, ಮುಖ್ಯೊಪಾಧ್ಯಾರಾಗಿ ನಿವೃತ್ತಿ ಹೊಂದಿದ ಬಹುಭಾಷಾ ಚತುರರು, ದೇಶ ಭಕ್ತರಾದ ಇವರು ಕಬೀರ ಪಂಥದವರು, ಕಬೀರರ ದೋಹೆಗಳು, ರಾಮಾಯಣ, ಮಹಾಭಾರತದ ಕತೆಗಳನ್ನು ಮಕ್ಕಳಿಗೆ ಮುಂಜಾನೆ ಮತ್ತು ಸಾಯಂಕಾಲ ಹೇಳಿಕೊಡುತ್ತಿದ್ದರು. ನಾನು ನನ್ನ ತಂದೆ ತಾಯಿಯವರಿಗೆ 14ನೇ ರತ್ನನಾಗಿದ್ದೆನೆ ಎಂದು ಹೇಳುತ್ತಿದ್ದ ಭೀಮರಾವ್ ಮುಂದೆ ಭಾರತ ಸಂವಿಧಾನ ಶಿಲ್ಪಿಯಾಗಿ, ವಿಶ್ವ ರತ್ನ ಆಗಿದ್ದು; ಭಾರತದ ಹೊಸ ಇತಿಹಾಸ ನಿರ್ಮಿಸಿದ್ದು ಅವರ ತ್ಯಾಗ, ಪರಿಶ್ರಮ, ನಿರಂತರ ಅಧ್ಯಯನ, ಪುಸ್ತಕ ಪ್ರೇಮದ ಫಲಶೃತಿಯೇ. ಭೀಮರಾವ್ ಪ್ರಾಥಮಿಕ ಶಿಕ್ಷಣ ಸಾತಾರದಲ್ಲಿ ಪ್ರಾರಂಭವಾಯಿತು. ಭೀಮರಾವ್ ಆರು ವರ್ಷದ ಬಾಲಕನಿದ್ದಾಗ ಅವರ ತಾಯಿ ಮರಣ ಹೊಂದುತ್ತಾರೆ. ನಂತರ ಅವರ ಅತ್ತೆಯಾದ ಮೀರಾಳಲ್ಲಿ ತಾಯಿತನದ ಮಮತೆಯಲ್ಲಿ ಬೆಳೆಯುತ್ತಾರೆ. ಮುಂದೆ ಭೀಮರಾವ್ ರವರು ಉತ್ತಮ ಸಂಸ್ಕೃತಿ ಹೊಂದಲು ತಂದೆಯವರು ಹೇಳಿಕೊಟ್ಟ ನೀತಿ ಪಾಠ ಸಹಾಯಕವಾಯಿತು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನಿಜವಾದ ಉಪನಾಮ ಅಂಬಾವಾಡೇಕರ್. ಆದರೆ ಅವರ ಶಿಕ್ಷಕರಾದ ಮಹಾದೇವ್ ಅಂಬೇಡ್ಕರ್ ಅವರು ಜಾತಿ ನಿವಾರಣದ ಸಂಕೇತ ಎಂಬಂತೆ ಶಾಲಾ ದಾಖಲೆಗಳಲ್ಲಿ ಅಂಬೇಡ್ಕರ್ ಅವರ ಉಪನಾಮವನ್ನು ನೀಡಿದರು.

ಬೋಧಿಸತ್ವ ಬಿ. ಆರ್. ಅಂಬೇಡ್ಕರ್ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸಾದಾಗ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ದಾದಾ ಕೆಳೂಸ್ಕರ ಅವರು ಬುದ್ಧನ ಜೀವನ ಚರಿತ್ರೆಗೆ ಸಂಬಂಧಿಸಿದ ಗ್ರಂಥವನ್ನು ಕಾಣಿಕೆಯಾಗಿ ಕೊಡುತ್ತಾರೆ. ಅಂಥ ಒಂದು ಪುಸ್ತಕ ಅವರ ಜೀವನದ ಮೇಲೆ ಎಂಥ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿ ವಿಶೇಷ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಭೀಮರಾವ್ ಅಂಬೇಡ್ಕರ್ ಅವರನ್ನು ವಿಶ್ವಶ್ರೇಷ್ಠನನ್ನಾಗಿ ಮಾಡಿದ ಮಹಾ ಪ್ರಸಂಗ ಇದು ಎಂಬುದನ್ನು ಮರೆಯ ಬಾರದು. ಡಾ. ಅಂಬೇಡ್ಕ‌ರ್ ಒಬ್ಬ ಪ್ರತಿಭಾನ್ವಿತ ಬರಹಗಾರರಾಗಿದ್ದರು, ಮತ್ತು ಕಾನೂನು, ಅರ್ಥಶಾಸ್ತ್ರ, ಧರ್ಮ ಮತ್ತು ಸಾಮಾಜಿಕ ವಿಷಯಗಳ ಕುರಿತು ಅವರ ಕೃತಿಗಳು ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿವೆ. “ಜಾತಿ ನಿರ್ಮೂಲನೆ”, “ಶೂದ್ರರು ಯಾರು?” ಮತ್ತು “ಬುದ್ಧ ಮತ್ತು ಅವನ ಧಮ್ಮ ದಂತಹ ಅವರ ಪುಸ್ತಕಗಳು ಪ್ರಪಂಚದಾದ್ಯಂತ ಓದುಗರಿಗೆ ಸ್ಫೂರ್ತಿ ನೀಡುತ್ತಲೇ ಇವೆ. ಓದಿನ ವಿಷಯದಲ್ಲಿ ಜಗತ್ತಿನಾದ್ಯಂತ ಸದಾ ಚರ್ಚೆಯಲ್ಲಿರುವ ಅಗ್ರಗಣ್ಯರೆಂದರೆ ಭೀಮಾಬಾಯಿ ಪುತ್ರ ಜೈ ಭೀಮ್.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ, ಬಾಬಾಸಾಹೇಬರು ಕೇವಲ 2 ವರ್ಷ 3 ತಿಂಗಳಲ್ಲಿ 8 ವರ್ಷಗಳ ಅಧ್ಯಯನವನ್ನು ಪೂರ್ಣಗೊಳಿಸಿದ್ದರು. ಇದಕ್ಕಾಗಿ ದಿನಕ್ಕೆ 21 ಗಂಟೆಗಳ ಕಾಲ ಅಧ್ಯಯನ ಮಾಡಿದ ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ “ಡಾಕ್ಟರ್ ಆಲ್ ಸೈನ್ಸ್” ಎಂಬ ಅಮೂಲ್ಯವಾದ ಡಾಕ್ಟರೇಟ್ ಪದವಿಯನ್ನು ಪಡೆದ ವಿಶ್ವದ ಮೊದಲ ಮತ್ತು ಏಕೈಕ ವ್ಯಕ್ತಿ ಬಾಬಾಸಾಹೇಬ್. ಅನೇಕ ಬುದ್ಧಿವಂತ ವಿದ್ಯಾರ್ಥಿಗಳು ಇದಕ್ಕಾಗಿ ಪ್ರಯತ್ನಿಸಿದ್ದಾರೆ, ಆದರೆ ಇಲ್ಲಿಯವರೆಗೆ ಅವರು ಯಶಸ್ವಿಯಾಗಿಲ್ಲ. ತಲೆ ಕೆಳಗೆ‌ ಮಾಡಿ ಪುಸ್ತಕ ಓದಿದರೆ ತಲೆ ಎತ್ತಿ ನಿಲ್ಲುವಂತೆ ಮಾಡುವುದೇ ಪುಸ್ತಕ. ಅಪಾರ ಪುಸ್ತಕಗಳ ಓದು, ಅಪಾರ ಸಂಖ್ಯೆಯ ಪುಸ್ತಕಗಳ ಸಂಗ್ರಹಕ್ಕೆ ಬಾಬಾಸಾಹೇಬರಿಗೆ ಬಡತನ ಕಾಡಲಿಲ್ಲ. ಜ್ಞಾನ ಗಳಿಸಲೂ ಅವರಿಗೆ ಬಡತನ ಅಡ್ಡ ಬರಲಿಲ್ಲ. ಸಾಧನೆಗೆ ಪರಿಶ್ರಮ, ಹಠ, ಛಲ, ಪ್ರಯತ್ನ, ಅವಮಾನವನ್ನು ಮೆಟ್ಟಿ ನಿಲ್ಕುವ ಛಾತಿ, ಮೌಡ್ಯವನ್ನು ಹೊಡೆದೊಡಿಸುವ ಧೀಮಂತಿಕೆ ಬೇಕು. ಅದಕ್ಕೆ ಅಂಬೇಡ್ಕರ್ ಅವರು ಬಹುದೊಡ್ಡ ಮಾದರಿ. ಅವರೀಗ ಭಾರತಕ್ಕೆ ಮಾತ್ರ ಮಾದರಿಯಾಗಿರದೆ, ಜಗತ್ತಿಗೆ ಮಾದರಿಯಾಗಿದ್ದಾರೆ.

“ಜಗತ್ತು ನನ್ನನ್ನು ತಳ್ಳಿ ದೂಡಿದಾಗ ನನ್ನ ಎದೆಗೆ ಅಪ್ಪಿಕೊಂಡಿದ್ದು ಪುಸ್ತಕಗಳು” ಎಂಬುದಾಗಿ ಅಂಬೇಡ್ಕರ್ ಹೇಳಿರುವುದು ನ್ಯಾಯೋಚಿತವಾಗಿದೆ. ಹಸಿವು, ನಿದ್ರೆ, ಅನಾರೋಗ್ಯವನ್ನು ಲೆಕ್ಕಿಸದೆ ಸತತ ೩ ವರ್ಷಗಳವರೆಗೆ ಭಾರತೀಯ ಸಂವಿಧಾನ ಎಂಬ ಪುಸ್ತಕವನ್ನು ಬರೆದು ಸರ್ವ ಶೋಷಿತ ಜನಾಂಗಕ್ಕೆ ಸಾಮಾಜಿಕ ಸಮಾನತೆ ಸ್ಥಾನಮಾನ ಒದಗಿಸಿಕೊಟ್ಟ ಮಹಾಮನಾವತಾವಾದಿ ಅಂಬೇಡ್ಕರ್ ಸಾಧನೆ ಅಗಾಧ. ಈ ಸನ್ನಿವೇಶದಿಂದ ಜಗತ್ತಿನಲ್ಲಿ ಪುಸ್ತಕಗಳೆ ನಿಜವಾದ ಸಂಗಾತಿಗಳೆಂದು ನಾವು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಅವು ನಮ್ಮ ಮತ್ತು ಎಲ್ಲರ ಬದುಕನ್ನು ರೂಪಿಸಲು ಮಾರ್ದರ್ಶನ ನೀಡುತ್ತವೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ “ರೂಪಾಯಿ ಸಮಸ್ಯೆ: ಅದರ ಮೂಲ ಮತ್ತು ಪರಿಹಾರಗಳು” ಪುಸ್ತಕದ ತತ್ವಗಳನ್ನು ಬಳಸಿಕೊಂಡು , ಆರ್‌ಬಿಐ ಅನ್ನು ಏಪ್ರಿಲ್ 1, 1935 ರಂದು ಸ್ಥಾಪಿಸಲಾಯಿತು.

ಬಾಬಾಸಾಹೇಬರ ವೈಯಕ್ತಿಕ ಗ್ರಂಥಾಲಯ “ರಾಜಗೀರ್” 50, 000 ಕ್ಕೂ ಹೆಚ್ಚು ಪುಸ್ತಕಗಳನ್ನು ಒಳಗೊಂಡಿತ್ತು ಮತ್ತು ಇದು ವಿಶ್ವದ ಅತಿದೊಡ್ಡ ಖಾಸಗಿ ಗ್ರಂಥಾಲಯವಾಗಿತ್ತು. ೫೮ಸಾವಿರ ಪುಸ್ತಕಗಳನ್ನು ಓದಿ ಅದನ್ನು ನೆನಪು ಇಟ್ಟುಕೊಂಡಿದ್ದ ಏಕೈಕ ನಾಯಕ ಡಾ. ಬಿ. ಆರ್. ಅಂಬೇಡ್ಕರ್. ೧ ಲಕ್ಷ ೨೮ ಸಾವಿರ ನಾಯಕರು ಜಗತ್ತಿನಲ್ಲಿ ಹುಟ್ಟಿ ಹೋಗಿದ್ದಾರೆ ಆದರೆ ಓದಿನಲ್ಲಿ ಅಂಬೇಡ್ಕರ್ ದಾಖಲೆಯನ್ನು ಯಾರು ಮುರಿಯಲು ಸಾಧ್ಯವಾಗಿಲ್ಲ. ಡಾ. ಬಾಬಾಸಾಹೇಬ್ ಬರೆದ “ವೇಟಿಂಗ್ ಫಾರ್ ಎ ವೀಸಾ” ಪುಸ್ತಕವು ಕೊಲಂಬಿಯಾ ವಿಶ್ವವಿದ್ಯಾಲಯದ ಪಠ್ಯಪುಸ್ತಕವಾಗಿದೆ. ಕೊಲಂಬಿಯಾ ವಿಶ್ವವಿದ್ಯಾಲಯವು 2004 ರಲ್ಲಿ ವಿಶ್ವದ ಅಗ್ರ 100 ವಿದ್ವಾಂಸರ ಪಟ್ಟಿಯನ್ನು ಮಾಡಿತು ಮತ್ತು ಆ ಪಟ್ಟಿಯಲ್ಲಿ ಮೊದಲ ಹೆಸರು ಡಾ. ಭೀಮರಾವ್ ಅಂಬೇಡ್ಕರವರದು ಎಂಬುದೆ ಅದೊಂದು ರೋಚಕ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು 64 ವಿಷಯಗಳಲ್ಲಿ ಸ್ನಾತಕೋತ್ತರರಾಗಿದ್ದರು. ಅವರಿಗೆ ಹಿಂದಿ, ಪಾಲಿ, ಸಂಸ್ಕೃತ, ಇಂಗ್ಲಿಷ್, ಫ್ರೆಂಚ್, ಜರ್ಮನ್, ಮರಾಠಿ, ಪರ್ಷಿಯನ್ ಮತ್ತು ಗುಜರಾತಿ ಮುಂತಾದ 9 ಭಾಷೆಗಳ ಜ್ಞಾನವಿತ್ತು .ಇದಲ್ಲದೆ, ಅವರು ಸುಮಾರು 21 ವರ್ಷಗಳ ಕಾಲ ಜಗತ್ತಿನ ಎಲ್ಲಾ ಧರ್ಮಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿದ ವಿಶ್ವದ ಏಕೈಕ ವ್ಯಕ್ತಿ ಅಮರವೀರ ಭೀಮರಾವ್.

ವಿಶ್ವದ ಸೃಷ್ಟಿಕರ್ತರು” ಎಂಬ ಜಾಗತಿಕ ಸಮೀಕ್ಷೆಯ ಆಧಾರದ ಮೇಲೆ ಕಳೆದ 10 ಸಾವಿರ ವರ್ಷಗಳ ಅಗ್ರ 100 ಮಾನವತಾವಾದಿ ಜನರ ಪಟ್ಟಿಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ತಯಾರಿಸಿತು, ಅದರಲ್ಲಿ ನಾಲ್ಕನೇ ಹೆಸರು ಡಾ. ಬಾಬಾಸಾಹೇಬ್ ಅಂಬೇಡ್ಕರ್. ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ 2011 ರ ಪ್ರಕಾರ, ಬಾಬಾಸಾಹೇಬ್ ಅಂಬೇಡ್ಕರ್ ವಿಶ್ವದ ಮೊದಲ ಪ್ರತಿಭಾನ್ವಿತ ವ್ಯಕ್ತಿಯಾಗಿ ಅಗ್ರಸ್ಥಾನದಲ್ಲಿರುವ ಏಕೈಕ ಭಾರತೀಯ. ಬಾಬಾಸಾಹೇಬ್ರು ಲಂಡನಿನ ಗ್ರಂಥಾಲಯದಲ್ಲಿ ಓದುತ್ತಿರುವಾಗ ಒಂದು ಎಮರ್ಜೆನ್ಸಿ ಟೆಲಿಗ್ರಾಂ ಬರುತ್ತೆ. ತನ್ನ ಹೆಂಡತಿ ರಮಾಬಾಯಿಯಿಂದ ಬಂದ ಆ ಟೆಲಿಗ್ರಾಂನ್ನು ಓದುತ್ತಿರುವಾಗ ಧಾರಾಕಾರವಾಗಿ ಕಣ್ಣೀರು ಸುರಿಯುತ್ತಿರುತ್ತದೆ. ಆಗ ಅಲ್ಲಿಗೆ ಬಂದ ಅವರ ಗೆಳೆಯ ಕೇಳುತ್ತಾನೆ, ಮಿತ್ರ ಎನಾದ್ರೂ ಎಮರ್ಜೆನ್ಸಿ ಇದೆಯಾ? ಹೌದು ನನ್ನ ಮಗ ಸತ್ತುಹೋಗಿದ್ದಾನೆ. ಹಾಗಾದ್ರೆ ಇಗಲೇ ಭಾರತಕ್ಕೆ ಹೊರಡಿ ಅಂತ ಹೇಳುತ್ತಾರೆ. ಆಗ ಕಣ್ಣಿರನ್ನು ಒರೆಸಿಕೊಳ್ಳುತ್ತಾ ಬಾಬಾಸಾಹೆಬ್ರು ಹೇಳುತ್ತಾರೆ. ನನ್ನ ಒಬ್ಬ ಮಗ ಸತ್ತರೆ ನಷ್ಟವೇನೂ ಇಲ್ಲ. ನಾನು ಇಲ್ಲಿಂದ ಹೊದ್ರೆ ನನ್ನನ್ನು ನಂಬಿದ ಭಾರತ ಕೋಟಿ ಕೋಟಿ ಮಕ್ಕಳು ಅನಾಥರಾಗಿಬೀಡ್ತಾರೆ. ಸದಾ ಬಹುಜನರ ಒಡಲೂರಿಯನ್ನು ಆರಿಸಲು ತಮ್ಮ ಸಂತಾನವನ್ನೆ ತ್ಯಾಗಮಾಡಿದ ಮಹಾತ್ಯಾಗಿ ಇವರು.

ಅಂಬೇಡ್ಕರ್ ಎಂದೂ ಹಿಂಸೆಯ ಪರವಾಗಿ ನಿಂತವರಲ್ಲ, ಅವರೊಬ್ಬ ಬಹುದೊಡ್ಡ ಆಹಿಂಸಾವಾದಿ ಯಾಗಲು ಅಪಾರ ಓದು ಒಂದು ಕಾರಣವಾದರೆ, ಇನ್ನೊಂದೆಡೆ ಬುದ್ಧನ ತತ್ವ ಚಿಂತನೆಗಳು ಕಾರಣವಾಗಿವೆ. 1927ರಲ್ಲಿ ನಡೆದ ಮಹಾಡ್ ಕೆರೆನೀರು ಮುಟ್ಟುವ ಹೋರಾಟದ ಸಂದರ್ಭದಲ್ಲಿ ಚಳುವಳಿಯಲ್ಲಾಗಲಿ, 1930ರಲ್ಲಿ ನಾಸಿಕ್‌ ನಲ್ಲಿಯ ಕಾಳಾರಾಮ ದೇವಾಲಯಕ್ಕೆ ಅಸ್ಪೃಶ್ಯರ ಪ್ರವೇಶವನ್ನು ಒತ್ತಾಯಿಸಿ ಚಳುವಳಿಯಲ್ಲಾಗಲಿ ಅವರು ಹಿಂಸಾ ಮಾರ್ಗವನ್ನು ಹಿಡಿದು ಜಯಶೀಲರಾದವರು. ರಕ್ತಪಾತಕ್ಕೆ ಹಾತೊರೆದವರಲ್ಲ. ಶಾಂತಿ – ಯುಕ್ತಿ – ಶಿಕ್ಷಣ, ಸಂಘಟನೆ, ಪ್ರತಿಭಟನೆ ಮೂಲಕ ಯಶಕಂಡ ಧೀರೋದಾತ್ತರು. ಒಮ್ಮೆ ಮದನ್ ಮೋಹನ್ ಮಾಳಿಯಾ ಅವರು ಅಂಬೇಡ್ಕರ್ ಅವರ ಪುಸ್ತಕ ಭಂಡಾರವನ್ನು ಕಂಡು ‘ನಿಮ್ಮ ಈ ಪುಸ್ತಕಗಳನ್ನು ನಾನು ಎರಡು ಲಕ್ಷ ರೂಪಾಯಿಗಳಿಗೆ ಖರೀದಿಸುತ್ತೇನೆ ಕೊಟ್ಟುಬಿಡಿ ಎಂದಿದ್ದರಂತೆ. ಅದಕ್ಕುತ್ತರವಾಗಿ ಅವರು ಈ ಪುಸ್ತಕಗಳು ಇಲ್ಲವಾದರೆ ನನ್ನ ಜೀವವೇ ಹೋದಂತೆ’ ಎಂದು ಉತ್ತರಿಸಿದರಂತೆ. ಪುಸ್ತಕವೆಂದರೆ ಅವರಿಗೆ ಪಂಚಪ್ರಾಣ. ಆದೊಂದು ಸಂಪತ್ತು, ಐವತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸ್ವತಂತ್ರ ಗ್ರಂಥಾಲಯವನ್ನು ಹೊಂದಿದ್ದ ಜಗತ್ತಿನ ಏಕೈಕ ವ್ಯಕ್ತಿ ಅವರಾಗಿದ್ದರು. ‘ದುರಾದೃಷ್ಟದಿಂದ ಸಾಲಕ್ಕಾಗಿ ಕೋರ್ಟಿನ ಬೇಲೀಪ್ ಬಂದು ನನ್ನ ಪುಸ್ತಕಗಳಿಗೆ ಕೈ ಹಾಕಿದರೆ ಆತನನ್ನು ಇದ್ದಲ್ಲಿಯೇ ಕೊಂದು ಬಿಡುತ್ತೇನೆ’ ಎಂದು ಹೇಳಿದ್ದರಂತೆ. ‘ಸತ್ತು ಹೋದ ಮೇಲೆ ಮತ್ತೆ ಬದುಕಬೇಕು ಎಂದರೆ ಒಂದು ಕೆಲಸ ಮಾಡಿ ಹೋಗಿ, ಜನ ಓದುವ ಹಾಗೆ ಏನಾದರೂ ಬರೆದು ಬಿಟ್ಟು ಹೋಗಿ ಇಲ್ಲವಾದರೆ ಜನ ನಿಮ್ಮ ಬಗ್ಗೆ ಬರೆಯುವ ಹಾಗೆ ಏನಾದರೂ ಕಾರ್ಯಮಾಡಿ ಹೋಗಿ’ ಎಂದು ಹೇಳಿದವರು ಅಂಬೇಡ್ಕರ್,

ಪುಸ್ತಕಗಳು ಕೇವಲ ನಿರ್ಜೀವ ವಸ್ತುಗಳಲ್ಲ. ಬದಲಾಗಿ ಪುಸ್ತಕ ಓದಿದ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಶ್ರೇಷ್ಠಮಟ್ಟಕ್ಕೇರಿಸುತ್ತದೆ ಎನ್ನಲಿಕ್ಕೆ ಅವರೇ ಒಂದು ದೊಡ್ಡ ದರ್ಶನ. ಅಂಬೇಡ್ಕರ್ ರಚಿಸಿದ ಭಾರತ ಸಂವಿಧಾನ ಎಂಬ ಏಕಮಾತ್ರ ‘ರಾಷ್ಟ್ರಗ್ರಂಥ’ ಎಂದು ನಾವು ಗೌರವಿಸುವ ಸಂವಿಧಾನ ನಮಗೆ ನೀಡಿಲ್ಲವೆ! ವಕೀಲ ವೃತ್ತಿಯಲ್ಲಿ ವ್ಯಾಜ್ಯವೊಂದರಲ್ಲಿ ವಾದಿಸಿದ್ದರಿಂದ ಐದುನೂರು ರೂಪಾಯಿ ಗಳಿಕೆ ಬಂದಿರುತ್ತವೆ. ಅದರಿಂದ ತಕ್ಷಣ ಪುಸ್ತಕ ಖರೀದಿಸಿ ತರುತ್ತಾರೆ. ಮನೆಗೆ ಬಂದ ತಕ್ಷಣ ಓದಲು ಕೂತಿರುತ್ತಾರೆ. ಪತ್ನಿ ರಮಾಬಾಯಿ ಅಡುಗೆ ಮಾಡಿ ಊಟ ಬಡಿಸಲು ಮುಂದಾಗಿ ಮೇಲಿಂದ ಮೇಲೆ ಊಟಕ್ಕೆ ಬರಲು ಕರೆದಾಗ, ಆಯಿತು ಇನ್ನೈದು ನಿಮಿಷ ಮುಗಿತು. ಇನ್ನೆರಡು ನಿಮಿಷ ಬಂದೆ. ಬಂದೆ. ಒಂದೇ ಪುಟ ಎಂದು ಹೇಳುತ್ತಲೇ ಇದ್ದರು. ರಮಾತಾಯಿ ಜೋರು ಮಾಡಿದಾಗ ರಮಾ ನಾನು ಐದು ನೂರು ರೂಪಾಯಿಯಿಂದ ಪುಸ್ತಕ ಖರೀದಿ ಮಾಡಿ ತಂದು ಓದುತ್ತಿದ್ದೇನೆ! ನಿನಗೆ ಊಟವೇ ಹೆಚ್ಚಾಯಿತೆ?’ ಎಂದು ಗದರಿದರಂತೆ. ಇದು ಅವರಿಗೆ ಓದು ಎಂದರೆ ಎಷ್ಟು ಮೌಲ್ಯಯುತವಾದುದು ಎಂಬುದನ್ನು ದೃಢಪಡಿಸುತ್ತದೆ. ಅಂಬೇಡ್ಕರ್ ವಿಶ್ವಪ್ರಸಿದ್ದಿ ಪಡೆಯಲು ಹಣ, ಸಂಪತ್ತು, ಅಂತಸ್ತು ಜಾತಿ ಕಾರಣವಾಗಲಿಲ್ಲ. ಅವರಲ್ಲಿರುವ ಜ್ಞಾನ ಕಾರಣವಾಗಿತ್ತು. ಅವರೊಬ್ಬ ಶ್ರೇಷ್ಠ ಓದುಗರಾಗಿದ್ದರು, ಮಹಾನ್ ಪುಸ್ತಕ ಪ್ರೇಮಿಯಾಗಿದ್ದರು. ಛಲವೇ ಅವರ ಶಕ್ತಿ, ಸ್ವಾಭಿಮಾನವೇ ಅವರ ಬದುಕು. ತಮ್ಮ ಜೀವಿತದ ಅವಧಿಯಲ್ಲಿ ಓದಿದ್ದು, ಜ್ಞಾನ ಪಡೆದಿದ್ದು ನಮ್ಮ ಹಾಗೆ ಒಂದೆರಡು ವಿಷಯಗಳಲ್ಲ, 64 ವಿಷಯಗಳನ್ನು ಒಂಬತ್ತು ಭಾಷೆಗಳನ್ನು ಬಲ್ಲವರಾಗಿದ್ದರು. ಈ ದಿಸೆಯಲ್ಲಿ ಇಂದಿನ ಯುವಜನಾಂಗದಲ್ಲಿ ಪುಸ್ತಕ ಓದುವ ಆಸಕ್ತಿ, ಅಧ್ಯನಮಾಡುವ ಹಂಬಲ ಬೆಳೆಸದಿದ್ದರೆ ನಮ್ಮ ಬಾಳೆ ವ್ಯರ್ಥ. ಅಂಬೇಡ್ಕರ್ ನಮಗೆ ಸಂವಿಧಾನದ ಮೂಲಕ ನೀಡಿದ ಶಿಕ್ಷಣ, ಉದ್ಯೋಗ, ವ್ಯಕ್ತಿ ಗೌರವ ಎಲ್ಲವೂ ವ್ಯರ್ಥವಾದಿತು.?!

ಅಂಬೇಡ್ಕರ್ ಪ್ರತಿಭಾ ವಿಲಾಸಕ್ಕಾಗಿ, ಆತ್ಮಾನಂದಕ್ಕಾಗಿ ಓದಿದವರಲ್ಲ, ಬರೆದವರಲ್ಲ. ಸಮಾಜದ ಹಿತಕ್ಕಾಗಿ, ಮಲಗಿದ್ದ ತನ್ನ ಶೋಷಿತ ಸಮುದಾಯದ ಬಿಡುಗಡೆಗಾಗಿ ಹಗಲು ರಾತ್ರಿಯೆನ್ನದೆ, ಆರೋಗ್ಯದ ಬಗ್ಗೆ ಲೆಕ್ಕ ಹಾಕದೆ ಓದಿ ಬರೆದ ಜಗತ್ತಿನ ಶ್ರೇಷ್ಠ ವ್ಯಕ್ತಿ, ಅಷ್ಟೇ ಅಲ್ಲ ಅಪಾರ ಪುಸ್ತಕ ಪ್ರೇಮಿಯಾಗಿದ್ದರು. ಶ್ರೇಷ್ಠ ಚಿಂತಕರಾದ ಡಾ. ಜಾನ್ಸನ್ ಒಂದೆಡೆ ‘ಹತ್ತಿರವಿದ್ದ ಎಲ್ಲ ಪುಸ್ತಕಗಳನ್ನು ಯಾರೂ ಓದುವುದಿಲ್ಲ. ಓದಬೇಕಾಗಿಯೂ ಇಲ್ಲ’ ಎಂದು ಅಭಿಪ್ರಾಯಪಟ್ಟಿದ್ದಿದೆ. ಈ ತತ್ವಕ್ಕೆ ವಿರುದ್ಧವಾಗಿದ್ದ ಅಂಬೇಡ್ಕರ್ ಅವರು ಹತ್ತಿರವಿದ್ದ ಎಲ್ಲ ಪುಸ್ತಕಗಳನ್ನು ಬಿಡದೆ ಓದುತ್ತಿದ್ದರು. ಖರೀದಿ ಮಾಡಿತಂದ ಯಾವುದೇ ಗ್ರಂಥವನ್ನು ಆಮೂಲಾಗ್ರವಾಗಿ ಓದಿ ಕರಗತಮಾಡಿಕೊಳ್ಳುತ್ತಿದ್ದರು. ತುಳಿತಕ್ಕೆ ಒಳಗಾದವರನ್ನು ಮೇಲೆತ್ತಲು ಅಧ್ಯನ ಮಾಡಿ ಯಾರಿಗೂ ಪಡಯಲಾಗದ ಪದವಿಯನ್ನು ಪಡೆದ ಪುಸ್ತಕ ಪ್ರೇಮಿ ಅಂಬೇಡ್ಕರ್ ಬಗ್ಗೆ ಗವರ್ನರ್ ಲಾರ್ಡ್ ಲಿನ್ಲಿತ್ಗೋ ಮತ್ತು ಮಹಾತ್ಮ ಗಾಂಧಿಯವರು ಬಾಬಾಸಾಹೇಬರು 500 ಪದವೀಧರರಿಗೂ ಮೇಲೂ ಮತ್ತು ಸಾವಿರಾರು ವಿದ್ವಾಂಸರಿಗಿಂತ ಹೆಚ್ಚು ಬುದ್ಧಿವಂತರು ಎಂದು ನಂಬಿದ್ದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಗವಾನ್ ಬುದ್ಧ, ಸಂತ ಕಬೀರ ಮತ್ತು ಮಹಾತ್ಮ ಫುಲೆ ಎಂಬ ಮೂವರು ಮಹಾಪುರುಷರನ್ನು ತಮ್ಮ “ಬೋಧಕರು” ಎಂದು ಪರಿಗಣಿಸಿದ್ದರು. ನಂತರದಲ್ಲಿ ಬಸವಣ್ಣನವರ ತತ್ವಗಳನ್ನು ಮೆಚ್ಚಿಕೊಂಡದ್ದ ಇವರು 6 ಡಿಸೆಂಬರ್ 1956ರಲ್ಲಿ ಮಹಾಪರಿನಿರ್ವಾರ್ಣ ಆಗುವುದರ ಮೂಲಕ ತಮ್ಮ ಅನುಯಾತಿಯಿ ಬಳಗವನ್ನು, ನಮ್ಮನು ಮತ್ತು ಈಡಿ ವಿಶ್ವವನ್ನು ಆವರಿಸಿಕೊಂಡಿದ್ದಾರೆ. ಅವರ ಓದು, ಅಧ್ಯಯನ ಸ್ವಾರ್ಥ ರಹಿತವಾದದ್ದು; ಎಲ್ಲ ವರ್ಗದ ಶೋಷಿತರ ಬಾಳನ್ನು ಬೆಳಗಲು ತಮ್ಮ ಪರಿವಾರವನ್ನೆ ಬಲಿದಾನವಾಗಿಸಿದ ಮಹಾನ ಸಂತ. ಎಂದು ಮುಗಿಯದ ಮಹಾ ಪುಸ್ತಕ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್.

ಜೈ ಭೀಮ್, ಜೈ ಸಮಾನತೆ, ಜೈ ವೈಚಾರಿಕತೆ.

ಸುಭಾಷ್ ಹೇಮಣ್ಣಾ ಚವ್ಹಾಣ

-ಶಿಕ್ಷಕ ಸಾಹಿತಿಗಳು, ಚಿಂತಕರು

ಸ.ಹಿ.ಪ್ರಾ.ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ, 7975೦ 26724


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!